ಡಿಜಿಟಲ್ ಪತ್ರಿಕೋದ್ಯಮ ಆಧುನಿಕ ಜಗತ್ತಿನ ಅವಕಾಶ: ಅಭಿಷೇಕ್ ಪುಂಡಿತ್ತೂರು

Upayuktha
0

 ಅಂಬಿಕಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಉಪನ್ಯಾಸ ಕಾರ್ಯಕ್ರಮ


ಪುತ್ತೂರು: ಡಿಜಿಟಲ್ ಪತ್ರಿಕೋದ್ಯಮವು ಜ್ಞಾನ ಹಾಗೂ ಕ್ರಿಯಾಶೀಲತೆಗೆ ವಿವಿಧ ರೀತಿಯಲ್ಲಿ ಸವಾಲನ್ನು ಒಡ್ಡುತ್ತಾ, ಹೊಸ ಅವಕಾಶಗಳನ್ನು ಒದಗಿಸುವ ಮನೆಯಾಗಿದೆ. ಅದು ನಮ್ಮ ಆಸ್ತಕಿಯ ವಿಷಯಗಳಿಗನುಗುಣವಾಗಿ ಅವಕಾಶಗಳನ್ನೀಯುತ್ತದೆ. ಆದ್ದರಿಂದ ನಮ್ಮ ಜ್ಞಾನ, ಸೃಜನಶೀಲತೆಗೆ ಅನುಗುಣವಾದ ಹುದ್ದೆಯನ್ನು ಡಿಜಿಟಲ್ ಮಾಧ್ಯಮದಲ್ಲಿ ಸೃಷ್ಟಿಸಿಕೊಳ್ಳಬಹುದಾಗಿದೆ. ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಅಭ್ಯಸಿಸದ ಮಂದಿಯನ್ನೂ ಸಹ ಪತ್ರಿಕೋದ್ಯಮ ಸ್ವೀಕರಿಸುತ್ತದೆ ಎಂದು ಟೈಮ್ಸ್‌ ಇಂಟರ್ನೆಟ್‍ನ ಅಸೋಸಿಯೇಟ್ ಮ್ಯಾನೇಜರ್, ಉತ್ತರಪ್ರದೇಶದ ನೋಯ್ಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿಷೇಕ್ ಪುಂಡಿತ್ತೂರು ಹೇಳಿದರು.


ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯುಎಸಿ ಘಟಕದ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ಕಾಲೇಜಿನಲ್ಲಿ ಆಯೋಜಿಸಲಾದ ಡಿಜಿಟಲ್ ಪತ್ರಿಕೋದ್ಯಮ ಎಂಬ ವಿಷಯದ ಬಗೆಗಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಇತ್ತೀಚಿನ ದಿನಮಾನಗಳಲ್ಲಿ ಪತ್ರಿಕೋದ್ಯಮವು ಸಾಮಾಜಿಕ ಜೀವನದ ಮೂಲಭೂತ ಅಂಶವೆನಿಸಿಕೊಂಡಿದೆ. ಹಿಂದಿನ ಕಾಲಮಾನಕ್ಕೆ ಹೋಲಿಸಿದರೆ ಇಂದಿನ ಪತ್ರಿಕೋದ್ಯಮವು ಎರಡು ಪಟ್ಟರಷ್ಟುಕ್ಕೂ ಅಧಿಕ ವಿಶಿಷ್ಟ ಅವಕಾಶಗಳನ್ನು ನೀಡುತ್ತಿದೆ. ಕೇವಲ ಪಾರಂಪರಿಕ ಕ್ಷೇತ್ರಗಳಾದ ಮುದ್ರಣ, ಟಿವಿಗಳಲ್ಲದೆ ಡಿಜಿಟಲ್ ಕ್ಷೇತ್ರ, ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಇನ್ನಿತರ ಸಂಸ್ಥೆಗಳಲ್ಲಿಯೂ ಪತ್ರಿಕೋದ್ಯಮವು ಅಗತ್ಯವಾಗಿದೆ. ಹಾಗಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪದವಿಯ ನಂತರ ಉದ್ಯೋಗಾವಕಾಶಗಳು ಹೆಚ್ಚಾಗಿವೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಚಂದ್ರಕಾಂತ್ ಗೋರೆ ಮಾತನಾಡಿ, ಇಪ್ಪತ್ತೊಂದನೇ ಶತಮಾನಕ್ಕೆ ಅವಶ್ಯವಾಗಿರುವ ವಿಷಯಗಳತ್ತ ಪತ್ರಿಕೋದ್ಯಮವು ಬೆಳಕು ಚೆಲ್ಲುತ್ತಿದೆ. ಜನರ ನಾಡಿಮಿಡಿತವನ್ನು ತಿಳಿದುಕೊಂಡು, ಹೊಸ ವಿಚಾರಗಳತ್ತ ಒಲವನ್ನು ತೋರಿಸುತ್ತಾ ದಾಪುಗಾಲಿರಿಸುತ್ತಿದೆ. ಕಾಲಕ್ಕೆ ತಕ್ಕನಾಗಿ ತಂತ್ರಜ್ಞಾನವನ್ನು ಉಪಯೋಗಿಸುವ ಚಾಕಚಕ್ಯತೆ ವಿದ್ಯಾರ್ಥಿಗಳಲ್ಲಿ ಅಡಕವಾಗಿರಬೇಕಾದದ್ದು ಮುಖ್ಯ ಎಂದರು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪಂಚಮಿ ಪ್ರಾರ್ಥಿಸಿ, ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರೀಲಕ್ಷ್ಮಿ ವಂದಿಸಿ, ವಿದ್ಯಾರ್ಥಿನಿ ಮನೀಷಾ ನಿರೂಪಿಸಿದರು.


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top