ಆತ್ಮ ಮತ್ತು ಆತ್ಮಹತ್ಯೆ- 'ಪುತ್ತೂರು ಅಜ್ಜ'ನವರ ಮಾತುಗಳಲ್ಲಿ

Upayuktha
0



ಒಮ್ಮೆ ಆತ್ಮಹತ್ಯೆ ಮಾಡಿಕೊಂಡರೆ ಏನಾಗುತ್ತದೆ ಎಂಬ ವಿಚಾರ ಪೂಜ್ಯ ಅಜ್ಜನವರ ಮುಂದೆ ಪ್ರಸ್ತಾಪವಾಯಿತು. ಆಗ ಅವರು- "ಗರುಡ ಪುರಾಣ ತೆಗೆದು ನೋಡಿ. ಆತ್ಮಹತ್ಯೆ ಮಾಡಿಕೊಂಡರೆ ಏನಾಗುತ್ತದೆ ಅಂತ ಹೇಳಿದ್ದಾರೆ?" "ಕಡಾಯಿಯಲ್ಲಿ ಹಾಕಿ ಬೇಯಿಸುತ್ತಾರೆ" ಎಂದು ಕೇಳುಗರು ಉತ್ತರಿಸಿದರು. ಅಜ್ಜನವರು ಅದಕ್ಕೆ ಹೌದು ಎಂಬಂತೆ ತಲೆಯಾಡಿಸಿದರು. ಕೇಳುಗರು ಅಷ್ಟಕ್ಕೆ ನಿಲ್ಲಿಸದೆ" ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಅಂತಹ ಶಿಕ್ಷೆಯೇಕೆ? ಆತ್ಮಹತ್ಯೆಯಿಂದ ಬೇರೆ ಯಾರಿಗೂ ತೊಂದರೆ ಕೊಡಲಿಲ್ಲವಲ್ಲ? ತನ್ನ ದೇಹವನ್ನು ಕೊನೆಗೊಳಿಸಿದ್ದು ಹೊರತು ಬೇರೆಯವರಿಗೆ ಏನು ಹಿಂಸೆ ಕೊಡಲಿಲ್ಲವಲ್ಲ?" ಎಂದು ಪ್ರಶ್ನಿಸಿದರು. ಅದಕ್ಕೆ ಜ್ಞಾನಿಗಳಾದ ಅಜ್ಜನವರು ಕೊಟ್ಟ ಉತ್ತರ ಅದ್ಭುತವಾಗಿತ್ತು.


"ನಾಶಮಾಡುವುದಕ್ಕೆ ಆ ದೇಹ ಇವನದ್ದಾ? ತಂದೆ-ತಾಯಿಯರು ಉಂಟುಮಾಡಿದ ದೇಹ. ಅದಕ್ಕೆ ಇವನು ಬಂದ. ತನ್ನದಲ್ಲದ ದೇಹವನ್ನು ಕೊನೆಗೊಳಿಸುವುದಕ್ಕೆ ಇವನಿಗೆ ಏನು ರೈಟ್ (ಹಕ್ಕು) ಉಂಟು ಅಂತೇಳಿ"... ಅಂದರೆ ತನ್ನ ದೇಹವನ್ನು ಕೊನೆಗೊಳಿಸುವುದು ಕೂಡ ಒಂದು ರೀತಿಯ ಹಿಂಸೆ. ಅರ್ಥಾತ್ ದೇಹ ತನ್ನದು ಎಂಬ ಭಾವವೇ ಹಿಂಸೆಯ ಉಗಮ. ಬಹುಶಃ ಯಾವುದೇ ವಕೀಲರು ಕೊಡಬಹುದಾದ ಉತ್ತರಕ್ಕಿಂತಲೂ ಬಹು ಮೇಲ್ಮಟ್ಟದ ಉತ್ತರ ಇದು ಎಂದು ನನಗನಿಸಿತು. ಅಥವಾ ಇಷ್ಟು ಚೆನ್ನಾದ ಉತ್ತರವನ್ನು ಕೊಡಲು ಯಾವುದೇ ಓದಿದ ವಿದ್ವಾಂಸರಿಗೆ ಆಗಲಿ, ಅಥವಾ ವಕೀಲನಿಗೆ ಆಗಲೀ ಅಸಾಧ್ಯ ಎನಿಸಿತು.


