ವಿಶ್ವ ಕ್ಯಾನ್ಸರ್ ದಿನ- ಫೆಬ್ರವರಿ-4: ಎಲ್ಲ ಕ್ಯಾನ್ಸರ್ ಪೀಡಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕಲಿ

Upayuktha
0

ಕ್ಯಾನ್ಸರ್ ರೋಗದ ಬಗೆಗಿನ ತಪ್ಪು ಮಾಹಿತಿ ತೊಡೆದು ಹಾಕಿ, ಕ್ಯಾನ್ಸರ್ ರೋಗದ ಪತ್ತೆ ಹಚ್ಚುವಿಕೆ, ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಅಂತರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಒಕ್ಕೂಟ (UICC) 2000ನೇ ಇಸವಿಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಜಾರಿಗೆ ತಂದಿತು. 2019 ರಿಂದ 2021 ರವರೆಗೆ  I can and I will  ಅಂದರೆ  “ನನ್ನಿಂದ ಸಾಧ್ಯವಿದೆ ಮತ್ತು ನಾನು ಮಾಡುತ್ತೇನೆ” ಎಂಬ ಧ್ಯೇಯ ವಾಕ್ಯದೊಂದಿಗೆ ಕ್ಯಾನ್ಸರ್ ರೋಗ ಪೀಡಿತರಿಗೆ ನೈತಿಕ ಬೆಂಬಲ ನೀಡುವ ಘೋಷವಾಕ್ಯದೊಂದಿಗೆ ಈ ಆಚರಣೆಯನ್ನು ಜಾಗತಿಕವಾಗಿ ಮಾಡಲಾಯಿತು. 2022ರಲ್ಲಿ“Close the Care Gap”. ಅಂದರೆ  “ಕ್ಯಾನ್ಸರ್ ಪೀಡಿತರಿಗೆ ಸಿಗುವ ಚಿಕಿತ್ಸೆಯ ಅಂತರವನ್ನು ಕಡಿಮೆ ಮಾಡೋಣ” ಎಂಬ ಘೋಷ ವಾಕ್ಯದೊಂದಿಗೆ ಎಲ್ಲ ಕ್ಯಾನ್ಸರ್ ಪೀಡಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕಲಿ ಎಂಬ ಧ್ಯೇಯದೊಂದಿಗೆ ಆಚರಣೆ ನಡೆಸಲು ಉದ್ಧೇಶಿಸಲಾಗಿದೆ.


ಕ್ಯಾನ್ಸರ್ ರೋಗದ ಬಗೆಗಿನ ನಮಗೆ ತಿಳಿದಿರುವ ಸರಿಯಾದ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಂಡು, ಕ್ಯಾನ್ಸರ್ ಪೀಡಿತರಿಗೆ ಆತ್ಮಸ್ಥೈರ್ಯ ಮತ್ತು ಮನೋ ಸ್ಥೈರ್ಯ ನೀಡಿ, ನೈತಿಕ ಬೆಂಬಲವನ್ನು ಕೊಟ್ಟು ಅವರು ಕ್ಯಾನ್ಸರ್ ರೋಗವನ್ನು ಎದುರಿಸುವಲ್ಲಿ ಅವರಿಗೆ ಸಕಲ ರೀತಿಯ ಸಹಾಯ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳುವ ಎಲ್ಲಾ ಪ್ರಯತ್ನ ಮಾಡಬೇಕು ಎಂಬ ಮಹೋನ್ನತವಾದ ಆಶಯವನ್ನು ಈ ‘ಕ್ಯಾನ್ಸರ್ ದಿನಾಚರಣೆ’ ಹೊಂದಿದೆ.


