||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಲ್ಲನ್ನು ಮಾತ್ರವಲ್ಲ, ಹೃದಯದ ರೋಗ ಮತ್ತು ಪ್ರಮೇಹವನ್ನು ಕೂಡ ಕರಗಿಸಬಲ್ಲ "ಪಾಷಾಣಭೇದ" ಔಷಧೀಯ ಗಿಡ

ಕಲ್ಲನ್ನು ಮಾತ್ರವಲ್ಲ, ಹೃದಯದ ರೋಗ ಮತ್ತು ಪ್ರಮೇಹವನ್ನು ಕೂಡ ಕರಗಿಸಬಲ್ಲ "ಪಾಷಾಣಭೇದ" ಔಷಧೀಯ ಗಿಡ


ಆಯುರ್ವೇದದಲ್ಲಿ ಅಶ್ಮಂತಕ, ಪಾಷಾಣ ಭೇದ ಎಂದು ಹೆಸರಿಸಿದ್ದಾರೆ. ಪಾಷಾಣ ಎಂದರೆ ಕಲ್ಲು, ಭೇದ ಅಂದರೆ ಒಡೆದು ಹಾಕುವಂಥದ್ದು. ಇದು ಅದರ ಪ್ರಮುಖ ಕಾರ್ಯ ವಾದುದರಿಂದ, ಮತ್ತು ಅದಕ್ಕೋಸ್ಕರ ತಲೆತಲಾಂತರಗಳಿಂದ ಅನುಭವ ಮುಖೇನ ಬಳಕೆಯಾದುದರಿಂದಲೇ ಅದಕ್ಕೆ ಆ ಹೆಸರು. ಕನ್ನಡದಲ್ಲಿ ಬಿಳೇಸುಳಿ, ಇಂಗ್ಲಿಷ್ನಲ್ಲಿ mountain knot grass ಎಂದು ಹೆಸರು. Aerva lanata ಎಂಬುದು ಇದರ ಸಸ್ಯಶಾಸ್ತ್ರೀಯ ಹೆಸರು. 


ಗಿಡದ ಪರಿಚಯ

ಇದರ ಬೇರು ಕರ್ಪೂರದ ಪರಿಮಳ ಹೊಂದಿದೆ. herb ಎಂದರೆ ಕುರುಚಲು ಜಾತಿಯ ಸಣ್ಣ ಗಿಡ. ಹರಡಿಕೊಳ್ಳುವ ಸ್ವಭಾವವಿದ್ದರೂ  ಹೆಚ್ಚು ಎತ್ತರಕ್ಕೆ ಬೆಳೆಯದ ಗಿಡ. ಕಾಂಡವು ಸಪೂರ ವಾಗಿದ್ದು,   ಕವಲೊಡೆದು ವಿಶಾಲವಾಗಿ, ದೀರ್ಘವಾಗಿ ಹರಡಿಕೊಳ್ಳುವ ಗುಣ ಹೊಂದಿದೆ. ಕಾಂಡವು ನೇರವಾಗಿರಬಹುದು ಅಥವಾ ತುಸು  ಬಾಗಿರಬಹುದು. ಎಲೆಗಳು ದಂಡಿನ ಮೂಲಕ ಕಾಂಡಕ್ಕೆ ಸಂಪರ್ಕ ಹೊಂದಿರದೇ, ನೇರವಾಗಿ ಕಾಂಡಕ್ಕೆ ತಗಲಿಕೊಂಡಿರುತ್ತದೆ. ಎಲೆಗಳು ಸಾಧಾರಣ 13ರಿಂದ 38 ಮಿಲಿಮೀಟರ್ ಉದ್ದವಿರುತ್ತವೆ.  ಎಲೆಗಳು 2 ದಳಗಳನ್ನು ಹೊಂದಿರುತ್ತವೆ. ಎಲೆಗಳ ಬುಡಗಳು ತುಸು ಕೆಂಪಾಗಿದ್ದು, ತೆಳ್ಳಗಿನ ಪತ್ರವೃಂತದ ಮೂಲಕ ಬೆಳೆದು ಬರುತ್ತದೆ. ಹೂವುಗಳು ಎರಡರಿಂದ ಮೂರು ಹೂಗಳಿರುವ ಸಣ್ಣ ಗೊಂಚಲುಗಳ ರೂಪದಲ್ಲಿರುತ್ತವೆ.  


