ನಮ್ಮ ದೈನಂದಿನ ಆಹಾರದಲ್ಲಿ ಮೊಟ್ಟೆಗೆ ಅತಿ ಪ್ರಮುಖವಾದ ಸ್ಥಾನವನ್ನು ನೀಡಿದ್ದೇವೆ. ನಮ್ಮ ದೇಹಕ್ಕೆ ಅಗತ್ಯವಾದ 13 ಅತೀ ಅಗತ್ಯ ವಿಟಮಿನ್‌ಗಳು, ಖನಿಜಗಳು ಮತ್ತು ಅಗಾಧವಾದ ಪ್ರೋಟಿನ್‌ಗಳನ್ನು ಮೊಟ್ಟೆ ನಮಗೆ ಪೂರೈಸುತ್ತದೆ. ಹೀಗೆ ನಮ್ಮ ಆರೋಗ್ಯಕ್ಕೆ ಬೇಕಾದ ಪ್ರೋಟಿನ್, ಅಮಿನೋ ಆಮ್ಲ, ಪೊಟ್ಯಾಶಿಯಂ, ಸತು, ಕಬ್ಬಿಣಾಂಶ ಹಾಗೂ ಇನ್ನಿತರ ಪೋಷಕಾಂಶ ತನ್ನ ಮಡಿಲಿನಲ್ಲಿ ತುಂಬಿಕೊಂಡ ಮೊಟ್ಟೆಯನ್ನು 'ಪರಿಪೂರ್ಣ ಆಹಾರ' ಎಂದೂ ಕರೆಯುತ್ತಾರೆ.
ಸಾಮಾನ್ಯವಾಗಿ ಹೆಚ್ಚಿನ ಜನರು ಕೋಳಿಗಳ ಮೊಟ್ಟೆಯನ್ನು ಹೆಚ್ಚು ಸೇವಿಸುತ್ತಾರೆ. ಇದರ ಜೊತೆಗೆ ವಿಶ್ವದೆಲ್ಲೆಡೆ ಬಾತುಕೋಳಿ, ಟರ್ಕಿ ಕೋಳಿ, ಎಮು, ಹೆಬ್ಬಾತು, ಗಿನಿಕೋಳಿ, ಉಷ್ಟ್ರಪಕ್ಷಿಗಳ ಮೊಟ್ಟೆಯನ್ನು ಆಹಾರವಾಗಿ ಸೇವಿಸುತ್ತಾರೆ. ಬಿಳಿ ಮೊಟ್ಟೆಗಳನ್ನು ಅತೀ ಹೆಚ್ಚು ಬಳಸಲಾಗುತ್ತದೆ. ಬ್ರೌನ್ ಅಥವಾ ಕಂದು ಬಣ್ಣದ ಮೊಟ್ಟೆ ಬಿಳಿ ಮೊಟ್ಟೆಯಷ್ಟು ಪೋಷಕಾಂಶ ಹೊಂದಿಲ್ಲದಿದ್ದರೂ, ಬಳಸಬಹುದಾಗಿದೆ. ಮೊಟ್ಟೆಯ ಬಣ್ಣ ಮತ್ತು ಗಾತ್ರವನ್ನು ಕೋಳಿಯ ಜಾತಿ, ಪ್ರಬೇಧ ನಿರ್ಧರಿಸುತ್ತದೆ. ಹೀಗೆ ಬಿಳಿ, ಬ್ರೌನ್, ನೀಲಿ, ಹಸಿರು ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಮೊಟ್ಟೆ ದೊರಕುತ್ತದೆ.