ಕ್ಯಾನ್ಸರ್ ರೋಗ ಅಂದ ಕೂಡಲೇ ನಾವೆಲ್ಲಾ ಒಮ್ಮಲೆ ದಿಗಿಲುಗೊಳ್ಳುತ್ತೇವೆ. ಹಿಂದಿನ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯರ ಸೇವೆ ದುರ್ಲಬವಾಗಿತ್ತು. ಬಡತನ, ಅನಕ್ಷರತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರೋಗವನ್ನು ಪತ್ತೆ ಹಚ್ಚುವ ಹೊತ್ತಿಗೆ, ಪರಿಸ್ಥಿತಿ ಕೈಮೀರಿ ಹೋಗಿರುತ್ತಿತ್ತು. ಆ ಕಾರಣದಿಂದಲೇ ‘ಕ್ಯಾನ್ಸರ್’ ಗುಣಪಡಿಸಲಾಗದ ಖಾಯಿಲೆ ಎಂಬ ಹಣೆಪಟ್ಟಿ ಪಡೆದು ಕೊಂಡಿತು. ಆದರೆ ಮುಂದುವರಿದ ತಂತ್ರಜ್ಞಾನ, ಪರಿಣಿತ ವೈದ್ಯರ ಲಭ್ಯತೆ ಮತ್ತು ಜನರ ತಿಳುವಳಿಕೆಯ ಮಟ್ಟ ಏರಿದಂತೆ ಜನರಲ್ಲಿ ಅರ್ಬುದ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡತೊಡಗಿದೆ ಮತ್ತು ಈಗಿನ ಕಾಲಘಟ್ಟದಲ್ಲಿ ಕ್ಯಾನ್ಸರ್ ಖಂಡಿತವಾಗಿಯೂ ಗುಣಪಡಿಸಲಾಗದ ಖಾಯಿಲೆಯಲ್ಲ. ಪ್ರಾರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಪರಿಣಾಮಕಾರಿ ಔಷಧಿ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಮುಖವಾಗಬಹುದು. ಇತ್ತೀಚಿನ ದಿನಗಳಲ್ಲಿ ‘ಕ್ಯಾನ್ಸ್‍ರ್’ ರೋಗವನ್ನು ಗೆದ್ದು ಸುಖ ಜೀವನ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಸಮಾಧಾನಕರ ಅಂಶ. ಅಕ್ಷರತೆ, ಬಡತನ ನಿರ್ಮೂಲನ, ಗುಣಮಟ್ಟದ ವ್ಶೆಜ್ಷಾನಿಕ ಪರಿಷ್ಕಾರಗಳು ಮತ್ತು ತಾಂತ್ರಿಕ ಹಾಗೂ ವೈಜ್ಞಾನಿಕ ಕೌಶಲತೆಗಳಿಂದ, ಆರಂಭಿಕ ಹಂತದಲ್ಲಿ ಕ್ಯಾನ್ಸರ್ ರೋಗ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಜನರಲ್ಲಿ ಕ್ಯಾನ್ಸ ರೋಗವನ್ನು ಗುಣಪಡಿಸಬಹುದು ಎಂಬ ಭಾವನೆ ಮೂಡಿಸುವಲ್ಲಿ ವೈದ್ಯಕೀಯ ಜಗತ್ತು ಯಶಸ್ಸು ಕಂಡಿದೆ ಎಂದರೂ ತಪ್ಪಲ್ಲ. ಆದರೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಕ್ಯಾನ್ಸ್‍ರ್ ಇಳಿ ವಯಸ್ಸಿನ ರೋಗವಾಗಿತ್ತು. 60-70ರ ಹರೆಯದಲ್ಲಿ ಕಾಣಿಸಿಕೊಳ್ಳುತ್ತಿದ ರೋಗ, ಈಗೀಗ 30-40 ಹರೆಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ. ವಾತಾವರಣದಲ್ಲಿನ ವ್ಯತ್ಯಾಸ ಹವಾಮಾನ ವೈಪರಿತ್ಯ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಕಲುಷಿತಗೊಂಡ ನೀರು, ಗಾಳಿ, ಆಹಾರ ಮತ್ತು ವಿಪರೀತ ಒತ್ತಡದ ಜೀವನದಿಂದಾಗಿ, ಸಣ್ಣ ವಯಸ್ಸಿನಲ್ಲಿಯೇ  ಬೀಡಿ, ಸಿಗರೇಟು, ಗುಟ್ಕಾ ಮುಂತಾದ ದುಶ್ಚಟಗಳ ಸಹವಾಸದಿಂದಾಗಿ, ಹೆಚ್ಚು ಹೆಚ್ಚು ಯುವಜನತೆ 30-40ರ ಆಸುಪಾಸಿನಲ್ಲಿ ಕ್ಯಾನ್ಸ್‍ರ್ ರೋಗಕ್ಕೆ ತುತ್ತಾಗುವುದು ಆತಂಕಕಾರಿ ವಿಚಾರವೇ ಸರಿ.