ಉಪಯೋಗಗಳು:

ಹುಳದ ಬಾಧೆಗೆ ಇದರ ಎಲೆಗಳ ಕಷಾಯವನ್ನು ಹೊಟ್ಟೆಗೆ ಸೇವನೆ ಮಾಡಬೇಕು. 

ಆದರೆ ಅತಿಸಾರವನ್ನು ಅಥವಾ ಭೇದಿಯನ್ನು ಶಮನಗೊಳಿಸುವದಕ್ಕೆ ಬೇರುಸಮೇತ ಇಡೀ ಗಿಡದ ಕಷಾಯವನ್ನು ಬಳಸಬೇಕು. 


ಆಯುರ್ವೇದದ ಭಾವ ಪ್ರಕಾಶ ಗ್ರಂಥವು ಔಷಧಗಳ ಗುಣಧರ್ಮ ಹಾಗೂ ಉಪಯೋಗಗಳ ಬಗ್ಗೆ ಬೆಳಕು ಚೆಲ್ಲುವ  ವ್ಯವಸ್ಥಿತ ಗ್ರಂಥ. ಅದರಲ್ಲಿ ಇದರ ಬಹುಮುಖಿಯಾದ ಉಪಯೋಗವನ್ನು ಉಲ್ಲೇಖಿಸಿದ್ದಾರೆ. ಶೀತಲ ಗುಣಹೊಂದಿರುವ, ರುಚಿಯಲ್ಲಿ ಕಷಾಯ -ತಿಕ್ತ ರಸ ಅಂದರೆ ಕಹಿ ಮತ್ತು ಚೊಗರು ಹೊಂದಿರುವ, ಇದನ್ನು  ಬಸ್ತಿಶೋಧನ ಎಂದಿದ್ದಾರೆ. ಅಂದರೆ ಮೂತ್ರಕೋಶಗಳನ್ನು ಶುದ್ಧೀಕರಣಗೊಳಿಸುವ ಪ್ರಧಾನ ಸ್ವಭಾವ ಇದಕ್ಕಿದೆ. ಅರ್ಥವೇನೆಂದರೆ, ಇಂದು ನಾವೆಲ್ಲ ಹೇಳುವ ಮೂತ್ರಕೋಶದ ಅಥವಾ ಮೂತ್ರನಾಳದ ಸೂಕ್ಷ್ಮಾಣು ಸೋಂಕು ಸಂದರ್ಭದಲ್ಲಿ ಇದು ಉಪಯೋಗವಾಗುತ್ತದೆ ಎಂದು ತಿಳಿದುಕೊಳ್ಳಬಹುದು. ಅರ್ಶ ಅಂದರೆ ಮೂಲವ್ಯಾಧಿಯಲ್ಲಿ, ಹೃದ್ರೋಗದಲ್ಲಿ, ಮೂತ್ರಪಿಂಡ ಅಥವಾ ಮೂತ್ರಕೋಶದ ಕಲ್ಲು ಇರುವ ಸಂದರ್ಭದಲ್ಲಿ, ಸ್ತ್ರೀಯರ ಯೋನಿ ರೋಗದಲ್ಲಿ, ಪ್ರಮೇಹ ಅಂದರೆ ಡಯಾಬಿಟಿಸ್ ರೋಗದಲ್ಲಿ, ಪ್ಲೀಹ (spleen) ಸಂಬಂಧಪಟ್ಟ ವ್ಯಾಧಿಗಳಲ್ಲಿ, ಶೂಲ ಅಂದರೆ ನೋವಿನ ಸಂದರ್ಭದಲ್ಲಿ, ವ್ರಣ ಅಂದರೆ ಹುಣ್ಣುಗಳ ಚಿಕಿತ್ಸೆಯಲ್ಲಿ ಇದನ್ನು ವಿಶೇಷವಾಗಿ ಬಳಸಬಹುದೆಂದು ಉಲ್ಲೇಖಿಸಲಾಗಿದೆ.  