ಮೊಟ್ಟೆಯ ಬಣ್ಣಕ್ಕೂ ಅದರ ಪೋಷಕಾಂಶಗಳ ಉಪಯುಕ್ತತೆಗೂ ಯಾವುದೇ ಸಂಬಂಧವಿರುವುದಿಲ್ಲ. ಮೊಟ್ಟೆಗಳ ಬಳಕೆ ಬಗ್ಗೆ ಅರಿವು ಮೂಡಿಸಲು ಮತ್ತು ಮೊಟ್ಟೆ ಸೇವನೆಯಿಂದ ದೇಹಕ್ಕಾಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ನಮ್ಮ ಭಾರತ ದೇಶದಲ್ಲಿ ಜೂನ್ 3 ರಂದು "ರಾಷ್ಟ್ರೀಯ ಮೊಟ್ಟೆ ದಿನ" ಎಂದೂ, ಮೇ ತಿಂಗಳನ್ನು "ರಾಷ್ಟ್ರೀಯ ಮೊಟ್ಟೆ ತಿಂಗಳು" ಎಂದೂ ಆಚರಿಸಲಾಗುತ್ತದೆ. ಅದೇ ರೀತಿ ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೇ ಶುಕ್ರವಾರದಂದು "ಅಂತರಾಷ್ಟ್ರೀಯ ಮೊಟ್ಟೆ ದಿನ" ಎಂದೂ ಆಚರಿಸಲಾಗುತ್ತದೆ.
ನೆನಪಿರಲಿ
1. ಹಸಿ ಮೊಟ್ಟೆಗಳನ್ನು ಬಳಸುವಾಗ ಬಹಳ ಜಾಗ್ರತೆ ವಹಿಸಬೇಕು. ಸೋಂಕಿತ ಕೋಳಿಯಿಂದ, ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಹರಡಬಹುದು. ಮೊಟ್ಟೆಯ ಗಟ್ಟಿಯಾದ ಮೇಲ್ಪದರ ಉತ್ಪಾದನೆ ಆಗುವ ಮೊದಲು ತಾಯಿ ಕೋಳಿ ಈ ಬ್ಯಾಕ್ಟೀರಿಯಾದಿಂದ ಸೋಂಕಿತವಾಗಿದ್ದಲ್ಲಿ ಮೊಟ್ಟೆಯೊಳಗೆ ಈ ಸಾಲ್ಮೊನೆಲ್ಲಾ ಸೇರಿಕೊಂಡು ಮೊಟ್ಟೆಯಲ್ಲಿ ಸೋಂಕು ಹರಡಬಹುದು.
2. ಮಾರಾಟಕ್ಕೆ ಪ್ಯಾಕ್ ಮಾಡಿದ ದಿನದಿಂದ 4 ರಿಂದ 6 ವಾರಗಳ ಒಳಗೆ ಈ ಮೊಟ್ಟೆಗಳನ್ನು ಬಳಸಬಹುದಾಗಿದೆ. ಅದರ ನಂತರ ಬಳಸಬೇಡಿ.
3. ಮೊಟ್ಟೆಯಲ್ಲಿ ಬಿರುಕು ಬಿಟ್ಟಿದ್ದಲ್ಲಿ ಅದನ್ನು ಬಳಸಬೇಡಿ, ಇದರಿಂದ ಸೋಂಕು ತಗಲುವ ಸಾಧ್ಯತೆ ಇರಬಹುದು.
4. ಮನೆಯಲ್ಲಿ ಮೊಟ್ಟೆಗಳನ್ನು 400 ಈ ಗಿಂತ ಕಡಿಮೆ ಉಷ್ಣತೆಯಲ್ಲಿ ಇಟ್ಟುಕೊಳ್ಳಬೇಕು.
5. ಮೊಟ್ಟೆ ಬಳಸುವ ಮುನ್ನ ಚೆನ್ನಾಗಿ ಬೇಯಿಸಬೇಕು. ಮೊಟ್ಟೆಯೊಳಗಿನ ಬಿಳಿ ಮತ್ತು ಹಳದಿ ಭಾಗ ಚೆನ್ನಾಗಿ ಬೆಂದು ಗಟ್ಟಿಯಾಗುವವರೆಗೆ ಬೇಯಿಸಬೇಕು. ಮೊಟ್ಟೆ ಒಳಭಾಗದ ಉಷ್ಣತೆ 1600 ಈ ತಲುಪುವವರೆಗೆ ಬೇಯಿಸುವುದು ಸೂಕ್ತ.
