ಯುಗಪುರುಷ ಛತ್ರಪತಿ ಶಿವಾಜಿ

Upayuktha
0

ಅದು 17ನೇ ಶತಮಾನ. ಹಿಂದೂಸ್ಥಾನದ ಹೆಣ್ಣುಮಗಳು ಹಣೆಯ ಸಿಂಧೂರದಿಂದ ಹಿಡಿದು ಕಾಲುಂಗುರದ ವರೆಗಿನ ತಮ್ಮ ಸಂಸ್ಕೃತಿಯ ಎಲ್ಲಿ ನಾಶವಾಗುತ್ತದೋ ಎಂಬ ಭೀತಿಯಲ್ಲಿದ್ದಳು. ತನ್ನ ಪಾವಿತ್ರತೆಯನ್ನು ಕೊನೆಯುಸಿರಿನ ತನಕ ಉಳಿಸಿಕೊಳ್ಳಲು ತನ್ನನ್ನು ಈ ಕೀಚಕರು ಬಿಡಲಾರರು ಎಂಬ ಹತಾಶೆಯಲ್ಲಿದ್ದಳು. ನಿರಂತರ ದಾಳಿಗಳನ್ನು ಮಾಡುವ ವಿದೇಶಿ ಆಕ್ರಮಣಕಾರರು ಸನಾತನ ಧರ್ಮವನ್ನು ಮೂಲದಿಂದಲೇ ನಾಶಗೊಳಿಸಬೇಕೆಂದು ಪಣತೊಟ್ಟವರು! ಅವರೆದುರು ಸೆಟೆದು ನಿಂತು, ಸ್ವರಾಜ್ಯದ ದೀಪವನ್ನು ಹಚ್ಚಿ, ಧರ್ಮ ರಕ್ಷಣೆ ಮಾಡುವ ಅವತಾರ ಪುರುಷನೊಬ್ಬನ ಜೀಜಾಮಾತೆಯ ಗರ್ಭಗುಡಿಯಲ್ಲಿ ಒಂಬತ್ತು ತಿಂಗಳು ವಾಸಮಾಡಿ ಧರೆಗಿಳಿದು ಬಂದಾನು ಎಂಬ ಕಲ್ಪನೆಯು ಯಾರಲ್ಲೂ ಇರಲಿಲ್ಲ.


1630ರ ಫೆಬ್ರವರಿ 19 ರಂದು ಶಹಾಜಿ ಮತ್ತು ಜೀಜಾಬಾಯಿಯ ಪುತ್ರನಾಗಿ ಜನಿಸಿದ ಛತ್ರಪತಿ ಶಿವಾಜಿ ಮಹಾರಾಜರು ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು ಭರತವರ್ಷದ ಚರಿತ್ರೆಯಲ್ಲಿ ಅಮೋಘವಾದುದು. ಛತ್ರಪತಿಯು ಸ್ವರಾಜ್ಯ ದೀಕ್ಷೆಯನ್ನು ಸ್ವೀಕರಿಸಿದ್ದು ಯಾವುದೇ ಕ್ಷಾತ್ರ ಪರಂಪರೆಯ ರಾಜಕುಮಾರರ, ಸರದಾರರ ಜೊತೆ ಅಲ್ಲ, ಬದಲಾಗಿ ಕಾಡುಮೇಡುಗಳಲ್ಲಿ ಅಲೆಯುತ್ತಿದ್ದ ಮಾವಳಿ ಪೋರರ ಜೊತೆಗೆ! ಏನೂ ಅರಿಯದ ಆ ಮನಸ್ಸುಗಳಲ್ಲಿ ಸ್ವಾಮಿ ನಿಷ್ಠೆಯ, ಸ್ವಾಭಿಮಾನದ ಮತ್ತು ದೇಶಭಕ್ತಿಯ ದೀಪವನ್ನು ಬೆಳಗಿಸುವ ಮೂಲಕ ಶಕ್ತಿಯುತವಾದ ಸೈನ್ಯವನ್ನು ಕಟ್ಟಿ, ಹಿಂದವೀ ಸಾಮ್ರಾಜ್ಯದ ಸ್ಥಾಪನೆಯನ್ನು ಮಹಾರಾಜರು ಮಾಡುತ್ತಾರೆ.


