|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಥೆ: ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ...

ಕಥೆ: ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ...



(ಸತ್ಯ ಘಟನೆ ಆಧರಿಸಿದ ಕಾಲ್ಪನಿಕ ಕತೆ!!) 


ಅದೊಂದು ಕನ್ನಡ ಮಾಧ್ಯಮ ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ, ಹೊನಗೋಡು (ಕಾಸರಗೋಡು ಅಲ್ಲ!!) 


'ನಾಲ್ಕನೆ ಇಯತ್ತೆ' ಅಂತ ಬರೆದ ಕೊಠಡಿಯ ಒಳಗಡೆ ಕನ್ನಡ ಪಾಠ ನೆಡೆಯುತ್ತಾ ಇದೆ. ಅನಿವಾರ್ಯ ಕಾರಣದಿಂದ ಒಂದು ವಾರ ರಜದಲ್ಲಿದ್ದ ಮೂರ್ತಿ ಮೇಷ್ಟ್ರು, ಹಿಂದಿನ ವಾರ ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸಿದ್ದ 'ಬಸವಣ್ಣನ ವಚನಗಳು' ಪಾಠದ ವಾಚನ ಮತ್ತು ಮರು ವಿವರಣೆ ಮುಂದುವರೆದಿದೆ.


"ದಯವಿಲ್ಲದ ಧರ್ಮವಾವುದಯ್ಯಾ?

ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ

ದಯವೇ ಧರ್ಮದ ಮೂಲವಯ್ಯಾ

ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ..."


ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ... ಸಾಲನ್ನು ಹಾಡಿ ಮೂರ್ತಿ ಮೇಷ್ಟ್ರು ವಿವರಣೆ ಕೊಡಬೇಕು ಅನ್ನುವಷ್ಟರಲ್ಲಿ "ಅಂಬಾsssssssss" ಅಂತ ಶಾಲೆಯ ಹೊರಗಡೆ ಒಂದು ಕರು ಕೂಗುತ್ತಿದೆ!! 


ಮೂರ್ತಿ ಮೇಷ್ಟ್ರು ಶಾಲೆಯ ಹೊರಭಾಗಕ್ಕೆ ಬಂದರೆ ಊರಿನ ಫೇಮಸ್ ಸೀನಪ್ಪಯ್ಯ ಒಂದು ಕರುವನ್ನು ಶಾಲೆಯ ವಾಲಿಬಾಲ್ ಕಂಬಕ್ಕೆ ಸಪ್ಪಿನ ಹಗ್ಗದಲ್ಲಿ ಕಟ್ತಾ ಇದ್ದಾರೆ!!


"ಏನ್ ಸೀನಪ್ಪಯ್ಯ ಇದು?, ಕರುವನ್ನು ಶಾಲೆಗೆ ಸೇರ್ಸಕೆ ಬಂದ್ಯಾ ಎಂತ ಕತೆ?" ಅಂತ ಮೂರ್ತಿ ಮೇಷ್ಟ್ರು ಕೇಳಿದರೆ..." ಇದು ಇಲ್ಲೇ ಕೂಗ್ತ ಬಿದ್ದಿರ್ಲಿ, ಸಂಜೆ ಹೊತ್ತು ಬಂದು ಹೊಡ್ಕೊಂಡು ಹೋಗ್ತಿನಿ" ಅಂತ ಹೇಳಿದ ಸೀನಪ್ಪಯ್ಯ, ಮೇಷ್ಟ್ರು ಏನ್ ಹೇಳಿದರೂ ಕೇಳದೆ ಸೀದ ಮನೆಗೆ ಹೋದರು!!


ಮೇಷ್ಟ್ರು ಸ್ವಲ್ಪ ಹೊತ್ತು ನೋಡಿ ಶಾಲೆ ಒಳಗೆ ಬಂದ್ರು.  


"ದಯವೇ ಧರ್ಮದ ಮೂಲವಯ್ಯಾ"


"ಅಂಬಾssssss"


"ದಯವೇ ಧರ್ಮದ ಮೂಲವಯ್ಯಾ

ಕೂಡಲಸಂಗಯ್ಯ....."


"ಅಂಬಾsssssss"


"ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ..."


"ಅಂಬಾsssssss"


ಕರುವಿನ ಅಂಬಾ ಧ್ವನಿಗೆ ಮೂರ್ತಿ ಮೇಷ್ಟ್ರು ಪಾಠ ನಿಲ್ಲಿಸಿದರು. 