ಅನುಭವದಿಂದ ಬಂದ ಮಾತು ನಮ್ಮ ಮೊದಲ ಹೆಜ್ಜೆ ಎಲ್ಲಿ ತಪ್ಪಿತು ಎನ್ನುವುದನ್ನು ಬೊಟ್ಟು ಮಾಡಿ ತೋರಿಸುವುದರಲ್ಲಿ ತಪ್ಪುವುದಿಲ್ಲ. ಅಂದರೆ ಎಲ್ಲಾ ಕ್ರಿಯೆಗಳ ಮೂಲದಲ್ಲಿ" ಇದು ನನ್ನದು" ಎಂಬ ಭಾವ ಇದ್ದಾಗ, ಆ ಮೂಲಭೂತವಾದ ಭಾವವೇ ತಪ್ಪು ಎಂಬುದಾಗಿ ಇದು ಎತ್ತಿತೋರಿಸುತ್ತದೆ. ಆ ಒಂದು ತಪ್ಪಿನಿಂದ ಒಳ್ಳೆಯದು ಅಥವಾ ಕೆಟ್ಟದ್ದು ಎಂಬ ಕರ್ಮಗಳು, ಚಲನೆಗಳು ನಮ್ಮಿಂದ ಹುಟ್ಟಿಕೊಳ್ಳುತ್ತವೆ. ನಾನು ಮಾಡುತ್ತೇನೆ ಎಂಬ ಕರ್ತೃತ್ವ ಭಾವ ಮತ್ತು ಇದು ನನ್ನದು ಎಂಬ ಭೋಕ್ತೃತ್ವ ಭಾವ- ಎರಡು ಸೇರಿಕೊಂಡು ನಮ್ಮ ಮೊದಲ ಹೆಜ್ಜೆಯನ್ನು ಭ್ರಷ್ಟಗೊಳಿಸುತ್ತದೆ. ಮೇಲಿನ ಸಂವಾದದಲ್ಲಿ ಅಜ್ಜನವರು ಆ ಅಂಶವನ್ನು  ಬೆರಳು ಮಾಡಿ ತೋರಿಸಿದರು. ಒಂದು ತಪ್ಪಿನಿಂದ ಹಲವು ತಪ್ಪುಗಳು. ತನ್ನದು ಎಂದು ಭಾವಿಸಿದ್ದರಿಂದ, ಅದನ್ನು ತಾನು ನಾಶಗೊಳಿಸಬಲ್ಲೆ ಎಂಬ ಭ್ರಮೆಗೆ ಅಧೀನ ಆಗುವುದು, ಮತ್ತು  ಆ ಕಾರಣದಿಂದಲೇ ಆತ್ಮಹತ್ಯೆ ನಿರ್ಧಾರವನ್ನು ತಳೆಯುವುದು- ಮನಸ್ಸಿನಲ್ಲಿ ಸಂಭವಿಸಬಹುದಾದ ಸರಣಿ ಕ್ರಿಯೆಗಳು. ಇದು ಸರಪಳಿಯಲ್ಲಿನ ಕೊಂಡಿಗಳಂತೆ ಒಂದಕ್ಕೊಂದು ಬೆಸೆದುಕೊಂಡಿದೆ. ಮತ್ತು ಇವಿಷ್ಟು ಆಗುವುದು ಕೂಡ ಮನಸ್ಸಿನಲ್ಲಿಯೇ. ಆದುದರಿಂದ ಪೂಜ್ಯ ರಬ್ಬಿ ನಿತ್ಯಾನಂದ ಭಗವಾನರು ಕೊಡುವ ಸಂದೇಶವೆಂದರೆ ಎಲ್ಲಾ ತಪ್ಪುಗಳನ್ನು ಬಗೆಹರಿಸಲು, ಎಲ್ಲಾ ದುಃಖಗಳನ್ನು ಕರಗಿಸಲು ಇರುವುದು ಒಂದೇ ಉಪಾಯ. ಅದು ಯಾವುದೆಂದರೆ ದೇಹವನ್ನು ನಾಶ ಮಾಡುವುದಲ್ಲ, ದೇಹವನ್ನು ಕರಗಿಸುವುದರ ಬದಲಿಗೆ ದೇಹವನ್ನು ತಾನೆಂದು ಭ್ರಮಿಸುವ,ಒಳಗೆ ಅವಿತಿಟ್ಟುಕೊಂಡು ನಮ್ಮನ್ನು ಕುಣಿಸುವ ಮನಸ್ಸನ್ನು ಕರಗಿಸುವುದು,  ಮಣಿಸುವುದು. ಆ ದಾರಿ ಅದು ಪಾರಮಾರ್ಥಿಕದ ಹೆದ್ದಾರಿ.  