6. ನಿಮ್ಮ ಆಹಾರದಲ್ಲಿ ಹಸಿ ಅಥವಾ ಅದನ್ನು ಬೇಯಿಸದೇ ಮೊಟ್ಟೆ ಬಳಸುವುದಿದ್ದಲ್ಲಿ ಪ್ಯಾಶ್ಚರೀಕರಿಸಿದ ಮೊಟ್ಟೆಯನ್ನು ಬಳಸಬಹುದಾಗಿದೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇರುವುದಿಲ್ಲ.
7. ಬೇಯಿಸಿದ ಮೊಟ್ಟೆಯನ್ನು ರೂಮಿನ ಉಷ್ಣತೆಯಲ್ಲಿ ಎರಡು ಗಂಟೆಗಳಿಗಿಂತ ಜಾಸ್ತಿ ಇಡಬೇಡಿ. ಅದರ ಒಳಗೆ ಸೇವಿಸಬೇಕು.
8. ಹಸಿ ಮೊಟ್ಟೆಯನ್ನು ಸ್ಪರ್ಶಿಸಿದ ಬಳಿಕ ನಿಮ್ಮ ಕೈಗಳನ್ನು ಸೋಪು ಮಿಶ್ರಿತ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು.
9. ಮೊಟ್ಟೆಗಳನ್ನು ಚೆನ್ನಾಗಿ ಬೇಯಲಿ ಎಂದು ಹೆಚ್ಚು ಸಮಯ ಬೇಯಿಸಬಾರದು. ಹೆಚ್ಚು ಬೇಯಿಸಿದಲ್ಲಿ ಮಧ್ಯಭಾಗದ ಹಳದಿಯ ಸುತ್ತ ಹಸಿರು ಚಕ್ರ ಬರುತ್ತದೆ. ಕೆಲವೊಮ್ಮೆ ಹೊರಗಿನ ಬಿಳಿ ಪ್ರೋಟಿನ್ ಮೊಟ್ಟೆಯನ್ನು ಸೀಳಿಕೊಂಡು ಹೊರಗೆ ಬರುತ್ತದೆ. ಮೊಟ್ಟೆಗಳನ್ನು ಬೇಯಿಸುವಾಗ ಮೊಟ್ಟೆ ಮುಳುಗುವಷ್ಟು ನೀರು ಹಾಕಿ ನೀರು ಕುದಿಯುವಂತೆ ಮಾಡಬೇಕು. ಒಂದು ನಿಮಿಷಗಳ ಕಾಲ ಕುದಿದ ಬಳಿಕ, ಪಾತ್ರೆಯನ್ನು ಮುಚ್ಚಿಟ್ಟು 10-12 ನಿಮಿಷ ಹಾಗೇ ಬಿಡಬೇಕು. ಆ ಬಳಿಕ ಮೊಟ್ಟೆಯನ್ನು ತೆಗೆದು ತಣ್ಣೀರಿನಿಂದ ತೊಳೆದು, ಬಿಳಿ ಭಾಗದ ಕವಚ ತೆಗೆದು ಬಳಸಬಹುದು. ಶೀತಲೀಕರಣ ಯಂತ್ರದಲ್ಲಿ ಬೇಯಿಸಿದ ಮೊಟ್ಟೆಯನ್ನು ಒಂದು ವಾರದವರೆಗೆ ಶೇಖರಿಸಿಡಬಹುದಾಗಿದೆ.
