|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಥನ: ದೇವರ ಭಯವೇ ಅಜ್ಞಾನದ ಆರಂಭ

ಮಂಥನ: ದೇವರ ಭಯವೇ ಅಜ್ಞಾನದ ಆರಂಭ


ಎಲ್ಲೋ ಓದಿದ ನೆನಪು 'ದೇವರ ಭಯವೇ ಜ್ಞಾನದ ಆರಂಭ' ಎಂಬ ವಾಕ್ಯ. ಎಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಇರಬೇಕಾಗಿದೆಯೋ ಅಲ್ಲಿ ಭಯ ಉತ್ಪತ್ತಿಯಾದರೆ ಜ್ಞಾನ ಹೇಗೆ ತಾನೆ ಬಂದೀತು? ಭಯವಿದ್ದಲ್ಲಿ ಪ್ರೀತಿ ಇರಲಾರದು, ಪ್ರೀತೀ ಇದ್ದಲ್ಲಿ ಭಯ ಬರಬಾರದು. ಅಜ್ಞಾನ ತೊಲಗಬೇಕಾದರೆ ಭಯ ಮೊದಲು ಆ ಜಾಗ ಖಾಲಿ ಮಾಡಬೇಕು. ಅದಕೆಂದೇ ನನಗನಿಸುವುದು 'ದೇವರ ಭಯವೇ ಅಜ್ಞಾನದ ಆರಂಭ'. ಯಾರಿಗಾದರೂ ಅನ್ಯಾಯ, ವಂಚನೆ, ಮೋಸ ಇತ್ಯಾದಿ ಮಾಡುವಾಗ ತಾನು ಅದನ್ನು ಮಾಡಬಾರದೆಂಬ ವಿವೇಕ ದೇವರ ಭಯದಿಂದ ಖಂಡಿತ ಬರಲಾರದು. ಒಬ್ಬ ವ್ಯಕ್ತಿಯದ್ದಾಗಲಿ, ಒಂದು ಪ್ರಾಣಿಯದ್ದಾಗಲಿ, ಒಂದು ವಿಚಾರದ್ದಾಗಲಿ ಭಯವಿದ್ದಲ್ಲಿ ಅದರ ಅನುಪಸ್ಥಿತಿಯಲ್ಲಿ ನಾವು ಮಾಡಬಾರದ್ದನ್ನು ಮಾಡಲು ಸಾಧ್ಯತೆಗಳಿವೆ. ಆದರೆ ಅದೇ ಜಾಗದಲ್ಲಿ ಪ್ರೀತಿ ಇದ್ದರೆ ಪರಿಣಾಮ ವ್ಯತಿರಿಕ್ತವಾಗಿರುತ್ತದೆ. ಯಾವುದರ ಮೇಲೆ ನಮಗೆ ಪ್ರೀತಿ ಇದೆಯೋ ಅಲ್ಲಿ ಕೆಟ್ಟ ಆಲೋಚನೆಗಳು ಖಂಡಿತ ಬರಲಾರದು ಬರಬಾರದು.  


ಅಷ್ಟಾಗಿ ದೇವರ ಮೇಲೆ ಭಯ ಯಾಕೆ? ದೇವರಲ್ಲಿ ಕ್ರೌರ್ಯ ಇಲ್ಲ, ದುಷ್ಟತನವಿಲ್ಲ, ವಂಚಿಸುವ ಗುಣವಿಲ್ಲ. ಇನ್ನೂ ಹೇಳುವುದಾದರೆ ದೇವರೆಂಬುದು ನಾವು ತಿಳಿದುಕೊಂಡಂತಿಲ್ಲ. ದೇವರೆಂದು ನಾವೇನನ್ನು ಕರೆಯುತ್ತೇವೆಯೋ, ಏನನ್ನು ಗುರುತಿಸುತ್ತೇವೆಯೋ ಅದು ನಮ್ಮ ಸ್ವಂತ ಅಭಿಪ್ರಾಯ ಅಥವಾ ಸ್ವಂತ ಅನುಭವವಂತು ಖಂಡಿತ ಅಲ್ಲ.  ನಮ್ಮ ಹಿರಿಯರು ದೇವರ ಮೂರ್ತಿ, ದೇವರ ಭಾವಚಿತ್ರಗಳನ್ನು ತೋರಿಸಿ ಏನನ್ನು ನಮ್ಮ ಮನಸ್ಸಿಗೆ ಅಂಟಿಸಿದ್ದಾರೋ ಅದನ್ನೇ ನಾವು ದೇವರೆಂದು ತಪ್ಪಾಗಿ ಕಲ್ಪಿಸಿದ್ದೇವೆ. ಮತ್ತೆ ಅಂಥ ವಿಚಾರಗಳನ್ನೇ ನಮ್ಮ ಮಕ್ಕಳಿಗೂ ವರ್ಗಾಯಿಸುತ್ತೇವೆ. ಸತ್ಯ ಏನೆಂದು ತಿಳಿಯಲು ಕೆಲವರು ಮುಂದಾಗುತ್ತಾರೆ. ಆದರೆ ಅವರು ಕೂಡ ಕೆಲವು ಪೂರ್ವಾಗ್ರಹಗಳಿಗೆ ಬಲಿಯಾಗಿ ವಿಚಾರಗಳನ್ನು ಎಡವಟ್ಟಾಗಿ ಮಂಡಿಸುತ್ತಾರೆ. ಮೂರ್ತಿಗಳನ್ನೇ ದೇವರೆಂದು ನಂಬಿ ಪೂಜೆ ಹೋಮ ಹವನಗಳನ್ನು ಮಾಡಿ ಸಮಾಜದ ದೃಷ್ಟಿಯಲ್ಲಿ ಆಸ್ತಿಕರೆನಿಸಿಕೊಂಡು ಮೂರ್ತಿಗಳ ಒಳಗಿರುವ ನಿಜವಾದ ದೇವರನ್ನು ಗುರುತಿಸದೆ ಗೊಂದಲಕ್ಕೊಳಗಾಗಿ ಜೀವಮಾನ ಪೂರ್ತಿ ಮೂರ್ತಿ ಪೂಜೆಯಲ್ಲೇ ತೊಡಗಿಸಿಕೊಂಡಿ ರುತ್ತಾರೆ. ಆದರೂ ಇವರು ಆಸ್ತಿಕರು ಸಮಾಜದ ಹಿತೈಷಿಗಳು, ಸಜ್ಜನರು.