ಶಿವಾಜಿ ಮಹಾರಾಜರು ಸ್ವರಾಜ್ಯ ವಿಸ್ತರಣೆಯನ್ನು ಮಾಡಲು ಹೊರಟ ಸಂದರ್ಭದಲ್ಲಿ ಅವರು ಎದುರು ಹಾಕಿಕೊಂಡದ್ದು, ಬಿಜಾಪುರದ ಆದಿಲ್ ಶಾಹಿ ಗಳನ್ನಷ್ಟೇ ಅಲ್ಲ, ಕುತುಬ್ ಶಾಹಿಗಳು, ಫ್ರೆಂಚರು, ಇಂಗ್ಲೀಷರು, ಪೋರ್ಚುಗೀಸರು ಮತ್ತು ಮೊಘಲರು ಮುಂತಾದ ಪರಕೀಯರನ್ನು ನೆಲಕ್ಕೊತ್ತಿ, ಸ್ವರಾಜ್ಯದ ಕನಸನ್ನು ನನಸು ಮಾಡಿದ ಛತ್ರಪತಿಯ ಆದರ್ಶಗಳನ್ನು ಇಂದಿನ ಯುವ ಶಕ್ತಿ ಅನುಸರಿಸುವ ಆವಶ್ಯಕತೆ ಇದೆ.


ಛತ್ರಪತಿ ಶಿವಾಜಿ ಮಹಾರಾಜರು ಸ್ವಾಭಿಮಾನಿ ನಾಯಕ ಮಾತ್ರವಲ್ಲ, ದೂರದ ದಿಲ್ಲಿಯ ಮೊಘಲರಿಗೂ ತಮ್ಮ ಪರಾಕ್ರಮದ ಬಿಸಿ ಮುಟ್ಟಿಸಿದ ಶೂರನೂ ಹೌದು. ಬಿಜಾಪುರದ ಸುಲ್ತಾನರು ಪ್ರಾಣಾಪಾಯದಿಂದ ಅದೆಷ್ಟೋ ರಾತ್ರಿಗಳನ್ನು ಕಳೆದುಕೊಂಡದ್ದೂ ಇದೇ ಛತ್ರಪತಿಯ ಕಾರಣದಿಂದ. ಶಿವಾಜಿ ಮಹಾರಾಜರ ಸ್ವರಾಜ್ಯದ ಸಂಕಲ್ಪಕ್ಕೆ ಕೊಳ್ಳಿ ಇಡುವ ದೈತ್ಯ ಅಫ್ಜಲ್ ಖಾನನ ಯೋಜನೆಯು ಯಶಸ್ಸನ್ನು ಕಾಣಲಿಲ್ಲ. 'ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು' ಎಂಬ ರಣ ನೀತಿಯನ್ನು ಅರಿತುಕೊಂಡಿದ್ದ ಶಿವಾಜಿ ಮಹಾರಾಜರ ಕೈಯಲ್ಲಿ ಆ ದೈತ್ಯನೂ ಉಳಿಯಲಿಲ್ಲ.


ತಾವಿರುವ ಪನ್ನಾಳ ಗಡವನ್ನು ಸಿದ್ದಿ ಜೌಹಾರನು ಮುತ್ತಿಗೆ ಹಾಕಿದಾಗ, ಅಲ್ಲಿಂದ ಸುರಂಗ ಮಾರ್ಗವಾಗಿ ಹೊರಟು, ನಾಯಕ್ 40 ಮೈಲಿಗಳಷ್ಟು ದೂರವಿರುವ ವಿಶಾಲಗಢವನ್ನು ತಲುಪಿ, ಅಲ್ಲಿ ಶತ್ರು ಸೇನೆಯನ್ನು ಭೇದಿಸಿ ಗಢದ ಒಳಗೆ ಪ್ರವೇಶಿಸಿದ ಮಹಾರಾಜರ ಸಾಹಸವನ್ನು ಮೆಚ್ಚಲೇಬೇಕು. ಶಿವಾಜಿ ಮಹಾರಾಜರೆಂದರೆ ದಣಿವರಿಯದ ಶಕ್ತಿ ಪುಂಜ! ಅಸಾಧ್ಯವೆಂಬುದನ್ನು ಸಾಧ್ಯವಾಗಿಸುವ ಅವರ ಹಠಕ್ಕೆ ಯಾರಾದರೂ ತಲೆ ಬಾಗಲೇಬೇಕು.  


