||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾರತದ ಆರ್ಥಿಕತೆ: ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿನ ಬೆನ್ನೇರಿ

ಭಾರತದ ಆರ್ಥಿಕತೆ: ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿನ ಬೆನ್ನೇರಿದೇಶದ ಪ್ರಧಾನಿ ನರೇಂದ್ರ ಮೋದಿ 2019 ರಲ್ಲಿ ಸ್ವಾಂತಂತ್ರ್ಯೋತ್ಸವದ ದಿನದಂದು ಕೆಂಪುಕೋಟೆಯಲ್ಲಿ ನಿಂತು ದೇಶವನ್ನುದ್ದೇಶಿಸಿ ಮಾತನಾಡುತ್ತಾ 2024-25 ರ ಒಳಗಾಗಿ ದೇಶವನ್ನು 5 ಟ್ರಿಲಿಯನ್ ಡಾಲರ್ ಗಳ (5 ಲಕ್ಷ ಕೋಟಿ ಡಾಲರ್ ಗಳು) ಆರ್ಥಿಕತೆಯನ್ನು ಹೊಂದಿದ ದೇಶವನ್ನಾಗಿಸುವ ಆಶಯದ ಮಾತುಗಳನ್ನಾಡಿದ್ದರು. 2014ರಲ್ಲಿ ದೇಶದ ಒಟ್ಟು ಜಿಡಿಪಿ 2 ಟ್ರಿಲಿಯನ್ ಡಾಲರ್ ಗಳಷ್ಟಿತ್ತು. 2019 ನೆಯ ಇಸವಿಯನ್ನು ತಲುಪುವಾಗ ದೇಶದ ಆರ್ಥಿಕತೆ 3 ಟ್ರಿಲಿಯನ್ ಡಾಲರ್ ಗಳನ್ನು ಸಮೀಪಿಸಿತ್ತು. ಕೇವಲ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆ ಒಂದು ಟ್ರಿಲಿಯನ್ ಡಾಲರ್ ಗಳಷ್ಟು ಏರಿರುವಾಗ ಮುಂದಿನ 5 ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕತೆ ಏರಲು ಸಮಸ್ಯೆಯಿಲ್ಲ ಎನ್ನುವುದು ಪ್ರಧಾನಿ ಸೇರಿದಂತೆ, ನೀತಿ ಆಯೋಗ ಹಾಗೂ ಆರ್ಥಿಕ ತಜ್ಞರ ಖಚಿತ ನಿಲುವಾಗಿತ್ತು. 2014 ರಲ್ಲಿ ಬೃಹತ್ ಆರ್ಥಿಕತೆಯ ರಾಷ್ಟ್ರಗಳ ಪಟ್ಟಿಯಲ್ಲಿ 10 ನೆಯ ಸ್ಥಾನದಲ್ಲಿದ್ದ ಭಾರತ 2019 ನೇ ಇಸವಿಯನ್ನು ತಲುಪುವಾಗ ರಷ್ಯಾ, ಇಟೆಲಿ, ಬ್ರೆಜಿಲ್, ಫ್ರಾನ್ಸ್, ಇಂಗ್ಲೆಂಡ್ ಗಳನ್ನು ಹಿಂದಿಕ್ಕಿ 5ನೆಯ ಸ್ಥಾನಕ್ಕೇರಿತ್ತು. ಆದರೆ ಪ್ರಧಾನಿ 5 ಟ್ರಿಲಿಯನ್ ಆರ್ಥಿಕತೆಯ ಮಾತುಗಳನ್ನಾಡುವ ಸಂದರ್ಭದಲ್ಲಿ ಕರೋನಾ ಮಹಾಮಾರಿಯ ಸಮಸ್ಯೆ ಇನ್ನೂ ಶುರು ಆಗಿರಲಿಲ್ಲ. ಆದರೆ ಕರೋನಾದ ಅಲೆಗೆ ಸಿಲುಕಿದ ಭಾರತವೂ ಸೇರಿದಂತೆ ಇಡೀ ಪ್ರಪಂಚದ ಆರ್ಥಿಕತೆಯೇ ಕುಸಿತ ಕಂಡಿತು. ಕರೋನಾದ ಲಾಕ್ಡೌನ್ ಭಾರತದ ದೇಶೀಯ ಉತ್ಪಾದನೆ, ದೇಶೀಯ ಖರೀದಿ, ಉದ್ಯೋಗ, ನಿರ್ಯಾತ ಮೊದಲಾದವುಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿ 2020-21 ರಲ್ಲಿ ದೇಶದ ಅಭಿವೃದ್ಧಿ ದರವನ್ನು ಮೈನಸ್ 7.3% ಗೆ ಇಳಿಸಿತು. ಹೆಚ್ಚುಕಮ್ಮಿ ಮೂರು ಟ್ರಿಲಿಯನ್ ಡಾಲರ್ ನಷ್ಟು ಇದ್ದ ದೇಶೀಯ ಉತ್ಪಾದನೆ 2.7 ಟ್ರಿಲಿಯನ್ ಡಾಲರ್ ಗೆ ಕುಸಿಯಿತು.  