ಇನ್ನೊಮ್ಮೆ ಮತ್ತೊಂದು ಸಂದರ್ಭದಲ್ಲಿ ಅಜ್ಜನವರು ಹೇಳಿದ ಮಾತು ನೆನಪು. "ಆತ್ಮಹತ್ಯೆ ಎಂದರೆ.. ಆಯ್ತಾ.. ಆತ್ಮವನ್ನು ಹತ್ಯೆ ಮಾಡಿ ಆಯ್ತಾ? ಎಂಥದಿದು? ಆತ್ಮವನ್ನು ಹತ್ಯೆ ಮಾಡುವುದಕ್ಕಾಗುತ್ತದೆಯಾ?   ಅಂತ ನಾವು ಕೇಳುವುದು... ಹತ್ಯೆ ಮಾಡುವುದಕ್ಕೆ ಆಗ್ತದೆ ಅಂತಾದರೆ ಅದು ಆತ್ಮವಾ?" ಅಂದರೆ ಯಾವುದೇ ವಿಚಾರವನ್ನು ಅದರ ಆಧ್ಯಾತ್ಮದ ಮಗ್ಗುಲಿಗೆ ಮಗುಚುವ ಮಾತಿನ ನಡೆ ಅಜ್ಜನವರಲ್ಲಿ, ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. 


ಮತ್ತೂ ಒಂದು ಸಂದರ್ಭದಲ್ಲಿ ಅಜ್ಜನವರು ಆತ್ಮಹತ್ಯೆಯನ್ನು ಬೇರೆ ಶಬ್ದಗಳಲ್ಲಿ ಹೇಳಿದ್ದರು. "ಬಲಾತ್ಕಾರದಿಂದ ಹೋಗುವುದು" ಎಂಬುದಾಗಿ. ಅಜ್ಜನವರ ಮಾತುಗಳಲ್ಲಿ ಹೇಳುವುದಾದರೆ- "ಬಲಾತ್ಕಾರದಿಂದ ಹೋದರೆ ಇಲ್ಲೇ ಒಂದನೇ ವಲಯದಲ್ಲಿ ಅಂತರ್ ಪಿಶಾಚಿಯಾಗಿ ತಿರುಗ ಬೇಕಾದೀತು".