ಇನ್ನು ಕೆಲವರು ದೇವರೇ ಇಲ್ಲವೆಂದು ವಾದ ಮಂಡನೆ ಮಾಡಿ ದೇವರ ಅಸ್ತಿತ್ವವನ್ನೇ ಬುಡಮೇಲು ಮಾಡಿ ನಾನಾ ತರ್ಕಗಳಿಂದ ತಾವು ನಾಸ್ತಿಕರೆಂದು ಸಮಾಜದಲ್ಲಿ ಗುರುತಿಸಿಕೊಂಡಿರುತ್ತಾರೆ. ರಾತ್ರಿ ಹೊತ್ತಲ್ಲಿ ಸೂರ್ಯನಿಲ್ಲವೆಂದು ವಾದಿಸಿದಂತೆ. ಇಂಥವರು ಕೂಡ ಎಲ್ಲೋ ಒಂದು ಕಡೆ ದಾರಿ ತಪ್ಪಿ ಬಹಳ ಮುಂದೆ ಹೋಗಿರುತ್ತಾರೆ. ಇವರು ಹಿಂದೆ ಬರಲಾರರು ಅಂತೆಯೇ ತಪ್ಪಿದ ದಾರಿಯಲ್ಲಿ ಸಾಗಲಾರರು. ಇವರದ್ದೂ ಗೊಂದಲದ ಬದುಕೇ. ಹಾಗಾದರೆ ನಾವು ಎಡವಿದ್ದೆಲ್ಲಿ? ಇದಕ್ಕೆ ಉತ್ತರ ಸಿಕ್ಕಿಲ್ಲಿ ನಮ್ಮ ಸಮಸ್ಯೆಯು ಬಹುತೇಕ ಪರಿಹಾರವಾದಂತೆಯೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ. 'ಈ ಪ್ರಕೃತಿಯೇ ನನ್ನ ಶರೀರವಿದ್ದಂತೆ' ಎಂದು.  ಹಾಗಾದರೆ ಈ ಚರಾಚರ ವಸ್ತುಗಳು ಏನಿವೆಯೋ ಅದೆಲ್ಲವೂ ದೇವರ ಶರೀರವೇ ಆಗಿದೆ. ಬರಿದೆ ಒಂದು ಮೂರ್ತಿ ಮಾತ್ರವಲ್ಲ.. ದೇವರಿಗೆ ಪ್ರತ್ಯೇಕ ಕೋಣೆ ಬೇಕಿಲ್ಲ. ಇಡೀ ಬ್ರಹ್ಮಾಂಡವನ್ನೇ ಆಶ್ರಯಿಸಿದ ದೇವರಿಗೆ ಕೋಣೆ ಎಲ್ಲಿ ಕಟ್ಟಬಹುದು? ದೇವರು ಕೋಣೆಯ ಒಳಗೂ ಹೊರಗೂ ವ್ಯಾಪಿಸಿರುವುದರಿಂದ  ಕೋಣೆಯಲ್ಲಿ ಮಾತ್ರ ದೇವರನ್ನು ಕಂಡರೆ ಸಂಕುಚಿತ ಮನೋಭಾವವಾದೀತು. ಆದರೂ ನಮ್ಮ ಏಕಾಗ್ರತೆಗೆ ಹಾಗೂ ಪ್ರಪಂಚವನ್ನೇ ದೇವನ ರೂಪವೆಂದು ಕಾಣಲು ಪ್ರಾಯೋಗಿಕವಾಗಿ ನಾವು ದೇವರ ಕೋಣೆಯನ್ನು ಕಲ್ಪಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ  ದೇವರ ಕೋಣೆಯಲ್ಲಿ ಕಂಡಂಥ ದೇವರನ್ನು ಇಡೀ ಪ್ರಪಂಚದೊಳಗೂ ಕಾಣಬೇಕಂಬ ಪ್ರಜ್ಞೆ ರೂಢಿಸಿಕೊಳ್ಳಬೇಕು. ದೇವರ ಕೋಣೆಗೆ ಮಡಿಯನ್ನುಟ್ಟು ಹೋದಂತೆ, ಮನಸ್ಸನ್ನು ಮಡಿಯಲ್ಲಿಟ್ಟುಕೊಂಡಲ್ಲಿ ಪ್ರಪಂಚವನ್ನೇ ದೇವರ ಕೋಣೆಯಾಗಿ ಪರಿವರ್ತಿಸಬಹುದು.  


