ಸಾವಿತ್ರಿ ಬಾಯಿ ಪುಲೆ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಸುಧಾರಣೆಗಳು

Upayuktha
0



ಒಬ್ಬ ವ್ಯಕ್ತಿಯು ವ್ಯಕ್ತಿ ಸ್ವಾತಂತ್ರ್ಯವೂ ಸಹ ಅಡಕತ್ತರಿಯ ಅಡಕೆಯಲ್ಲಿದ್ದಂತೆ ಇದ್ದರೂ ವಸ್ತುನಿಷ್ಠ ವಿಚಾರಗಳ ಪ್ರತಿಪಾದನೆಯನ್ನು ಮಾಡುವುದೆಂದರೆ ಅದೊಂದು ಅತ್ಯುತ್ಕೃಷ್ಟ ಧೀ ಶಕ್ತಿಯ ಪರಾಕಾಷ್ಠೆಯನ್ನು ತಲುಪಿದ ಸಂಕೇತವಾಗಿದೆ. ಸಮಾಜದ ಹುಳುಕುಗಳೂ ಕೊಳಕುಗಳೂ ತನಗೇ ಅಂಟಿಕೊಂಡಂತೆ ಉಂಟಾಗುವ ಅಸಹ್ಯತನ ಶೋಧನೆಯತ್ತ ಧುಮುಕುವಂತೆ ಮಾಡಿದರೆ ಅದು ಆ ವ್ಯಕ್ತಿಯ ವಸ್ತುನಿಷ್ಠ ಸಾಮಾಜಿಕ ಸ್ಪಂದನೆಯ ಪ್ರಮುಖವಾದ ಸೂಚ್ಯಂಕವಾಗಿರುತ್ತದೆ.


ತನಗೆ ಸಂಬಂಧ ಪಡದ ವಿಚಾರದಲ್ಲಿ ತಲೆಗೆಡಿಸಿಕೊಳ್ಳದ ಪ್ತವೃತ್ತಿಯ ಹೆಚ್ಚಾಗಿ ಅನೇಕರಲ್ಲಿ ಕಂಡು ಬರಬಹುದಾದ ಸಾಮಾನ್ಯ ಅಂಶವಾದರೆ ಕೆಲವೊಮ್ಮೆ ಬೆರಳೆಣಿಕೆಯ ಅಸಾಮಾನ್ಯ ವ್ಯಕ್ತಿತ್ವದ ಜನ ಸಾಮಾನ್ಯರೂ ಸಮಾಜದಲ್ಲಿ ಮೊಳಕೆಯಿಡೆದಿರುವುದೇ ಹಲವಾರು ಸಾಮಾಜಿಕ ನೈರ್ಮಲ್ಯದ ಕ್ರಾಂತಿಗೆ ಕಾರಣವಾಗುತ್ತದೆ.


ಈ ದಿಶೆಯಲ್ಲಿ ಗತ ಶತಮಾನ ಜನವರಿ‌ 3 ರ 1831ರಲ್ಲಿ ಮಹಾರಾಷ್ಟ್ರದ ನಾಯ್ ಗಾಂವ್ ಎಂಬಲ್ಲಿ ಜನ್ಮತಾಳಿದ ಸಾವಿತ್ರಿ ಬಾಯಿ ಪುಳೆಯವರ ದಿಟ್ಟ ಹೆಜ್ಜೆಗಳು ಸ್ವಸ್ಥ ಮಹಿಳಾ ಸಮಾಜ ನಿರ್ಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಿದುದು ಅತಿಶಯೋಕ್ತಿಯಲ್ಲ.


ಕೇವಲ ಶೈಕ್ಷಣಿಕ ಸಂಸ್ಥಾನ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಅಲ್ಲಿನ‌ ಮಹಿಳಾ ಸಾಧಕ ಬಾಧಕಗಳತ್ತ ಗಮನ ಹರಿಸಿ ಅತ್ಯುತ್ತಮ ಅಭಿವೃದ್ಧಿಗೆ ಹೋರಾಡಿದ ಈಕೆ ನಿಜಾರ್ಥದ ಶಿಕ್ಷಕಿ.


ಲಕ್ಷ್ಮಿ ಹಾಗೂ ಖಾಂಡೋಜೀ ನೇವಸೆ ಪಾಟೀಲ್ ದಂಪತಿಗಳ ಹಿರಿಯ ಪುತ್ರಿಯಾಗಿ ಜನ್ಮತಾಳಿದ ಸಾವಿತ್ರಿ ಬಾಯಿ ಹೇಳುವಂತಹ ಸಿರಿವಂತ ಕುಟುಂಬದವರೇನಲ್ಲ.


