ಭಾರತೀಯ ಕಾಲಮಾನ ಪರಂಪರೆಯಲ್ಲಿ ಋತುಗಳಿಗೆ ಅತ್ಯಂತ ಪ್ರಾಧಾನ್ಯತೆ ಇದೆ. ಇಷ್ಟೊಂದು ವೈಜ್ಞಾನಿಕವಾಗಿ, ನಿಖರವಾಗಿ ಕಾಲವನ್ನು ನಿರ್ಧರಿಸಬಲ್ಲ ವೈಜ್ಞಾನಿಕತೆ ಆ ಕಾಲದಲ್ಲಿ ಇದ್ದದ್ದು ನಮ್ಮನ್ನು ಈ ಕ್ಷಣಕ್ಕೂ ನಿಬ್ಬೆರಗಾಗಿಸುತ್ತದೆ. ಸೂರ್ಯನ ಗತಿಯನ್ನು ಅನುಸರಿಸಿ ನಿರ್ಧಾರವಾಗುವ ಉತ್ತರಾಯಣ ದಕ್ಷಿಣಾಯನ ಹಾಗೂ ಅವುಗಳಲ್ಲಿ ಅಡಕವಾದ ಆರು ಋತುಗಳು ನಿಜಕ್ಕೂ ನಮ್ಮ ಹಿರಿಯರ ವಿಶಿಷ್ಟ ದೃಷ್ಟಿಗೆ ಸಾಕ್ಷಿ.
ಆಯುರ್ವೇದದಲ್ಲಿ ಈ ಪ್ರತಿಯೊಂದು ಋತುವಿನಲ್ಲೂ ಕೂಡ ಯಾವ ರೀತಿ ನಡೆದರೆ ಆರೋಗ್ಯಕ್ಕೆ ಪೂರಕವಾಗಬಹುದು ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಈಗ ನಡೆಯುತ್ತಿರುವುದು ಶಿಶಿರ ಋತು. ಅಂದರೆ ಮಾಘ ಮತ್ತು ಪಾಲ್ಗುಣ ಮಾಸಗಳು ಎರಡು ಸೇರಿ ಶಿಶಿರ ಋತು ಆಗುತ್ತದೆ. ಅಂದರೆ ಜನವರಿ 14 ಮಕರ ಸಂಕ್ರಮಣದ ದಿನದಿಂದ ತೊಡಗಿ ಮಾರ್ಚ್ 14 ರ ವರೆಗಿನ ಕಾಲಾವಧಿ. ಅಂದರೆ ಸಾಮಾನ್ಯ ಭಾಷೆಯಲ್ಲಿ ಚಳಿಗಾಲ. ಈ ಅವಧಿಯಲ್ಲಿ ರಾತ್ರಿ ದೀರ್ಘ, ಹಗಲು ಕಡಿಮೆ. ಶಿಶಿರ, ವಸಂತ, ಗ್ರೀಷ್ಮ- ಮೂರು ಸೇರಿ ಉತ್ತರಾಯಣ. ಅಂದರೆ ಇದನ್ನು ಆಯುರ್ವೇದ ಸಂಹಿತೆಗಳಲ್ಲಿ" ಆದಾನ ಕಾಲ" ಎಂದು ಹೆಸರಿಸಿದ್ದಾರೆ. ಆದಾನ ಎಂದರೆ ತೆಗೆದುಕೊಳ್ಳುವುದು. ಅಂದರೆ ಸೂರ್ಯನು ಭೂಮಿಯ ಜೀವಿಗಳ ಶಕ್ತಿಯನ್ನು, ಬಲವನ್ನು ಹೀರಿಕೊಳ್ಳುವ ಕಾಲ ಆದಾನ ಕಾಲ. ಅಂದರೆ ನಮ್ಮ ಶಕ್ತಿ ಕುಂದುವ ಸಮಯ.
