ಮಂಜೇಶ್ವರ: ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಹಿರಿಯ ಸಾಹಿತಿ, ವೈದ್ಯ ಮತ್ತು ಯಕ್ಷಗಾನದ ಮೇರು ಕಲಾವಿದ ಡಾ. ರಮಾನಂದ ಬನಾರಿ ಅವರು ಸದ್ದಿಲ್ಲದೇ ಗಡಿನಾಡಿನಲ್ಲಿ ಕನ್ನಡ ಸಾಹಿತ್ಯ ಸೇವೆ ಸುಮಾರು 5 ದಶಕಗಳಿಂದ ಮಾಡುತ್ತಿದ್ದಾರೆ. ತಾಯಿ ಭುವನೇಶ್ವರಿಯ ಸೇವೆ ಮಾಡುವ ಅವರು ಗಡಿನಾಡಿನ ಸಾಹಿತ್ಯ ಕ್ಷೇತ್ರದ ನಿಜವಾದ ಭೀಷ್ಮ ಪಿತಾಮಹ.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನಂತರ ಗಡಿನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಡಾ. ಬನಾರಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಮನೆಗೆ ಭೇಟಿ ನೀಡಿ ಗಡಿನಾಡಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಗಡಿನಾಡಿನ ಕನ್ನಡಿಗರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಡಾ. ಬನಾರಿ ಅವರ ಸೇವೆ ಮತ್ತು ಮಾರ್ಗದರ್ಶನ ಪಡೆದುಕೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಅಭಿಪ್ರಾಯ ಪಟ್ಟರು.
ದಿನಾಂಕ:22-12-2021 ರಂದು ಮಂಜೇಶ್ವರದ ಡಾ. ರಮಾನಂದ ಬನಾರಿ ಅವರ ಮನೆಗೆ ಭೇಟಿ ನೀಡಿ ಅವರ ಜೊತೆ ಕನ್ನಡಿಗರ ಸಮಸ್ಯೆಗಳ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಡಾ. ಮುರಲೀ ಮೋಹನ ಚೂಂತಾರು, ಡಾ. ಮಂಜುನಾಥ ರೇವಣಕರ್ ಶ್ರೀ ದಯಾನಂದ ಪೆರಾಜೆ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