ಬಿಳಿಯೂರು ಆಣೆಕಟ್ಟು: ಏಪ್ರಿಲ್‌ನಲ್ಲಿ ಪೂರ್ಣ

Upayuktha
0

ಪುತ್ತೂರು: ಸಣ್ಣ ನೀರಾವರಿ ಇಲಾಖೆಯಿಂದ ನೇತ್ರಾವತಿ ನದಿಗೆ ಬಿಳಿಯೂರಿನಲ್ಲಿ 46.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹು ಉಪಯೋಗಿ ಅಣೆಕಟ್ಟಿನ ಕಾಮಗಾರಿಯು ಈ ಸಾಲಿನ ಏಪ್ರಿಲ್‍ನಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.


ಶನಿವಾರ ಬಿಳಿಯೂರಿನಲ್ಲಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಅವರು  ಮಾತನಾಡಿದರು. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಯೋಜನೆಯನ್ನು ಮಂಜೂರುಗೊಳಿಸಿದ್ದರು. ರಾಜ್ಯದ ಸಣ್ಣ ನೀರಾವರಿ ಸಚಿವ ಜಿ.ಸಿ. ಮಾಧುಸ್ವಾಮಿ ಅನುದಾನವನ್ನು ತ್ವರಿತಗತಿಯಲ್ಲಿ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು ಎಂದರು.


ಈ ಅಣೆಕಟ್ಟು ನೀರಾವರಿ, ಕುಡಿಯುವ ನೀರು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಬಿಳಿಯೂರು ಮತ್ತು ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮಕ್ಕೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ. ಬೆಳ್ತಂಗಡಿ ತಾಲೂಕಿನ ಗಡಿ ಭಾಗದಲ್ಲಿರುವವರಿಗೆ ಪುತ್ತೂರನ್ನು ಸಂಪರ್ಕಿಸಲು ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿರುವವರಿಗೆ ಬಂಟ್ವಾಳ ಮತ್ತು ಬೆಳ್ತಂಗಡಿಯನ್ನು ಸಂಪರ್ಕಿಸಲು ಇದು ಹತ್ತಿರದ ಮಾರ್ಗವಾಗಲಿದೆ. ಜತೆಗೆ ನೇತ್ರಾವತಿ ನದಿ ದಂಡೆಯಲ್ಲಿರುವ ಉಭಯ ತಾಲೂಕುಗಳ ಗ್ರಾಮಗಳಲ್ಲಿನ ಕೃಷಿ ತೋಟಗಳ ಕೆರೆ, ಬಾವಿಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದರು.


ತೋಟಕ್ಕೆ ಅಣೆಕಟ್ಟಿನಿಂದ ನೀರು ನುಗ್ಗುವ ಪ್ರದೇಶದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಲಾಗುವುದು. ಅಲ್ಲದೇ ಕೃಷಿ ಭೂಮಿ ಮುಳುಗಡೆಯಾದವರಿಗೆ ಸರಕಾರದಿಂದ ಪರಿಹಾರ ವಿತರಿಸಲಾಗುವುದು ಎಂದರು.


ಅಣೆಕಟ್ಟಿನ ತಾಂತ್ರಿಕ ವಿವರ ನೀಡಿದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕುಮಟ ವಿಷ್ಣುಕಾಮತ್, ಅಣೆಕಟ್ಟಿನ ಮೇಲಿನ ಸೇತುವೆಯು 5.5 ಅಗಲವಿರುತ್ತದೆ. ಅಣೆಕಟ್ಟು 42 ಕಿಂಡಿಗಳನ್ನು ಹೊಂದಿದ್ದು ಕಿಂಡಿಗಳಿಗೆ ಸ್ವಯಂಚಾಲಿತ ತೂಗಿನ ಬಾಗಿಲುಗಳನ್ನು ಅಳವಡಿಸಲಾಗಿದ್ದು ವಿದ್ಯುತ್ ಸಹಾಯದಿಂದ ಇವುಗಳ ನಿರ್ವಹಣೆ ಮಾಡಲಾಗುತ್ತದೆ. ಪಶ್ಚಿಮ ವಾಹಿನಿ ಯೋಜನೆಯಡಿ ಈ ಅಣೆಕಟ್ಟು ನಿರ್ಮಾಣಗೊಂಡಿದ್ದು 2.50 ಕಿ.ಮೀವರೆಗೆ ನೀರು ನಿಲ್ಲಲಿದೆ. ಅಣೆಕಟ್ಟಿನಲ್ಲಿ 53.79 ಕ್ಯುಸೆಕ್‌ಗಳಷ್ಟು ನೀರು ಸಂಗ್ರಹಣೆಗೊಳ್ಳಲಿದೆ ಎಂದು ತಿಳಿಸಿದರು.


ಈ ಸಂದರ್ಭ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಶಿವಪ್ರಸಾದ್, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಸ್ಥಳೀಯ ಕೃಷಿಕ ಹಾಗೂ ಯೋಜನೆಯ ಅನುಷ್ಟಾನಕ್ಕೆ ಸಹಕಾರ ನೀಡಿದ ಸಂಪತ್ ಕುಮಾರ್ ಜೈನ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top