ಶಿವಾಜಿ ಮಹಾರಾಜರು ಸಾಹಸಗಳನ್ನು ಇಷ್ಟಪಡುತ್ತಿದ್ದರು ಎಂಬುದಕ್ಕೆ ಲಾಲ್ ಮಹಲ್ ನೊಳಗೆ ಹೋಗಿ ಶಯಿಸ್ತೆ ಖಾನನ ಬೆರಳುಗಳನ್ನು ಕತ್ತರಿಸಿದ ಘಟನೆಯೇ ಸಾಕ್ಷಿ. ಅದು ರಂಜಾನ್ ಆಚರಣೆಯ ಒಂದು ರಾತ್ರಿ, ಔರಂಗಜೇಬನು ಪಟ್ಟಕ್ಕೇರಿದ ದಿನವೂ ಹೌದು. ಶಿವಾಜಿ ಮಹಾರಾಜರು ತಮ್ಮ ಚಾಣಾಕ್ಷ ಪಡೆಯೊಂದಿಗೆ ವಾದ್ಯ ನುಡಿಸುವವರ ವೇಷಹಾಕಿ ಲಾಲ್ ಮಹಲ್ ನ ಒಳಹೊಕ್ಕು ಶಯಿಸ್ತೆ ಖಾನನ ಸಂಹಾರಕ್ಕೆ ಪ್ರಯತ್ನಿಸುತ್ತಾರೆ. ಆ ಬಾರಿ ಅವನ ಅದೃಷ್ಟವೇನೋ ಚೆನ್ನಾಗಿತ್ತು. ಅವನ ರುಂಡವು ಮುಂಡದಿಂದ ಕತ್ತರಿಸಲ್ಪಡದೆ ಹಾಗೆಯೇ ಉಳಿಯಿತು. ಆದರೆ ಅವನ ಬೆರಳುಗಳು ಮಹಾರಾಜರ ಖಡ್ಗದ ರುಚಿಯನ್ನು ನೋಡಿದ್ದು ಸುಳ್ಳಲ್ಲ. ಅದರ ಬಳಿಕ ಈ ಖಾನ ತನ್ನ ಜೀವಮಾನದಲ್ಲಿ ಎಂದೂ ಶಿವಾಜಿ ಮಹಾರಾಜರನ್ನು ಎದುರು ಹಾಕಿಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ.


ದಿಲ್ಲಿಯ ಸಿಂಹಾಸನದಲ್ಲಿ ಕುಳಿತಿದ್ದ ಔರಂಗಜೇಬನಿಗೆ ನಡುಕ ತಂದು, ಬಿಜಾಪುರದ ಆದಿಲ್ ಶಾಹಿ ಗಳ ನಿದ್ರೆ ಹಾರಿಸಿ, ಫ್ರೆಂಚ್, ಇಂಗ್ಲಿಷ್, ಪೋರ್ಚುಗೀಸ್ ಮೊದಲಾದ ವಿದೇಶೀ ಶಕ್ತಿಗಳಿಗೆ ರೋಮಾಂಚನದ ಅನುಭವವನ್ನು ತಂದುಕೊಟ್ಟ ಶಿವಾಜಿ ಮಹಾರಾಜರು ತಮ್ಮ ಸಾಮ್ರಾಜ್ಯವನ್ನು ಅಧಿಕೃತವಾಗಿ ಸ್ಥಾಪಿಸುವುದು ಅಗತ್ಯವಾಗಿತ್ತು. ಹಾಗಾಗಿ 1674 ರಲ್ಲಿ ಸನಾತನ ಧರ್ಮದ ಹಿಂದುಸ್ಥಾನದ ಹೆಮ್ಮೆಯ ಪುತ್ರ ಶಿವಾಜಿ ಮಹಾರಾಜರು ಅಖಂಡ ಹಿಂದವೀ ಸಾಮ್ರಾಜ್ಯದ ಮೊದಲ ಛತ್ರಪತಿಯಾಗಿ ಸಿಂಹಾಸನವನ್ನೇರಿದರು. ಆ ಮೂಲಕ ಸ್ವರಾಜ್ಯ ಪಾಲನೆಯು ತಮ್ಮ ಧ್ಯೇಯವೆಂದು ವಿದೇಶಿ ಶಕ್ತಿಗಳಿಗೆ ಮತ್ತೆ ನೆನಪಿಸಿದರು.


