ಕೊರೋನಾ ಎಂಬ ಅನಿರೀಕ್ಷಿತ ಅತಿಥಿಯ ಕಾಟ

Upayuktha
0

ಇದ್ದುದರಲ್ಲಿ ಥಟ್ಟನೇ ಎರಗುವುದು, ಕೂಡಲೇ ಹೊಡೆಯುವುದು ಅದೆಷ್ಟು ದೂರದ ಗಗನದಿಂದಾದರೂ ಕೋಲ್ಮಿಂಚು. ಕೋಲ್ಮಿಂಚು ಕಂಡರೆ ಅನಂತರ ಚೆಂಡೆ ವಾದನ ಸಹಿತ ರಕ್ಕಸ ಪ್ತವೇಶವಾದಂತೆ ಸಿಡಿಲಿನಾವೇಷ. ಅಷ್ಟರಲ್ಲೇ ಹೊಡೆವವನಿಗೆ ಹೊಡೆಸಿಕೊಂಡಾಗಿರುತ್ತದೆ. ಯಾವುದೋ ದೂರದ ಹೊರದೇಶ ಚೈನಾದಲ್ಲಿ ಚೌಕಿಯ ವೇಷಧಾರಿಯಂತಿದ್ದ ಒಂದು ಜೀವಿಯಲ್ಲದ ಆದರೆ ಜೀವ ಹಿಂಡುವ ಈ ಪ್ರೊಟೀನ್ ಯುಕ್ತ ವಿಷಾಣು, ವೈರವನ್ನು ಸದಾ ಮೈಗೂಡಿಸಿರುವ ವೈರಸ್ಸು ಕೋವಿಡ್ -19 ಹುಟ್ಟಿದೊಡನೇ ಬಲಿತ ವಾಮನನಾಯಿತಲ್ಲ! ರಕ್ತ ಬೀಜಾಸುರನೂ ಆಯಿತಲ್ಲ!


ಯಾರನ್ನು ಮುಟ್ಟಿದರೂ ಅಂಟಿಕೋ ಹಿಂದೆ ಬಾ ಎಂಬ ಕತೆಯ ಪ್ರಾತ್ಯಕ್ಷಿಕೆಗೆ ಸಾಕ್ಷಿಯಾದ ಈ ಸೋಂಕಿನರಸ ಭಾರತದ ಪ್ರಜೆಯಾಗ ಹೊರಟದ್ದೇ ಇತಿಹಾಸ ತೋರಿಸದ ದಿಗ್ವಿಜಯ. ಈ ಚಕ್ರವರ್ತಿಯ ಅಶ್ವ ಮೇಧ ಯಾತ್ರೆಯಲ್ಲಿ ಸಿಲುಕಿ ಒದ್ದಾಡಿ ಸತ್ತು ಬದುಕಿದವರೂ ಬದುಕುವಂತಹವರು ಸತ್ತುದೂ ಬಹಳಷ್ಟಿರುವ ಸತ್ಯ ಹಲವರಿಗೆ ಗೊತ್ತಿರಲಾರದು.


ಹಿಂದೂ ಶಾಸ್ತ್ರದ ನೀತಿ ಸಂಹಿತೆಯ ಪ್ರತಿಪಾದಕನ ಅವತಾರವೋ ಎಂಬಂತೆ ಧರೆಗಿಳಿದ ಈ ಮಹಾ ಮಹಿಮ ಜನರಿಗೆ ಸ್ವಚ್ಛತೆ ಕಲಿಸಿದ, ಮಾತು ಬೆಳ್ಳಿ ಮೌನ ಬಂಗಾರ ತಿಳಿ ಮಗನೇ ಎಂಬಂತೆ ಬಾಯಿಗೆ ಬೀಗ ಹಾಕಿಸಿದ. ಮಿಂದು ಮಡಿಯುಡು ತೊಡೆದು ಕಲ್ಮಶ ಕರ ಪಾದ ಸಹಿತ ಎಂಬ ಎಲ್ಲೆಂದರಲ್ಲಿ ಬೂಟುಶಾಹಿಯಾಗಿದ್ದವರಿಗೆ ಜ್ಞಾನೋದಯ ಮಾಡಿದ.