ತಾನು ತನ್ನ ಎಂಟನೇ ಹರೆಯದಲ್ಲಿ ವಿವಾಹ ಬಂಧನಕ್ಕೊಳಗಾಗಿ ಅಂದಿನ‌ ಕಾಲದ ಬಾಲ್ಯ ವಿವಾಹ ಪದ್ಧತಿಗೆ ಅನುಬಂಧಿಯಾಗಿ 13ರ ಹರೆಯದ ಜ್ಯೋತಿರಾವ್ ಪುಳೆಯವರ ಧರ್ಮಪತ್ನಿಯಾಗಿ ಅದಿನ್ನೂ ಜಗವರಿಯುವ ಮೊದಲೇ ಗೃಹಿಣಿಯಾದವಳು. ಪ್ರಾಯಃ ಇಂತಹ ಕಟ್ಟುಪಾಡುಗಳ ಅಸಹನೀಯತೆಯೂ ಕೂಡಾ ಬಾಲ್ಯ ವಿವಾಹ ರದ್ಧತಿಗಾಗಿ ಆಕೆಗೆ ಹೋರಾಡುವ ಪ್ರೇರಣೆ ಕೊಟ್ಟಿರಬಹುದು ಅನಿಸುತ್ತದೆ.


ವಿವಾಹಾನಂತರ 1847 ರಲ್ಲಿ ನ್ನ 17ನೇ ಹರೆಯದಲ್ಲಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿ ತರಬೇತು ಪಡೆದ ಸಾವಿತ್ರಿಯವರು ತನ್ನ ಪತಿ ಸಹಿತವಾಗಿ ಸಾಮಾಜಿಕ ಪುನರ್ನವೀಕರಣ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಮನ‌ಮಾಡಿದ ಫಲಿತಾಂಶವೇ ಹದಿನೆಂಟು ಮಹಿಳಾ ಶಿಕ್ಷಣಾಲಯ ಅಥವಾ ಶಾಲೆಗಳ ನಿರ್ಮಾಣಕ್ಕೆ ಕಾರಣವಾದುವು.


ಆದ್ದರಿಂದಲೇ ಅಖಂಡ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಹಾಗೂ ಮುಖ್ಯೋಪಾಧ್ಯಾಯಿನಿಯಾದ ಹೆಗ್ಗಳಿಕೆಯೂ ಅವರಿಗೇ ಸಲ್ಲುತ್ತದೆ. ಅವರ ಸಾಧನೆಯ ಪ್ರತೀಕವಾದ ಪುಣೆಯ ಈ ವಿದ್ಯಾಲಯಗಳು ಸಾವಿತ್ರಿ ಬಾಯಿ ಪುಳೆ ವಿಶ್ವವಿದ್ಯಾಲಯವಾಗಿ 2014 ರಲ್ಲಿ ಮರು ನಾಮಕರಣ ಹೊಂದಿದುದೂ ಭವ್ಯ ಇತಿಹಾಸ.

ಆಕೆಯ ಸತ್ ಸಾಧನೆಗಳನ್ನು ಅಂದಿನ‌ ಬ್ರಿಟಿಶ್ ಸರ್ಕಾರವೂ ಗೌರವಿಸಿ ಪುರಸ್ಕರಿಸಿದುದಕ್ಕೆ ಆಕೆಗೆ ಭಾರತದ ಪ್ರಥಮ ಮಹಿಳಾ  ಶಿಕ್ಷಕಿಯೆಂಬ ಪಾರಿತೋಷಕ ನೀಡಿದುದೇ ಸಾಕ್ಷಿ.


ಪ್ರಪ್ರಥಮವಾಗಿ ಶಿಕ್ಷಕಿಯಾದ ಆಕೆ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾಗಿ, ಸಾರ್ವಜನಿಕ ನಿಂದನೆ ಹಾಗೂ ಅಗೌರವಗಳನ್ನು ಎದುರಿಸುತ್ತಾ ಹಲವರು ತನಗೆ ಸೆಗಣಿಯನ್ನು ಎರಚಿದ್ದರೂ ಸಹಿಸಿ, ಎರಡೆರಡು ಸೀರೆಗಳನ್ನು ಇರಿಸಿ ಕೊಂಡು ಶಾಲೆಯಲ್ಲಿ ಅದನ್ನು ಬದಲಾಯಿಸುವ ಪರಿಸ್ಥಿತಿ ಸಹಾ ಬಂದಿತ್ತೆಂದರೆ ಆಕೆಯ ಮನೋ ದಾರ್ಡ್ಯತೆ ಅವರ್ಣನೀಯ. ಮೇಲಾಗಿ ಸದಾ ಖಾದಿ ಉಡುಗೆಗಳನ್ಮೇ ಧರಿಸುತ್ತಿದ್ದ ಆಕೆಯ ದೇಶಪ್ರೇಮವೂ ಸಹ ಒಂದು ಭವ್ಯ ಮಾದರಿ.