ಆದರೂ ಕೆಲವೊಮ್ಮೆ ಜ್ಞಾನ ಆರಂಭವಾಗದಿದ್ದರೂ ದೇವರ ಭಯವುಂಟಾಗುತ್ತದೆ. ಅದಕ್ಕೆ ಕಾರಣಗಳೂ ಇವೆ ಎನ್ನಿ. ಮನುಷ್ಯನಿಗೆ ಸುಖಗಳು ಬಂದಂತೆ ಕಷ್ಟಗಳೂ ಬರುತ್ತವೆ. ಸುಖ ಬಂದಾಗ 'ದೇವರೇ ನನಗೆ ಯಾಕಿಷ್ಟು ಸುಖ ಕೊಟ್ಟೆ ನನಗೆ ಇದನ್ನು ಸಹಿಸಲಾಗದು' ಎಂದು ಯಾರೂ ದೇವರನ್ನಾಗಲಿ ಜ್ಯೋತಿಷ್ಯಿಗಳನ್ನಾಗಲಿ ಮೊರೆ ಹೋದದ್ದೂ ಇಲ್ಲ, ಸುಖಗಳನ್ನು ಕಡಿಮೆ ಮಾಡಲೆಂದು ಪರಿಹಾರಗಳನ್ನು ಮಾಡಿದ್ದೂ ಇಲ್ಲ. ಬದಲಾಗಿ ಅದನ್ನು ಸಾಧ್ಯವಾದಷ್ಟು ಅನುಭವಿಸಿಯೇ ಬಿಡುತ್ತಾರೆ. ಆದರೆ ಕಷ್ಟಗಳಿಗೆ ಈ ನ್ಯಾಯ ಯಾರೂ ಅಳವಡಿಸಿಕೊಳ್ಳುವುದಿಲ್ಲ. ಹಿಂದೆ ಸುಖವನ್ನು ಅನುಭವಿಸಿದ್ದೇನೆ ಅದೇ ರೀತಿ ಈಗ ಕಷ್ಟಗಳನ್ನೂ ಅನುಭವಿಸುತ್ತೇನೆ ಎರಡೂ ದೇವರ ಪ್ರಸಾದವೆಂದರಿತುಕೊಂಡು ಬಾಳಬಹುದು, ಬದುಕಬಹುದು. ಆದರೆ ನಾವು ಕಷ್ಟಗಳನ್ನು ಅನುಭವಿಸಲಾರೆವೆಂದು ಜ್ಯೋತಿಷ್ಯ, ಪರಿಹಾರ, ಪೂಜೆ, ಹವನ, ಹೋಮ ಎಂದು ಮುಂತಾಗಿ ಬೆನ್ನು ಹತ್ತಿದೆವೊ ಆವಾಗ ನಮಗೆ ದೇವರ ಭಯ ಪ್ರಾರಂಭವಾದಂತೆ. ಅದರೊಡನೆ ಅಜ್ಞಾನ ಆರಂಭವಾದಂತೇ. ಅದರ ಬದಲು ಕಷ್ಟ ಬಂದಾಗ ನಮ್ಮ ತಾಯಿಯಲ್ಲಿ ಮಮತೆಯಿಂದ, ಪ್ರೀತಿಯಿಂದ, ಸಲುಗೆಯಿಂದ ಬೇಡಿಕೊಂಡಂತೆ ಆ ದೇವರಲ್ಲಿ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿಕೊಂಡರೆ, ತಾಯಿಯ ಮನಸ್ಸು ಕರಗುವಂತೆ ನಮ್ಮನ್ನು ದೇವರು ಕ್ಷಮಿಸಿದರೂ ಕ್ಷಮಿಸಬಹುದು. ಆದರೆ ಭಯದಿಂದ ಇದು ಅಸಾಧ್ಯ.


