ಪ್ರಪಂಚದಲ್ಲಿ ಹುಟ್ಟು ಎಷ್ಟು ಆಕಸ್ಮಿಕವೋ ಸಾವೂ ಅಷ್ಟೇ ಅನಿವಾರ್ಯ. ಹುಟ್ಟು ಮತ್ತು ಸಾವುಗಳ ನಡುವಿನ ನಮ್ಮ ಅಸ್ತಿತ್ವವೇ ಜೀವನ. ಇದೊಂದು ಜೈವಿಕ ಜಗತ್ತಿನ ವ್ಯಾಪಾರ. ಈ ಅವಧಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುವುದೇ ಮಾನವ ಧರ್ಮ. ಜೀವನವೆಂದರೆ ನಿಜವಾಗಿಯೂ ಒಂದು ಸುಂದರವಾದ ನಂದನೋದ್ಯಾನ. ಹಾಗಂತ ಎಲ್ಲ ಜೀವಿಗಳಿಗೂ ಇದು ಅನ್ವಯಿಸ ಬೇಕೆಂದೇನೂ ಇಲ್ಲ. ಆದರೆ ಪ್ರಯತ್ನಪಟ್ಟರೆ ಎಲ್ಲ ಜೀವಿಗಳೂ ಇದನ್ನು ಸಾಧಿಸಬಹುದೆಂಬುದರಲ್ಲಿ ಅನುಮಾನವೂ ಇಲ್ಲ.
ಜೀವನಕ್ಕೆ ಮುಖ್ಯವಾಗಿ ಎರಡು ಮುಖಗಳಿವೆ, ಒಂದು ಸುಖ ಇನ್ನೊಂದು ದುಃಖ. ಅವುಗಳನ್ನೇ ನೋವು- ನಲಿವುಗಳೆಂದೋ ಒಳಿತು-ಕೆಡುಕುಗಳೆಂದೋ ಲಾಭ-ನಷ್ಟಗಳೆಂದೋ ಕರೆದರೂ ತಪ್ಪಾಗಲಾರದು. ಇವು ಪ್ರಪಂಚದಲ್ಲಿ ಹಗಲು-ರಾತ್ರಿಗಳಿದ್ದಂತೆ. ಹಗಲು ಕಳೆದು ರಾತ್ರಿ ಬರುವುದು, ರಾತ್ರಿ ಕಳೆದು ಹಗಲು ಬರುವುದು ಎಷ್ಟು ಸ್ವಾಭಾವಿಕವೋ ಅಷ್ಟೇ ಸ್ವಾಭಾವಿಕವಾದುದು ಜೀವನದ ಆಗುಹೋಗುಗಳ ಒಂದು ವಿಶಿಷ್ಟವಾದ ಚಾಲನಾ ಚಕ್ರ. ಒಮ್ಮೆ ಕೆಳಗಡೆ ಬಂದ ಚಕ್ರವು ಮತ್ತೆ ಅರ್ಧ ಸುತ್ತಾದಾಗ ಮೇಲ್ಗಡೆ ಬರುವುದು ಸಹಜ ಕ್ರಿಯೆ. ಅಂತೆಯೇ ಜೀವನದಲ್ಲಿ ಕಷ್ಟ-ಸುಖಗಳು ಕೂಡ. ಇವುಗಳೆರಡರ ನಡುವಿನ ಏಳು ಬೀಳುಗಳು, ಪರಿವರ್ತನೆಗಳು, ಅನುಭವಗಳು, ಅನುಭಾವಗಳೇ ಮೊದಲಾದ ಪ್ರಕ್ರಿಯೆಗಳು ಪುಟಕ್ಕಿಟ್ಟ ಚಿನ್ನದಂತೆ ಮೌಲ್ಯಯುತವಾಗಲು ಪ್ರಯತ್ನಿಸುತ್ತಾ ಗುರಿಯೆಡೆಗೆ ಮುಂದೆ ಸಾಗುತ್ತವೆ. ಈ ಅವಧಿಯಲ್ಲಿ ಶಾಂತಿ ಸಮಾಧಾನಗಳು ಜೀವನವೆಂಬ ಜಟಕಾಬಂಡಿಯ ಗಾಲಿಗಳೆರಡರ ಕಡೆಗೀಲಿನಂತೆ ವರ್ತಿಸುತ್ತವೆ; ಗುರಿ ತಲುಪಲು ಸಹಾಯ ಮಾಡುತ್ತವೆ. ಒಂದುವೇಳೆ ಗುರಿ ತಲಪುವಲ್ಲಿ ವಿಫಲತೆಯುಂಟಾದರೂ ಅಪಘಾತವಾಗದಂತೆ ರಕ್ಷಣೆ ಮಾಡುತ್ತವೆ.