10. ದಿನವೊಂದರಲ್ಲಿ ಒಂದು ಬೇಯಿಸಿದ ಮೊಟ್ಟೆ ಸೇವನೆಯಿಂದ ಹೃದಯದ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿದುಬಂದಿದೆ. ಆದರೆ ದಿನಕ್ಕೆ ನಾಲ್ಕಾರು ಬೇಯಿಸಿದ ಮೊಟ್ಟೆ ಸೇವಿಸಿದಲ್ಲಿ ದೇಹದಲ್ಲಿ ಕೊಲೇಸ್ಟ್ರಾಲ್ ಅಂಶ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ.
11. ಮೊಟ್ಟೆ ಪರಿಪೂರ್ಣ ಆಹಾರ ಎಂಬುದಂತೂ ಸತ್ಯವಾದ ವಿಚಾರ. ಹಾಗೆಂದ ಮಾತ್ರಕ್ಕೆ ದಿನವೊಂದರಲ್ಲಿ ಬರೀ ಮೊಟ್ಟೆ ಮಾತ್ರ ತಿನ್ನುವುದು ಮುರ್ಖತನದ ಪರಮಾವಧಿ. ಅತಿಯಾದರೆ ಅಮ್ರತವೂ ವಿಷವೆಂಬಂತೆ, ಅಗತ್ಯಕ್ಕಿಂತ ಜಾಸ್ತಿ ಸೇವಿಸಿದಲ್ಲಿ ಹೃದಯದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಎಲ್ಲವನ್ನೂ ಹಿತ ಮಿತವಾಗಿ ಸೇವಿಸಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿಯೇ ಜಾಣತನ ಅಡಗಿದೆ.
ಲಾಭಗಳು ಏನು?
ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬ ಚರ್ಚೆ ಶತಮಾನಗಳಿಂದ ನಡೆಯುತ್ತಲೇ ಇದೆ. ಆದರೆ ಮೊಟ್ಟೆ ಸೇವನೆಯಿಂದ ಹಲವಾರು ಲಾಭಗಳು ಇದೆ ಎನ್ನುವ ಸತ್ಯ ತಿಳಿದುಕೊಂಡಲ್ಲಿ ಆರೋಗ್ಯಪೂರ್ಣ ಬದುಕು ಕಟ್ಟಿ ಕೊಳ್ಳಬಹುದು ಎನ್ನುವುದು ಜಾಣರ ಅಭಿಮತ.
1) ಒಂದು ಬೇಯಿಸಿದ ಮೊಟ್ಟೆಯಲ್ಲಿ ಸುಮಾರು 70 ರಿಂದ 80 ಕ್ಯಾಲರಿ ದೊರಕುತ್ತದೆ. ಇದರಲ್ಲಿ ವಿಟಮಿನ್ A, B5, B12, D, E, K1, B6 ಹೇರಳವಾಗಿದೆ. ವಿಟಮಿನ್ 'ಸಿ' ಹೊರತಾದ ಎಲ್ಲ ವಿಟಮಿನ್‌ಗಳು ಲಭ್ಯವಿರುತ್ತದೆ.
2) ಮೊಟ್ಟೆಯಲ್ಲಿನ ಪೋಲೇಟ್ ಅಂಶ ಮಕ್ಕಳಲ್ಲಿ ಬಹಳ ಉತ್ತಮ. ಅನಾರೋಗ್ಯ ಬಾರದಂತೆ ಕಾಪಾಡುತ್ತದೆ.
3) ಖನಿಜಾಂಶ ಮತ್ತು ಪೋಷಕಾಂಶಗಳಾದ ಫಾಸ್ಪರಸ್, ಪೊಟ್ಯಾಶಿಯಂ, ಸತು(ಜಿಂಕ್) ಸೆಲೆನಿಯಮ್, ಕ್ಯಾಲ್ಸಿಯಂ, ಕಬ್ಬಿಣಾಂಶ ಹೇರಳವಾಗಿ ಇದೆ.
4) ಒಂದು ಮೊಟ್ಟೆಯಲ್ಲಿ 6 ಗ್ರಾಂ ನಷ್ಟು ಹೇರಳ ಪ್ರೋಟೀನ್ ಮತ್ತು 5 ಗ್ರಾಂನಷ್ಟು ಆರೋಗ್ಯಕಾರಿ ಕೊಬ್ಬು ಇರುತ್ತದೆ. ಇದರಲ್ಲಿರುವ ಕೊಬ್ಬು ಹೃದಯಕ್ಕೆ ಪೂರಕವಾದ ಅನ್‌ಸಾಚುರೇಟೆಡ್ ಕೊಬ್ಬು ಆಗಿರುತ್ತದೆ.
5) ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ಒಳ್ಳೆ ಕೊಲೆಸ್ಟ್ರಾಲ್ ಅಂದರೆ HDL (ಅಧಿಕ ಸಾಂಧ್ರತೆಯ ಕೊಲೆಸ್ಟ್ರೋಲ್) ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಹೃದಯಾಘಾತ, ಸ್ಟ್ರೋಕ್ ಮತ್ತು ಇತರ ಖಾಯಿಲೆಗಳಿಂದ ರಕ್ಷಣೆ ಸಿಗುತ್ತದೆ. ದಿನಕ್ಕೆರಡು ಮೊಟ್ಟೆಯಂತೆ ಆಹಾರ ಸೇವಿಸಿದಲ್ಲಿ HDL ಪ್ರಮಾಣ 10 ಶೇಕಡಾ ಹೆಚ್ಚುತ್ತದೆ.
6) ಮೊಟ್ಟೆ ಸೇವನೆಯಿಂದ, ಅದರಲ್ಲಿನ ಕ್ಯಾಲ್ಸಿಯಂ ಮತ್ತು ಇತರ ಖನಿಜಾಂಶಗಳಿಂದಾಗಿ, ಮೂಳೆಗಳು ಸದೃಢವಾಗುತ್ತದೆ. ಮಾಂಸಖಂಡ ಶಕ್ತಿಯುತವಾಗುತ್ತದೆ.
7) ಮೊಟ್ಟೆ ಸೇವನೆಯಿಂದ ಅಪೌಷ್ಟಿಕತೆ ನಿವಾರಣೆ ಆಗಿ, ರಕ್ತಹೀನತೆ ಬರದಂತೆ ತಡೆಯುತ್ತದೆ. ದೇಹದಲ್ಲಿನ ಸೋಂಕು ತಡೆಯುವ ಶಕ್ತಿ ಕೂಡಾ ವೃದ್ದಿಸುತ್ತದೆ.
8) ಮೊಟ್ಟೆಯಲ್ಲಿನ ಕೋಲಿನ್ ಎನ್ನುವ ಪ್ರೊಟೀನ್ ನೀರಿನಲ್ಲಿ ಕರಗುವ ಪ್ರೊಟೀನ್ ಆಗಿದ್ದು, ಇದು ದೇಹದಲ್ಲಿನ ಜೀವಕೋಶಗಳ ಪದರ ರಚನೆಗೆ ಮತ್ತು ಮೆದುಳಿನ ಆರೋಗ್ಯ ಅತೀ ಅವಶ್ಯಕ. ಒಂದು ಬೇಯಿಸಿದ ಮೊಟ್ಟೆಯಲ್ಲಿ ಸುಮಾರು 150 ಮಿಲಿ ಗ್ರಾಂನಷ್ಟು ಕೋಲಿನ್ ಇರುತ್ತದೆ. ಜೀವಕೋಶಗಳ ಚಯಾಪಚಯ ಕ್ರಿಯೆಯನ್ನು ಪರಿಪಕ್ವವಾಗಿಸುತ್ತದೆ.