ಕೊರೋನಾ ಎರೆಡನೆಯ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಹೆಚ್ಚು ಸಾವುನೋವುಗಳು ಸಂಭವಿಸಿದರೂ ಅದಾಗಲೇ ವ್ಯಾಕ್ಸಿನೇಶನ್ ಪ್ರಕ್ರಿಯೆಯು ಆರಂಭವಾಗಿದ್ದ ಕಾರಣ ಕರೋನಾ ನಿಯಂತ್ರಣಕ್ಕೆ ಬಂತು. ಇದೀಗ ಮೂರನೆಯ ಅಲೆಯು ಚಾಲ್ತಿಯಲ್ಲಿದ್ದು ದಿನವೊಂದರ ಹೊಸ ಕರೋನಾ ಕೇಸುಗಳ ಸಂಖ್ಯೆ 3 ಲಕ್ಷದ ಆಸುಪಾಸಿನಲ್ಲಿದ್ದರೂ ರೋಗಿಗಳು ಆಸ್ಪತ್ರೆಗಳಲ್ಲಿ ಕಿಕ್ಕಿರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸಾವಿನ ಪ್ರಮಾಣವೂ ಹೆಚ್ಚಾಗಿಲ್ಲ. ದೇಶದ ವ್ಯಯಸ್ಕ ಜನಸಂಖ್ಯೆಯ 75% ಜನರಿಗೆ ಎರಡು ಡೋಸ್ ವ್ಯಾಕ್ಸಿನೇಶನ್ ಹಾಗೂ 96% ಜನರಿಗೆ ಕನಿಷ್ಠ ಒಂದು ಡೋಸ್ ವ್ಯಾಕ್ಸಿನೇಶನ್ ಆಗಿರುವ ಕಾರಣ ಕರೋನಾ ಸೋಂಕು ಹೆಚ್ಚಿದ್ದರೂ ದುಷ್ಪರಿಣಾಮ ಹೆಚ್ಚಾಗಿಲ್ಲ. ಇದೀಗ 15 ರಿಂದ 17 ವಯಸ್ಸಿನ ಒಳಗಿನ ಮಕ್ಕಳಿಗೂ ವ್ಯಾಕ್ಸಿನೇಶನ್ ಆಗುತ್ತಿದೆ ಹಾಗೂ 60 ಮೇಲ್ಪಟ್ಟವರಿಗೆ ಮೂರನೆಯ ಡೋಸ್ ಅನ್ನು ಕೂಡಾ ಕೊಡಲಾಗುತ್ತಿದೆ. ಭಾರತದ ಕೋವಿಡ್ ಲಸಿಕೀಕರಣದ ಸುವ್ಯವಸ್ಥೆಯು ಜಾಗತಿಕವಾಗಿ ಶ್ಲಾಘಿಸಲ್ಪಡುತ್ತಿದ್ದು ಕರೋನಾ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ದೇಶದ ಆರ್ಥಿಕತೆಯೂ ಸಹಜವಾಗಿಯೇ ಚಿಗಿತುಕೊಳ್ಳಲು ಆರಂಭಿಸಿದೆ. ಕರೋನಾ ಕಾಲದಲ್ಲಿ ಕುಸಿದಿದ್ದ ಭಾರತದ ಆರ್ಥಿಕತೆಯು ಇಂಗ್ಲೀಷ್ ವರ್ಣಮಾಲೆಯ ’ವಿ’ ಅಕ್ಷರದಂತೆ ಪುನ: ಮೇಲೆ ಬಂದಿದೆ.      


