ಸಾಮಾನ್ಯವಾಗಿ ಗಣಿತ ಎಂದರೆ ಎಲ್ಲರಿಗೂ ಕಬ್ಬಿಣದ ಕಡಲೆಕಾಯಿ ಎನ್ನಬಹುದು. ಇನ್ನೂ ಕೆಲವರಿಗೆ ಅದೇ ತಮ್ಮ ಫೇವರೆಟ್ ಸಬ್ಜೆಕ್ಟ್ ಕೂಡ ಆಗಿರಬಹುದು. ಅದೇನೇ ಆದ್ರೂ ಈ ವಿಷಯದಲ್ಲಿ ತಿಂದಷ್ಟು ಪೆಟ್ಟು ಬಾಕಿ ವಿಷಯದಲ್ಲಿ ತಿಂದಿಲ್ಲ ಅನ್ನೋದು ಮಾತ್ರ ಸತ್ಯ ಅಲ್ವಾ....
ಇದ್ದಕ್ಕಿದ್ದಂತೆ ಇಷ್ಟವಿಲ್ಲದ ವಿಷಯದ ಬಗ್ಗೆ ಮಾತಾಡಲು ಕಾರಣ ಇದೆ. ಇಂದು ವಿಶ್ವ ಗಣಿತ ದಿನ. ಮಕ್ಕಳೆಲ್ಲರೂ ಇಷ್ಟ ಪಡದ ಇದಕ್ಕೂ ಆಚರಣೆ ಇದೆಯೇ ಅಂದುಕೊಳ್ಳಬೇಡಿ. ಅದಕ್ಕೂ ಅದರದ್ದೇ ಆದ ಮಹತ್ವವಿದೆ.
1887 ಡಿಸೆಂಬರ್ 22 ರಂದು ಜನಿಸಿದ ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಸಾಧನೆ ನೆನಪಿಸಲು ಪ್ರತೀ ವರ್ಷ ಡಿಸೆಂಬರ್ 22 ರಂದು ' ವಿಶ್ವ ಗಣಿತ ದಿನ' ದಿನವನ್ನಾಗಿ ಆಚರಿಸಲಾಗುತ್ತದೆ.
ರಾಮಾನುಜನ್ ತಮ್ಮ 12 ನೇ ವಯಸ್ಸಿನಲ್ಲಿ ತ್ರಿಕೋನಮಿತಿಯಲ್ಲಿ ಸಾಧನೆ ಮಾಡಿ ಸ್ವತಃ ಅನೇಕ ಪ್ರಮೇಯಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸೊನ್ನೆಯನ್ನು ಕಂಡುಹಿಡಿದ ಹೆಗ್ಗಳಿಕೆ ಕೂಡ ಭಾರತೀಯರದ್ದು. ಅದೇನೇ ಆದ್ರೂ ಇಂತಹ ಕಠಿಣ ವಿಷಯದ ಸಂಶೋಧನೆಗೂ ತಲೆ ಬೇಕಲ್ಲವೇ....? ಅದೇ ನಮ್ಮ ಹಿರಿಮೆ.
ಮಕ್ಕಳಿಗೆ ಶಾಲೆಯಲ್ಲಿ ಸ್ವಲ್ಪ ಇಷ್ಟವಿರದ ಟೀಚರ್ ಕೂಡ ಗಣಿತ ಟೀಚರ್ ಆಗಿರುತ್ತಾರೆ. ಅವರು ಸ್ವಲ್ಪ ಸ್ಟ್ರಿಕ್ಟ್ ಅನ್ನೋ ಭಾವ ಮನಸ್ಸಲ್ಲಿ ಶಾಶ್ವತವಾಗಿ ಕೂತುಬಿಟ್ಟಿದೆ. ಆದರೂ ಕೆಲವೊಮ್ಮೆ ಅದೇ ಗುರುಗಳು ಇಷ್ಟವಾಗೋದು ಎಕ್ಸಾಂ ಒಳ್ಳೆ ರೀತೀಲಿ ಬರೆಲಿಲ್ಲ ಅಂತ ಗೊತ್ತಿದ್ರೂ ಹತ್ತಿರ ಕರೆದು ಮತ್ತೆ ಕಲಿಸಿ ಬುದ್ದಿ ಹೇಳಿದಾಗ.
ಗಣಿತದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ದೇಶದ ಯುವ ಪೀಳಿಗೆಯಲ್ಲಿ ಗಣಿತ ಕಲಿಯುವ ಕುರಿತು ಸಕಾರಾತ್ಮಕ ಮನೋಭಾವ ಪ್ರೇರೇಪಿಸುವುದು ರಾಷ್ಟ್ರೀಯ ಗಣಿತ ದಿನದ ವಿಶೇಷವಾಗಿದೆ.