ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ

Upayuktha
0

 

ತಿಳಿದುಕೊಳ್ಳುವ ಮುಕ್ತ ಮನಸ್ಸಿನಿಂದ ಸಮಗ್ರ ಜ್ಞಾನಾರ್ಜನೆ: ಡಾ.ಸತೀಶ್ಚಂದ್ರ ಎಸ್.


ಉಜಿರೆ ಡಿ 22: ಸದಾ ತಿಳಿದುಕೊಳ್ಳುವ ಮುಕ್ತ ಮನಸ್ಸಿನ ಹಂಬಲದಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಮಗ್ರತೆ ದಕ್ಕುತ್ತದೆ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್‌ಚಂದ್ರ ಎಸ್. ಅಭಿಪ್ರಾಯಪಟ್ಟರು.


ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ನೂತನ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಹೊಸದಾಗಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಕಲಿಕೆ ಮತ್ತು ಗ್ರಹಿಕೆಗಾಗಿ ತಮ್ಮ ಮನಸ್ಸನ್ನು ಸದಾ ತೆರೆದಿಟ್ಟುಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ಸಂಪೂರ್ಣ ಕಲಿಕೆ ಸಾಧ್ಯ. ಜ್ಞಾನವು ವಿವಿಧ ಮೂಲಗಳಿಂದ ಲಭ್ಯವಾಗುತ್ತಿರುತ್ತದೆ. ಹೀಗೆ ಲಭ್ಯವಾಗುವ ಜ್ಞಾನವನ್ನು ಸಮಗ್ರವಾಗಿ ವಿದ್ಯಾರ್ಥಿಗಳು ಹೇಗೆ ಗ್ರಹಿಸಿಕೊಳ್ಳುತ್ತಾರೆ ಎಂಬುದು ಮುಖ್ಯವಾಗುತ್ತದೆ. ಕೇಳುವ, ಅವಲೋಕಿಸುವ ಮತ್ತು ನಿರಂತರವಾಗಿ ಅಧ್ಯಯನ ನಡೆಸುವ ಮೂಲಕ ಎಷ್ಟು ಜ್ಞಾನವನ್ನು ಪಡೆಯುತ್ತಾರೆ ಎನ್ನುವುದರ ಮೇಲೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮಹತ್ವ ದಕ್ಕುತ್ತದೆ. ಆ ಮೂಲಕ ಕಲಿಕೆ ಅರ್ಥಪೂರ್ಣವಾಗುತ್ತದೆ ಎಂದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಜ್ಞಾನವೆಂಬ ಕೊಳದಲ್ಲಿ ಎಷ್ಟು ನೀರಿದೆ ಎಂಬುದು ಮುಖ್ಯವಾಗುವುದಿಲ್ಲ. ತಿಳಿದುಕೊಳ್ಳುವ ಹಸಿವಿನೊಂದಿಗೆ ಈ ಕೊಳದಲ್ಲಿ ಜ್ಞಾನದ ಜಲವನ್ನು ತುಂಬಿಸಿಕೊಳ್ಳಲು ಬರುವವರು ಎಷ್ಟು ಪ್ರಮಾಣದಲ್ಲಿ ತಿಳುವಳಿಕೆಯನ್ನು ತುಂಬಿಸಿಕೊಳ್ಳುತ್ತಾರೆ ಎನ್ನುವುದು ಮಹತ್ವದ್ದೆನ್ನಿಸಿಕೊಳ್ಳುತ್ತದೆ.


ನಿಮ್ಮ ಗ್ರಹಿಕೆಯ ಕೊಡಪಾನದಲ್ಲಿ ಎಷ್ಟು ನೀರನ್ನು ತುಂಬಿಸಿಕೊಳ್ಳುತ್ತೀರಿ ಎಂಬುದು ಮುಖ್ಯ. ವಿದ್ಯಾರ್ಥಿಗಳು ಎಷ್ಟು ಪ್ರಮಾಣದಲ್ಲಿ ತಿಳಿದುಕೊಳ್ಳುತ್ತಾರೆ ಮತ್ತು ಪ್ರಯೋಜನ ಪಡೆದುಕೊಳ್ಳುತ್ತಾರೆ ಎನ್ನುವುದರ ಆಧಾರದಲ್ಲಿ ಜ್ಞಾನ ದಾಟಿಕೊಳ್ಳುತ್ತದೆ ಎಂದರು.


ಶಿಕ್ಷಣ ರಂಗದ ಮೂಲಕ ಶೇ.24ರಷ್ಟು ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ. ಇವರಲ್ಲಿ ಶೇ 8ರಷ್ಟು ಮಾತ್ರ ಸ್ನಾತಕೋತ್ತರ ಹಂತದ ಶಿಕ್ಷಣ ಪಡೆಯಲು ಮುಂದಾಗುತ್ತಾರೆ. ಉನ್ನತ ವ್ಯಾಸಂಗದ ಅವಕಾಶ ಸದುಪಯೋಗಿಸಿಕೊಳ್ಳುವ ಉದ್ದೇಶದಿಂದ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರವೇಶಾತಿ ಪಡೆದ ನೂತನ ವಿದ್ಯಾರ್ಥಿಗಳು ಯಶಸ್ಸಿನ ಕನಸನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರದ್ಧೆ ತೋರಬೇಕು ಎಂದು ಸಲಹೆ ನೀಡಿದರು.


ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್‌ ಡಾ.ವಿಶ್ವನಾಥ್ ಪಿ ಅವರು ಕಾಲೇಜಿನ ವಿವಿಧ ವಿಭಾಗಗಳ ಕಾರ್ಯವೈಖರಿ, ಕಲಿಕೆಯ ಹಂತಗಳು, ಈ ಹಿಂದಿನಿಂದ ನಡೆದುಕೊಂಡು ಬರುತ್ತಿರುವ ಮತ್ತು ನಂತರದ ದಿನಗಳಲ್ಲಿ ಆಯೋಜಿಸಲಾಗುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಕುರಿತು ಸಮಗ್ರ ಮಾಹಿತಿ ನೀಡಿದರು.


ಸಹಾಯಕ ಪ್ರಾಧ್ಯಾಪಕ ನವೀನ್‌ ಕುಮಾರ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಮಧುಶ್ರೀ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ನಫೀಸತ್ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top