ಕವನ: ನೀರಿನ ಪಯಣ

Upayuktha
0

ತಿಳಿನೀಲಿ ಬಾನಲ್ಲಿ ಬಿಳಿಯಾದ ಚೆಲು ಮುಗಿಲು 

ತಿಳಿಯಲಾರದೆ ಗುರಿಯ ತಿರುಗುತಿತ್ತು.

ಇಳೆಯನ್ನು ಸೇರುವಲಿ ಸುಳಿವೊಂದು ಕಾಣದೆಯೆ

ಕಳವಳವಗೊಳ್ಳುತ್ತ ಅಲೆಯುತಿತ್ತು. 


ಅನತಿ ದೂರದಲೊಂದು ಮಿನುಗುತಿಹ ಕರಿಮುಗಿಲು 

ತನಗೊಂದು ಸಂಗಾತಿ ಹುಡುಕುತಿತ್ತು. 

ಸನಿಹದಲೆ ಸುಳಿಯುತ್ತ ತನ್ನೆಡೆಗೆ ಬರುತಿರುವ 

ಚೆನ್ನಾದ ಮುಗಿಲನ್ನೆ ಗಮನಿಸಿತ್ತು. 


ಕರಿ ಬಿಳಿಯ ಮುಗಿಲುಗಳ ಗುರಿ ಒಂದೆ ಇರುವಾಗ 

ಸೇರಿದವು ಜತೆಯಾಗಿ ಮುನ್ನಡೆಯಲು. 

ಶರ ವೇಗದಲಿ ವಾಯು ಎರಗಿ ಮುಗಿಲಿನ ಮೇಲೆ

ಸರಸರನೆ ಭುವಿಯತ್ತ ಇಳಿ ಬಿಟ್ಟಿತು. 


ಎತ್ತರಕೆ ಏರಿದರೆ ಎತ್ತಲೂ ಶೂನ್ಯವೇ. 

ಮತ್ತೆ ಒಂಟಿತನವದು ಕಾಡದಿಹುದೆ 

ಹತ್ತಿ ಹೋದವರೆಲ್ಲ ಮತ್ತೆ ಇಳಿಯಲೆಬೇಕು

ಮತ್ತೇರಿ ಮತ್ತಲ್ಲೆ ಕೂರಲುಂಟೆ. 


ವಸುಧೆ ಮಡಿಲಲಿ ಹರಿದು ಹಸಿರು ತೊಡಿಸುತ ಸತತ

ಹಸಿದ ಜೀವವ ತಣಿಸಿ ಬಿಡಲು ಬೇಕು. 

ವಸುಧೆ ಸೆಳೆದರೆ ಕೆಳಗೆ ಬಿಸಿ ಮುಟ್ಟಿಸುತ ರವಿಯು 

ತುಸು ತುಸುವೆ ಮೇಲೆಳವ ನಿರಂತರವು.


ಕಲ್ಮಶವ ಕಳಚಿದೊಡೆ ಮೇಲ್ಮುಖದ ಪಯಣವಿದೆ

ಮೇಲಿರುವ ಮೋಡವೇ ಅದಕೆ ಸಾಕ್ಷಿ. 

ಮಲಿನವಾದರು ಕೂಡ ಜಲಕೆ ವಸುಧೆಯ ಮೋಹ 

ಜಲಪೂರ್ಣ ಸಾಗರವೆ ಇದಕೆ ಸಾಕ್ಷಿ. 

 

ಯಾವ ಕಾಲದಿ ಜಲವು ಭುವಿಯನ್ನೆ ಮೆಚ್ಚಿತೊ 

ಕಾವ ದೇವನು ಕೂಡ ಒಪ್ಪಿರುವನು. 

ರವಿಯಾದಿ ಗೃಹಗಳ ಯಾವ ಸೆಳೆತವು ಕೂಡ 

ಭುವಿ ಜಲದ ಸಂಬಂಧ ಬೇರ್ಪಡಿಸದು. 


ತಿಳಿಯಾದ ಜಲದೊಳಗೆ ಕೊಳೆಯನ್ನು ಸೇರಿಸಿಹೆವು 

ತಿಳಿದಿಲ್ಲ ನಮಗಿನ್ನು ಜಲದ ಮಹಿಮೆ. 

ಕಳಚಲಾಗದ ಬಂಧ ನೆಲ ಜಲದ ಒಳಗಿರಲು

ಬಾಳಿ ಬದುಕಿದರದುವೆ ನಮ್ಮ ಹಿರಿಮೆ. 

********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top