ರಾಜ್ಯಾಭಿಷೇಕವಾದ ಹದಿನೈದು ದಿನಗಳಲ್ಲೇ ರಾಜಮಾತೆ ಜೀಜಾಬಾಯಿ ಸ್ವರ್ಗಸ್ಥರಾಗುತ್ತಾರೆ. ತುಳಜಾ ಭವಾನಿಯ ಕೃಪೆಯಿಂದ ಮಾತೃವಿಯೋಗದ ನೋವನ್ನು ಮೆಟ್ಟಿನಿಂತ ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ ಮತ್ತು ಸ್ವಧರ್ಮದ ರಕ್ಷಣೆಯತ್ತ ಗಮನವನ್ನು ಕೊಡುತ್ತಾರೆ. ಪರಕೀಯರ ವಿರುದ್ಧ ಶಿವಾಜಿ ಮಹಾರಾಜರು ಮಾಡಿದ ಹೋರಾಟದಲ್ಲಿ ಅವರ ಜೊತೆ ಕೈ ಜೋಡಿಸಿ ಧರ್ಮ ರಕ್ಷಣೆಯನ್ನು ಮಾಡಿದ ಮರಾಠದ ಸಿಂಹಗಳಾದ ತಾನಾಜಿ, ಬಾಜಿ ಪ್ರಭು, ನೇತಾಜಿ ಪಾಲ್ಕರ್... ಮುಂತಾದ ಅನೇಕರು ಇಂದಿನ ಯುವಜನತೆಗೆ ಆದರ್ಶಪ್ರಾಯರಾಗಿ ನಿಲ್ಲುತ್ತಾರೆ.


ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸಾಮ್ರಾಜ್ಯವನ್ನು ಸ್ಥಾಪಿಸಿದರು ಎಂದ ಮಾತ್ರಕ್ಕೆ ಅವರು ಮುಸ್ಲಿಂ ವಿರೋಧಿಯಾಗಿದ್ದರು ಎನ್ನುವುದು ತಪ್ಪಾಗುತ್ತದೆ. ಛತ್ರಪತಿಯ ಸುಸಜ್ಜಿತ ಪಡೆಯಲ್ಲಿ ಸ್ವಾಮಿ ನಿಷ್ಠೆ ಇರುವ ಮುಸ್ಲಿಂ ಸರದಾರರಿಗೆ ಯೋಗ್ಯತೆಗೆ ಅನುಗುಣವಾಗಿ ಪಾರಿತೋಷಕ, ಪುರಸ್ಕಾರಗಳು ಸಿಗುತ್ತಿದ್ದವು. ಮಹಾರಾಜರ ನೌಕಾಪಡೆಯಲ್ಲಿ ದರ್ಯಾದರಂಗ್ ಎಂಬ ಮುಸಲ್ಮಾನ ಮುಖ್ಯಸ್ಥನಿದ್ದ. ಇಬ್ರಾಹಿಂ ಖಾನ್ ಗರ್ಡಿ ಎಂಬವನು ಮರಾಠಾ ಸಾಮ್ರಾಜ್ಯದ ಸೇನಾ ತುಕಡಿಯೊಂದರ ಜನರಲ್ ಆಗಿದ್ದ. ಛತ್ರಪತಿಯು ಕುರಾನನ್ನು, ಮಸೀದಿಗಳನ್ನು ಗೌರವಿಸುತ್ತಿದ್ದರು. ಹಿಂದವೀ ಸಾಮ್ರಾಜ್ಯದಲ್ಲಿ ಮುಸಲ್ಮಾನ ಹೆಣ್ಣು ಮಗಳಿಗೆ ಯಾವುದೇ ಭಯವಿಲ್ಲದೆ ಬದುಕಲು ಅವಕಾಶವಿತ್ತು. ಸಜ್ಜನನಿಗೆ ರಕ್ಷೆ, ತಪ್ಪು ಮಾಡಿದವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿತ್ತು.  