ಜಾತಿ ಪದ್ಧತಿ, ಮೇಲು ಕೀಳು ಎಂಬ ಭಾವ, ಮಹಿಳಾ ಸ್ವಾತಂತ್ರ್ಯ ನ್ಯೂನತೆ ಇತ್ಯಾದಿಗಳೂ ಸಹ ಸಾವಿತ್ರಿ ಬಾಯಿಯವರಿಗೆ ಕಿರಿಕಿರಿ ಉಂಟು ಮಾಡಿದ ಅಂಶಗಳು.


ಹಾಗಾಗಿಯೇ ಮಹಿಳಾ ಸಬಲೀಕರಣದ ಆಲಯಗಳನ್ನೂ ಸಂಸ್ಥೆಗಳನ್ನೂ ಸ್ಥಾಪಿಸುವಂತಹ ಅನಿವಾರ್ಯತೆ ಆಕೆಗೆ ಬಂದಂತಿದೆ. ಯಾಕೆಂದರೆ ನೋವು ನುಂಗಿ ಕುಳಿತು ಕೊಳ್ಳಲಾರದ ಮನಸ್ಥಿತಿ ಇದ್ದಾಗ ನಿವಾರಣೆಗೆ ದಾಪುಗಾಲು ಹಾಕ ಬೇಕಾಗುತ್ತದೆ.


1863ರಲ್ಲಿ ಮಹಿಳೆಯವರ ಉನ್ನತಿಗಾಗಿ ಮತ್ತು ಅಂದು ಬಹಳಷ್ಟು ಚಾಲ್ತಿಯಲ್ಲಿದ್ದ ಮಹಿಳಾ ತಥಾಫಿ ಅನಪೇಕ್ಷಿತ ಶಿಶುಹತ್ಯೆಯ ಖಂಡನೆಗಾಗಿ ಒಂದು ಸಂಸ್ಥೆಯನ್ನು ತನ್ನದೇ ಮನೆಯಲ್ಲಿ ಸಹ ಸ್ಥಾಪಿಸಿದುದು ಅವರ ಆತ್ಮ ಶುದ್ಧಿಗೊಂದು ನಿದರ್ಶನ.


ಪತಿ ಸಹಿತವಾಗಿ ಇಂತಹ ದುರ್ನೀತಿಯ ವಿರುದ್ಧ  ಹೋರಾಡಿದ ಸಾವಿತ್ರಿಬಾಯಿ ದಂಪತಿಗಳು ತಮ್ಮ ಜೀವನಪೂರ್ತಿ ಸಾಮಾಜಿಕ ನೈರ್ಮಲ್ಯದ ಕುರಿತಾಗಿ ಬಾಳು ಸವೆಸಿದುದು ಸದಾ ಸ್ಮರಣೀಯ. ವಿಧವೆಯರ ಬಗ್ಗೆ, ಮಂಗಳ ಮುಖಿಯರ ಬಗೆಗೆ ಇರುವ ತಾತ್ಸಾರ ಹಾಗೂ ವಿಧವಾ ವಿವಾಹದ ವಿಚಾರದಲ್ಲೂ ಸಹ ಸಾವಿತ್ರಿ ಬಾಯಿ ಚಿಂತನಾಶೀಲರಾಗಿದ್ದರು.


ಮಹಿಳಾ ಸಬಲೀಕರಣದ ನಿಮಿತ್ತ ಹಲವಾರು ಸಾಹಿತ್ಯ ಬರೆದವರು ಸಾವಿತ್ರಿ. "ಕಾವ್ಯ ಫೂಲೆ" ಅಂದರೆ ಕಾವ್ಯ ಅರಳಿದೆ ಎನ್ನುವ ಕವನ ಸಂಕಲನದ ಮೂಲಕ 19ನೇ ಶತಮಾನದ ಸಮಾಜದ ಪರಿಸ್ಥಿತಿಯ ದಾಖಲೀಕರಣವಾಗಿ, ಅನಂತರದ "ಭವನಕಾಶಿ" ಮತ್ತು ತಮ್ಮ ಭಾಷಣಗಳ ಸಂಪಾದಿತ ಕೃತಿಗಳೂ ಲೋಕಾರ್ಪಿತವಾಗಿದ್ದುವು. ಕರ್ಜಿ (ಸಾಲ) ಎಂಬ ಪ್ರಬಂಧವೂ ಅವರ ರಚನೆಗಳಲ್ಲೊಂದು.