ಜೀವನವನ್ನು ಅನುಭವಗಳ ಸಾಗರವೆನ್ನುವುದು ಸೂಕ್ತ. ಸಾಗರವನ್ನೀಸ ಬೇಕಾದರೆ ಎಂಟೆದೆಯಿದ್ದರೂ ಸಾಲದು. 'ನಾನು ಇಂತಿಷ್ಟು ವರ್ಷಗಳ ಸುದೀರ್ಘ ಜೀವನ ನಡೆಸಿದ್ದೇನೆ' ಎನ್ನುವುದು ಮುಖ್ಯವಲ್ಲ. ಹೇಗೆ ಜೀವಿಸಿದ್ದೇನೆ ಎನ್ನುವುದು ಮುಖ್ಯ. ಅಲ್ಲಿ ಒಳ್ಳೆಯ ತತ್ತ್ವ ಮತ್ತು ಸತ್ತ್ವಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ಉದಾತ್ತ ಗುಣಗಳ ಸಂಗಮವಾಗಿರುವ ಮಹಾ ವ್ಯಕ್ತಿಗಳೇ ನಮಗೆ ಆದರ್ಶ.
ನಾವು ಜೀವಿಸ ಬೇಕು. ಆದರೆ ಹೇಗೆ ಜೀವಿಸ ಬೇಕು? ನಾವು ಬದುಕುವ ಮೂಲಕ ಇತರರಿಗೆ ಬದುಕಲು ಅವಕಾಶವನ್ನೊದಗಿಸ ಬೇಕು. ಇದುವೇ ನಿಜವಾದ ಜೀವನ ಸೂತ್ರ. ನಮಗೆ ಯಾರನ್ನೂ ಕೊಲ್ಲುವ ಹಕ್ಕು ಎಂದಿಗೂ ಇಲ್ಲ. ಆದರೆ ಬದುಕುವ ಹಕ್ಕು ಮತ್ತು ಬದುಕಿಸುವ ಹಕ್ಕು ಎರಡೂ ನಮ್ಮ ಜನ್ಮಸಿದ್ಧ ಹಕ್ಕುಗಳೂ ಹೌದು.
'ಹಂಚಿ ಉಂಡರೆ ಹಸಿವಿಲ್ಲ' ಎನ್ನುವುದು ಹಿರಿಯರ ಅನುಭವದ ನುಡಿಮುತ್ತು. ನಮ್ಮಲ್ಲಿರುವುದನ್ನು ಇತರರೊಡನೆ ಹಂಚಿಕೊಂಡು ಬದುಕಿದರೆ ಜೀವನಕ್ಕೊಂದು ಅರ್ಥ ಬರುತ್ತದೆ. ನಾನು ಯಾರು, ಎಲ್ಲಿಂದ ಬಂದಿದ್ದೇನೆ, ಯಾಕಾಗಿ ಬಂದಿದ್ದೇನೆ, ಏನನ್ನು ಸಾಧಿಸ ಬೇಕಾಗಿದೆ ಇತ್ಯಾದಿ ಅಂಶಗಳನ್ನು ಆಳವಾಗಿ ಚಿಂತಿಸುವ ಅನುಭಾವಕ್ಕೆಳಸಿದರೆ ಮತ್ತೆ ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ, ಕೆಟ್ಟವರು ಹುಡುಕಿದರೂ ಸಿಗಲಾರರು.
