ವಿವಿ ಕಾಲೇಜಿನಲ್ಲಿ 'ರಿ ವಿಸಿಟಿಂಗ್‌ ದಿ ಲಿಟರರೀ ಪಾಸ್ಟ್‌: ಇಂಡಿಯನ್‌ ಇಂಗ್ಲಿಷ್‌ ಫಿಕ್ಷನ್‌ ಕಾರ್ಯಕ್ರಮ

Upayuktha
0

ಶಿಕ್ಷಣ ಯಾವತ್ತಿಗೂ ಮಹಿಳೆಯರಿಗೆ ಸುಲಭವಾಗಿ ದೊರಕಲಿಲ್ಲ: ಡಾ. ಪರಿಣಿತಾ


ಮಂಗಳೂರು: ನಮ್ಮಇಂದಿಗೆ ನಮ್ಮ ಹಿರಿಯರು ಪಟ್ಟ ಶ್ರಮದ ಅರಿವು ನಮಗಿರಬೇಕು. ನಮಗಾಗಿ ಯಾರು ಜೀವನ ಸವೆಸಿದ್ದಾರೆ, ಅವರ ಶ್ರಮದ ಫಲವನ್ನು ನಾವು ಈಗ ಉಳಿಸಿಕೊಂಡು ಹೋಗುತ್ತಿದ್ದೇವೆ ಎಂಬುದನ್ನು ತಿಳಿಯುವುದು ಅಗತ್ಯ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ಪ್ರಾಧ್ಯಾಪಿಕೆ ಡಾ. ಪರಿಣಿತಾ ಅಭಿಪ್ರಾಯಪಟ್ಟಿದ್ದಾರೆ.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಂಗ್ಲಭಾಷಾ ವಿಭಾಗದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ 'ರಿ ವಿಸಿಟಿಂಗ್‌ ದಿ ಲಿಟರರೀ ಪಾಸ್ಟ್‌: ಇಂಡಿಯನ್‌ ಇಂಗ್ಲಿಷ್‌ ಫಿಕ್ಷನ್‌ (1857 – 1920)' ಎಂಬ ಅಂತರ್ಕಾಲೇಜು ಮಟ್ಟದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಭಾರತದಲ್ಲಿ ಮೊಟ್ಟಮೊದಲ ಇಂಗ್ಲಿಷ್‌ ಆತ್ಮಕಥೆ ಬರೆದ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿರುವ ಲೇಖಕಿ ಕೃಪಾಭಾಯಿ ಸತ್ಯನಾಥನ್‌ ಅವರ ಕೃತಿ 'ಸಗುಣ'ವನ್ನು ಉದಾಹರಿಸಿ, ಭಾರತದಲ್ಲಿ ಮತಾಂತರ ಮತ್ತು ಶಿಕ್ಷಣ ಮಹಿಳೆಯರಿಗೆ ಯಾವತ್ತಿಗೂ ಒಂದು ಸಹಜ ಬದಲಾವಣೆಯಾಗಿರಲಿಲ್ಲ. ಅದೊಂದು ಹೋರಾಟ, ಮಾನಸಿಕ ತುಮುಲಗಳನ್ನೊಳಗೊಂಡ ಸುಧೀರ್ಘ ಪ್ರಕ್ರಿಯೆಯಾಗಿತ್ತು ಎಂದರು.


ಕಾದಂಬರಿಯಲ್ಲಿ ಬರುವ ಸತಿ ಪದ್ಧತಿ ಕುರಿತ ಭಾಗವನ್ನು ಉದಾಹರಿಸಿದ ಅವರು, ಮೇಲ್ಜಾತಿಯ ಕೆಲ ಜನ ಸತೀಯನ್ನು ಅದ್ಭುತ ತ್ಯಾಗದಂತೆ ಕಾಣುತ್ತಿದ್ದರು. ಬ್ರಿಟಿಷರು ಅದನ್ನು ನಿಷೇಧಿಸಿದರೆ ಜನರ ವಿರೋಧ ಎದುರಿಸಬೇಕಾಗಬಹುದು ಎಂದು ಭಾವಿಸಿದ್ದರು. 19 ನೇ ಶತಮಾನದ ಆದಿಯಲ್ಲಿ ಹಲವು ಸಮಾಜ ಸುಧಾರಕರಿದ್ದರೂ ಅವರಲ್ಲಿ ಮಹಿಳೆಯರು ಇರಲಿಲ್ಲ. ಹಾಗಾಗಿ ಮಹಿಳೆಯರ ಸ್ಥಾನವನ್ನು ಪುರುಷರೇ ನಿರ್ಧರಿಸುತ್ತಿದ್ದರು. ಮಹಿಳೆಯರು ಶಿಕ್ಷಣ ಪಡೆದರೆ ಅದು ಅವಳ ಗಂಡನ ಸಾವಿಗೆ ಕಾರಣವಾಗುತ್ತದೆ ಎಂಬ ವಿಚಿತ್ರ ನಂಬಿಕೆಯಿತ್ತು, ಎಂದ ಅವರು ಶಿಕ್ಷಣ ಇಂದಿಗೂ ಮಹಿಳೆಯರಿಗೆ ಸುಲಭವಾಗಿ ದೊರಕುತ್ತಿಲ್ಲ ಎಂದರು.


ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನ ವಿಶಿಷ್ಟತೆಯಿಂದ ಗಮನ ಸೆಳೆಯಿತು. ಭಾರತ ಕಂಡ ಪ್ರಸಿದ್ಧ ಸಾಹಿತಿಗಳು ಹಾಗೂ ಸಮಾಜ ಸುಧಾರಕರ ವೇಷ ತೊಟ್ಟ ವಿದ್ಯಾರ್ಥಿಗಳು, ಆಂಗ್ಲ ಸಾಹಿತಿಗಳ ವರ್ಣಚಿತ್ರ- ವಿವರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಿಸಿದವು. 'ಲಿಟರರಿ ಮೈಂಡ್ಸ್‌' ಎಂಬ ವಿದ್ಯಾರ್ಥಿ ಬರಹಗಳ ಸಂಗ್ರಹವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸುಮಾರು 5 ಕಾಲೇಜುಗಳ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.


ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ. ರಾಜಲಕ್ಷ್ಮೀ ಎನ್‌ ಕೆ, ಪ್ರಾಂಶುಪಾಲ (ಉಸ್ತುವಾರಿ) ಡಾ. ಹರೀಶ್‌, ಪೂರ್ವತನ ಪ್ರಾಂಶುಪಾಲ ಡಾ. ಉದಯ್‌ ಕುಮಾರ್‌ ಎಂ ಎ ಸೇರಿದಂತೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಗ್ಲ ವಿಭಾಗದ ಝೈಬುನ್ನಿಸಾ ರಝಾಕ್‌, ಶ್ರೀಪ್ರಜ್ಞಾ, ರೇಖಾ ಮತ್ತು ಅಂತಿಮ ಬಿಎ ವಿದ್ಯಾರ್ಥಿನಿ ಪ್ರಜ್ಞಾ ಸಭಾ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


free website counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top