ಅದೆಷ್ಟು ಕಷ್ಟ ಪಟ್ಟರು ಜನರು. ಅಂತರ ನಿರಂತರ ಎಂಬ ಧ್ಯೇಯ ವಾಕ್ಯದ ಕಟ್ಟಾ ಅನುಯಾಯಿಗಳಾಗುವ ಅನಿವಾರ್ಯತೆಯನ್ನು ಶಿರಸಾ ವಹಿಸಿ, ದೊಡ್ಡ ದೊರೆಯಂತೆ ಮನೆಯಲ್ಲೇ ವನವಾಸ ಅನುಭವಿಸಿ ಕಿಸೆ ಖಾಲಿ ಮಾಡಿಕೊಂಡು ಅರೆಹೊಟ್ಟೆ ದಾಸರಾದರು.


ಸಂಪಾದನೆ ಇಲ್ಲದೆ ಬದುಕೆಂತು ಎಂಬ ಕೊರಗಿನಲ್ಲಿಯೂ ಅಸೌಖ್ಯ ಎಂಬ ಪೀಡೆ ಬಂದಾಗ ನನ್ನಂತಹ ವೈದ್ಯರೆಡೆಗೆ ಧಾವಿಸಿ ಜೇಬು ತಿರುಗಿಸಿ ಶೂನ್ಯದೆಡೆಗೆ ಬಿಟ್ಟು ಮಾಡಿ ಕೊನೆಗೂ ಮಾನವೀಯತೆಯ ಸೊಲ್ಲಿನ ಸಹಿತ ಬಂದು ಹೋದ ಹಲವರನ್ನು ನಾನೂ ಕಂಡಿದ್ದೇನೆ.


ಸೋಂಕು ತಗುಲಿದರೂ ಮರೆ ಮಾಚಿ ನನ್ನ ಸ್ಟೆತೋಸ್ಕೋಪಿನ ಸಂಪರ್ಕಕ್ಕೊಳಗಾದವರೂ ಇದ್ದಾರೆ


ಹೆಸರಾಂತ ವೈದ್ಯರನೇಕರು ಜನ ಸೇವೆಯ ಅನಿವಾರ್ಯತೆಗೆ ಕಟ್ಟುಬಿದ್ದು ಬಂದವರ ಮೂಲಕ ಪ್ರಸಾದ ಪಡೆದು ಇಹ ಲೋಕ ತ್ಯಜಿಸಿದವರೂ ಬಹಳಷ್ಟು ಇದ್ದಾರೆ.


ಅಧಿಕ ಪ್ರಸಂಗ ತನದಿಂದ ಹೇಳಿದ್ದುಕೇಳದೆ ತಿರುಗಾಡಿ ಲಂಕೆಯ ಸುಟ್ಟ ಅಂಕೆ ತಪ್ಪಿದ ಹನುಮಂತನ ಹಾಗೆ ನಿರಪರಾಧಿಗೂ ಶಿಕ್ಷೆಯಾಗುವಂತೆ  ಮಾಡಿದವರನ್ನೂ ಕಂಡಿದ್ದೇನೆ


ಹಲವು ಹೋಟೆಲುಗಳು ನೆಲ ಕಚ್ಚಿದುವು. ಹಲವು ಬಸ್ಸುಗಳು ತುಕ್ಕಿಗಾಹುತಿಯಾದವು.ಬಡಪಾಯಿ ಒಂದೆರಡು ಬಸ್ಸು, ಅಂಗಡಿ ಇರಿಸಿ ಕೊಂಡಾತ ಸಾಯಲು ಕೊರೋನಾವೇ ಏಕೆ ಬೇಕು ಎನ್ನುವಂತಾಯಿತು. ಬಸ್ಸಿನೊಳಗೆ ತರಕಾರಿ ಅಂಗಡಿಯ ಪರಕಾಯ ಪ್ರವೇಶವಾದದ್ದೂ ಇದೆ.


ಎಲ್ಲಾ ಸುಳ್ಳು ಇದೆಲ್ಲವೂ ರಾಜಕೀಯ ಎನ್ನುತ್ತಾ ಚಾರ್ವಾಕ ಸಿದ್ಧಾಂತದಂತೆ ಬೇಕಾಬಿಟ್ಟಿ ಸುತ್ತಾಡಿ ಕೊನೆಗೆ ಕೆಟ್ಟವರೂ ಕಂಡಿದ್ದಾರೆ.