ಜೀಜಾಮಾತೆಯ  ಕನಸಿನ ಕೂಸಾದ ಆದರ್ಶ ಹಿಂದೂ ಸಾಮ್ರಾಜ್ಯವನ್ನು ನನಸು ಮಾಡಿದ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ 50ನೇ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾದರು. ದಣಿವರಿಯದೆ ದುಡಿದ ಮಹಾರಾಜರಿಗೆ ವಿಶ್ರಾಂತಿಯ ಅಗತ್ಯವಿತ್ತು. 1680 ಎಪ್ರಿಲ್ 3ರಂದು ಭಗವಂತನ ಸ್ಮರಣೆ ಮಾಡುತ್ತಾ  ಛತ್ರಪತಿ ಶಿವಾಜಿ ಮಹಾರಾಜರು ಧ್ಯಾನ ಸ್ಥಿತಿಯಲ್ಲೇ ಇಹಲೋಕ ತ್ಯಜಿಸಿದರು. ಸ್ವರಾಜ್ಯದ ಕಿಚ್ಚನ್ನು ಹಲವರಲ್ಲಿ ಹಚ್ಚಿ, ಧರ್ಮದ ಜಾಗೃತಿಯನ್ನು ಮೂಡಿಸಿದ ದಿವ್ಯ ಚೇತನವೊಂದು ಶಿವನ ಪಾದ ಸೇರಿತು.


ಛತ್ರಪತಿ ಶಿವಾಜಿ ಮಹಾರಾಜರು ಎಂದೂ ಕರ್ತವ್ಯದಿಂದ ವಿಮುಖರಾಗಲಿಲ್ಲ. ತಮ್ಮ ಜೀವಿತಾವಧಿಯಲ್ಲಿ ಯುದ್ಧಗಳನ್ನು ಮಾಡುವ ಸಂದರ್ಭದಲ್ಲಿ ಪ್ರಜಾಪಾಲನೆಯನ್ನು ಮರೆಯಲಿಲ್ಲ. ಹೆಣ್ಣು ಮಕ್ಕಳ, ಗೋಮಾತೆಯ ಮತ್ತು ಭವ್ಯ ದೇಗುಲಗಳ ಮೇಲೆ ಕೈ ಮಾಡಿದ ಧೂರ್ತರನ್ನು ಅವರು ಸುಮ್ಮನೆ ಬಿಡಲಿಲ್ಲ, ಹಾಗೆಂದು ಮ್ಲೇಚ್ಛರ ಮಸೀದಿಗಳನ್ನು, ಹೆಣ್ಣು ಮಕ್ಕಳನ್ನು ಗೌರವಿಸುವುದು ತಮ್ಮ ಧರ್ಮ ಎಂಬುದನ್ನು ಮರೆಯಲೂ ಇಲ್ಲ. ಗೆರಿಲ್ಲಾ ಯುದ್ದ ತಂತ್ರದ ಮೂಲಕ ಶತ್ರುಗಳ ಎದೆ ನಡುಗಿಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. 


ಹೇ ಛತ್ರಪತಿ,  

ಸನಾತನ ಧರ್ಮವನ್ನು ಮತ್ತೆ ಪರಮ ವೈಭವದ ಸ್ಥಿತಿಗೆ ಕೊಂಡೊಯ್ದು, ಬದುಕಿನುದ್ದಕ್ಕೂ ಸ್ವರಾಜ್ಯದ ಸಂಕಲ್ಪಕ್ಕೆ ಶ್ರಮಪಟ್ಟ ಯುಗಪುರುಷನಾದ ಮತ್ತು ನಮ್ಮ ಸಂಸ್ಕೃತಿಯ ರಕ್ಷಕರಾದ ನಿಮಗೆ ಶತಶತ ನಮನಗಳು!!

- ಸುಲಕ್ಷಣಾ ಕೆ.

ದ್ವಿತೀಯ ಬಿಎ ವಿಭಾಗ

ವಿವೇಕಾನಂದ ಪದವಿ ಕಾಲೇಜು, ಪುತ್ತೂರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top