ಇದೀಗ ಭಾರತದ ಆರ್ಥಿಕ ಬೆಳವಣಿಗೆಯ ದರವು ವಿಶ್ವದಲ್ಲೇ ಅತೀ ವೇಗವಾಗಿದೆ. 2021-22 ರಲ್ಲಿ ಭಾರತದ ಅಭಿವೃದ್ಧಿ ದರ 9.2% ದಷ್ಟು ಇರಬಹುದು ಎಂದು ’ದ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್’ ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 9.5% ಪ್ರಗತಿದರವನ್ನು ಊಹಿಸಿದೆ. ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಕೂಡಾ 9% ಅಭಿವೃದ್ಧಿ ದರವನ್ನು ನಿರೀಕ್ಷಿಸುತ್ತಿದೆ. ಇದೇ ಅವಧಿಯಲ್ಲಿ ಅಮೇರಿಕದ ಅಭಿವೃದ್ಧಿ ದರವು 4% ದ ಆಸುಪಾಸಿನಲ್ಲಿರಲಿದೆ. ಚೀನಾದ ಅಭಿವೃದ್ಧಿ ದರ 5%, ಜಪಾನ್ 2.9%, ಯುರೋಪ್ 4.2%, ಬ್ರೆಜಿಲ್ 1.5% ಹೀಗೆ ಜಗತ್ತಿನ ಇತರ ಎಲ್ಲಾ ರಾಷ್ಟ್ರಗಳ ಅಭಿವೃದ್ಧಿ ದರಗಳು ಭಾರತಕ್ಕಿಂತ ತೀರಾ ಹಿಂದಿವೆ. ಈಗ ಭಾರತದ ಒಟ್ಟು ದೇಶೀಯ ಉತ್ಪನ್ನಗಳ ಮೊತ್ತ 3.1 ಟ್ರಿಲಿಯನ್ ಡಾಲರ್ (3.1 ಲಕ್ಷ ಕೋಟಿ ಡಾಲರ್) ಗಳನ್ನು ತಲುಪಿದೆ. ಕೋವಿಡ್ ಕಾಲದಲ್ಲಿ 2.7 ಟ್ರಿಲಿಯನ್ ಗಳಿಗೆ ಕುಸಿದಿದ್ದ ದೇಶದ ದೇಶೀಯ ಉತ್ಪಾದನೆ ಪುನ: 400 ಶತಕೋಟಿ ಡಾಲರ್ ಗಳಷ್ಟು ಹೆಚ್ಚಾಗಿ 3.1 ಟ್ರಿಲಿಯನ್ ಡಾಲರ್ ಗಳಿಗೆ ಏರಿರುವುದು ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ ಪೂರಕವಾಗಿಯೇ ಇದೆ.


ಭಾರತದಲ್ಲಿ ಮೂಲಭೂತ ಸೌಕರ್ಯ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ ದೇಶದ ಆರ್ಥಿಕ ಸುಧಾರಣೆಯ ತಳಹದಿಯಾಗಿದೆ. ಸಾರಿಗೆ, ನೀರು ವಿದ್ಯುತ್ ಈ ಮೂರು ಸೌಲಭ್ಯಗಳು ಇವುಗಳಲ್ಲಿ ಅತೀ ಅಗತ್ಯವಾದ ವಿಚಾರಗಳು. ಭಾರತದಲ್ಲಿ ರಸ್ತೆ ಸಂಪರ್ಕ, ರೈಲ್ವೇ ಹಾಗೂ ವಾಯು ಯಾನ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗುತ್ತಿದೆ. ಭಾರತ್ ಮಾಲಾ ರಸ್ತೆ ಯೋಜನೆ ಇಡೀ ದೇಶವನ್ನು ರಸ್ತೆ ಮಾರ್ಗದ ಮೂಲಕ ಬೆಸೆದರೆ, ಸಾಗರ ಮಾಲಾ ಯೋಜನೆ ದಕ್ಷಿಣ ಭಾರತದ ಎಲ್ಲಾ ನಗರಗಳನ್ನು ಹಾಗೂ ಬಂದರುಗಳನ್ನು ರಸ್ತೆ ಹಾಗೂ ಸಮುದ್ರ ಮಾರ್ಗವಾಗಿ ಬೆಸೆಯುತ್ತಿದೆ. 