ಕೊನೆಗೂ ವ್ಯಾಕ್ಸಿನೇಶನ್ ಬಂತು . ಇನ್ನು ಸರ್ವ ಸ್ವತಂತ್ರವಾಗಿ ಮೆರೆಯ ಬಹುದು ಎಂದು ಭಾವಿಸುತ್ತಾ ವ್ಯಾಕ್ಸಿನೇಶನ್ ಪಡೆದವರೂ ಕೆಲವರು ಜೋಪಾನ ರಾಹಿತ್ಯಕ್ಕೊಳಗಾದರೆ ಕೆಲವರು ಹೇಗೂ ವ್ಯಾಕ್ಸಿನೇಶನ್ ಇದೆ ಮುಂದೆ ಆರಾಮ ಎನ್ನುತ್ತಾ ಮತ್ತೆ ಕೆಲವರು ಬಂದರೆ ನೋಡಿ ಕೊಳ್ಳೋಣ ಎಂಬಂತೆ ಮೂರು ಮೀನುಗಳ ಕತೆಯನ್ನು ನೆನಪಿಗೆ ತಂದರು.


ಏನೇ ಆಗಲಿ ಉದ್ದಿಮೆ ಹಾಳಾಗಿದೆ, ಆರ್ಥಿಕ ಹೊಡೆತ ಬಹಳಷ್ಟಾಗಿದೆ, ವಿದ್ಯಾ ಕ್ಷೇತ್ರ ಭ್ರಮನಿರಸನಗೊಂಡಿದೆ, ಹಣದುಬ್ಬರ ಏರಿದೆ,ಸಂಪಾದನೆ ಇಳಿದಿದೆ. ಅತಿ ಸಿರಿವಂತರಿಗೆ ಮಾತ್ರ ಇದು ಕೋಣನ ಬೆನ್ನಿನ ಕಿನ್ನರಿಯಂತಾದರೆ ಮಧ್ಯಮ ವರ್ಗಕ್ಕೆ ಕೊಳ್ಳಿಯೇ ಆಗಿದೆ. ಬಡ ವರ್ಗ ಗ್ರಹಚಾರವನ್ನು ಹಳಿದು ತಲೆ ಮೇಲೆ ಕರವಿರಿಸಿ ಕೆಲವು ಬುದ್ಧಿವಂತ ವರ್ಗ ಸಿಕ್ಕಿದ್ದನ್ನು ದೋಚುವ ಮಟ್ಟಕ್ಕೆ ಬಂದಿದೆ.


ಬಡವರು ಬಡವರಾಗಿಯೇ ಉಳಿದರು ಎಂಬುದು ಹಳೆಯ ಕೋವಿಡ್ ಪೂರ್ವದಲ್ಲೇ ಇದ್ದ ನುಡಿಯಾದರೂ ಈಗ ಅದು ಇನ್ನಷ್ಟು ಕಾಂಕ್ರೀಟಿಕರಣ ಗೊಂಡುದು ಸುಳ್ಳಲ್ಲ.ದುಡಿಮೆಗೂ ಅವಕಾಶ ವಂಚಿತರಾಗುವ ಅನಿವಾರ್ಯ ದೌರ್ಭಾಗ್ಯ ಹೊಟ್ಟೆಯನ್ನು ಬೆನ್ನಿಗಂಟಿಸಿದ ಈ ಕಾಲ ಬಹಳ ಮುತುವರ್ಜಿ ವಹಿಸಿದ ಜೀವನ ಕ್ರಮದ ಆವಶ್ಯಕತೆ ಯನ್ನು ಪ್ರತಿಪಾದಿಸುವುದೂ ಎದುರಿಗೆ ಕಾಣುವ ಕನ್ನಡಿ ನೋಟ.


ಜಿಪುಣನೆಂಬ ಹಣೆ ಪಟ್ಟಿ ಇಟ್ಟು ಬದುಕುವ ಶ್ರೀಮಂತನಂತೆ ಬಹಳ ಲೆಕ್ಕಾಚಾರದ ಬದುಕು ಸರ್ವರ ಸ್ವಭಾವವಾಗ ಬೇಕಾದ ಅನಿವಾರ್ಯತೆ ಇದೆ.