ಅರ್ಬುದ ರೋಗಕ್ಕೆ ಕಾರಣಗಳು:

1. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ 

2. ಧೂಮಪಾನ ಮತ್ತು ಮದ್ಯಪಾನ

3. ಅನುವಂಶೀಯ ಕಾರಣಗಳು

4. ಆರಾಮದಾಯಕ ಜೀವನ ಶೈಲಿ, ಅನಾರೋಗ್ಯಪೂರ್ಣ ಆಹಾರದ ಪದ್ಧತಿ ಮತ್ತು ಒತ್ತಡದ ಜೀವನ  ಇತ್ಯಾದಿ

5. ಅತಿಯಾದ ವಿಕಿರಣದ ಮುಖಾಂತರ

6. ಅತಿಯಾದ ಗರ್ಭನಿರೋಧಕ ಮಾತ್ರೆಗಳು ಮತ್ತು ಕೃತಕ ರಸದೂತ ಮಾತ್ರೆಗಳ  ಅನಿಯಂತ್ರಿತ ಬಳಕೆ

7. ವಾತಾವರಣದ ವೈಪರೀತ್ಯ, ವಾಯು ಮಾಲಿನ್ಯ, ವೃತ್ತಿ ಸಂಬಂಧಿ ಕ್ಯಾನ್ಸರ್ ಕಾರಕ ವಸ್ತುಗಳ ದೇಹಕ್ಕೆ ಸೇರುವುದರಿಂದ 

8. ಅನಾರೋಗ್ಯಕರವಾದ ಲೈಂಗಿಕ ಜೀವನ ಮತ್ತು ಹತ್ತು ಹಲವಾರು ಲೈಂಗಿಕ ಸಂಬಂಧಗಳು, ಹಲವಾರು ಬಾರಿ ಗರ್ಭಧರಿಸುವುದು ಇತ್ಯಾದಿ. 

9. ಹೆಪಟೈಟಿಸ್ ಬಿ ಮತ್ತು ಸಿ ವೈರಸ್, ಎಬ್‍ಸ್ಟೈನ್ ಬಾರ್ ವೈರಸ್, ಹ್ಯೂಮನ್ ಪಾಪಿಲೋಮ ವೈರಸ್, ಏಡ್ಸ್ ವೈರಸ್ ಇತ್ಯಾದಿ ವೈರಾಣು ಸೋಂಕಿನಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.  


ತಡೆಗಟ್ಟುವುದು ಹೇಗೆ?

1. ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ವರ್ಜಿಸಬೇಕು. ಗುಟ್ಕಾ, ಪಾನ್‍ಪರಾಗ್ ಮಾಣಿಕ್‍ಚಂದ್ ಮುಂತಾದ ತಂಬಾಕು ಉತ್ಪನ್ನಗಳು ಮನುಕುಲದ ದೊಡ್ಡ ವೈರಿ ಮತ್ತು ಕ್ಯಾನ್ಸರ್ ಕಾರಕ ವಸ್ತುಗಳು. ತಂಬಾಕನ್ನು ಯಾವುದೇ ರೂಪದಲ್ಲಿ ಉಪಯೋಗಿಸುವಂತಿಲ್ಲ 

2. ಧೂಮಪಾನ ಖಂಡಿತವಾಗಿಯೂ ಕ್ಯಾನ್ಸರ್ ರೋಗಕ್ಕೆ ಪೂರಕ. ಧೂಮಪಾನ ಮಾಡುವ ಶೇಕಡಾ 70 ಮಂದಿ ಶ್ವಾಸಕೋಶದ ಕ್ಯಾನ್ಸರಿಗೆ ತುತ್ತಾಗುತ್ತಾರೆ.

3. ಮದ್ಯಪಾನ ವರ್ಜಿಸಬೇಕು. ಧೂಮಪಾನ, ಮಧ್ಯಪಾನ ಮತ್ತು ತಂಬಾಕು ಮೂರು ಕೂಡ ಮನುಕುಲದ ಬಹುದೊಡ್ಡ ವೈರಿ. ಇವು ಮೂರು ಚಟಗಳು ಒಟ್ಟು ಸೇರಿದಲ್ಲಿ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ. 

4. ಕೆಲವೊಂದು ಕ್ಯಾನ್ಸರ್ (ವೃಷಣದ ಕ್ಯಾನ್ಸರ್, ಸ್ತನ ಕ್ಯಾನ್ಸರ್) ಅನುವಂಶೀಯವಾಗಿ ಬರುತ್ತದೆ. ಈ ರೀತಿಯ ಚರಿತ್ರೆಯುಳ್ಳವರು ಕಾಲಕಾಲಕ್ಕೆ ವ್ಶೆದ್ಯರಿಂದ ಪರೀಕ್ಷಿಸಿಕೊಳ್ಳಬೇಕು.

5. ಅತಿಯಾದ ರಸದೂತಗಳ ಬಳಕೆ ಮತ್ತು ಅತಿಯಾದ ಗರ್ಭನಿರೋಧಕಗಳ ಬಳಕೆಯನ್ನು ಮಾಡಬಾರದು ಅತೀ ಅಗತ್ಯವಿದ್ದಲ್ಲಿ ಮಾತ್ರ ಬಳಸಬೇಕು. ಅದೇ ರೀತಿ ಅನಾರೋಗ್ಯಕರ ಲೈಂಗಿಕ ಪ್ರಕ್ರಿಯೆಗಳು ಮತ್ತು ಸಂಬಂಧಗಳಿಗೆ ಕಡಿವಾಣ ಹಾಕಲೇಬೇಕು. ಇಲ್ಲವಾದಲ್ಲಿ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ.

6. ಆರೋಗ್ಯಕರವಾದ ಜೀವನ ಕ್ರಮ, ಪರಿಪೂರ್ಣವಾದ ಸಮತೋಲಿನ ಆಹಾರ, ಶಿಸ್ತು ಬದ್ಧವಾದ ನಿರಂತರವಾದ ದೈಹಿಕ ವ್ಯಾಯಾಮಗಳಿಂದ ಕೂಡಿದ ಜೀವನಶೈಲಿ ಮತ್ತು ಒತ್ತಡ ರಹಿತ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು. ಕಲುಷಿತ ವಾತಾವರಣ, ಕಲುಷಿತ ಆಹಾರ ನೀರು ಇತ್ಯಾದಿಗಳಿಂದಲೂ ಕ್ಯಾನ್ಸರ್ ಬರಬಹುದು. ವಿಕಿರಣ ಸೂಸುವ ವಾತಾವರಣ ಮತ್ತು ವೃತ್ತಿ ಸಂಬಂಧಿ ಕ್ಯಾನ್ಸರ್‍ಕಾರಕ (ಸೀಸದ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ) ವಾತಾವರಣವಿದ್ದಲ್ಲಿ ವೃತ್ತಿಯನ್ನು ಬದಲಿಸಿ, ಕ್ಯಾನ್ಸರ್ ಬರದಂತೆ ಎಚ್ಚರ ವಹಿಸಬೇಕು.

