ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿಯ (ಕೆಎಸ್‌ಸಿಎಸ್‌ಟಿ) ಬೌದ್ಧಿಕ ಆಸ್ತಿ ಕೋಶ (ಇಂಟಲೆಕ್ಚುವಲ್ ಪ್ರಾಪರ್ಟಿ ಸೆಲ್) ಜೊತೆಗೆ ನೂತನ ಒಡಂಬಡಿಕೆಗೆ ಸಹಿ ಹಾಕಲಾಯಿತು. ಎಐಇಟಿ - ಕೆಎಸ್‌ಸಿಎಸ್‌ಟಿ ಐಪಿ ಸೆಲ್ ನ ಉದ್ಘಾಟನೆಯೂ ಇದೇ ವೇಳೆ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕೆಎಸ್‌ಸಿಎಸ್‌ಟಿ ಇದರ ಕಾರ್ಯನಿರ್ವಾಹಕ ಕಾರ್ಯದರ್ಶಿ ಹೇಮಂತ್‌ಕುಮಾರ್, ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಐಪಿ ಸೆಲ್ ಇನ್ನಷ್ಟು ಜ್ಞಾನ ನೀಡಲಿದೆ. ಭಾರತ ಸರಕಾರವು ಇ-ಲರ್ನಿಂಗ್ ವ್ಯವಸ್ಥೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಾಗುವ ಬೆಳವಣಿಗೆಗಳನ್ನು ಊಹಿಸುವುದು ಅಸಾಧ್ಯ. ಸಾಮಾಜಿಕ ಒಳಗೊಳ್ಳುವಿಕೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಂತ್ರಜ್ಞಾನ - ವಿಜ್ಞಾನ ಕ್ಷೇತ್ರದ ಜ್ಞಾನವನ್ನು ನೀಡುವುದು ಈ ಮಂಡಳಿಯ ಉದ್ದೇಶ ಎಂದರು.
ಹೊಯ್ಸನ್ ಲ್ಯಾಬ್ಸ್ ಇದರ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸೋಹನ್ ಪೂಜಾರಿ ಮಾತನಾಡಿ, ತಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗುರಿಯಾಗಿರಬೇಕು. ಈ ಕಾಲಘಟ್ಟದಲ್ಲಿ ನಾವು ಐಕ್ಯೂ, ಇಕ್ಯೂ ಹಾಗೂ ಎಸ್‌ಕ್ಯೂ, ಮೂರನ್ನು ಸಮಾನವಾಗಿ ಕಾಪಾಡಿಕೊಂಡಾಗ ಮಾತ್ರ ಉತ್ತಮ ಬದುಕು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಕಲಿಕೆಯ ದಾರಿಯಲ್ಲಿ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯಎಂದರು.
ಕೆಎಸ್‌ಸಿಎಸ್‌ಟಿ ಸಲಹೆಗಾರ ವಿವೇಕ್‌ಆನಂದ್ ಸಾಗರ್ ಶೈಕ್ಷಣಿಕ ಸಂಸ್ಥೆಯಲ್ಲಿ ಐಪಿಆರ್‌ನ ತಂತ್ರಗಳ ಬಗ್ಗೆ ವಿಷಯ ಮಂಡಿಸಿದರು.
ಈ ಸಂದರ್ಭದಲ್ಲಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ರಿಸರ್ಚ್ ಡೀನ್ ಡಾ.ರಿಚರ್ಡ್ ಪಿಂಟೋ, ಕೆಎಸ್‌ಸಿಎಸ್‌ಟಿ ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಂಜನಿ ಇನ್ನಿತರರು ಉಪಸ್ಥಿತರಿದ್ದರು.
ಎಐಇಟಿಐಪಿಆರ್ ಕಾರ್ಯದರ್ಶಿ ಡಾ.ಜಯರಾಂ ಸ್ವಾಗತಿಸಿ, ಪ್ಲ್ಯಾನಿಂಗ್‌ಡೀನ್ ಡಾ. ದತ್ತಾತ್ರೇಯ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಸಾಕ್ಷಿ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಿಂದ ಈಗಾಗಲೇ ವಿವಿಧ ವಿಭಾಗದಲ್ಲಿ 12 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿದ್ದು, 6 ಇನ್ಸ್ಟಿಟ್ಯೂಶನಲ್ ಪೇಟೆಂಟ್‌ಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಪೂರ್ಣ ಹಣಕಾಸಿನ ಸಹಕಾರ ನೀಡಿ ಪ್ರೋತ್ಸಾಹಿಸಿದ್ದು, ಅವುಗಳಲ್ಲಿ 4 ಪೇಟೆಂಟ್‌ಗಳಿಗೆ ಟಾಟಾ ಇನ್ಸ್ಟಿಟ್ಯೂಟ್ ಹಾಗೂ ಐಐಟಿ - ಬಾಂಬೆ ಸಹಯೋಗ ನೀಡಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