ದನಕರುಗಳ ಮೇವನ್ನಾಗಿ ಇದನ್ನು ಬಳಸಲಾಗುತ್ತದೆ ಕೂಡ. ನಮ್ಮಲ್ಲಿ ಇದನ್ನು ಆಹಾರವನ್ನಾಗಿ ಬಳಸಿದರೂ ಕೂಡ ಅದರ ಔಷಧೀಯ ಜಾಡಮಾಲಿ (antioxidant) ಗುಣದ ಪ್ರಯೋಜನವನ್ನು ಹೊಂದಬಹುದು. 

ಸಕ್ಕರೆ ಕಾಯಿಲೆ ಇದ್ದವರಲ್ಲಿ, ಬೊಜ್ಜು ಇದ್ದಾಗ ಇದು ತೂಕವನ್ನು ಇಳಿಸುತ್ತದೆ. 

ಅಸ್ತಮಾ ಇದ್ದವರಲ್ಲಿ ಇದರ ಎಲೆಗಳ ಅಥವಾ ಇಡೀ ಗಿಡದ ಕಷಾಯವನ್ನು ಸೇವಿಸಿದರೆ ಉಪಶಮನ ಸಿಗುತ್ತದೆ. ಎಲೆಗಳನ್ನು ಕಾಂಡ ಸಮೇತ ನೆರಳಿನಲ್ಲಿ ಒಣಗಿಸಿ ಪುಡಿಮಾಡಿ ಚೂರ್ಣರೂಪದಲ್ಲಿ ಇಟ್ಟುಕೊಂಡರೆ   ಅಸ್ತಮ ಉಲ್ಬಣಿಸಿದ  ಸಂದರ್ಭದಲ್ಲಿ ಸೇವಿಸುವುದಕ್ಕೆ ಅನುಕೂಲವಾಗುತ್ತದೆ. 

ಅತಿಸಾರವಿದ್ದಾಗ ಸಾಧಾರಣ 20 ಗ್ರಾಂ ನಷ್ಟು ಎಲೆಗಳನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ 1 ಕಪ್ ನೀರು ಹಾಕಿ, ಕುದಿಸಿ ಕಾಲು ಭಾಗಕ್ಕೆ ಬತ್ತಿಸಿದ ನಂತರ 20ml ನಷ್ಟು ದಿನಕ್ಕೆ ಎರಡರಿಂದ ಮೂರು ಬಾರಿ ಹೊಟ್ಟೆಗೆ ಸೇವಿಸಬೇಕು. 

ಕಿಡ್ನಿಯಲ್ಲಿನ ಕಲ್ಲುಗಳಿಗೆ ಇದರ ಎಲೆ ಸಮೇತ ಕಷಾಯ ಮಾಡಿ ಸಾಧಾರಣ 20ರಿಂದ 30 ಎಂಎಲ್ ನಷ್ಟು  ಆಹಾರದ ಒಂದು ಗಂಟೆ ಮೊದಲು ಸೇವಿಸಬೇಕು. 

ಹೊಟ್ಟೆ ಹುಳದ ಬಾಧೆ ಇದ್ದಾಗ ಮೂರು ದಿನಗಳ ಕಾಲ ಖಾಲಿ ಹೊಟ್ಟೆಗೆ, ಇದರ ಎಲೆಗಳ ರಸ ಅಥವಾ ಚೂರ್ಣವನ್ನು ಸೇವಿಸಬೇಕು. 

ಲ್ಯೂಕೆಮಿಯ, ಪ್ರೊಸ್ಟೇಟ್, ಕರುಳು, ಹಾಗೂ ಗರ್ಭಾಶಯದ ಕುತ್ತಿಗೆಯ ಭಾಗದ ಕ್ಯಾನ್ಸರ್ ಗಳು ಬಾರದಂತೆ ತಡೆಗಟ್ಟಲು, ಇದನ್ನು ಸೇವಿಸಿದರೆ ಉತ್ತಮ.  