ಜ್ಯೋತಿಬಾ ಪುಳೆಯವರ ಹೆಗಲಿಗೆ ಹೆಗಲು ಕೊಡುತ್ತಾ ಆದರ್ಶ ಪತ್ನಿಯಾದ ಸಾವಿತ್ರಿಯವರು ಮಕ್ಕಳಿಲ್ಲದಿದ್ದರೂ ಆನಂದದಿಂದಿದ್ದರು. ವಿಧವೆಯೊಬ್ಬಳ ಮಗನಾದ ಯಶವಂತುವೆಂಬವನೇ ಅವರ ಪುತ್ರನಾಗಿದ್ದ. ಅನಾಥ ಮಕ್ಕಳ ಶಿಶುಕೇಂದ್ರ ಸ್ಥಾಪನೆಗೂ ಇದುವೇ ಪ್ರೇರಣೆ ನೀಡಿರಲೂ ಬಹುದು.


ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಪದ್ಧತಿಯನ್ನು ತಂದು ಕಲಿಕೆಗೆ ಪ್ರೇರಕರಾಗಿ ಬಡವರನ್ನು ಅಕ್ಷರಸ್ಥರನ್ನಾಗಿ ಮಾಡಿದ ಇವರ ದೂರದೃಷ್ಟಿ ಅತ್ಯಮೋಘ.


ವಿವಾಹ ಬಾಹಿರ ಗರ್ಭಧಾರಣೆ, ಹಾಗೂ ಹಾಗೆ ಜನಿಸಿದ ಮಕ್ಕಳಿಗೂ ವಸತಿ ಕೇಂದ್ರ ಸ್ಥಾಪಿಸಿದ ಉದಾತ್ತೆ ಸಾವಿತ್ರಿ ಬಾಯಿ. ಪೂಜಾರಿಗಳಿಲ್ಲದೆ ಕಾನೂನಿನ ಚೌಕಟ್ಟಿನಲ್ಲಿ ವಿವಾಹ ಸಮಾರಂಭ ನಡೆಸಿದವರಿವರು.


ಕೂಲಿ ಕಾರ್ಮಿಕರಿಗಾಗಿ ರಾತ್ರಿ ಶಾಲೆ ಹಾಗೆಯೇ ದಲಿತರಿಗಾಗಿ ತನ್ನ ಮನೆಯ ಕುಡಿಯುವ ನೀರಿನ ಟ್ಯಾಂಕಿನ ತ್ಯಾಗ, ಬ್ರಾಹ್ಮಣ ವಿಧವೆಯ ಮಗನನ್ನು ದತ್ತು ತೆಗೆದು ಕೊಂಡುದು ಇವೆಲ್ಲ ಬದಲಾವಣೆಯತ್ತ ಹೆಜ್ಹೆ ಇಟ್ಟ ಕ್ರಾಂತಿಯ ಉದಾಹರಣೆಗಳು ಪ್ರಾಯಃ ಸಮಾನತೆಯ ಮೇಲೆ ಬೆಳಕು ಬೀರಿದ ಅಮೋಘ ಸಾಧನೆಗಳು.

1897ರಲ್ಲಿ ಪ್ಲೇಗ್ ರೋಗಿಯ ಶುಶ್ರೂಷೆ ಮಾಡುತ್ತಲೇ ಕೊನೆಯುಸಿರೆಳೆದ ಸಾವಿತ್ರಿ ಬಾಯಿ ಪುಳೆಯವರ ಜೀವನ ಅಪೂರ್ವ ಹಾಗೂ ಆದರ್ಶ.


-ಡಾ ಸುರೇಶ ನೆಗಳಗುಳಿ

ಶಸ್ತ್ರಚಿಕಿತ್ಸಕ ಪ್ರಾಧ್ಯಾಪಕ ಬರಹಗಾರ

ಮಂಗಳಾ ಆಸ್ಪತ್ರೆ ಮಂಗಳೂರು ೫೭೫೦೦೩

ಸುಹಾಸ ಮನೆ

ಎಕ್ಕೂರು ರಸ್ತೆ ಬಜಾಲ್ ಪಕ್ಕಲಡ್ಕ

ಮಂಗಳೂರು 575009

9448216674

negalagulis@gmail.com


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top