ಪ್ರಪಂಚವೆಂದರೆ ಹಾಗೇ ತಾನೆ.. ಕಷ್ಟ-ಸುಖ, ರಾತ್ರಿ-ಹಗಲು, ಸಿರಿತನ-ಬಡತನ, ಮೇಲು-ಕೀಳು, ಹುಟ್ಟು-ಸಾವು, ರೋಗ-ಆರೋಗ್ಯ.. ಇತ್ಯಾದಿ ಸಹಜ. ಅದು ಪ್ರತಿಯೊಬ್ಬರಿಗೂ ಅನುಭವಕ್ಕೆ ಬರುವಂಥದ್ದೇ ಆಗಿದೆ. ಇದು ಯಾವುದೇ ಪರಿಹಾರಗಳಿಂ ದಾಗಲಿ, ದೈವ ದೇವರುಗಳ ಭಯದಿಂದಾಗಲಿ, ಯಾರೋ ಯೋಗಿಗಳ ಆಶೀರ್ವಾದಗಳಿಂದಾಗಲಿ ಬದಲಿಸಲಾಗುವುದಿಲ್ಲ. ಅನುಭವಿಸಿಯೇ ತೀರಬೇಕಾದ ಅನಿವಾರ್ಯತೆಯನ್ನು ಮನಗಂಡು ದೇವರನ್ನು ಪ್ರೀತಿಸಿದರೆ ಅದೂ ಭಯವಿಲ್ಲದೆ ಪ್ರೀತಿಸಿದರೆ ಅದಕ್ಕಿಂತ ದೊಡ್ಡ ಪೂಜೆ ಯಾವುದೂ ಇರದು. ಯಾಕೆಂದರೆ ಎಲ್ಲಿ ನಿಸ್ವಾರ್ಥ ಪ್ರೀತಿ ಇರುವುದೋ ಅಲ್ಲಿ ಅನ್ಯಾಯ, ದುರಾಲೋಚನೆ, ಭಯ ಯಾವುದೂ ಇರದು. ಅಂತೆಯೇ ಅಂಥವರ ಭವಿಷ್ಯವೂ ಉತ್ತಮವೇ ಇರುವುದು. ವಿಹಿತ ಕರ್ಮಗಳನು ಮಾಡಿ ಪ್ರಕೃತಿಗೆ ಪೂರಕವಾಗಿ ಸಹಜತೆಯಿಂದ ಬದುಕಿದಾಗ ಜ್ಞಾನವು ತಾನೆ ತಾನಾಗಿ ಬರುತ್ತದೆ. ಭಯವೂ ನಿವಾರಣೆಯಾಗು ತ್ತದೆ. ದೇವರ ಭಯಬೇಕು. ಯಾವಾಗ ಎಂದರೆ, ದುರ್ಯೋಧನ,  ಕಂಸ, ರಾವಣರಂತೆ ಬದುಕುವಾಗ, ಸಮಾಜಕ್ಕೆ ಘಾತಕ ವನ್ನುಂಟು ಮಾಡುವ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವಾಗ, ಆತ್ಮವಂಚನೆ ಮಾಡಿಕೊಳ್ಳುವಾಗ... ಆದರೆ ಅದು ಸಾಧ್ಯವಿಲ್ಲ. ಯಾಕೆಂದರೆ ಇಂಥ ಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಕ್ಷಣದಲ್ಲಿ ದೇವರ ನೆನಪಾದರೂ ಬರಬೇಕಲ್ಲ... ಬಂದರೂ ಅದರ ಭಯವುಂಟಾಬೇಕಲ್ಲ... ಒಂದು ವೇಳೆ ಅಂಥ ಭಯವುಂಟಾದಲ್ಲಿ, ಆ ಭಯದಿಂದ ದುಷ್ಟನೊಬ್ಬ ಸದ್ಗುಣಿಯಾದಲ್ಲಿ, ಅಂಥ ಭಯ ಆತನನ್ನು ಮುಂದೆ ಜ್ಞಾನವಂತನನ್ನಾಗಿ ಮಾಡಿಸಿದಲ್ಲಿ ದೇವರ ಭಯವೂ ಬೇಕಾದೀತು. ಅನ್ಯಥಾ ದೇವರ ಭಯ ಬೇಡ. ದೇವರ ಪ್ರೀತಿ ಸಾಕು.. ನಿಮಗೇನನಿಸುತ್ತದೆ...?

- ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post