ಶಿಶಿರ ಋತುವಿನಲ್ಲಿ ಶೀತ ಅಧಿಕವಾಗಿರುತ್ತದೆ. ಆದಾನ ಕಾಲದ ರೂಕ್ಷತೆ ಅಥವಾ ಶುಷ್ಕತ್ವಗಳು ಅಧಿಕವಾಗಿರುತ್ತದೆ. ಅಂದರೆ ಇದು ಜೀವಿಗಳನ್ನು ಒಣಗಿಸುವ ಸ್ವಭಾವ ಉಳ್ಳದ್ದು. ಜೀವಿಗಳಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಕಾಲದ ಆಗ್ನೇಯ ಗುಣ ಪ್ರಭಾವದಿಂದಾಗಿ ಇದು ಸಂಭವಿಸುತ್ತದೆ. ಬೆಂಕಿಯ ಗುಣ ಒಣಗಿಸುವುದು ತಾನೇ? ಸೂರ್ಯ ಮತ್ತು ಗಾಳಿ- ಎರಡು ಕೂಡಾ ಅತಿ ತೀಕ್ಷ್ಣ, ಅತಿ ಉಷ್ಣ, ಅತಿ ರೂಕ್ಷ ಗುಣಗಳಿಂದ ಭೂಮಿಗೆ ಸಂಬಂಧಿಸಿದ ಸೌಮ್ಯ ಗುಣವನ್ನು ನಾಶಮಾಡುತ್ತವೆ. ಇದಕ್ಕೆ ಕಾರಣ "ಮಾರ್ಗ ಸ್ವಭಾವತಃ", ಅಂದರೆ ಸೂರ್ಯನ ನಡೆ ಉತ್ತರ ದಿಕ್ಕಿನ ಕಡೆಗೆ ಆಗುವುದರಿಂದ. ಸಹಜವಾಗಿಯೇ ಭೂಮಿ ತಿಕ್ತರಸ ಪ್ರಧಾನ, ಅಂದರೆ ಕಹಿ ರಸದಿಂದ ಒಡಗೂಡಿರುತ್ತದೆ.
ಹಾಗಾದರೆ ಈ ಸಂದರ್ಭದಲ್ಲಿ ವಾತಾವರಣ ಹೇಗಿರುತ್ತದೆ? ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಮೋಡ ಹಾಗೂ ಅಪರೂಪ ಎನ್ನಬಹುದಾದ ಮಳೆ ಈ ಋತುವಿನ ಸಹಜ ಸ್ವಭಾವವೇ ಆಗಿದೆ. ವಾತಾವರಣದಲ್ಲಿನ ಶೀತ ಗುಣದಿಂದಾಗಿ ವಾತ ದೋಷ ಪ್ರಕುಪಿತಗೊಳ್ಳುವ ಸಮಯ.
