|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಉರಿಮಜಲು ರಾಮ ಭಟ್‌ರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಉರಿಮಜಲು ರಾಮ ಭಟ್‌ರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

 

ಮೃತ್ಯುಂಜಯ ಭಾರತದಲ್ಲಿ ಅದ್ವಿತೀಯ ಸಾಧಕರು ಮತ್ತೆ ಮತ್ತೆ ಜನ್ಮವೆತ್ತಿ ಬರುತ್ತಾರೆ: ಡಾ. ಕಲ್ಲಡ್ಕ ಪ್ರಭಾಕರ ಭಟ್


ಪುತ್ತೂರು ಡಿ.9: ಕಳೆದ ನಲ್ವತ್ತೆಂಟು ಗಂಟೆಗಳಲ್ಲಿ ಇಬ್ಬರು ದಿಗ್ಗಜರನ್ನು ನಾವು ಕಳೆದುಕೊಂಡಿದ್ದೇವೆ. ಒಬ್ಬರು ಸಮರ್ಥ ಸಮಾಜದ ನಿರ್ಮಾಣಕ್ಕೆ ಶ್ರಮವಹಿಸಿದ ಉರಿಮಜಲು ರಾಮಭಟ್ಟರು, ಮತ್ತೊಬ್ಬರು ಭಾರತೀಯ ಸೇನೆಯಲ್ಲಿ ಅಮೂಲಾಗ್ರ ಪರಿವರ್ತನೆಗೆ ಕಾರಣೀಭೂತರಾದ ಜ. ಬಿಪಿನ್ ರಾವತ್. ಇವರಿಬ್ಬರ ಅಗಲಿಕೆಯು ಸಮಾಜಕ್ಕೆ ತುಂಬಲಾಗದ ನಷ್ಟ. ಆದರೆ ಮೃತ್ಯುಂಜಯ ಭಾರತದಲ್ಲಿ ಹಿರಿಯರ ಪ್ರೇರಣೆಯ ಹಾದಿಯನ್ನು ಅನುಸರಿಸಿ ಸರ್ವ ಸಮರ್ಪಿತ ವ್ಯಕ್ತಿಗಳು ಜನಿಸುತ್ತಲೇ ಇರುತ್ತಾರೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಕಾಲೇಜಿನ ಆವರಣದ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆದ 'ಉರಿಮಜಲು ಕೆ. ರಾಮ ಭಟ್ಟರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ'ದಲ್ಲಿ ಗುರುವಾರ ಮಾತನಾಡಿದರು.


ಉರಿಮಜಲು ರಾಮ ಭಟ್ಟರ ಒಳಗಡೆ ಅವಿತಿದ್ದ ಓರ್ವ ಕವಿ, ಸಾಹಿತಿ, ಮಾನವತಾವಾದಿ, ಪ್ರಾಮಾಣಿಕ ರಾಜಕಾರಣಿ, ಸಹಕಾರಿ, ಹಿಂದೂ ಬೇರೆ ಬೇರೆ ಸಂದರ್ಭದಲ್ಲಿ ಪ್ರಕಟಗೊಂಡ ಕಾರಣದಿಂದ ಸಮಾಜಕ್ಕೆ ವಿವಿಧ ಕ್ಷೇತ್ರದಲ್ಲಿ ಸಹಕಾರಿಯಾಗಿದೆ. ಪ್ರಮುಖವಾಗಿ ರಾಷ್ಟ್ರವಿರೋಧಿ ಶಕ್ತಿಗಳೆಲ್ಲೆಲ್ಲಿ ನೆಲೆಸಿವೆಯೋ, ಅಲ್ಲಲ್ಲಿ ರಾಷ್ಟ್ರೀಯತೆಯನ್ನು ಪರಿಚಯಿಸುವ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಬೇಕೆನ್ನುವ ಅವರ ಉದಾತ್ತ ಚಿಂತನೆ ಸದಾ ಸ್ಮರಣೀಯ. ಅವರ ಈ ಚಿಂತನೆಯ ಆಧಾರದ ಮೇಲೆ ಬೆಳೆದ ವಿವೇಕಾನಂದ ಸಂಸ್ಥೆ ಇಂದು ವಿದ್ಯಾಭಾರತಿಯ ಬಹುದೊಡ್ಡ ಭಾಗವಾಗಿದೆ ಎಂದು ನುಡಿದರು.