ತರಗತಿಯ ಕೊನೇ ಬೇಂಚಿನ ಹುಡುಗರು 'ಮೇಷ್ಟ್ರು ದಯೆಯನ್ನು ಹೇಗೆ ಅನುಸರಿಸುತ್ತಾರೆ' ಅಂತ ಕುತೂಹಲ ಇರಬೇಕು...? ಕಿಟಕಿ ಆಚೆಯ ವಾಲಿಬಾಲ್ ಕಂಬದ ಕಡೆ ನೋಡಿ ಕುತೂಹಲದಿಂದ ಸಣ್ಣಕೆ ನಗ್ತಾ ಇದಾರೆ!! 


'ಅಂಬಾsss' ಧ್ವನಿಗೆ ಬರೀ ನಾಲ್ಕನೇ ಇಯತ್ತೆ ಅಲ್ಲ, ಎಲ್ಲ ತರಗತಿಗಳೂ ಬಂದ್ ಆದವು!! 


ಹೆಡ್ಮಾಷ್ಟ್ರು ಆಫೀಸ್ ರೂಮಲ್ಲಿ ತುರ್ತು ಸಭೆ ಕರೆದರು.


ಸಭೆಯೂ ನೆಡೆಯದಂತೆ 'ಅಂಬಾsss' ಧ್ವನಿ ಮಾರ್ದನಿಸಿದಾಗ, ಮೂರ್ತಿ ಮೇಷ್ಟ್ರು ಎಲ್ಲೋ ಹೋಗಿ ಒಂದ್ಕಟ್ಟು ಹುಲ್ಲು ತಂದು ಕಂಬದ ಬಳಿ ಹಾಕಿದರು!! "ಸ್ವಲ್ಪ ಹೊತ್ತು ಸಭೆ ಮಾಡ್ಕಳಿ" ಅಂತ ಕಣ್ಣಲ್ಲೇ ಹೇಳಿದ ಕರು ಹುಲ್ಲು ತಿನ್ನಲು ಪ್ರಾರಂಭಿಸಿತು. ಸಭೆ ಮುಂದುವರೆಯಿತು!! 


ಶಾಲಾ ಆವರಣ ಗೋ ಶಾಲೆ ಆಯ್ತು!!


"ಕರುವನ್ನು ಬಿಟ್ಟು ಗೇಟಿಂದ ಆಚೆಗೆ ಕಳಿಸುವ",


"ದೊಡ್ಡಿಗೆ ಹೊಡೆಯೋಣ", 


"ಹೋಬಳಿ ಪೋಲೀಸ್ ಸ್ಟೇಷನ್‌ಗೆ ಕಂಪ್ಲೇಂಟ್ ಮಾಡೋಣ"...


ಸಭೆಯಲ್ಲಿ ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ!!


"ಅದ್ಯಾವುದೂ ಆಗಲ್ಲ, ಅದು ಸೀನಪ್ಪಯ್ಯನ ಮನೆ ಕರು. ಶಾಲೆಯಲ್ಲಿ ಎಂತ ಕಾರ್ಯಕ್ರಮ ಆದರೂ ಅವರ ಸಹಾಯ ನಮಗೆ ಬೇಕು. ಅವರನ್ನ ಎದ್ರು ಹಾಕ್ಕೊಳಕ್ಕಾಗಲ್ಲ. ಹೆಡ್ ಮೇಷ್ಟ್ರು ಕೈಯಲ್ಲಿದ್ದ ಸಿಮೇಸುಣ್ಣದ ಕಡ್ಡಿ ತುಂಡ್ ಮಾಡಿ ಹೇಳಿದರು!!.


ಹುಲ್ಲು ಮುಗಿದಿರಬೇಕು, ಕರು ಅಂಬಾ ಭವಾನಿ ಧ್ಯಾನ ಶುರು ಮಾಡ್ತು!!


***


ನಾಲ್ಕು ಗಂಟೆಗೆ ಸೀನಪ್ಪಯ್ಯ ಬೈಕ್‌ನಲ್ಲಿ ಸೀದ ಸ್ಕೂಲಿಗೆ ಬಂದ್ರು. ಲಾಂಗ್ ಬೆಲ್ಲ ಹೊಡೆಯುವ ಸಮಯ!!!