ಹಾಗಾದರೆ ನಾವು ಏನು ಮಾಡಬೇಕು ಎಂಬುದು ಪ್ರಶ್ನೆ. ಇಲ್ಲಿ ಹೇಮಂತ ಋತುವಿನಲ್ಲಿ ಅನುಸರಿಸಬೇಕಾದ ವಿಧಿ ನಿಯಮಗಳನ್ನು ಇನ್ನೂ ಚೆನ್ನಾಗಿ ಅನುಷ್ಠಾನಗೊಳಿಸಬೇಕು ಎಂದಿದ್ದಾರೆ. ಏಕೆಂದರೆ ಹೇಮಂತ ಋತುವಿಗಿಂತಲೂ ಶೀತ ಅಧಿಕವಾಗಿರುವುದರಿಂದ, ಜೊತೆಗೆ ಒಣ ಸ್ವಭಾವವು ಸೇರಿಕೊಳ್ಳುವುದರಿಂದ ಆಹಾರದಲ್ಲಿ ಮಧುರ (ಸಿಹಿ), ಅಮ್ಲ (ಹುಳಿ), ಲವಣ (ಉಪ್ಪು)- ಈ ಮೂರು ರಸಗಳು ಅಥವಾ ರುಚಿಗಳು ಪ್ರಧಾನವಾಗಿರುವ ಆಹಾರವನ್ನು ಸೇವಿಸಬೇಕು. ಮಧುರ ಅಥವಾ ಸಿಹಿ ರಸವನ್ನು ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಇದ್ದವರು ಬಿಟ್ಟುಬಿಡಬೇಕು. ತಿಕ್ತ (ಕಹಿ) ಮತ್ತು ಕಟು (ಖಾರ) ರುಚಿ ಗಳಿರುವ ಆಹಾರವನ್ನು ಸೇವಿಸಲೇಬಾರದು ಎಂದು ವಿಧಿಸಿದ್ದಾರೆ. ಏಕೆಂದರೆ ಇದರಿಂದ ದೇಹದಲ್ಲಿನ ಮಾತ ದೋಷವು ಮತ್ತೂ ಕುಪಿತಗೊಂಡು ವಾತಸಂಬಂಧಿಯಾದ ಗಂಟು ನೋವು, ಸೊಂಟ ನೋವು, ಇತ್ಯಾದಿಗಳು ಉಲ್ಬಣಗೊಳ್ಳಬಹುದು. ಶೀತ ಗುಣದ ಆಧಿಕ್ಯ ವಿರುವುದರಿಂದ ಕಫಸಂಬಂಧಿಯಾದ ನೆಗಡಿ, ಕೆಮ್ಮು, ಉಬ್ಬಸ ಇತ್ಯಾದಿಗಳು ತೊಂದರೆ ಕೊಡುವುದಕ್ಕೆ ಕಾಯುತ್ತಿರುತ್ತವೆ. ಆದಕಾರಣ ಹೇಳಿದ ನಿಯಮಗಳ ಪಾಲನೆ ಮಾಡುವುದರಿಂದ ಅವುಗಳಿಂದ ತೊಂದರೆಗಳಾಗುವುದನ್ನು ತಪ್ಪಿಸಬಹುದು.
ಹೊರಗಿನ ವಾತಾವರಣದಲ್ಲಿನ ಶೀತ ಗುಣದಿಂದ, ದೇಹದ ಒಳಗಿನ ಉಷ್ಣತೆಯನ್ನು ದೇಹವು ಕಾಯ್ದುಕೊಳ್ಳುತ್ತದೆ. ಈ ಕಾರಣದಿಂದ ಜಠರಾಗ್ನಿ ಉದ್ದೀಪನಗೊಳ್ಳುವುದು. ಆದುದರಿಂದ ಗುರು ಆಹಾರ (ಪಚನಕ್ರಿಯೆಗೆ ಹೆಚ್ಚು ಕೆಲಸ ಕೊಡತಕ್ಕ ಆಹಾರ), ಹಾಲು, ತುಪ್ಪ ಇತ್ಯಾದಿಗಳನ್ನು ಹೆಚ್ಚಾಗಿ ಸೇವಿಸಬೇಕು. ಬೆಲ್ಲ ಮತ್ತು ಕಬ್ಬಿನ ಹಾಲು ವಿಶೇಷವಾಗಿ ಪ್ರಶಸ್ತ. ಕಪ್ಪು ಅಕ್ಕಿಯಿಂದ ಮಾಡಿದ ಅನ್ನವನ್ನು ಹೆಚ್ಚಾಗಿ ಸೇವಿಸಬಹುದು. ಸಕ್ಕರೆ ಕಾಯಿಲೆಯವರನ್ನು ಹೊರತುಪಡಿಸಿ ಉಳಿದವರು ಜೇನನ್ನು ಸೇವಿಸಿದರೆ ಒಳ್ಳೆಯದು. ಶೀತ ಅಥವಾ ತಣ್ಣಗಿನ ಆಹಾರ ಸೇವನೆ ನಿಷಿದ್ಧ. ಬಿಸಿಯಾದ ನೀರನ್ನೇ ಕುಡಿಯಬೇಕು. ಬಿಸಿಯಾದ ಜಿಡ್ಡಿನಿಂದ ಕೂಡಿದ ಆಹಾರವನ್ನು ಸೇವಿಸಬೇಕು. ಹಾಗೆಂದು ಜಿಡ್ಡಿನಿಂದ ಕೂಡಿದ್ದರೂ ಕರಿದ ಪದಾರ್ಥಗಳನ್ನು ಸೇವಿಸಬಾರದು.