2014 ರಲ್ಲಿ ದೇಶದಲ್ಲಿ ದಿನವೊಂದಕ್ಕೆ ಸರಾಸರಿ 6 ಕಿಲೋಮೀಟರ್ ಗಳಷ್ಟು ರಾಷ್ಟ್ರೀಯ ಹೆದ್ದಾರಿ  ನಿರ್ಮಾಣವಾಗುತ್ತಿತ್ತು. 2020-21 ರಲ್ಲಿ ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 36.5 ಕಿಲೋಮೀಟರ್ ಗಳಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. 2013-14 ರಲ್ಲಿ ದೇಶದಲ್ಲಿ 91287 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಇದ್ದಿದ್ದು, 2020-21 ರಲ್ಲಿ ದೇಶದಲ್ಲಿ ಲಭ್ಯವಿದ್ದ ರಾಷ್ಟ್ರೀಯ ಹೆದ್ದಾರಿಯ ಉದ್ದ 1,51,000 ಕಿಲೋಮೀಟರ್ ಗಳಿಗೆ ಏರಿದೆ. ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ಹೊಸದಾಗಿ 60,000 ಕಿಲೋಮೀಟರ್ ಗಳಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡಿದೆ. ಇದೀಗ ನಮ್ಮ ದೇಶದಲ್ಲಿ ಒಟ್ಟು 2037 ಕಿಲೋಮೀಟರ್ ಉದ್ದದ ನಾಲ್ಕು ನಾಲ್ಕು ಅಥವಾ ಹೆಚ್ಚು ಪಥಗಳ 19 ಎಕ್ಸ್ ಪ್ರೆಸ್ ವೇ( ಕ್ಷಿಪ್ರ ಪಥ) ಗಳು ನಿರ್ಮಾಣ ಆಗಿವೆ. ಇವುಗಳಲ್ಲಿ 6 ಎಕ್ಸ್‌ಪ್ರೆಸ್ ವೇ ಗಳು ಉತ್ತರಪ್ರದೇಶದ ಮೂಲಕ ಹಾದು ಹೋಗುತ್ತವೆ. 2017 ರಲ್ಲಿ ದೇಶದಲ್ಲಿ ಕೇವಲ 200 ಕಿಲೋಮೀಟರ್ ಗಳ ಎಕ್ಸ್ ಪ್ರೆಸ್ ರಸ್ತೆಗಳಿದ್ದವು. ಈಗ ದೇಶಾದ್ಯಂತ 29 ಎಕ್ಸ್ ಪ್ರೆಸ್ ವೇ ಗಳ ನಿರ್ಮಾಣ ಕಾರ್ಯ ನಡೆಯುತ್ತಿದುದ್ದು ಇವುಗಳಲ್ಲಿ 75% ರಸ್ತೆ ಯೋಜನೆಗಳು 2022 ರ ಒಳಗಡೆ ಸಂಪೂರ್ಣವಾಗಲಿವೆ. ಇವುಗಳಲ್ಲಿ ಬೆಂಗಳೂರು ಹಾಗೂ  ಮೈಸೂರು ನಡುವಿನ  ದಶಪಥ ರಸ್ತೆಯೂ ಒಂದು. 2024 ರ ಒಳಗೆ ದೇಶದಲ್ಲಿ ಸುಮಾರು 12500 ಕಿಲೋಮೀಟರ್ ಗಳಷ್ಟು ಉದ್ದದ ಕ್ಷಿಪ್ರಪಥಗಳು ಇರಲಿವೆ. ರಸ್ತೆಗಳು ಜನರ ಓಡಾಟಕ್ಕೆ, ವಸ್ತುಗಳ ಸಾಗಾಟಕ್ಕೆ, ಕೈಗಾರಿಕಾ ಕಚ್ಛಾ ವಸ್ತುಗಳ ಪೂರೈಕೆಗೆ ಹೆಚ್ಚು ಅನುಕೂಲವಾಗುತ್ತದೆ. ಕ್ಷಿಪ್ರ ಪಥಗಳು ಪ್ರಯಾಣದ ಸಮಯವನ್ನು ಕಡಿಮೆಗೊಳಿಸುತ್ತವೆ ಹಾಗೂ ದೇಶದ ಆರ್ಥಿಕ ಪ್ರಗತಿಯ ವೇಗವನ್ನು ಹೆಚ್ಚಿಸುತ್ತವೆ.    