7. ಕಾಲಕಾಲಕ್ಕೆ ವೈದ್ಯರ ಬಳಿ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಂಡಲ್ಲಿ ಬಾಯಿ ಕ್ಯಾನ್ಸರ್, ಸ್ತನ್ ಕ್ಯಾನ್ಸರ್, ಸರ್ವಿಕ್ಸ್ ಕ್ಯಾನ್ಸರ್ ಮತ್ತು ಇನ್ನಾವುದೇ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಬಹುದು. ಕ್ಯಾನ್ಸರ್ ರೋಗದ ವಿಚಾರದಲ್ಲಿ ರೋಗದ ಚಿಕಿತ್ಸೆಗಿಂತ ರೋಗವನ್ನು ತಡೆಗಟ್ಟುವಂತೆ ಮುನ್ನೆಚ್ಚರಿಕೆ ವಹಿಸುವುದರಲ್ಲಿಯೇ ಜಾಣತನ ಅಡಗಿದೆ.    


ಚಿಕಿತ್ಸೆ ಹೇಗೆ?

ಕ್ಯಾನ್ಸರ್ ರೋಗಕ್ಕೆ ಮೂಲಭೂತ ಚಿಕಿತ್ಸೆ ಎಂದರೆ ಕ್ಯಾನ್ಸರ್ ಪೀಡಿತ ಗಡ್ಡೆಯನ್ನು ಸರ್ಜರಿ ಮುಖಾಂತರ ತೆಗೆಯುವುದು. ಪ್ರಾರಂಭಿಕ ಹಂತದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಮುಂದುವರಿದ ಹಂತದಲ್ಲಿ ಸರ್ಜರಿ ಜೊತೆಗೆ ವಿಕಿರಣ ಚಿಕಿತ್ಸೆ ಹಾಗೂ ಕಿಮೋಥೆರಫಿಯ ಅವಶ್ಯಕತೆ ಇರುತ್ತದೆ. ಕೆಲವೊಂದು ಕ್ಯಾನ್ಸರ್‍ಗಳನ್ನು ಕಿಮೋಥೆರಫಿಯಿಂದಲೇ ಗುಣಪಡಿಸಲಾಗುತ್ತದೆ. (ಉದಾಹರಣೆ ಲಿಂಫೋಮ ಎನ್ನುವ ಕ್ಯಾನ್ಸರ್) ಮುಂದುವರಿದ ಹಂತದಲ್ಲಿ ಎಲ್ಲಾ ಮೂರು ರೀತಿಯ ಚಿಕಿತ್ಸೆಯೂ ಬೇಕಾಗಬಹುದು ಮತ್ತು ಚಿಕಿತ್ಸೆಗೆ ಸರಿಯಾದ ರೀತಿಯಲ್ಲಿ ಸ್ಪಂಧಿಸದೇ ಇರಬಹುದು. ಚಿಕಿತ್ಸೆಯ ವಿಧಾನ, ಪ್ರಮಾಣ ಮತ್ತು ಚಿಕಿತ್ಸೆಯ ಸಮಯ ಎಲ್ಲವನ್ನು ವೈದ್ಯರೇ ನಿರ್ಧರಿಸುತ್ತಾರೆ. ವೈದ್ಯರ ಸೂಕ್ತ ಮಾರ್ಗದರ್ಶದಂತೆ ಚಿಕಿತ್ಸೆ ಪಡೆದಲ್ಲಿ ಕ್ಯಾನ್ಸರ್ ರೋಗವನ್ನು ಖಂಡಿತವಾಗಿಯೂ ಪರಿಣಾಮಕಾರಿಯಾಗಿ ಗುಣಪಡಿಸಬಹುದು ಮತ್ತು ಇತರರಂತೆ ನೆಮ್ಮದಿಯ ಜೀವನ ನಡೆಸಬಹುದು ಮತ್ತು ನಡೆಸಿದ ನಿದರ್ಶನಗಳು ನಮ್ಮ ಮುಂದೆಯೇ ಹಲವಾರು ಇದೆ.  