9) ಮೊಟ್ಟೆಯಲ್ಲಿ ಆಂಟಿ ಆಕ್ಸಿಡೆಂಡ್‌ಗಳು ಕೂಡಾ ಹೇರಳವಾಗಿ ಇರುವ ಕಾರಣ ಕಣ್ಣುಗಳ ಆರೋಗ್ಯವನ್ನು ವೃದ್ದಿಸುತ್ತದೆ. ಮೊಟ್ಟೆಯಲ್ಲಿ ವಿಟಮಿನ್ 'ಎ' ಕೂಡಾ ಕಣ್ಣಿನ ಆರೋಗ್ಯಕ್ಕೆ ಪೂರಕ.
10) ಒಮೆಗಾ-3 ಜಾಸ್ತಿ ಇರುವ ಮೊಟ್ಟೆ ಸೇವನೆ ಮಾಡುವುದರಿಂದ ದೇಹದಲ್ಲಿನ ಟ್ರೈಗ್ಲಿಸರೈಡ್ ಮಟ್ಟ ನಿಯಂತ್ರಣ ಬರುತ್ತದೆ. ಸಾಮಾನ್ಯವಾಗಿ ಒಮೆಗಾ-3 ಮೀನು, ಒಣ ಹಣ್ಣುಗಳಾದ ಗೋಡಂಬಿ, ಪಿಸ್ತಾ ಬೀಜ, ಬಾದಾಮಿ ಬೀಜಗಳಲ್ಲಿ ಹೆಚ್ಚು ಇರುತ್ತದೆ. ಇದು ಸೇವಿಸಲು ಕಷ್ಟವಾದಲ್ಲಿ ಮೊಟ್ಟೆ ಸೇವನೆ ಉಪಯುಕ್ತ.
11) ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಪ್ರೋಟೀನ್ ಹಾಗೂ ಅಮಿನೋ ಆಸಿಡ್ ಅತೀ ಅಗತ್ಯ. ದೇಹದ ತೂಕ ನಿಯಂತ್ರಣ, ಸ್ನಾಯುಗಳ ಆರೋಗ್ಯ, ರಕ್ತದೊತ್ತಡ ನಿಯಂತ್ರಣ, ಎಲುಬುಗಳ ಅರೋಗ್ಯಕ್ಕೆ ಇದು ಅತೀ ಅಗತ್ಯ. ಇದು ಮೊಟ್ಟೆಯಲ್ಲಿ ಹೇರಳವಾಗಿದೆ.
12) ಬೆಳಗ್ಗಿನ ಉಪಾಹಾರಕ್ಕೆ ಮೊಟ್ಟೆ ತಿನ್ನುವುದರಿಂದ ಅದರಲ್ಲಿನ ಪ್ರೊಟೀನ್ ಮತ್ತು ಕೊಬ್ಬಿನ ಕಾರಣದಿಂದಾಗಿ ಹೊಟ್ಟೆ ಬೇಗ ತುಂಬಿದಂತಾಗುತ್ತದೆ. ಇದರಿಂದ ಅನಗತ್ಯವಾಗಿ ಹೆಚ್ಚು ತಿನ್ನುವುದು ತಪ್ಪಿ, ದೇಹದ ತೂಕ ನಿಯಂತ್ರಿಸಲ್ಪಡುತ್ತದೆ. ಖಾಲಿ ಹೊಟ್ಟೆಯಲ್ಲಿ ತಿಂದರೆ ಉತ್ತಮ.
13) ಮೊಟ್ಟೆ ಅತೀ ಕಡಿಮೆ ಖರ್ಚಿನ ಮತ್ತು ಬಹಳ ಸುಲಭವಾಗಿ ಎಲ್ಲೆಡೆ ಸಿಗುವ ಒಂದು ವಿಶಿಷ್ಟ ಆಹಾರ ಆಗಿರುತ್ತದೆ.
14) ಮೊಟ್ಟೆಯಲ್ಲಿರುವ ಲ್ಯೂಟಿನ್ ಮತ್ತು ಜಿಯಾಕ್ಸಾಂತಿನ್ ಎಂಬ ಎರಡು ಆಂಟಿ ಆಕ್ಸಿಡೆಂಟ್‌ಗಳು ಚರ್ಮದ ಕಾಂತಿಯನ್ನು ಹೆಚ್ಚಿಸಿ, ಚರ್ಮದ ಕಳೆಯನ್ನು ಹೆಚ್ಚಿಸುತ್ತದೆ.
