|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಿ.23: ಡಾ.ಸತ್ಯಮಂಗಲ ಮಹಾದೇವರ 'ಕಂಗಳ ಬೆಳಗು' ಸಂಶೋಧನಾ ಕೃತಿ ಲೋಕಾರ್ಪಣೆ

ಡಿ.23: ಡಾ.ಸತ್ಯಮಂಗಲ ಮಹಾದೇವರ 'ಕಂಗಳ ಬೆಳಗು' ಸಂಶೋಧನಾ ಕೃತಿ ಲೋಕಾರ್ಪಣೆ

ಶೇಷಾದ್ರಿಪುರಂ: ಇಲ್ಲಿನ ಸಂಜೆ ಪದವಿ ಕಾಲೇಜು, ಗಾಂಧಿ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಅನ್ನಪೂರ್ಣ ಪ್ರಕಾಶನ ಸಹಯೋಗದಲ್ಲಿ ಕವಿ, ಲೇಖಕ, ಸಂಶೋಧಕ ಡಾ. ಸತ್ಯಮಂಗಲ ಮಹಾದೇವ ಅವರು ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವದ ಸ್ವರೂಪ-ತೌಲನಿಕ ಅಧ್ಯಯನ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನೆಯ ಸಾರರೂಪದ ಕೃತಿ 'ಕಂಗಳ ಬೆಳಗು' ಈ ಕೃತಿಯ ಲೋಕಾರ್ಪಣೆಯನ್ನು ಗಾಂಧಿಭವನದ ಕಸ್ತೂರಬಾ ಸಭಾಂಗಣದಲ್ಲಿ ಡಿಸೆಂಬರ್ 23, ಗುರುವಾರ ಸಂಜೆ 6.00 ಘಂಟೆಗೆ ಆಯೋಜಿಸಲಾಗಿದೆ.


ಹಿರಿಯ ವಿದ್ವಾಂಸರು ಹಾಗೂ ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ನಿಕಟಪೂರ್ವ ಅಧ್ಯಕ್ಷರಾದ ಡಾ.ಶ್ಯಾಮಸುಂದರ ಬಿದರಕುಂದಿ ಅವರು 'ಕಂಗಳ ಬೆಳಗು' ಕೃತಿಯ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ವಹಿಸಲಿದ್ದಾರೆ.


ಗಾಂಧೀ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾದ ಜೀರಿಗೆ ಲೋಕೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಸಿದ್ಧ ಅಂಕಣಕಾರರು, ವಿಮರ್ಶಕರೂ ಆದ ಡಾ.ಟಿ.ಎನ್.ವಾಸುದೇವ ಮೂರ್ತಿ ಅವರು ಕೃತಿ ಪರಿಚಯ ನಡೆಸಿಕೊಡಲಿದ್ದಾರೆ. ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಎಸ್.ಸತೀಶ್ ಹಾಗೂ ಕೃತಿಯ ಲೇಖಕರಾದ ಸತ್ಯಮಂಗಲ ಮಹಾದೇವರವರು ಉಪಸ್ಥಿತರಿರುತ್ತಾರೆ ಎಂದು ಅನ್ನಪೂರ್ಣ ಪ್ರಕಾಶನದ ಸುರೇಶ್ ಬಿ.ಕೆ.ತಿಳಿಸಿರುತ್ತಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಡಾ.ಸತ್ಯಮಂಗಲ ಮಹಾದೇವ


ಇವರು ಮೂಲತಃ ತುಮಕೂರು ಜಿಲ್ಲೆಯ ಸತ್ಯಮಂಗಲದವರು ಬಟ್ಟೆ ಮತ್ತು ಬಳೆ ಮಾರಾಟ ಮಾಡುವ ರಾಜಣ್ಣ ಮತ್ತು ಜಯಮ್ಮ ನವರ ಎರಡನೇ ಮಗನಾಗಿ 1983 ರಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸತ್ಯಮಂಗಲದಲ್ಲಿ ಪಡೆದರು, ಪದವಿ ಶಿಕ್ಷಣವನ್ನು ತುಮಕೂರಿನಲ್ಲಿ ಪೂರೈಸಿದರು.


ಬೆಂಗಳೂರು ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2020 ರಲ್ಲಿ "ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವ" ಎಂಬ ಪ್ರೌಢ ಪ್ರಬಂಧಕ್ಕೆ ಪ್ರತಿಷ್ಟಿತ ರೇವಾ ವಿಶ್ವವಿದ್ಯಾಲಯವು ಪಿಎಚ್.ಡಿ.ಪದವಿ ನೀಡಿದೆ.


ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿ. ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರತಿಭಾವಂತ ಪ್ರಾಧ್ಯಾಪಕ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ಯುವ ಬರಹಗಾರರ ಸಮ್ಮೇಳನಗಳಲ್ಲಿ ಕನ್ನಡವನ್ನು ಪ್ರತಿನಿಧಿಸಿ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯ ವಾಚನ ಮಾಡಿ ಕನ್ನಡದ ಹಿರಿಮೆಯನ್ನು ಪಸರಿಸಿದ್ದಾರೆ.


ಈವರೆಗೆ 11 ಕೃತಿಗಳನ್ನು ರಚಿಸಿದ್ದಾರೆ. ಇವರ 'ಯಾರ ಹಂಗಿಲ್ಲ ಬೀಸುವ ಗಾಳಿಗೆ' ಕಾವ್ಯ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವೂ ಸೇರಿದಂತೆ ವರ್ಧಮಾನ ಯುವ ಪುರಸ್ಕಾರ, ಶಾ ಬಾಲೂರಾವ್ ಯುವ ಪುರಸ್ಕಾರ, .ಜಿ.ಎಸ್.ಶಿವರುದ್ರಪ್ಪ ಕಾವ್ಯ ಪುರಸ್ಕಾರ ಸೇರಿದಂತೆ ರಾಜ್ಯಮಟ್ಟದ ಒಟ್ಟು 7 ಪ್ರಶಸ್ತಿಗಳು ಒಂದೇ ಕಾವ್ಯ ಕೃತಿಗೆ ಪಡೆದುಕೊಂಡ ಹಿರಿಮೆ ಇವರದು.


2019 ರಲ್ಲಿ ಲೋಕಾರ್ಪಣೆಯಾದ ಪಂಚವರ್ಣದ ಹಂಸ ಕೃತಿಗೆ 2019 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲ್ಬರ್ಗ ಜಿಲ್ಲೆಯ ಅಮ್ಮ ಪ್ರಶಸ್ತಿ, ಸಂವಹನ ಸಿರಿ ಪ್ರಶಸ್ತಿ ಸೇರಿ ಒಟ್ಟು ಮೂರು ರಾಜ್ಯಮಟ್ಟದ ಪ್ರಶಸ್ತಿ ಸಂದಿರುವುದು ಸಾಹಿತ್ಯ ಕೀರ್ತಿಯ ಮುಕುಟಕ್ಕೆ ಮತ್ತೊಂದು ಗರಿ.


ಗಾಳಿಗಂಧ, ರೆಕ್ಕೆಗಳೊಡೆದಾವೋ ಮುಗಿಲಿಗೆ ಇವು ವಿಮರ್ಶಾ ಕೃತಿಗಳು. ಕಿರಿಯರು ಕಂಡ ಗಾಂಧಿ, ಕಣ್ಣ ಕಾಡಿಗೆ ಬೆಳಕು, ದಲಿತ ಸಾಹಿತ್ಯ ಸಂಪುಟ ವಿಮರ್ಶೆ, ಎಚ್.ಎಸ್.ಕೆ ಕನ್ನಡ ಪ್ರಜ್ಞೆ ಇವರ ಸಂಪಾದಿತ ಕೃತಿಗಳು. 'ಕಂಗಳ ಬೆಳಗು' ಇವರ ಸಂಶೋಧನಾ ಕೃತಿ. ಆಕಾಶವಾಣಿ, ದೂರದರ್ಶನ, ಪ್ರಜಾವಾಣಿ ಹೀಗೆ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಮುದ್ರಣ ಮತ್ತು ದೃಶ್ಯಮಾಧ್ಯಮಗಳಲ್ಲಿ ಇವರ ಕವನವಾಚನ, ಸಂಶೋಧನಾ ಪ್ರಬಂಧಗಳು ಸೇರಿದಂತೆ ಆನ್ಲೈನ್ ಯುಟ್ಯೂಬ್ ಗಳಲ್ಲಿ ಇವರ ಸಂದರ್ಶನಗಳು ಪ್ರಕಟಗೊಂಡಿವೆ. ಗುಲ್ಬರ್ಗ ವಿಶ್ವವಿದ್ಯಾಲಯವು ಬಿ.ಎ ಐಚ್ಚಿಕ ಕನ್ನಡ ವಿದ್ಯಾರ್ಥಿಗಳಿಗೆ ಇವರ ಪದ್ಯಗಳನ್ನು ಪಠ್ಯವಾಗಿ ಇರಿಸಿದೆ.


ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳ ಮತ್ತು ಖಾಸಗೀ ಕನ್ನಡ ಸಂಘ ಸಂಸ್ಥೆಗಳ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಸೋಪಜ್ಞತೆಯ ಕಾಣಿಕೆಯನ್ನು ಕನ್ನಡ ನಾಡು ನುಡಿಗೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಇವರು ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು ಬೆಂಗಳೂರು -20 ಇಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹಾಗೂ ಗಾಂಧೀ ಶಾಂತಿ ಪ್ರತಿಷ್ಠಾನ ಬೆಂಗಳೂರು ಇಲ್ಲಿ ಗೌರವ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.


'ಕಂಗಳ ಬೆಳಗು ಕೃತಿಯು ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವದ ಸ್ವರೂಪವನ್ನು ತೌಲನಿಕವಾಗಿ ಅಧ್ಯಯನ ನಡೆಸಿದ ಸಂಶೋಧನಾ ಕೃತಿಯಾಗಿದೆ. ನವೋದಯ ಕನ್ನಡ ಕಾವ್ಯ ಸಂದರ್ಭದಲ್ಲಿ ಅನುಭಾವದ ನೆಲೆಗಳನ್ನು ತಮ್ಮ ಕಾವ್ಯಗಳಲ್ಲಿ ಮುದಿಸಿದವರು ಮತ್ತು ತಮ್ಮ ಬದುಕನ್ನು ಅನುಭವದ ನೆಲೆಗೆ ಶೃತಿಗೊಳಿಸಿಕೊಂಡ ಇಬ್ಬರು ಕವಿಗಳೆಂದರೆ ಬೇಂದ್ರೆ ಮತ್ತು ಮಧುರಚೆನ್ನರು.


ಭವ-ಭಾವ-ಅನುಭ-ಅನುಭಾವ: ಇದು ಬೇಂದ್ರೆಯವರ ಅನುಭಾವವು ಬೆಳಗು ಪದ್ಯದ ಮೂಲಕ ಅನಾವರಣಗೊಳ್ಳುವ ಆತ್ಮಾನಂದದ ಸ್ಥಿತಿಯ ಅನುಭಾವ ಸ್ವಾನುಭಾವವನ್ನು ಸ್ವಭಾವೋಕ್ತಿ ಮಾಡಿ ಬರೆಯುವ, ಶಜ ಬದುಕಿನಲ್ಲಿ ಕಂಡುಕೊಂಡ ವಿಶ್ವಚಾಲಕ ಶಕ್ತಿಯ ಸತ್ವಯುತ ಚಿಂತನೆಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಜಗತ್ತಿನ ಎಲ್ಲಾ ಅನುಭಾವಿಗಳ ವಿಚಾರಗಳೊಂದಿಗೆ ತನ್ನ ಆಲೋಚನೆಗಳನ್ನು ಹೋಲಿಸಿ ನೋಡಿ ಕೊನೆಗೆ ಶ್ರೀ ಅರವಿಂದರ ವಿಚಾರಗಳ ಜೊತೆ ಹೋಲಿಸಿ ತನ್ನ ಅನುಭಾವದ ತನ್ಮಯತೆಗೆ ತೆರೆದುಕೊಳ್ಳುವ ಮಧುರಚೆನ್ನರ ಅನುಭಾವದ ನೆಲೆ ಆತ್ಮಶೋಧ.


ಇಬ್ಬರೂ ಕವಿಗಳು ಶ್ರೀ ಅರವಿಂದರನ್ನು ಗುರುಗಳೆಂದು ಭಾವಿಸಿದ್ದರು. ತಮ್ಮ ವಿಚಾರಗಳ ಚಿಂತನೆಯಲ್ಲಿ ಭಿನ್ನತೆಯಿದ್ದರೂ ಗುರಿ ಒಂದೇ ಅನುಭಾವದ ಶೋಧವಾಗಿತ್ತು. ಇಂತಹ ಅನುಭಾವದ ವಿಚಾರಗಳನ್ನು ಇಬ್ಬರೂ ಕವಿಗಳ ಕಾವ್ಯಗಳ ಹಿನ್ನೆಲೆಯಲ್ಲಿ ಚರ್ಚಿಸಿ, ವಿಶ್ಲೇಷಿಸಿ ಕ್ಷೇತ್ರಕಾರ್ಯ ನಡೆಸಿ ಕಂಡುಕೊಂಡ ಸಾರರೂಪವಾದ ಸಂಶೋಧನಾ ಕೃತಿ 'ಕಂಗಳ ಬೆಳಗು'.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post