ಕೊನೆಮಾತು:

ಅರ್ಬುದ ರೋಗ ಮಾರಣಾಂತಿಕ ರೋಗವಾಗಿದ್ದರೂ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಖಂಡಿತವಾಗಿಯೂ ಗುಣಪಡಿಸಬಹುದು. ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಜಯಿಸಬಹುದು. ಕ್ಯಾನ್ಸರ್ ರೋಗ ಬಂದಿದೆ ಎಂದಾದ ಕೂಡಲೇ ಮನಸಿಕವಾಗಿ ಕುಗ್ಗಿ ಹೋಗಿ ತನ್ನ ದಿನ ಮುಗಿಯಿತು ಎನ್ನುವ ಋಣಾತ್ಮಕ ಮನೋಭಾವ ಖಂಡಿತಾ ಸಲ್ಲದು. ಬಡತನ, ಅನಕ್ಷರತೆ, ಅಜ್ಞಾನ, ಮೂಡ ನಂಬಿಕೆಗಳಿಂದ ತುಂಬಿರುವ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್ ರೋಗ ಎರಡನೇ ಅತಿ ದೊಡ್ಡ ರೋಗವಾಗಿ ಹೊರಹೊಮ್ಮಿರುವುದಂತೂ ಸತ್ಯ. (ಹೃದಯಾಘಾತ ಮಾರಣಾಂತಿಕ ಖಾಯಿಲೆಗಳಲ್ಲಿ ಜಾಗತಿಕವಾಗಿ ಮೊದಲನೇ ಸ್ಥಾನದಲ್ಲಿದೆ) ಕ್ಯಾನ್ಸರ್ ಸಾಂಕ್ರಾಮಿಕ ರೋಗವಲ್ಲದಿದ್ದರೂ, ಅನಾರೋಗ್ಯಕರ ಜೀವನ ಶೈಲಿ. ಒತ್ತಡದ ಬದುಕು, ವಿಪರೀತ ಪೈಪೋಟಿಯ ಜೀವನ ಪದ್ಧತಿ, ಬಿಡುವಿಲ್ಲದ ಅನಿಯಂತ್ರಿತ ಯಾಂತ್ರಿಕ ಬದುಕು, ತಂಬಾಕು ಉತ್ಪನ್ನಗಳ ದುರ್ಬಳಕೆಯಿಂದಾಗಿ ಅರ್ಬುಧ ರೋಗ ಮುನುಕುಲದ ಮೇಲೆ ಮರಣ ಮೃದಂಗ ಬಾರಿಸುತ್ತಿರುವುದಂತೂ ಸತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವೈದ್ಯ ಮತ್ತು ಪ್ರಜೆಯೂ ತನ್ನ ಹೊಣೆಗಾರಿಕೆ ಅರಿತು ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಕ್ಯಾನ್ಸರ್ ಪೀಡಿತರಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕುವಂತೆ ಮಾಡಿ ಮಾನಸಿಕ ಧೈರ್ಯ ತುಂಬಿದಲ್ಲಿ ಅರ್ಬುದ ರೋಗವನ್ನು ಜಯಿಸಬಹುದು. ಅದರಲ್ಲಿಯೇ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದ ಒಳಿತು ಮತ್ತು ಭವಿಷ್ಯ ಅಡಗಿದೆ.


 -ಡಾ|| ಮುರಲೀ ಮೋಹನ್ ಚೂಂತಾರು

BDS, MDS,DNB,MOSRCSEd(U.K), FPFA, M.B.A

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ: 9845135787


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top