ಬಿಸಿನೀರು ಸ್ನಾನಕ್ಕೆ ಯೋಗ್ಯ. ಸ್ವೇದನ ಅಥವಾ ಹಬೆ ಸ್ನಾನ ಪ್ರಯೋಜನಕಾರಿ. ಬೆಳಗ್ಗೆ ಸೂರ್ಯನ ಎಳೆ ಬಿಸಿಲಿಗೆ ಮೈಯ್ಯನ್ನು ಒಡ್ಡಿಕೊಳ್ಳುವುದರಿಂದಲೂ ಸ್ವೇದನದ ಪ್ರಯೋಜನವನ್ನು ಪಡೆಯಬಹುದು. ಇದನ್ನು ಆತಪ ಸ್ವೇದ ಎನ್ನುತ್ತಾರೆ. ಆತಪ ಎಂದರೆ ಬಿಸಿಲು.
ದೇಹದೊಳಗೆ ಕಫ ಸಂಚಯವಾಗುವ ಅಂದರೆ ಸಂಗ್ರಹವಾಗುವ ಸಮಯವಾದ್ದರಿಂದ ಈ ಎಲ್ಲಾ ವಿಧಾನಗಳ ಮೂಲಕ ಅದನ್ನು ಕೂಡ ನಿಯಂತ್ರಿಸಬೇಕಾದ ಅಗತ್ಯ ಶಿಶಿರ ಋತುವಿನಲ್ಲಿ ಇದೆ. ಜೋರಾಗಿ ಕಠಿಣವಾದ ವ್ಯಾಯಾಮಗಳನ್ನು ಮಾಡುವುದಕ್ಕೆ ಶಿಶಿರ ಋತು ಸೂಕ್ತ ಕಾಲ. ಅಭ್ಯಂಗವನ್ನು, ಅಂದರೆ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಮೈಗೆ ಹಚ್ಚಿಕೊಂಡು ಮಸಾಜ್ ಮಾಡುವುದರಿಂದ ಅಧಿಕ ಪ್ರಯೋಜನ. ಉಪವಾಸವನ್ನು ಮಾತ್ರ ಈ ಋತುವಿನಲ್ಲಿ ಮಾಡಬಾರದು ಎಂಬುದಾಗಿ ಹೇಳಿದ್ದಾರೆ. ಹಗಲು ನಿದ್ದೆಯನ್ನಂತೂ ಮಾಡಲೇಬೇಡಿ.
ಮಾರ್ಚ್ 14ರ ವರೆಗೆ ಈ ನಿಯಮಾವಳಿ ಅನುಸರಿಸಿ. ಕಾಯಿಲೆಯಿಂದ ದೂರವಿರಿ.
ಡಾ. ಆರ್.ಪಿ.ಬಂಗಾರಡ್ಕ. M. S. (Ayu)
ಆಯುರ್ವೇದ ತಜ್ಞ ವೈದ್ಯರು
ಪ್ರಸಾದಿನೀ ಆಯುರ್ನಿಕೇತನ
ಆಯುರ್ವೇದ ಆಸ್ಪತ್ರೆ,
ನರಿಮೊಗರು, ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್,
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ.
rpbangaradka@gmail.com
mob:8904474122 (O)
9740545979 (P)
website:www.prasadini.com
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