15) ಮೊಟ್ಟೆಯಲ್ಲಿನ ಸತು(ಜಿಂಕ್) ದೇಹದ ರಕ್ಷಣಾ ವ್ಯವಸ್ಥೆಯನ್ನು, ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಎಲುಬುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಅದರಲ್ಲಿರುವ ಸೆಲೆನಿಯಂ ಅಂಶ ಕ್ಯಾನ್ಸರ್ ವಿರುದ್ಧ ಹೊರಾಡಲು ಶಕ್ತಿ ನೀಡುತ್ತದೆ. ನಿಯಮಿತವಾಗಿ, ಹಿತ-ಮಿತವಾಗಿ ಮೊಟ್ಟೆ ಸೇವನೆಯಿಂದ ಮಹಿಳೆಯರಲ್ಲಿ ಮೊಲೆಗಳ ಕ್ಯಾನ್ಸರ್ ಬರದಂತೆ ತಡೆಯುತ್ತದೆ ಎಂದೂ ಹಾವರ್ಡ್ ವಿಶ್ವವಿದ್ಯಾಲಯದ ಸಂಶೋಧನೆಯಿಂದ ತಿಳಿದುಬಂದಿದೆ.
ಕೊನೆಮಾತು:
ಒಂದು ಮಧ್ಯಮ ಗಾತ್ರದ ಮೊಟ್ಟೆಯಲ್ಲಿ ಸುಮಾರು 180 ರಿಂದ 200 mg ಕೊಲೆಸ್ಟ್ರಾಲ್ ಇರುತ್ತದೆ. ಆಹಾರ ಜನ್ಯ ಕೊಲೆಸ್ಟ್ರಾಲ್‌ಗಳಲ್ಲಿ ಅತಿ ಮುಖ್ಯ ಸ್ಥಾನ ಮೊಟ್ಟೆಗಿದೆ. ಮೊಟ್ಟೆಯ ಈ ಆಹಾರಜನ್ಯ ಕೊಲೆಸ್ಟ್ರಾಲ್ ಜೊತೆಗೆ, ಇತರ ಪೋಷಕಾಂಶಗಳಿಂದ ಅವುಗಳು ಹೃದಯ ರೋಗ ಬರದಂತೆ ತಡೆಯುವ ಶಕ್ತಿ ಹೊಂದಿದೆ. ಅದೇ ರೀತಿ ಸುಮಾರು 5ಗ್ರಾಂ ಗಳಷ್ಟು ಕೊಬ್ಬು ಇರುತ್ತದೆ. ಈ ಕೊಬ್ಬು ಮೊನೋಸಾಚುರೇಟೆಡ್ ಮತ್ತು ಪಾಲಿಅನ್‌ಸಾಚುರೇಟೆಡ್ ಕೊಬ್ಬು ಆಗಿರುತ್ತದೆ.
ಸಸ್ಯ ಮೂಲದ ಆಹಾರಜನ್ಯ ಕೊಲೆಸ್ಟ್ರಾಲ್‌ಗಳಿಗೂ ಹಾಗೂ ನಮ್ಮ ದೇಹದಲ್ಲಿನ ರಕ್ತದಲ್ಲಿರುವ ಕೊಲೆಸ್ಟ್ರಾಲ್‌ಗಳಿಗೂ ಅಗಾಧ ವ್ಯತ್ಯಾಸವಿದೆ. ಇವುಗಳು ದೇಹದಲ್ಲಿನ ಕೊಲೆಸ್ಟ್ರಾಲ್‌ನಷ್ಟು ಮಾರಕ ಅಲ್ಲ ಎಂದೂ ತಿಳಿದು ಬಂದಿದೆ. 2015 ರ ಅಮೇರಿಕಾ ಆಹಾರ ತಜ್ಞರ ಅಭಿಮತದಂತೆ ದಿನವೊಂದಕ್ಕೆ 300 mg ಸಸ್ಯ ಜನ್ಯ ಅಥವಾ ಆಹಾರ ಜನ್ಯ ಕೊಲೆಸ್ಟ್ರಾಲ್ ಸೇವಿಸಬಹುದು ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಮೊಟ್ಟೆಯಲ್ಲಿ ಈ ಕೊಲೆಸ್ಟ್ರಾಲ್ ಜೊತೆಗೆ ಇನ್ನೂ ಹತ್ತು ಹಲವಾರು ಪೋಷಕಾಂಶಗಳು, ಖನಿಜಾಂಶಗಳು ಹೇರಳವಾಗಿದೆ. ಮೊಟ್ಟೆಯಲ್ಲಿರುವ ಅಗಾಧ ಪ್ರಮಾಣದ ಒಳ್ಳೆಯ ಪ್ರೋಟಿನನ್ನು ಗಮನದಲ್ಲಿರಿಸಿಕೊಂಡು ವಿಶ್ವ ಆರೋಗ್ಯ ಸಂಸ್ಥೆ ಈ ಮೊಟ್ಟೆ ಆಹಾರವನ್ನು "ಸ್ಟಾಂಡರ್ಡ್ ಪ್ರೋಟಿನ್" ಎಂದೂ ಘೋಷಣೆ ಮಾಡಿದೆ.
ವಿಟಮಿನ್ ಸಿ ಒಂದನ್ನು ಬಿಟ್ಟು ಉಳಿದೆಲ್ಲಾ ಪೋಷಕಾಂಶಗಳನ್ನು ಹೊಂದಿರುವ ಮೊಟ್ಟೆ ಪರಿಪೂರ್ಣ ಆಹಾರ ಎಂದರೆ ತಪ್ಪಾಗಲಾರದು. ಮೊಟ್ಟೆಯಲ್ಲಿರುವ ಪ್ರೋಟಿನ್ ಅಲ್ಜುಮಿನ್ ಆಗಿದ್ದು, ಅದರಲ್ಲಿರುವ ಪೋಲೇಟ್ ಅಂಶ ಮಕ್ಕಳನ್ನು ಹಲವಾರು ಅನಾರೋಗ್ಯಗಳಿಂದ ಕಾಪಾಡುತ್ತದೆ. ಈ ಕಾರಣಕ್ಕಾಗಿಯೇ ವೈದ್ಯರು "ದಿನಕ್ಕೊಂದು ಏಪಲ್ ತಿನ್ನಿ" ಎನ್ನುವುದರ ಜೊತೆಗೆ "ದಿನಕ್ಕೊಂದು ಮೊಟ್ಟೆ ತಿನ್ನಿ" ಎಂದು ಘಂಟಾಘೋಷವಾಗಿ ಶಿಫಾರಸು ಮಾಡುತ್ತಾರೆ. ಅದೇನೇ ಇರಲಿ ಕಡಿಮೆ ಖರ್ಚಿನ ಸುಲಭವಾಗಿ ದೊರಕುವ ಮೊಟ್ಟೆಯನ್ನು ಹಿತಮಿತವಾಗಿ ಸೇವಿಸಿದಲ್ಲಿ ನಿಮ್ಮ ಹಾಗೂ ನಿಮ್ಮ ಮಕ್ಕಳ ಆರೋಗ್ಯ ವೃದ್ಧಿಸುವುದರಲ್ಲಿ ಸಂಶಯವೇ ಇಲ್ಲ.
✍ ಡಾ. ಮುರಲೀ ಮೋಹನ್ ಚೂಂತಾರು
BDS, MDS,DNB,MOSRCSEd(U.K), FPFA, M.B.A
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ 671 323
ಮೊ : 9845135787
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