ಕಿಡ್ನಿಯಲ್ಲಿನ ಕಲ್ಲಿನ ಹೊರತಾಗಿಯೂ, ಇದು ರಕ್ತದಲ್ಲಿನ ಯೂರಿಯಾ ಹಾಗೂ ಕ್ರಿಯಾಟಿನಿನ್ ಅಂಶಗಳನ್ನು ಕಡಿಮೆ ಮಾಡುವ ಗುಣ ಹೊಂದಿರುವುದರಿಂದ ಮೂತ್ರಪಿಂಡಗಳ ರಕ್ಷಣೆಯ ದೃಷ್ಟಿಯಿಂದ ಇದನ್ನು ಸೇವಿಸಬಹುದು. 


ಆದರೆ ಇದಕ್ಕೆ ಗರ್ಭಪಾತ ಆಗುವಂತೆ ಮಾಡುವ ಗುಣ ಇರುವುದರಿಂದ ಗರ್ಭಿಣಿ ಸ್ತ್ರೀಯರು ಸೇವಿಸಬಾರದು. 

ಸಂತಾನೋತ್ಪತ್ತಿಯ ಅಂಗಗಳ ಮೇಲೆ ದಮನ ಕಾರ್ಯ ಮಾಡುವುದರಿಂದ, ಗರ್ಭವತಿಯರು ಆಗಬೇಕೆಂದು  ಪ್ರಯತ್ನಿಸುವ ಸ್ತ್ರೀಯರು ಕೂಡ ಇದನ್ನು ಸೇವಿಸಬಾರದು. 


ಒಟ್ಟಿನಲ್ಲಿ ಕಾಯಿಲೆ ಇಲ್ಲದಿದ್ದರೂ ಕೂಡ, ಆರೋಗ್ಯ ದೃಷ್ಟಿಯಿಂದ ಇದನ್ನು ಚಟ್ನಿಯ ರೂಪದಲ್ಲಿ, ತಂಬುಳಿಯ ರೂಪದಲ್ಲಿ ಸೇವನೆ ಮಾಡಿದರೆ ಆರೋಗ್ಯ ದೃಷ್ಟಿಯಿಂದ ಲಾಭವಂತೂ ಖಂಡಿತ. ಅಲ್ಪಸ್ವಲ್ಪ ನೀರು ಲಭ್ಯವಿರುವ ಮನೆಯ ಅಂಗಳದ ಬದಿಗಳಲ್ಲಿ ಇದನ್ನು ನೆಟ್ಟು ಬೆಳೆಸಬಹುದು. ಹೆಚ್ಚಿಗೆ ಇನ್ನೇನು ಹೇಳಲಿ? ನೆಟ್ಟರೆ ಅದು ಅದರಷ್ಟಕ್ಕೆ ಬೆಳೆಯುತ್ತದೆ! ಆಮೇಲೆ ತಿಂಗಳಲ್ಲಿ ಕೆಲವು ದಿನ ಇದು ನಿಮ್ಮ ಆಹಾರದ ಭಾಗವಾಗಬಹುದು. 


-ಡಾ. ಆರ್.ಪಿ.ಬಂಗಾರಡ್ಕ. M. S. (Ayu) 

ಆಯುರ್ವೇದ ತಜ್ಞ ವೈದ್ಯರು, ಪ್ರಸಾದಿನೀ ಆಯುರ್ನಿಕೇತನ  

ಆಯುರ್ವೇದ ಆಸ್ಪತ್ರೆ, ನರಿಮೊಗರು, ಪುತ್ತೂರು. 

ಅಸಿಸ್ಟೆಂಟ್ ಪ್ರೊಫೆಸರ್,  ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ. 

rpbangaradka@gmail.com

mob:8904474122

website:www.prasadini.com

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post