ಸಂಬಳ ಪಡೆದು ಬದುಕುವ ಅಭಿಲಾಷೆ ವಿಫಲವಾಗ ಬಹುದಾದ ಸಾಧ್ಯತೆಯ ಈ ಹೊದಿಕೆಯಿಂದಾಗಿ ಉದ್ಯಮೇ ನೈವ ಸಿದ್ಧ್ಯಂತಿ ಕಾರ್ಯಾಣಿ ನ ಮನೋ ರಥೈ ಎಂಬಂತೆ ಸ್ವತಂತ್ರ ಸಂಪಾದನೆಗೆ ಮನ‌ ಮಾಡುವುದೂ ಸಹ ಅನಿವಾರ್ಯವೇ ಸರಿ.


ಎಲ್ಲರ ಜೇಬುಗಳೂ ಸಹ ತೂತಾಗಿರುವ ಈ‌ ಕಾಲ ಬಲಿಷ್ಟ ವಾದುದರ ಉಳಿವು ಎಂಬ ಜೀವಶಾಸ್ತ್ರದ ಉಕ್ತಿಯಂತೆ ವಾಮ ಮಾರ್ಗ ಮೂಲಕವಾದರೂ ಮೇಲಕ್ಕೆ ಬರಲು ಈ ಜಾಡುವ ಚೋರ ಭಯ ಸಹ ಕಾಡುವುದು ಅಸಹಜವಲ್ಲ.ಆದ್ದರಿಂದಲೇ ಹೆಚ್ಚಿನ ಜೋಪಾನ ಮನೆ ವಾರ್ತೆ ಸಹ ಅತ್ಯವಶ್ಯ


ರೈಲಿನ ಬೋಗಿಯಂತೆ ಒಂದು‌ ಮುಗಿಯುವಾಗ ಇನ್ನೊಂದು ಕಾಣುವ ಈ ಕೋರೋನಾ ಪ್ರತಿನಿಧಿಗಳು ಈಗ ಒಮಿಕ್ರಾನ್ ಗಿ ಬಂದಿವೆ. ವ್ಯಾಕ್ಸೀನೇಶನ್ ಆಗಿದೆ ಎಂಬ ಭಂಡು ಧೈರ್ಯ ಇಲ್ಲಿ ಅಪ್ರಯೋಜಕ. ಮಾಸ್ಕು ಧಾರಣೆ ಈಗ ಚಪ್ಪಲಿಯಷ್ಟೇ ಅನಿವಾರ್ಯ.ಯಾರ ಸಂಪರ್ಕವೂ ಅಪಾಯ ರಹಿತವಲ್ಲ. ಎಲ್ಲರೂ ಮಾಸ್ಕು ಧರಿಸಿದಾಗ ಮಾತ್ರ ಕೊರೋನಾ ಸೋಲುತ್ತದೆ. ಹಾಗಾಗಿ ಅಂತರ ನಿರಂತರ, ಸ್ಯಾನಿಟೈಸರ್ ಬಳಕೆಗೆ ಇರದ ರಾಜಿ ಮತ್ತು ಮಾಸ್ಕು ಜನಜೀವನದ ಅವಿಭಾಜ್ಯ ಅಂಗವಾಗಿ ಬಳಸಲ್ಪಟ್ಟಾಗ ಯಾವುದೇ ಕರ್ಫ್ಯೂ ಬೇಕಾಗಿಲ್ಲ. ಸಾಮಾಜಿಕ ವ್ಯವಸ್ಥೆಗೂ ಅನುಮತಿ ಕೊಡ ಬಹುದು.

ಮಾಸ್ಕು ಹಾಕದವನನ್ನು ಮಾರುವೇಷದ ಪೋಲೀಸರು ಹಿಡಿಯುವ ಕ್ರಮ ಜ್ಯಾರಿಗೆ ಬಂದರೆ ಸ್ವಲ್ಪ ಪರಿವರ್ತನೆಯಾದೀತು


ಅಂತೂ ಕೊರೋನಾಸ್ತ್ತಕ್ಕೆ ಮೀರಿದ ಅಸ್ತ್ರ ಯಾವುದೂ ಇಲ್ಲ ಎಂದು ಕೋದಂಡ ರಾಮ ಉದ್ಗಾರ ತೆಗೆಯಲೂ ಬಹುದು.


-ಡಾ ಸುರೇಶ ನೆಗಳಗುಳಿ

ಸುಹಾಸ

ಬಜಾಲ್ ಪಕ್ಕಲಡ್ಕ ಎಕ್ಕೂರು ರಸ್ತೆ

ಮಂಗಳೂರು 575007

9448216664

negalagulis@gmail.com

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top