ಆದುದರಿಂದ ಯಾವುದೇ ವಿಷಯದಲ್ಲೂ ಕೂಡ ಮಹಾತ್ಮರಾದ ಅಜ್ಜನವರು ಬಲಾತ್ಕಾರವನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಸಾವಿನ ವಿಷಯದಲ್ಲೂ ಮತ್ತು ಸಾಧನೆಯ ವಿಷಯದಲ್ಲೂ ಕೂಡ. ನನ್ನನ್ನು ಕೂಡ ಧ್ಯಾನದ ವಿಷಯಕ್ಕೆ ಸಂಬಂಧಿಸಿ ಹೇಳುವಾಗ- "ಇಗೋ.. ರಾಘವೇಂದ್ರ... ಧ್ಯಾನದ ವಿಷಯದಲ್ಲಿ ಬಲಾತ್ಕಾರ ಬೇಡ... ಬಲಾತ್ಕಾರ ಮಾಡಿದರೆ ನರಕ್ಕೆ ತೊಂದರೆ ಉಂಟು" (ಧ್ಯಾನದ ವಿಷಯಲ್ಲಿ ಬಲಾತ್ಕಾರ ಬೇಡ. ಬಲಾತ್ಕಾರ ಮಾಡಿದರೆ ನರಕ್ಕೆ ಪೆಟ್ಟಾವುತ್ತು). (ಹವ್ಯಕ ಭಾಷೆಯಲ್ಲಿ ಹೇಳಿದ್ದನ್ನು ಇಲ್ಲಿ ಯಥಾವತ್ ತರ್ಜುಮೆಗೊಳಿಸಿದ್ದೇನೆ) ಎಂದು ಎಷ್ಟೋ ಸಲ ಹೇಳಿದ್ದುಂಟು. ಇದನ್ನು ಮನದಟ್ಟು ಮಾಡುವುದಕ್ಕೆ ಬಾಳೆಹಣ್ಣಿನ ಉದಾಹರಣೆ ಕೊಟ್ಟದ್ದು ಉಂಟು... "ಬಾಳೆಕಾಯಿ ಸಹಜವಾಗಿ ಹಣ್ಣಾದಾಗ ಅದರ ರುಚಿಯೇ ಬೇರೆ. ಉಬ್ಬೆಗೆ ಹಾಕಿ ಹಣ್ಣು ಮಾಡಿದಾಗ ಅಷ್ಟು ರುಚಿಯಾಗಿರುವುದಿಲ್ಲ". (ಉಬ್ಬೆಗೆ ಹಾಕುವುದು ಎಂದರೆ ಬಾಳೆಕಾಯಿಯನ್ನು ಒಣ ಭತ್ತದ ಹುಲ್ಲು ತುಂಬಿದ ಪೆಟ್ಟಿಗೆಯಲ್ಲಿ ಹಾಕಿ ಇಡುವುದು. ಬಹುಬೇಗನೆ ಹಣ್ಣು ಮಾಡುವುದಕ್ಕಾಗಿ ಈ ವಿಧಾನ ಅನುಸರಿಸಲಾಗುತ್ತದೆ. ಅಂದರೆ ಈ ಹಣ್ಣು ಮಾಡುವ ಪ್ರಕ್ರಿಯೆ ಬಲಾತ್ಕಾರದ ಕೃತಕ ವಿಧಾನವಾಗಿದೆ ಎಂಬ ಭಾವ. ಅಂದರೆ ಆಧ್ಯಾತ್ಮಕ್ಕೆ ಅನ್ವಯಿಸಿ ಹೇಳುವುದಾದರೆ ಒತ್ತಡವನ್ನು ತಂದುಕೊಂಡು ಮಾಡುವ ಧ್ಯಾನದ ವಿಧಾನಗಳು)... ಎಂದು ಯಾರಿಗೂ ಅರ್ಥವಾಗಬಹುದಾದ ಸರಳ ಉದಾಹರಣೆಯ ಮೂಲಕ ಹೇಳಿದ್ದುಂಟು.  


ಸತ್ಸಂಗದ ಸಂದರ್ಭದಲ್ಲಿ ಕುಳಿತಲ್ಲಿಂದಲೇ ಕಾಂಪೌಂಡಿನ ಹೊರಗೆ ಇರುವ ಅಡಿಕೆ ಮರವನ್ನು ಬೆರಳಿನಿಂದ ತೋರಿಸಿ--" ನೋಡಿ.. ಅಡಿಕೆ ಮರದ ಸೋಗೆಯನ್ನು. ಅದು ಹಸಿ ಇರುವಾಗ ಎಷ್ಟು ಎಳೆದರೂ ಬರುವುದಿಲ್ಲ. ಆದರೆ ಹಣ್ಣಾದಾಗ ತನ್ನಷ್ಟಕ್ಕೆ ಕಳಚಿ ಬೀಳುತ್ತದೆ. ಎಳೆಯುವುದೇ ಬೇಡ" ಎಂದು ಮೆದುವಾಗಿ,  ಮೆಲುನಗುತ್ತಾ ಹೇಳಿದ ಅವರ ಮುಖಮುದ್ರೆ, ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿದೆ. 


-ಡಾ. ಆರ್.ಪಿ.ಬಂಗಾರಡ್ಕ. M. S. (Ayu) 

ಆಯುರ್ವೇದ ತಜ್ಞ ವೈದ್ಯರು

ಪ್ರಸಾದಿನೀ ಆಯುರ್ನಿಕೇತನ  

ಆಯುರ್ವೇದ ಆಸ್ಪತ್ರೆ, 

ನರಿಮೊಗರು, ಪುತ್ತೂರು. 

ಅಸಿಸ್ಟೆಂಟ್ ಪ್ರೊಫೆಸರ್,  

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ. 

rpbangaradka@gmail.com

mob:8904474122

website:www.prasadini.com


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top