ಜೀವನವು ಮಾಯೆಯಲ್ಲ. ಆದರೆ ಅದಕ್ಕೆ ನಾನು-ನನ್ನದು ಎಂಬ ಲೋಭ-ಮೋಹಗಳ ಮಾಯೆ ಮುಸುಕಿದರೆ ಕಬಂಧಬಾಹುವಿನಲ್ಲಿ ಸಿಲುಕಿದಂತಾಗುವುದು. ಆದರೆ ಅಲ್ಲಿಯೂ ಕಲಿಯ ಬೇಕಾದ ಪಾಠ ಒಂದಿದೆ.
ಹುಟ್ಟುವುದು ಮಾಯೆ ಸಾಯುವುದು ಮಾಯೆ
ಅಟ್ಟು ಉಣ್ಣುವುದು ಮಾಯೆ ಜಡದೇಹಿಗೆ |
ಉಟ್ಟ ಬಟ್ಟೆಯಲಿ ಇಟ್ಟಂತೆ ಇರುತಿರಲು
ಕೊಟ್ಟು ಕೆಡುವುದಕಾಸ್ಪದವಿರದು-ಸ್ಥಿತಪ್ರಜ್ಞ||
- (ವಿ.ಬಿ.ಕುಳಮರ್ವ)
ಕೊಟ್ಟವನು ಎಂದಿಗೂ ಕೆಡುವುದಿಲ್ಲ. ನಾನು ನನಗಾಗಿ ಬದುಕ ಬೇಕೇ, ಇತರರಿಗಾಗಿ ಬದುಕ ಬೇಕೇ ಎಂಬುದು ಪ್ರಶ್ನೆ. ಇದೂ ಕೂಡಾ ಬದುಕಿನ ಎರಡು ಕವಲುಗಳನ್ನು ತೋರಿಸುತ್ತದೆ. ಇಲ್ಲಿ 'ನಾನು' ಎಂಬುದು 'ವ್ಯಷ್ಠಿ'. ನಾವಿಲ್ಲಿ ಚಿಂತಿಸ ಬೇಕಾದುದು ಸಮಷ್ಟಿಯ ಕುರಿತು. ವ್ಯಷ್ಠಿ ಎನ್ನುವುದು ಸಂಕುಚಿತವಾದರೆ ಸಮಷ್ಟಿ ಎನ್ನುವುದು ವೈಶಾಲ್ಯ. ಸಂಕುಚಿತತೆಯಿಂದ ವೈಶಾಲ್ಯದೆಡೆಗೆ ಸಾಗುವುದೇ ನಿಜವಾದ ಜೀವನ ಧರ್ಮ.
ಮನುಷ್ಯನಾಗಿ ಜನಿಸಿದ ಮೇಲೆ ಮನುಷ್ಯನಾಗಿಯೇ ಬದುಕ ಬೇಕು, ಮನುಷ್ಯನಾಗಿಯೇ ಸಾಯಬೇಕು, ತನ್ಮೂಲಕ ದೈವತ್ವಕ್ಕೇರ ಬೇಕು. ಇಂತಾಗ ಬೇಕಾದರೆ ಸಾಧನೆ ಮುಖ್ಯ. ಸಾಧನೆಯೇ ತಪಸ್ಸು, ಅದುವೇ ಜೀವಾಳ. ಸಾಧನೆಯ ಹಾದಿಯಲ್ಲಿ ಕಲ್ಲುಂಟು, ಮುಳ್ಳುಂಟು, ಅಗ್ನಿ ಪರೀಕ್ಷೆಗಳೂ ಇವೆ. ಇವೆಲ್ಲವನ್ನೂ ಎದುರಿಸಿ ಜೈಸಬೇಕು. "ಈಸ ಬೇಕು, ಇದ್ದು ಜೈಸಬೇಕು" ಎಂದು ದಾಸವರೇಣ್ಯರು ಹೇಳಿದ್ದಾರೆ. ಸೋಲನ್ನೇ ಗೆಲುವಿನ ಸೋಪಾನವನ್ನಾಗಿಸ ಬೇಕು.