ಭಾರತೀಯರ ಇನ್ನೊಂದು ಪ್ರಧಾನ ಪ್ರಯಾಣದ ಮಾಧ್ಯಮವಾದ ಭಾರತೀಯ ರೈಲ್ವೇಯಲ್ಲೂ ಮಹತ್ತರ ಬದಲಾವಣೆಯಾಗಿದೆ. ದೇಶದ 64,689 ಕಿಲೋಮೀಟರ್ ಉದ್ದದ ಬ್ರಾಡ್ ಗೇಜ್ ರೈಲ್ವೇ ಹಳಿಗಳಲ್ಲಿ 45881 (71%) ಕಿಲೋಮೀಟರ್ ಹಳಿಗಳು ವಿದ್ಯುದೀಕರಣಗೊಂಡಿವೆ. 2014 ನೇ ಇಸವಿಯವರೆಗೆ ದೇಶದಲ್ಲಿ 21,801 ಕಿಲೋಮೀಟರ್ ಬ್ರಾಡ್ ಗೇಜ್ ಹಳಿಗಳು ವಿದ್ಯುದೀಕರಣಗೊಂಡಿದ್ದು, ಕಳೆದ 7 ವರ್ಷಗಳಲ್ಲಿ ದಾಖಲೆಯ 24,080 ಕಿಲೋಮೀಟರ್ ಹಳಿಗಳು ವಿದ್ಯುದೀಕರಣಗೊಂಡಿವೆ. 2023 ರ ಒಳಗೆ ದೇಶದ ಎಲ್ಲಾ ಬ್ರಾಡ್ ಗೇಜ್ ಹಳಿಗಳು ವಿದ್ಯುತ್ ಸಂಪರ್ಕವನ್ನು ಹೊಂದಲಿದೆ. ವೇಗದ ರೈಲುಗಳಾದ  ತೇಜಸ್, ವಂದೇ ಭಾರತ್ ಎಕ್ಸ್ ಪ್ರೆಸ್ ಗಳು ಪರಿಚಯಿಸಲ್ಪಟ್ಟಿವೆ. ಈಶಾನ್ಯ ರಾಜ್ಯಗಳನ್ನು ಮೊದಲಬಾರಿಗೆ ಭಾರತೀಯ ರೈಲ್ವೇ ತಲುಪುತ್ತಿದೆ. ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಅಹಮ್ಮದಾಬಾದ್ ಹಾಗೂ ಮುಂಬೈ ನಡುವಿನ ಬುಲೆಟ್ ಟ್ರೈನ್ ಯೋಜನೆ ಕಾರ್ಯಗತವಾಗುತ್ತಿದೆ. ಈಗಾಗಲೇ ದೇಶದ 13 ನಗರಗಳಲ್ಲಿ ಮೆಟ್ರೋ ರೈಲುಗಳು ಓಡುತ್ತಿದ್ದು, 9 ನಗರಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. 4 ನಗರಗಳಲ್ಲಿ ಮೆಟ್ರೋ ಕಾಮಗಾರಿಗೆ ಅನುಮತಿ ದೊರೆತಿದೆ ಹಾಗೂ ಇನ್ನೂ 14 ನಗರಗಳು ಮೆಟ್ರೋ ರೈಲಿಗೆ ಪ್ರಸ್ತಾವನೆ ಸಲ್ಲಿಸಿವೆ. ದೇಶದಲ್ಲಿಂದು 137 ಪ್ರಯಾಣಿಕರ ವಿಮಾನ ನಿಲ್ದಾಣಗಳಿದ್ದು ಇವುಗಳಲ್ಲಿ 72 ನಿಲ್ದಾಣಗಳನ್ನು ಕಳೆದ 7 ವರ್ಷಗಳಲ್ಲಿ ನಿರ್ಮಿಸಲಾಗಿದೆ.                    