ಹಾಗೆ ನೋಡಿದರೆ, ಸೀನಪ್ಪಯ್ಯ ಇದ್ದಿದ್ದರಲ್ಲಿ ಮೂರ್ತಿ ಮೇಷ್ಟ್ರಿಗೆ ಸ್ವಲ್ಪ ಹೆಚ್ಚು ಪರಿಚಯ!! ಆದ್ರೂ ಮೂರ್ತಿ ಮೇಷ್ಟ್ರು ಸ್ವಲ್ಪ ಗರಂ ಆಗಿಯೇ "ಏನ್ರಿ ಸೀನಪ್ಪಯ್ಯ ಇದು? ನಾವು ಶಾಲೆಗೆ ಬರೋದು ಪಾಠ ಮಾಡೋಕಾ? ಇಲ್ಲ ನಿಮ್ಮ ಮನೆ ದನ ಕಾಯೋಕಾ?" ಅಂದ್ರು.


"ಮೇಷ್ಟ್ರೆ, ಹಗಲು ಹೊತ್ತು ಈ ಕರುವನ್ನು ಕಟ್ಟಿ ಸಾಕೋಕಾಗಲ್ಲ. ಕಟ್ಟಿದ್ರೆ ದಿನವೆಲ್ಲ ಕೂಗ್ತನೇ ಇರುತ್ತೆ.  ಅದಕ್ಕೆ ಹೊರಗಡೆ ಬಿಡ್ತೀನಿ. ಗೋಮಾಳದಲ್ಲಿ ಮೇಯ್ತಾ ಇರುತ್ತೆ. ಈ ಕರುವಿಗೆ ಸ್ವಲ್ಪ, ತರ್ಲೆ ತುಂಟತನ ಜಾಸ್ತಿ".


"ನಾವು ಮನುಷ್ಯರಿಗೆ ಮಾತ್ರ ಪಾಠ ಹೇಳುವುದು. ಕರು, ದನ, ಎಮ್ಮೆ, ಕೋಳಿಗಳನ್ನೆಲ್ಲ ತಂದು ಶಾಲೆಲಿ ಕಟ್ಟಿದ್ರೆ ಪಾಠ ಮಾಡಿ ತುಂಟತನ ತಿದ್ದೋದು ನಮ್ಮ ಕೆಲಸ ಅಲ್ಲ" ಮೇಷ್ಟ್ರು ಮಾತಲ್ಲಿ ಸ್ವಲ್ಪ ಜೀರಿ ಮೆಣಸು ಸೇರಿಸಿಯೇ ಹೇಳಿದರು!!.


"ಮೇಷ್ಟ್ರೇ, ನೀವು ಕರುವಿಗೆ ಪಾಠ ಮಾಡುವುದು ಬೇಡ, ಕರುವಿಗೆ ಹೈಗದ ಕುಂಟೆ ಕಟ್ಟಿ ಪಾಠ ಕಲಿಸ್ತಾ ಇದ್ದೇನೆ!!. ಕುಂಟೆ ಕಟ್ಟಿದರೆ ಬೇರೆಯವರ ಗದ್ದೆಯ ಬೇಲಿ ಹಾರುವುದಿಲ್ಲ. ನನ್ನ ಮಾನವೂ ಉಳಿಯುತ್ತದೆ.   ಈ ಕರುವಿನಷ್ಟೇ ತುಂಟತನ ಮಾಡುವ ರಾಮ ಜೋಯಿಸರ ಮಗಳು ಶಶಿರೇಖಾ ಅಂತ ಒಬ್ಬಳು ನಿಮ್ಮ ಶಾಲೆಯಲ್ಲಿ ಓದ್ತಾ ಇದಾಳಲ್ಲ, ಅದೇ ಹೋದ ವರ್ಷ ಕೇರಂ ಆಟದಲ್ಲಿ ನನ್ನ ಹತ್ರನೇ ಫಸ್ಟ್ ಪ್ರೈಸ್ ಕೊಡಿಸಿದ್ರಲ್ಲ ಅವಳಿಗೆ, ಅವಳಿಗೊಂಚೂರು ಸರಿಯಾಗಿ ಪಾಠ ಹೇಳಿ".


ಮೂರ್ತಿ ಮೇಷ್ಟ್ರಿಗೆ ತಲೆ ಬುಡ ಅರ್ಥ ಆಗಲಿಲ್ಲ. "ಶಶಿರೇಖಾ ಎಂತ ಮಾಡಿದ್ಲು ಸೀನಪ್ಪಯ್ಯ?"