'ಸಾವಿರ ಉಳಿಯ ಪೆಟ್ಟಿನಿಂದ ಒಂದು ವಿಗ್ರಹ' ಎಂಬ ಮಾತೇ ಇದೆ. ಶಿಲ್ಪಿಯು ನಿಪುಣನಾಗಿದ್ದರೆ ಆತನ ಕೈಯಲ್ಲಿ ಕಡಿವೊಗೆದ ಶಿಲೆಯೂ ದೇವರಾಗುತ್ತದೆ. ಇಂತಾಗ ಬೇಕಾದರೆ ನೈಪುಣ್ಯ ಬೇಕು, ದೃಢ ಸಂಕಲ್ಪವೂ ಬೇಕು. ಹಾಗಾದಾಗ ಶಿಲೆಯೊಂದಿಗೆ ಅದನ್ನು ಕಂಡರಿಸಿದ ಶಿಲ್ಪಿಯೂ ದೈವತ್ವಕ್ಕೇರುತ್ತಾನೆ. ಆಗ ಜೀವನ ಪಾವನವಾಗುವುದು. ಅದುವೇ ಜೀವನ ಧರ್ಮದ ಪಾಲನೆಗೆ ಸಹಕಾರಿ.
ಜೀವನ ಮೌಲ್ಯ ಮತ್ತು ಜೀವನ ಧರ್ಮ- ಇವೆರಡೂ ಮೇಲ್ನೋಟಕ್ಕೆ ಒಂದೇ ಆಗಿವೆ. ಆದರೂ ಸ್ವಲ್ಪಮಟ್ಟಿಗೆ ಚಿಂತನೆಯ ಆಳಕ್ಕಿಳಿದು ವಿವೇಚಿಸಿದಾಗ ಇಲ್ಲಿರುವ ವ್ಯತ್ಯಾಸವು ಗೋಚರವಾಗುತ್ತದೆ. ಮೌಲ್ಯ ಎಂದರೆ ಬೆಲೆ, ಕಿಮ್ಮತ್ತು ಅಥವಾ ಗೌರವ; ಮನುಷ್ಯನು ತನ್ನ ಜೀವನದಲ್ಲಿ ಬೆಲೆ ಕೊಡುವ ಭಾವನೆಯೇ ಜೀವನ ಮೌಲ್ಯ. ಧರ್ಮ ಎಂದರೆ ಧಾರಣ ಮಾಡಿದುದು, ಮತ್ತೂ ಮುಂದುವರಿದು ಹೇಳುವುದಿದ್ದರೆ ನ್ಯಾಯ ಅಥವಾ ಕರ್ತವ್ಯ. ಈ ನಿಟ್ಟಿನಲ್ಲಿ ಮೌಲ್ಯ ಮತ್ತು ಧರ್ಮ- ಎರಡೂ ಒಂದಕ್ಕೊಂದು ಪೂರಕ ಅಥವಾ ಅವಿನಾಭಾವ. ಇವುಗಳಿಂದಲೇ ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ.
ಮನುಷ್ಯನ ಜೀವನ ಧರ್ಮವೆಂದರೇನು? ಪರೋಪಕಾರವೆಂಬುದು ಮನುಷ್ಯನ ಜೀವನಧರ್ಮವೆಂದಿಟ್ಟು ಕೊಳ್ಳೋಣ. ಇದಕ್ಕೆ ಪೂರಕವಾಗಿ ಆತನಲ್ಲಿ ಕೆಲವು ಉದಾತ್ತ ವ್ಯಕ್ತಿತ್ವಗಳು ವಿಕಸನ ಹೊಂದಿರಬೇಕಾದುದು ನ್ಯಾಯ. ಸತ್ಯ, ಧರ್ಮ, ಅಹಿಂಸೆ, ಸಹಾನುಭೂತಿಯೇ ಮೊದಲಾದ ಗೌರವಾನ್ವಿತ ಪ್ರಕ್ರಿಯೆಗಳು ಜೀವನ ಧರ್ಮದ ಆಧಾರ ಸ್ತಂಭಗಳು. ನಿರ್ದಿಷ್ಟ ಗುರಿ ಸಾಧನೆಗೆ ಇವೆಲ್ಲವೂ ಪೂರಕಗಳು.ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ನೈತಿಕ, ಧಾರ್ಮಿಕವೇ ಮೊದಲಾದ ಹತ್ತು ಹಲವು ಮೌಲ್ಯಗಳಲ್ಲಿ ಧರ್ಮಶ್ರದ್ಧೆಯನ್ನು ಬೆಳೆಸಿಕೊಂಡರೆ ಜೀವನ ಧರ್ಮ ಪಾಲನೆಗೆ ಮಾರ್ಗ ಸುಗಮವಾಗುವುದು.
ಮನುಷ್ಯನ ಜೀವನಕ್ಕೆ ಹಲವು ಮುಖಗಳಿವೆ. ಎಲ್ಲವೂ ಮೌಲ್ಯಾಧರಿತವಾಗಿದ್ದರೆ ಮಾತ್ರ ಅಲ್ಲಿ ಧರ್ಮ ನೆಲೆಗೊಳ್ಳುವುದು. 'ಜನ್ಮನಾ ಜಾಯತೇ ಜಂತುಃ' ಎಂಬಂತೆ ಜನಿಸುವಾಗ ಮನುಷ್ಯನು ಕೇವಲ ಜಂತುವಿಗೆ ಸಮಾನ. ಅನಂತರ ಕಾಲಕಾಲಕ್ಕೆ ತಕ್ಕಂತೆ ದೊರಕುವ ಕರ್ಮಗಳ ಪ್ರಭಾವದಿಂದ ಆತ ಮಾನವನಾಗುತ್ತಾನೆ. ಅದೆಷ್ಟೋ ಕ್ಷುಲ್ಲಕ ಜನ್ಮಗಳಲ್ಲಿ ಜನಿಸಿ ಬಂದ ಜೀವಿ ಕೊನೆಯದಾಗಿ ಮಾನವ ಜನ್ಮದಲ್ಲಿ ಜನಿಸುತ್ತದೆ ಎಂಬ ನಂಬಿಕೆ ನಮ್ಮದು. ಆದುದರಿಂದ ಮಾನವ ಜನ್ಮವೇ ಶ್ರೇಷ್ಠವಾದುದು. ಅದನ್ನೇ ದಾಸವರೇಣ್ಯರಾದ ಪುರಂದರದಾಸರು "ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ......." ಎಂದು ಬಲು ಮನೋಜ್ಞವಾಗಿ ಹಾಡಿ ದಿವ್ಯವಾದ ಬೋಧನೆಯನ್ನಿತ್ತಿದ್ದಾರೆ. ಆದುದರಿಂದ ಮನುಷ್ಯನಾಗಿ ಜನಿಸಿದವನು ಮೌಲ್ಯಯುತವಾದ ಮಾನವನ ಜೀವನ ಧರ್ಮವನ್ನು ಚಾಚೂ ತಪ್ಪದೆ ಪಾಲಿಸ ಬೇಕು.