   

ಭಾರತವು ಹೂಡಿಕೆದಾರರ ಆಕರ್ಷಣೆಯ ತಾಣವಾಗಿ ಮೂಡಿಬರುತ್ತಿದೆ. ಇಲ್ಲಿ ಹೂಡಿಕೆ ಹಾಗೂ ವಹಿವಾಟು ನಡೆಸಲು ಬಹಳ ಅನುಕೂಲಕರವಾದ ವಾತಾವರಣವು ನಿರ್ಮಾಣವಾಗುತ್ತಿದ್ದು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ (ಉದ್ಯಮಸ್ನೇಹೀ ರಾಷ್ಟ್ರ) ಪಟ್ಟಿಯಲ್ಲಿ 142 ನೇ ಸ್ಥಾನದಲ್ಲಿದ್ದ ಭಾರತ 79 ಸ್ಥಾನಗಳಷ್ಟು ಮೇಲೇರಿ 63 ನೇ ಸ್ಥಾನಕ್ಕೆ ಬಂದಿದೆ. ಅತೀ ಹೆಚ್ಚು ನೇರ ವಿದೇಶೀ ಹೂಡಿಕೆಯನ್ನು ಪಡೆಯುವ ಟಾಪ್ 5 ದೇಶಗಳ ಪಟ್ಟಿಯಲ್ಲಿ ಭಾರತವು ಸ್ಥಾನ ಗಳಿಸಿದೆ. 2020-21 ರಲ್ಲಿ ಭಾರತವು 81.72 ಶತಕೋಟಿ ಡಾಲರ್ ಗಳ ವಿದೇಶೀ ಹೂಡಿಕೆಯನ್ನು ಆಕರ್ಷಿಸಿದೆ. ಭಾರತದ ವಿದೇಶೀ ವಿನಿಮಯ ಸಂಗ್ರಹವು ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡು 634.96 ಶತಕೋಟಿ ಡಾಲರ್ ಗಳಿಗೆ ಏರಿದೆ. ದೇಶದಲ್ಲಿ ಉದ್ಯಮಾವಕಾಶಗಳು ಹೆಚ್ಚಾಗಿದ್ದು ದೇಶದಲ್ಲಿ ಈಗ ಸುಮಾರು 53,000 ನವೋದ್ಯಮಗಳು (ಸ್ಟಾರ್ಟಪ್) ಹೊಸದಾಗಿ ಆರಂಭವಾಗಿವೆ. ಇವುಗಳಲ್ಲಿ 84 ಸ್ಟಾರ್ಟಪ್ ಗಳು ಯುನಿಕಾರ್ನ್ ಸ್ಟಾರ್ಟ್ ಅಪ್(ನೂರು ಕೋಟಿ ಡಾಲರ್ ಮೌಲ್ಯಕ್ಕಿಂತ ಹೆಚ್ಚು ಮೌಲ್ಯದ ನವೋದ್ಯಮ) ಗಳಾಗಿ ಬೆಳೆದು ನಿಂತಿವೆ. 2021-22 ರಲ್ಲಿ ಇದುವರೆಗೆ ಭಾರತೀಯ ಸ್ಟಾರ್ಟಪ್ ಗಳು 21 ಶತಕೋಟಿ ಡಾಲರ್‌ಗಳಷ್ಟು ವಿದೇಶೀ ಹೂಡಿಕೆಯನ್ನು ಪಡೆದಿವೆ.


ಭಾರತವು 5 ಟ್ರಿಲಿಯನ್ ಡಾಲರ್ ಗಳ ಆರ್ಥಿಕತೆಯನ್ನು ತಲುಪಲು ತನ್ನ ನಿರ್ಯಾತವನ್ನು ಹೆಚ್ಚಿಸಬೇಕಾಗಿದ್ದು ನಿರ್ಯಾತದ ಮೊತ್ತವು ವಾರ್ಷಿಕವಾಗಿ ಒಂದು ಟ್ರಿಲಿಯನ್ ಡಾಲರ್ ಗಳನ್ನು ತಲುಪಬೇಕು ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಇದಕ್ಕಾಗಿ ಭಾರತದಲ್ಲಿ ಉತ್ಪಾದನೆ ಹಾಗೂ ನಿರ್ಯಾತಕ್ಕೆ ಬಹಳ ಉತ್ತೇಜನವನ್ನು ನೀಡಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತದಲ್ಲೇ ವಸ್ತುಗಳನ್ನು ಉತ್ಪಾದಿಸಿ ವಿದೇಶಗಳಿಗೆ ನಿರ್ಯಾತ ಮಾಡುವ ಅವಕಾಶವನ್ನು ದೇಶೀಯ ಹಾಗೂ ವಿದೇಶೀ ಹೂಡಿಕೆದಾರರಿಗೆ ಕೊಡಲಾಗುತ್ತಿದೆ. ಉತ್ಪಾದನೆಗೆ ಪ್ರೋತ್ಸಾಹ ಕೊಡುವ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ ಐ/ ಉತ್ಪಾದನಾಧಾರಿತ ಪ್ರೋತ್ಸಾಹಧನ) ಯೋಜನೆಯನ್ನು ಸರಕಾರವು ಜಾರಿಗೊಳಿಸಿದೆ. ದೇಶೀಯ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿವೆ. ಈ ಯೋಜನೆಯಡಿಯಲ್ಲಿ ಆಪಲ್ ಹಾಗೂ ಸ್ಯಾಮ್ಸಂಗ್ ಮೊಬೈಲ್ ಉತ್ಪಾದಕ ಸಂಸ್ಥೆಗಳು ಈ ವರ್ಷ 5 ಶತಕೋಟಿ ಡಾಲರ್ (37000 ಕೋಟಿ ರುಪಾಯಿಗಳು) ಮೊತ್ತದ ಮೊಬೈಲ್ ಫೋನ್‌ಗಳನ್ನು ಭಾರತಲ್ಲೇ ಉತ್ಪಾದನೆ ಮಾಡಿ ವಿದೇಶಗಳಿಗೆ ನಿರ್ಯಾತ ಮಾಡಿವೆ. ಇಲೆಕ್ಟ್ರಾನಿಕ್ಸ್, ಅಟೋಮೊಬೈಲ್ಸ್, ಟೆಕ್ಸ್ ಟೈಲ್ಸ್, ಫಾರ್ಮಾಸ್ಯೂಟಿಕಲ್ಸ್, ಸೋಲಾರ್, ಆಧುನಿಕ ರಾಸಾಯನಿಕ ಬ್ಯಾಟರಿ, ಟೆಲಿಕಾಂ ಮತ್ತು ನೆಟ್ವರ್ಕ್ ಮೊದಲಾದ 10 ಕ್ಷೇತ್ರಗಳ ಉತ್ಪಾದನಾ ಚಟುವಟಿಕೆಗಳಿಗೆ ಉತ್ಪಾದನಾಧಾರಿತ ಸಹಾಯ ಧನವನ್ನು ಕೊಡಲು ಭಾರತ ಸರಕಾರವು 1.10 ಲಕ್ಷ ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದೆ. ಇದೀಗ ದೇಶದಲ್ಲಿ ಪಿಎಲ್‌ಐ ಯೋಜನೆಯಡಿಯಲ್ಲಿ ಸೆಮಿಕಂಡಕ್ಟರ್ ಹಾಗೂ ಚಿಪ್ ಗಳ ಉತ್ಪಾದನೆಗೆ ಪ್ರೋತ್ಸಾಹಧನವಾಗಿ 76,000 ಕೋಟಿ ರುಪಾಯಿಗಳನ್ನು ನೀಡಲು ಸರಕಾರವು ನಿರ್ಧರಿಸಿದೆ.


2021-22 ರ ಭಾರತದ ನಿರ್ಯಾತದ ಪ್ರಮಾಣವು ಸಾರ್ವಕಾಲಿಕ ಮಟ್ಟವನ್ನು ಮುಟ್ಟಿದೆ. ಈ ಆರ್ಥಿಕ ವರ್ಷದ ಮೊದಲ 9 ತಿಂಗಳುಗಳಲ್ಲಿ 300 ಶತಕೋಟಿ ಡಾಲರ್ ಗಳಷ್ಟು ಮೊತ್ತದ ಸರಕು ಮತ್ತು ಸೇವೆಗಳನ್ನು ನಿರ್ಯಾತ ಮಾಡಲಾಗಿದೆ. ಜನವರಿ 22 ರಿಂದ ಮಾರ್ಚ್ 22 ರ ವರೆಗಿನ 3 ತಿಂಗಳ ಅವಧಿಯಲ್ಲಿ ಇನ್ನೂ 100 ಶತಕೋಟಿ ಡಾಲರ್ ಪ್ರಮಾಣದ ನಿರ್ಯಾತ ನಡೆಯಲಿದ್ದು ಈ ವರ್ಷ ಒಟ್ಟಾಗಿ 400 ಶತಕೋಟಿ ಡಾಲರ್ ಗಳಷ್ತು ಮೌಲ್ಯದ  ನಿರ್ಯಾತವಾಗಲಿದೆ. ಈ ವರ್ಷದಲ್ಲಿ ಈಗಾಗಲೇ ಭಾರತದ ಐಟಿ ಕಂಪೆನಿಗಳು 148.3 ಶತಕೋಟಿ ಡಾಲರ್ ಗಳಷ್ಟು ಮೌಲ್ಯದ ಐಟಿ ಸೇವೆಗಳನ್ನು ರಫ್ತು ಮಾಡಿವೆ. ಇದು ಸೌದೀ ಅರೇಬಿಯಾಗೆ ವಾರ್ಷಿಕವಾಗಿ ತೈಲ ರಫ್ತುನಿಂದ ಲಭಿಸುತ್ತಿರುವ ಆದಾಯಕ್ಕಿಂತಲೂ ಹೆಚ್ಚು. ಭಾರತದಿಂದಾಗುತ್ತಿರುವ  ನಿರ್ಯಾತದ ಪ್ರಮಾಣ ಆಯಾತಕ್ಕಿಂತ ಹೆಚ್ಚಾಗಿದೆ. ಕೃಷಿ ಉತ್ಪಾದನಾ ವಸ್ತುಗಳ ಮೌಲ್ಯವರ್ಧನೆ ಹಾಗೂ ನಿರ್ಯಾತಕ್ಕೆ ಹೆಚ್ಚು ಪ್ರೋತ್ಸಾಹ ಕೊಡಲಾಗುತ್ತಿದೆ. ಸರಕಾರದ ಯೋಜನೆಗಳ ಫಲವಾಗಿ ರೈತರ ಆದಾಯವೂ ದ್ವಿಗುಣವಾಗುತ್ತಿದೆ. ಕರೋನಾ ಅಲೆಗಳ ದಾಳಿಯ ನಡುವೆಯೂ ದೇಶದ ಹಣದುಬ್ಬರ ನಿಯಂತ್ರಣದಲ್ಲಿದ್ದು 5% ದ ಆಸುಪಾಸಿನಲ್ಲಿದೆ. ಹೂಡಿಕೆ ಹಿಂಪಡೆತ, ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ನಗದೀಕರಣ, ಸರಕಾರ-ಖಾಸಗೀ ಸಹಭಾಗಿತ್ವ ಮೊದಲಾದ ನಡೆಗಳು ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸುತ್ತಿವೆ. 30 ವರ್ಷಗಳ ಮೊದಲು ಆರ್ಥಿಕತೆಯಲ್ಲಿ ಭಾರತಕ್ಕಿಂತ ಹಿಂದಿದ್ದ ಚೀನಾ ಈಗ ಜಾಗತಿಕವಾಗಿ ಎರಡನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು ಹೇಗೆ? ಆರ್ಥಿಕ ಸುಧಾರಣೆಗಳ ಫಲವಾಗಿ ಚೀನಾ ಸತತವಾಗಿ 9% ಅಭಿವೃದ್ಧಿ ದರವನ್ನು ಕಾಯ್ದುಕೊಳ್ಳುತ್ತಲೇ ಹೋಯಿತು. ಇದರ ಪರಿಣಾಮವಾಗಿ ಈಗ ಚೀನಾ ಬೃಹತ್‌ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿದೆ. ಈ ವರ್ಷ ಭಾರತವು ಸಾಧಿಸಿದ 9.2% ಅಭಿವೃದ್ಧಿ ದರವನ್ನು ಮುಂದಿನ ಕೆಲವು ವರ್ಷಗಳವರೆಗೆ ಕಾಯ್ದುಕೊಂಡರೆ ಭಾರತವು 2024-25 ರಲ್ಲಿ 5 ಟ್ರಿಲಿಯನ್ ಡಾಲರ್‌ಗಳ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುವುದು ಮಾತ್ರವಲ್ಲ, 2030 ರಲ್ಲಿ 10 ಟ್ರಿಲಿಯನ್ ಡಾಲರ್‌ಗಳ ಆರ್ಥಿಕ ಶಕ್ತಿಯಾಗಿ ಬೆಳೆದು ಜಾಗತಿಕವಾಗಿ 3ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ.

-ಗಣೇಶ್ ಭಟ್ ವಾರಣಾಸಿ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post