"ಅದನ್ನು ಅವಳ ಹತ್ರನೇ ಕೇಳಿ" ಅಂತ ಹೇಳಿ ಸೀನಪ್ಪಯ್ಯ ಕರುವಿನ ಹಗ್ಗ ಬಿಚ್ಚಿ, ಬೈಕ್ ಸ್ಟಾರ್ಟ್ ಮಾಡಿ ಹೊರಟರೆ, ಕರು ಹಿಂದುಗಡೆ ಅಷ್ಟೇ ಸ್ಪೀಡಲ್ಲಿ ಓಡ್ತಾ ಇದೆ!!


"ಬಾ ಮನೆಗೆ ಹೊಸಾ ಕುಂಟೆ ಕೆತ್ತಿ ಇಟ್ಟಿದೀನಿ" ಸೀನಪ್ಪಯ್ಯ ಕರುವಿಗೆ ಹೇಳ್ತಾ ಗೇರ್ ಬದಲಿಸಿದರು.


**

ಮರುದಿನ ಹೆಡ್ಮಾಸ್ಟ್ರು ರೂಮಲ್ಲಿ ವಿಚಾರಣೆ ಮುಂದುವರೆದಿತ್ತು...


"ಅದಕ್ಕೆ ನೆಡೆಯುವುದಕ್ಕೆ ಆಗದಂತೆ ಕುತ್ತಿಗೆಗೆ ಕುಂಟೆ ಕಟ್ಟಿದ್ರು ಸರ್, ನಾನು ಕುಂಟೆ ಬಿಚ್ಚಿ, ಕರು ಅರಾಮವಾಗಿ ನೆಡೆಯುವಂತೆ ಮಾಡಿದೆ ಸರ್" ವಿಚಾರಣೆಯಲ್ಲಿ ಶಶಿರೇಖಾಳ ಉತ್ತರ!!

"ನೀನ್ಯಾಕೆ ಅದನ್ನು ಬಿಚ್ಚಲು ಹೋಗಿದ್ದಿ?" ಮೂರ್ತಿ ಮೇಷ್ಟ್ರುದ್ದು ಗಟ್ಟಿ ಸ್ವರದ ಕ್ರಾಸ್ ಕೊಶ್ಚನ್!!

"ಸರ್, ಕಳೆದ ವಾರ ಪಾಠ ಮಾಡುವಾಗ ನೀವೇ ಹೇಳಿದ್ರಲ್ಲ, ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ, ದಯವೇ ಧರ್ಮದ ಮೂಲವಯ್ಯ ಅಂತ ಸರ್. ಕುಂಟೆಯ ತೂಕ ಕರುವಿಗೆ ಹೋರುವುದಕ್ಕೆ ಆಗ್ತಾ ಇರಲಿಲ್ಲ ಸರ್, ಕಾಲಿಗೆ ಬೇರೆ ತಾಗಿ ಅದಕ್ಕೆ ಸರಿಯಾಗಿ ನೆಡೆಯೋಕೆ ಆಗ್ತಾ ಇರಲಿಲ್ಲ ಸರ್. ನನಗೆ ನೀವು ಹೇಳಿದ್ದು ಸರಿ ಅನಿಸ್ತು ಸರ್. ಕರುವಿನ ಕುಂಟೆ ಬಿಚ್ಚಿದೆ ಸರ್. ನಿನ್ನೆ ಮತ್ತೊಂದು ಕುಂಟೆ ಕಟ್ಟಿದ್ರು ಸರ್. ಶಾಲೆಗೆ ಬರುವಾಗ ನಾನು ಪುನಃ ಕರುವಿನ ಕುಂಟೆ ಬಿಚ್ತಾ ಇದ್ದೆ ಸರ್. ಸೀನಪ್ಪಜ್ಜ ನೋಡಿ ಬಿಟ್ರು ಸರ್".

ಮತ್ತೆ ಕ್ರಾಸ್ ಕೊಶ್ಚನ್ ಇರಲಿಲ್ಲ, ಮೂರ್ತಿ ಮೇಷ್ಟ್ರು ಮೌನವಾಗಿ ತಲೆಗೆ ಕೈ ಕೊಟ್ಗಂಡು "ಸರಿ, ತರಗತಿಗೆ ಹೋಗು" ಅಂದ್ರು. 

ದೂರದಲ್ಲಿ ಕರುವಿನ ಅಂಬಾsss ಎನ್ನುವ ಧ್ವನಿ!!!

**

-ಅರವಿಂದ ಸಿಗದಾಳ್, ಮೇಲುಕೊಪ್ಪ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم