ಪುತ್ತೂರು: ನಗರದ ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ, ಮಾಜಿ ಸೈನಿಕರ ಸಂಘ ಹಾಗೂ ಅನ್ಯಾನ್ಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜ.2ರಂದು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ವಿಜಯ ದಿವಸ ಆಚರಣೆ - ಸಾರ್ವಜನಿಕ ಕಾರ್ಯಕ್ರಮ ಬೆಳಗ್ಗೆ 9 ಗಂಟೆಗೆ ನಡೆಯಲಿದೆ. 1971ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಐತಿಹಾಸಿಕ ವಿಜಯವನ್ನು ಭಾರತ ದಾಖಸಿದ್ದಕ್ಕೆ ಐವತ್ತು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪುತ್ತೂರಿನ ಮಾಜಿ ಸೈನಿಕರ ಸಂಘದ ಸದಸ್ಯ, ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಜಿ.ಡಿ.ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರಿನ ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಡಾ.ಯತೀಶ್ ಕುಮಾರ್ ಉಲ್ಲಾಳ್, ಮಂಗಳೂರಿನ ನಿವೃತ್ತ ಬ್ರಿಗೇಡಿಯರ್ ಐ.ಎನ್ ರೈ, ಮಂಗಳೂರಿನ ನಿವೃತ್ತ ಕರ್ನಲ್ ಎನ್.ಶರತ್ ಭಂಡಾರಿ ಅಭ್ಯಾಗತರಾಗಿ ಆಗಮಿಸುವರು.
ಈ ಸಂದರ್ಭದಲ್ಲಿ 1971ರಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಬ್ರಿಗೇಡಿಯರ್ ಐ.ಎನ್ ರೈ, ಕರ್ನಲ್ ಎನ್.ಶರತ್ ಭಂಡಾರಿ ಹಾಗೂ ಪುತ್ತೂರಿನ ನಿವೃತ್ತ ವೀರ ಯೋಧರಾದ ಲೆಪ್ಟಿನೆಂಟ್ ಕರ್ನಲ್ ಜಿ.ಡಿ.ಭಟ್, ಕ್ಯಾಪ್ಟನ್ ಚಿದಾನಂದ ನಾಡಾಜೆ, ಸುಬೇದಾರ್ ರಮೇಶ್ ಬಾಬು ಪಿ, ವಾರಂಟ್ ಆಫೀಸರ್ ಜೆ.ಕೆ.ವಸಂತ, ಸಾರ್ಜೆಂಟ್ ದೇರಣ್ಣ ಗೌಡ, ನಾಯಕ್ ಶಿವಪ್ಪ ಗೌಡ, ನಾಯಕ್ ಜೋ ಡಿಸೋಜ, ಎಲ್‌ಎಂಇ ಸುಬ್ರಹ್ಮಣ್ಯ ಕೆಮ್ಮಿಂಜೆ, ಸಿಪಾಯಿ ಅಮಣ್ಣ ರೈ ಡಿ ಅವರಿಗೆ ಸನ್ಮಾನ ನಡೆಯಲಿದೆ. ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆಗೈದ ವೀರಯೋಧರಿಗೆ ಪುಷ್ಪ ನಮನ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