81ನೇ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2022
ಮೂಡುಬಿದಿರೆ: ಜನವರಿ 4 ರಿಂದ 7ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ 81ನೇ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಲಾಗಿದೆ. ಈ ಕ್ರೀಡಾಕೂಟವು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದ್ದು, ಕ್ರೀಡಾಕೂಟದಲ್ಲಿ ದೇಶದ 400ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ಸುಮಾರು 2000 ಅಥ್ಲೀಟ್‌ಗಳು ಹಾಗೂ 1000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಂಗಳೂರು ವಿವಿ ರಿಜಿಸ್ಟ್ರಾರ್ ಕಿಶೋರ್ ಕುಮಾರ್ ಸಿ. ಕೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭ
ಜ. 4ರಂದು ಸಂಜೆ 5.45ಕ್ಕೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಭಾರತ ಸರ್ಕಾರದ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಟವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಕ್ರೀಡಾ ಸಚಿವ ನಾರಾಯಣ ಗೌಡ, ಬಿಜೆಪಿ ರಾಜ್ಯಾಧ್ಯಾಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು, ಕನ್ನಡ ಹಾಗೂ ಸಂಸ್ಕೃತಿ ಇಲಾಖಾ ಸಚಿವ ವಿ ಸುನಿಲ್ ಕುಮಾರ್, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಜಂಟಿ ಕಾರ್ಯದರ್ಶಿ ಡಾ ಬಲ್ಜೀತ್ ಸಿಂಗ್ ಸೋಖನ್, ಮಂಗಳೂರು ವಿವಿ ಉಪಕುಲಪತಿ ಡಾ. ಸುಬ್ರಹ್ಮಣ್ಯ ಯಡಪಡಿತ್ತಾಯ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಕ್ಷೇತ್ರದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಹಾಗೂ ಪರಿಷತ್ ಸದಸ್ಯರು ಉಪಸ್ಥಿತರಿರಲಿದ್ದಾರೆ.
5ನೇ ಬಾರಿ ಆಳ್ವಾಸ್ ಆತಿಥ್ಯ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸತತ 5ನೇ ಬಾರಿಗೆ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ್ನು ಆಯೋಜಿಸುತ್ತಿದೆ. ಈ ಹಿಂದೆ 2013 ರಲ್ಲಿ 72ನೇ ಹಾಗೂ 75ನೇ ಕ್ರೀಡಾಕೂಟವನ್ನು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಾಗೂ 79ನೇ ಹಾಗೂ 80ನೇ ಕ್ರೀಡಾಕೂಟವನ್ನು ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿತ್ತು.
81ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ವಿಶೇಷತೆಗಳು:
• ರಾಷ್ಟ್ರದ 400 ವಿಶ್ವವಿದ್ಯಾಲಯಗಳ ಸುಮಾರು 2 ಸಾವಿರ ಅಥ್ಲೀಟ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಸುಮಾರು 1000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದು, ರಾಷ್ಟ್ರದ ಖ್ಯಾತ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ.
• ಆನ್‌ಲೈನ್ ನೋಂದಣಿ ಸೌಲಭ್ಯವನ್ನು ನೀಡಲಾಗಿದೆ.
• ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
• ನಾಲ್ಕು ದಿನ ಕ್ರೀಡಾಕೂಟದ 23 ಸ್ಪರ್ಧೆಗಳು ನಡೆಯಲಿವೆ.
• ಅತ್ಯಾಧುನಿಕ ಫೋಟೋ ಫಿನಿಶಿಂಗ್ ತಂತ್ರಜ್ಞಾನದ ವ್ಯವಸ್ಥೆಯನ್ನು ಮಾಡಲಾಗಿದೆ.
• ಪ್ರತಿದಿನ ರಾತ್ರಿ 7 ಗಂಟೆಗೆ ಅದ್ಧೂರಿಯಾದ ವಿಭಿನ್ನ ಸಾಂಸ್ಕೃತಿಕ ವೈಭವದೊಂದಿಗೆ ವಿಜಯ ವೇದಿಕೆಯಲ್ಲಿ ಪದಕ ವಿಜೇತರನ್ನು ಗೌರವಿಸಲಾಗುವುದು.
• ಈ ಕ್ರೀಡಾಕೂಟವನ್ನು ಖೇಲೋ ಇಂಡಿಯಾ ಹಾಗೂ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ ಮಾನದಂಡವಾಗಿ ಪರಿಗಣಿಸಲಾಗುವುದು.
• ವಿಜೇತರಿಗೆ ನಗದು ಪುರಸ್ಕಾರ.
ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ
ಕ್ರೀಡಾಕೂಟದ ಸ್ಪರ್ಧೆಗಳು ಜನವರಿ 04ರಂದು ಬೆಳಗ್ಗೆ 6.30ರಿಂದಲೇ ಆರಂಭವಾಗಲಿದ್ದು, ಅಂದು ಸಂಜೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಅಪರಾಹ್ನ 3.30ಕ್ಕೆ ಮೂಡುಬಿದಿರೆಯ ಹನುಮಾನ್ ದೇವಸ್ಥಾನದಿಂದ ಭವ್ಯ ಮೆರವಣಿಗೆ ಹೊರಡಲಿದೆ. ನಮ್ಮ ರಾಷ್ಟ್ರದ ವಿವಿಧ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ 100ಕ್ಕೂ ಹೆಚ್ಚು ಕಲಾತಂಡಗಳು ಹಾಗೂ 5,000 ಕಲಾವಿದರು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಪಥಸಂಚಲನದ ನಂತರ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ.
ಉಚಿತ ಊಟ ಹಾಗೂ ವಸತಿ ಸೌಲಭ್ಯ
ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಗಮಿಸುವ ಎಲ್ಲಾ ಸ್ಪರ್ಧಿಗಳು, ತರಬೇತುದಾರರು, ಕ್ರೀಡಾಧಿಕಾರಿಗಳು ಹಾಗೂ ವಿಶೇಷ ಆಹ್ವಾನಿತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಉಚಿತ ಊಟ ಹಾಗೂ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕ್ರೀಡಾಪಟುಗಳ ಅನುಕೂಲಕ್ಕಾಗಿ ಉತ್ತರ ಹಾಗೂ ದಕ್ಷಿಣ ಭಾರತ ಎರಡೂ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕ್ರೀಡಾಕೂಟಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸಂಸ್ಥೆ ನೀಡುತ್ತಿದೆ.
ವಿಜೇತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಗದು ಪುರಸ್ಕಾರ ಪ್ರಥಮ ಸ್ಥಾನ ಪಡೆದವರಿಗೆ 25,000ರೂ, ದ್ವಿತೀಯ 15,000ರೂ ಹಾಗೂ ತೃತೀಯ 10,000ರೂ, ಕೂಟ ದಾಖಲೆ ನಿರ್ಮಿಸಿದವರಿಗೆ 25,000ರೂ, ಸಮಗ್ರ ಪ್ರಶಸ್ತಿ ವಿಜೇತ ತಂಡಕ್ಕೆ 50,000ರೂ, ರನ್ನರ್ ಅಪ್ 30,000ರೂ, ತೃತಿಯ ಸ್ಥಾನ 20,000ರೂ ನಗದು ಪುರಸ್ಕಾರ ನೀಡುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಘೋಷಿಸಿದ್ದಾರೆ.
ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಗೆರಾಲ್ಡ್ ಸಂತೋಷ್ ಡಿಸೋಜಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