ಧರ್ಮವೆನ್ನುವಾಗ ನಮ್ಮೊಳಗೆ ಹಲವು ವಿಚಾರಗಳ ತಾಕಲಾಟಗಳುಂಟಾಗ ಬಹುದು. ಧರ್ಮವೆಂದರೆ 'ಇದಮಿತ್ಥಂ' ಎಂದು ಯಾರಿಗೂ ನಿರ್ವಚನೆ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ, ಹುಲ್ಲು ತಿಂದು ಹಾಲು ಕೊಡುವುದು ಹಸುವಿನ ಧರ್ಮ, ಆದರೆ ಅದೇ ಹಸುವನ್ನು ಕೊಂದು ತಿನ್ನುವುದು ಹುಲಿಯ ಧರ್ಮ. ಶಿಷ್ಯರಿಗೆ ಪಾಠ ಹೇಳಬೇಕಾದುದು ಶಿಕ್ಷಕನ ಧರ್ಮ. ಗುರುಹಿರಿಯರನ್ನು ಗೌರವಿಸುವುದರೊಂದಿಗೆ ಕರ್ತವ್ಯ ಪಾಲನೆ ಮಕ್ಕಳ ಧರ್ಮ. ಗಂಡ ಹೆಂಡತಿ ಅನ್ಯೋನ್ಯ ಅರ್ಥ ಮಾಡಿಕೊಂಡು ಬದುಕಿನ ಬಂಡಿಯನ್ನೆಳೆಯುವುದು ದಾಂಪತ್ಯ ಧರ್ಮ. ಹೀಗೆ ಧರ್ಮದ ಅರ್ಥವನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಆದರೆ ಇದಾವುದೂ ನಿಜವಾದ ಧರ್ಮವಲ್ಲ. ಇವೆಲ್ಲವೂ ಧರ್ಮವೆಂಬ ಒಂದು ವಿಶಾಲವಾದ ಆಲದ ಮರದ ಸಣ್ಣಪುಟ್ಟ ರೆಂಬೆಗಳು ಮಾತ್ರ. ಧರ್ಮದ ವ್ಯಾಖ್ಯೆಯನ್ನು ಒಂದೆರಡು ವಾಕ್ಯಗಳಲ್ಲಿ ವಿವರಿಸುವುದೆಂದರೆ ನಾಲ್ಕು ಜನ ಕುರುಡರು ಆನೆಯನ್ನು ತಿಳಿದುಕೊಂಡಂತೆ! ಆದುದರಿಂದ ಪ್ರಪಂಚದಲ್ಲಿ ಒಳ್ಳೆಯದು ಎಂದು ಯಾವುದೆಲ್ಲ ಇವೆಯೋ ಅವೆಲ್ಲವೂ ಧರ್ಮ ಎಂಬ ತೀರ್ಮಾನಕ್ಕೆ ಬರುವುದೇ ಹೆಚ್ಚು ಸೂಕ್ತ.
'ಲೋಕೋ ಭಿನ್ನ ರುಚಿಃ', 'ವಿವಿಧತೆಯಲ್ಲಿ ಏಕತೆ'- ಮೊದಲಾದ ನುಡಿಮುತ್ತುಗಳನ್ನು ವಿವೇಚಿಸಿದರೆ ಜೀವನ ಧರ್ಮದ ದಾರಿಗಳನ್ನು ಕಂಡುಕೊಳ್ಳುವುದು ಸುಲಭ ಸಾಧ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಆಕಾರದಲ್ಲಿ, ಬಣ್ಣದಲ್ಲಿ, ಗುಣಸ್ವಭಾವಗಳಲ್ಲಿ, ಅಭಿರುಚಿಗಳಲ್ಲಿ, ಆಲೋಚನೆಗಳಲ್ಲಿ, ಚಿಂತನೆಗಳಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳಿರುವುದು ಸ್ವಾಭಾವಿಕ. ಅಂತೆಯೇ ಆಹಾರ ಕ್ರಮಗಳಲ್ಲಿ, ವೇಷಭೂಷಣಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿಯೂ ಅಂತರಗಳಿರುತ್ತವೆ. ಅವೂ ಕೂಡಾ ಸ್ವಾಭಾವಿಕವೇ. ಆದರೆ ಈ ಎಲ್ಲವನ್ನೂ ಗಮನದಲ್ಲಿರಿಸಿ ಯಥಾಶಕ್ತಿ ಪಾಲಿಸಿಕೊಂಡು ಬರುವುದರೊಂದಿಗೆ ಲೋಕಹಿತವನ್ನೂ ಸಾಧಿಸುವುದೇ ನಿಜವಾದ ಜೀವನ ಧರ್ಮ.
-ವಿ.ಬಿ. ಕುಳಮರ್ವ, ಕುಂಬ್ಳೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