ಸರ್ವ ಸಾಮಾನ್ಯರಿಗಾಗಿ ಅವರ ಬದುಕು ಸಮರ್ಪಿತವಾಗಿತ್ತು. ರಾಷ್ಟ್ರೀಯತೆ ಮತ್ತು ಹಿಂದುತ್ವ ಅವರ ಜೊತೆಯಲ್ಲಿದ್ದವರಿಗೆ ಸಹಜವಾಗಿಯೇ ರವಾನೆಯಾಗುತ್ತಿತ್ತು. ಸಕಲ ಕಷ್ಟಗಳನ್ನು ಎದುರಿಸಿ, ವಿಚಾರಗಳನ್ನು ಸಮಾಜದ ಮುಂದಿಟ್ಟಾಗ ಅದು ಫಲನೀಡುತ್ತದೆ ಎನ್ನುವುದನ್ನು ಅರಿತು ತಪಸ್ವಿಯಂತೆ ದುಡಿದರು. ಅವರ ವ್ಯಕ್ತಿತ್ವದ ಮೂಲಕ ಸರ್ವ ಸಮರ್ಪಿತ ಜನರನ್ನು ತಯಾರು ಮಾಡುವಲ್ಲಿ ಅದ್ವಿತೀಯ ಸಾಧನೆ ಮಾಡಿದವರು ರಾಮಭಟ್ಟರು. ಎಡವಿದರೂ ಸರಿಮಾಡಿಕೊಂಡು ಹೋಗುವ ಧೀಮಂತಿಕೆಯಿದ್ದ ಓರ್ವ ಮಹಾನ್ ಚೇತನ ನಮ್ಮ ಮೇಲೆ ವಿಶ್ವಾಸವಿಟ್ಟು, ಜವಾಬ್ದಾರಿಯನ್ನು ಹಸ್ತಾಂತರಿ ಹೋಗಿದ್ದಾರೆ ಎಂದು ಅಭಿಪ್ರಾಯಪಟ್ಟರು.


ಭಾರತೀಯ ಸೇನೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುವಲ್ಲಿ ಮಹತ್ತರದ ಪಾತ್ರವಹಿಸಿದವರು ಜ. ಬಿಪಿನ್ ರಾವತ್. ಸೇನೆಗಾಗಿ ಮತ್ತು ಸೈನಿಕರಿಗಾಗಿ ಅವರ ಕೊಡುಗೆ ಅಪಾರ. 370 ವಿಧಿ ರದ್ಧತಿಯ ಸಂದರ್ಭದಲ್ಲಿ ಕಾಶ್ಮೀರವನ್ನು ನಿಯಂತ್ರಿಸುವಲ್ಲಿ, ಈ ರಾಷ್ಟ್ರದಲ್ಲಾದ ಸೇನಾ ಸರ್ಜಿಕಲ್ ಸ್ಟ್ರೈಕ್ ಗಳ ನೇತೃತ್ವವಹಿಸಿದ ಅತ್ಯದ್ಭುತ ಸೇನಾನಿಯಾಗಿದ್ದರು ಜ. ಬಿಪಿನ್ ರಾವತ್. ಅವರ ಪತ್ನಿ ಮಧುಲಿಕಾ ರಾವತ್ ಕೂಡಾ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿದ್ದವರು. ಹೆಲಿಕಾಪ್ಟರ್ ಅವಘಡದಲ್ಲಿ ಸಮಾಜಕ್ಕಾಗಿಯೇ ಬದುಕಿದ್ದ ದಂಪತಿ ಮತ್ತು ಸೇನಾ ನಾಯಕರನ್ನು ಕಳೆದುಕೊಂಡಿದ್ದು ತುಂಬಲಾರದ ನಷ್ಟ ಎಂದರು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಪೂರ್ವಾಧ್ಯಕ್ಷ ಮತ್ತು ಮೈತ್ರೇಯಿ ಗುರುಕುಲದ ಅಧ್ಯಕ್ಷ ಎಸ್. ಆರ್. ರಂಗಮೂರ್ತಿಯವರು ಮಾತನಾಡಿ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರನಿರ್ಮಾಣ ಸಾಧ್ಯ ಎನ್ನುವುದನ್ನು ತಮ್ಮ ಬದುಕಿನ ಪರಿಶ್ರಮದ ಮೂಲಕ ಉರಿಮಜಲು ರಾಮಭಟ್ಟರು ತಿಳಿಸಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘ ವಿಸ್ತಾರವಾಗಿ ಬೆಳೆಯುವುದಕೆತ್ತು ಯಾವುದೇ ಗೊಂದಲವಿಲ್ಲದೆ ಸಮರ್ಥವಾಗಿ ನಡೆಯುತ್ತಿರುವ ಹಿಂದೆ ರಾಮಭಟ್ಟರ ಶ್ರಮವಿದೆ. ಕ್ಯಾಂಪ್ಕೋ ರಾಷ್ಟ್ರದ ಹೆಮ್ಮೆಯ ಸಹಕಾರಿ ಸಂಸ್ಥೆಯಾಗುವುದಕ್ಕೆ ಭದ್ರಬುನಾದಿ ಹಾಕಿದವರು ರಾಮಭಟ್ಟರು. ಓರ್ವ ಸ್ವಯಂಸೇವಕರಾಗಿ ತಮ್ಮ ವ್ಯಕ್ತಿತ್ವದ ಮೂಲಕ ನೂರಾರು ಜನರನ್ನು ಸಮಾಜದ ಮುಖ್ಯಭೂಮಿಕೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಆದರ್ಶಗಳನ್ನು ಮಾತನಾಡುವುದು ಸುಲಭ, ಆದರೆ ರಾಮಭಟ್ಟರಂತೆ ಹೇಳುವ ಮಾತುಗಳನ್ನು ಅಳವಡಿಸಿಕೊಂಡು ಜೀವನಪೂರ್ತಿ ಅದರ ಉದ್ದೇಶಕ್ಕಾಗಿ ಬದುಕುವಂತವರು ತುಂಬಾ ವಿರಳ. ಈ ರಾಷ್ಟ್ರದ ಮೂಲ ಸತ್ವವನ್ನು ಜಾಗೃತಗೊಳಿಸಿ, ವೈಚಾರಿಕ ಬದ್ಧತೆಯ ಜೊತೆಗೆ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಸಾಧ್ಯವೆನ್ನುವುದನ್ನು ತಮ್ಮ ಕಾರ್ಯದ ಮೂಲಕ ಸಮಾಜಕ್ಕೆ ಮಾದರಿಯಾದವರು ರಾಮಭಟ್ಟರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನಸಂಘದ ಅಗ್ರಗಣ್ಯ ನಾಯಕರಾಗಿದ್ದರು. ತಮ್ಮ ವಿಚಾರದ ಪರಿಚಯಕ್ಕಾಗಿ ಚುನಾವಣೆಯಲ್ಲಿ ಸೋಲು ಖಚಿತ ಎನ್ನುವುದು ತಿಳಿದಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಬಾಳಿ ಬೆಳಗಿದ ಬೆಳಕು ನಮಗೆಲ್ಲ ದಾರಿದೀಪವಾಗಿದೆ ಎಂದು ನುಡಿದರು.


ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಮಾತನಾಡಿ ಶಿಕ್ಷಣ ಸಾಂವಿಧಾನಿಕ ಹಕ್ಕು ಮತ್ತು ಶಿಕ್ಷಣವೊಂದಿಂದಲೇ ಸಕಲ ಬದಲಾವಣೆಗಳು ಸಾಧ್ಯ ಎನ್ನುವುದನ್ನು ಅರಿತು ಅದಕ್ಕಾಗಿ ಶ್ರಮವಹಿಸಿದವರು ರಾಮಭಟ್ಟರು. ಅವರ ಕಾರಣದಿಂದಾಗಿ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಿದೆ. ನಿಷ್ಠೆ, ಪ್ರಾಮಾಣಿಕತೆ, ಶಿಸ್ತಿಗೆ ಅನ್ವರ್ಥದಂತಿದ್ದರು ರಾಮಭಟ್ಟರು. ರಾಮಭಟ್ಟರಂತಹ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ 'ವಿಕಸನ'ದ ವಿಶೇಷ ಸಂಚಿಕೆಯನ್ನು ಹೊರತರುವ ಮೂಲಕ ರಾಮಭಟ್ಟರಿಗೆ ಅಕ್ಷರನಮನವನ್ನು ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ವಿಕಸನ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.)ದ ಅಂಗ ಸಂಸ್ಥೆಗಳ ಆಡಳಿತ ಸಮಿತಿಯ ಸದಸ್ಯರುಗಳು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಂಸ್ಥೆಯ ಹಿತೈಶಿಗಳು, ಹಿರಿಯ ವಿದ್ಯಾರ್ಥಿಗಳು, ಉರಿಮಜಲು ರಾಮಭಟ್ಟ ಅವರ ಅಭಿಮಾನಿಗಳು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣಭಟ್ ಪ್ರಸ್ತಾವನೆಗೈದು ಸ್ವಾಗತಿಸಿದರು. ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ರಾಮಭಟ್ಟರು ರಚಿಸಿದ 'ಕಲ್ಲು ಕಲ್ಲನು ಕಟ್ಟಿ ಗೀತೆ'ಯನ್ನು ಹಾಡಿ ಭಾವನಮನ ಸಲ್ಲಿಸಿದರು. ವಿವೇಕಾನಂದ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ವಂದಿಸಿದರು. ವಿವೇಕಾನಂದ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್. ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم