|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದುಬೈ ಯಕ್ಷಗಾನ ಅಭ್ಯಾಸ ತರಗತಿಯ ನಾಟ್ಯ ಗುರು ಶರತ್ ಕುಡ್ಲ

ದುಬೈ ಯಕ್ಷಗಾನ ಅಭ್ಯಾಸ ತರಗತಿಯ ನಾಟ್ಯ ಗುರು ಶರತ್ ಕುಡ್ಲ


ಧಾರೆಯೆರೆಯುತ್ತಿರುವ ಶರತ್ ಕುಡ್ಲ ಒಬ್ಬ ಅಸಾಧಾರಣ ಕಲಾವಿದ. ಹುಟ್ಟಿನಿಂದಲೇ ಅಂಟಿಕೊಂಡು ಬಂದಿದೆಯೇನೋ ಎಂಬಷ್ಟು ಸಹಜ ಲೀಲಾಜಾಲ ಲಯಶುದ್ಧಿ, ಕ್ಷಣದೊಳಗೆ ಚಿಗುರೊಡೆವ ವೈವಿಧ್ಯಮಯ ಯಕ್ಷಗಾನ, ಪ್ರಾಚೀನ ಪರಂಪರೆಗೆ ಎರವಾಗದ ನಾಟ್ಯ, ಪುಂಡುವೇಷದಲ್ಲಿ ಹೆಚ್ಚಿನ ಚಾಕಚಕ್ಯತೆ. ಯೌವನಕ್ಕೆ ಕಾಲಿಡುವ ಮುನ್ನ ನಾಟ್ಯ ಗುರು ನಿರ್ದೇಶಕನಾಗಿ ಕಾರ್ಯ ಸಿದ್ಧಿ. ಅದಕ್ಕೆ ಪೂರಕವಾಗಿ ಸ್ವಲ್ಪ ಮಟ್ಟಿನ ಭಾಗವತಿಕೆಯ ಅಭ್ಯಾಸ- ಹವ್ಯಾಸ. ಬಡಗುತಿಟ್ಟಿನ ನಾಟ್ಯ ಅಭ್ಯಾಸ ಮಾಡಿದ ಸಾಧಕ.


03.12.1992ರಂದು ದಿ. ಶೋಭ ಹಾಗೂ ದಿ. ವಸಂತ ಇವರ ಮಗನಾಗಿ ಜನನ. ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪೂರೈಸಿ ಉದ್ಯೋಗಕ್ಕೆ ದುಬಾಯಿಯತ್ತ ಪಯಣ. ಪದವೀಧರನಾಗುವ ಹೊತ್ತಿಗೆ ಪರಿಪೂರ್ಣ ಕಲಾವಿದನಾಗಿಯೂ ಸಿದ್ಧರಾಗಿದ್ದರು.


ಯಕ್ಷಗಾನ ಬಾಲ ಪಾಠವನ್ನು ಶ್ರೀ ದೇವಿಪ್ರಸಾದ್ ಐ ಕಟೀಲು ಹಾಗೂ ಶ್ರೀವತ್ಸ ಕಟೀಲು ಇವರಿಂದ ಕಲಿತು ನಂತರ ಮೋಹಿನೀ ಕಲಾ ಸಂಪದ ಕಿನ್ನಿಗೋಳಿ ನೇತೃತ್ವದ ಹೆಜ್ಜೆ- ಗೆಜ್ಜೆ ಲಲಿತ ಕೇಂದ್ರದಲ್ಲಿ ಲೋಕೇಶ್ ಐ ಕಟೀಲು ಹಾಗೂ ಶೇಖರ್ ಡಿ ಶೆಟ್ಟಿಗಾರ್ ಕಿನ್ನಿಗೋಳಿ ಇವರಿಂದ ಕಲಿತು ಶ್ರೀ ಜಯಂತ್ ಅಮೀನ್ ಸಂಚಾಲಕತ್ವದ ವಿನಾಯಕ ಮಕ್ಕಳ ಮೇಳ ಕೆರೆಕಾಡು ತಂಡದಲ್ಲಿ ಶ್ರೀ ಜಗನ್ನಾಥ್ ಆಚಾರ್ಯ ಇವರಿಂದ ಕಲಿತು ಮುಂದೆ ಸಮಗ್ರ ಯಕ್ಷಗಾನ ನಾಟ್ಯ, ಪ್ರಸಂಗ ನಡೆ, ರಂಗಕ್ರಮ ಮುಂತಾದವುಗಳನ್ನು ಶ್ರೀ ಮೋಹನ್ ಆಳ್ವಾ ಅವರ ಪ್ರೋತ್ಸಾಹದಿಂದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಮೂಲಕ ಕಲಿತರು. ಗುರುಗಳಾಗಿ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿ, ಶ್ರೀ ಸದಾಶಿವ ಡಿ ಶೆಟ್ಟಿಗಾರ್ ಕಿನ್ನಿಗೋಳಿ, ದಯಾನಂದ ಮಿಜಾರ್, ಪ್ರಸಾದ್ ಚೆರ್ಕಾಡಿ, ಪವನ್ ಕೆರ್ವಸೆ ದೊರಕಿದರು ಹಾಗೂ ಪುರಾಣ ಜ್ಞಾನ ಯೋಗೀಶ್ ಕೈರೋಡಿ, ವಿನಾಯಕ್ ಭಟ್ ಗಾಳಿಮನೆ ಮತ್ತು ಪ್ರಸಾಧನದ ಬಗ್ಗೆ ಗಂಗಾಧರ್ ಡಿ ಶೆಟ್ಟಿಗಾರ್ ಅವರಿಂದ ದೊರೆಯಿತು.

ಶ್ರೀ ಗಣೇಶ್ ಕೊಲೆಕಾಡಿಯವರಿಂದ ಭಾಗವತಿಕೆಯ ಪಾಠ ಹಾಗೂ ಅರ್ಥಗರಿಕೆಯನ್ನು ಅಧ್ಯಯನ ಮಾಡಿ, ಬಡಗು ನಾಟ್ಯವನ್ನು ಮಂಟಪ ಪ್ರಭಾಕರ ಉಪಾಧ್ಯಾಯ ಹಾಗೂ ಚಂದ್ರಶೇಖರ್ ನಾವಡ ಅವರಿಂದ ಕಲಿತು ಯಕ್ಷಗಾನದಲ್ಲಿ ಪರಿಪೂರ್ಣ ಕಲಾವಿದನಾಗಿ ರೂಪುಗೊಂಡರು.


ಶ್ರೀ ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಸುದರ್ಶನ ವಿಜಯ, ತರಣಿಸೇನ ಕಾಳಗ, ಕುಮಾರ ವಿಜಯ, ದಕ್ಷಾದ್ವರ, ವಿನಾಯಕ ಮಹಾತ್ಮೆ, ಶಬರಿಮಲೆ ಸ್ವಾಮಿ ಅಯ್ಯಪ್ಪ, ವೀರಮಣಿ ಕಾಳಗ, ಕೃಷ್ಣ ಲೀಲೆ, ಕಂಸ ವಧೆ, ಕುಂಭಕರ್ಣ ಕಾಳಗ, ಜಾಂಬವತಿ ಕಲ್ಯಾಣ, ಏಕಾದಶೀ ಶ್ರೀ ದೇವಿ ಮಹಾತ್ಮೆ, ಬಬ್ರುವಾಹನ ಕಾಳಗ, ಕೋಟಿ ಚೆನ್ನಯ, ಇಂದ್ರನಂದನ, ಕುಶ - ಲವ, ಅಭಿಮನ್ಯು ಕಾಳಗ ಮುಂತಾದ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.



ಸುದರ್ಶನ, ತರಣಿಸೇನ, ದೇವೇಂದ್ರ, ವಿಷ್ಣು, ಈಶ್ವರ, ದಿತಿ, ಪುರೋಹಿತನ ಮಡದಿ, ಯಕ್ಷ, ಮಾಲಿನಿ ದೂತ, ದೇವೇಂದ್ರ ಬಲ, ಕಾಳಿ, ಪಾತ್ರಿ, ಬೃಹಸ್ಪತಿ, ವೀರಭದ್ರ, ಮಣಿಕಂಠ, ಹರಿಹರ, ಚಂಡಾಸುರ, ಮುಂಡಸುರ, ಕೃಷ್ಣ, ಲಕ್ಷ್ಮಣ, ರಾಮ, ಬಲರಾಮ, ಗಜಾಸುರ, ಪ್ರಸೇನ, ವರಾಹ, ಗರುಡ, ಕುಂಭ, ಕೇಳುಪಂಡಿತ, ಶ್ರೀ ದೇವಿ, ಬಬ್ರುವಾಹನ, ಚೆನ್ನಯ್ಯ, ನಂದಿ, ವಾಲಿ, ಕುದುರೆ ದೂತ, ಸಾರಥಿ, ಕರ್ಣ ಇವರ ನೆಚ್ಚಿನ ಪಾತ್ರಗಳು.


ಶ್ರೀಯುತ ಶರತ್ ಕುಡ್ಲ ಅವರು ನೀಡಿರುವ ಪ್ರದರ್ಶನಗಳು:-

೧೩ನೇ ವರ್ಷ ಪ್ರಾಯದಲ್ಲಿ 'ಶ್ರೀ ದುರ್ಗಾಪರಮೇಶ್ವರಿ ವಿದ್ಯಾಕೇಂದ್ರ ಕಟೀಲು' ಇಲ್ಲಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಜರುಗಿದ ಕುಶ-ಲವ ಪ್ರಸಂಗದಲ್ಲಿ ಕುದುರೆ ದೂತನಾಗಿ ರಂಗಪ್ರವೇಶ ಮಾಡಿದ ಇವರು ಏಡ್ಸ್ ಜನಜಾಗೃತಿ ಪ್ರಯುಕ್ತ ನಡೆದ ಯಕ್ಷಗಾನದಲ್ಲಿ ಹಾಸ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.

ನಂತರ 'ವಿನಾಯಕ ಮಕ್ಕಳ ಮೇಳ ಕೆರೆಕಾಡು' ತಂಡ ಸೇರಿ ಬೆಂಗಳೂರು ಹಾಗೂ ಊರಿನ ನಾನಾ ಭಾಗಗಳಲ್ಲಿ ಯಕ್ಷ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಪರಿಪೂರ್ಣ ಅವಕಾಶ ಕಲ್ಪಿತವಾದದ್ದು ಆಳ್ವಾಸ್ ಸಂಸ್ಥೆಯ ಮೂಲಕ. 'ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ'ದ ಸದಸ್ಯನಾಗಿ, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲದೆ ಚೆನೈ, ಮುಂಬೈ ಹಾಗೂ ದುಬೈ, ಅಬುಧಾಬಿ, ಬೆಹರೈನ್ ದೇಶಗಳಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.


ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನ ಪ್ರದರ್ಶನಗಳಲ್ಲಿ ಹಾಗೂ ಯುನಿವರ್ಸಿಟಿ ಸ್ಪರ್ಧೆಗಳಲ್ಲಿ ಎಸ್.ಡಿ.ಎಂ. ಕಾಲೇಜು ಮಂಗಳೂರು,ಮುಲ್ಕಿ ವಿಜಯ ಕಾಲೇಜಿನಲ್ಲಿ ಭಾಗವಹಿಸಿದ್ದಾರೆ.

ಶ್ರೀ ಮದ್ ಜಗದ್ಗುರು ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಹಾಗೂ ಈಗಿನ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಶ್ರೀಗಳ ಆಶೀರ್ವಾದದಿಂದ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಡನೀರು ಮೇಳದಲ್ಲಿ ತಿರುಗಾಟ, ಕಟೀಲು ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ.


ತಪೋವನ ಉಜಿರೆ, ಕಲಾರಂಗ ಉಡುಪಿ ಇಲ್ಲಿ ನಡೆದ ಯಕ್ಷಗಾನ ಶಿಬಿರಗಳಲ್ಲಿ ಭಾಗವಹಿಸಿ ಹಿರಿಯ ಕಲಾವಿದರ ಮೂಲಕ ಹೆಚ್ಚಿನ ರಂಗ ಪ್ರಕ್ರಿಯೆಗಳ ಶಿಕ್ಷಣವನ್ನು ಪಡೆದಿರುತ್ತಾರೆ. ಶ್ರೀ ಪೃಥ್ವಿರಾಜ್ ಕವತ್ತಾರ್, ಶ್ರೀ ಪ್ರಜ್ವಲ್ ಪೆಜತ್ತಾಯ, ಶ್ರೀ ಶಿವು ಮೂಡಬಿದ್ರೆ, ಶ್ರೀ ಸಂದೀಪ್ ಮೂಡಬಿದ್ರೆ, ಶ್ರೀ ಗಣೇಶ್ ಸಾಣೂರು, ಶ್ರೀ ಸುಪ್ರೀತ್ ಮುಂತಾದವರ ಮೂಲಕ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇರುವೈಲು, ಬಾಚಕೆರೆ ಮೇಳ, ಕಲಾರಂಗ ಉಡುಪಿ, ಬಪ್ಪನಾಡು ಮುಂತಾದ ವೇದಿಕೆಯಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸಿದ್ದಾರೆ.


ಇನ್ಫೋಸಿಸ್ ಮಂಗಳೂರು ಇಲ್ಲಿ ಇಂಗ್ಲೀಷ್ ಯಕ್ಷಗಾನದಲ್ಲಿ ಭಾಗವಹಿಸಿದ್ದು, ೨೦೧೫ ರಲ್ಲಿ ಯಕ್ಷಧ್ರುವ ಶ್ರೀ ಸತೀಶ್ ಶೆಟ್ಟಿ ಪಟ್ಲ ನೇತೃತ್ವದ ಯಕ್ಷಗಾನ ತಂಡದಲ್ಲಿ ಸದಸ್ಯನಾಗಿ ಕುವೈಟ್ ನಲ್ಲಿ, ೨೦೧೬ ರಲ್ಲಿ ಯಕ್ಷಮಿತ್ರರು ತಂಡದ ಮೂಲಕ ಮಸ್ಕತ್ ನಲ್ಲಿ, ಹಾಗೂ ೨೦೧೮ ರಲ್ಲಿ ಪಟ್ಲ ಸಂಭ್ರಮದಲ್ಲಿ ದುಬೈ ತಂಡದ ಮೂಲಕ ಭಾಗವಹಿಸಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಪ್ರಭಾಕರ್ ಡಿ ಸುವರ್ಣ ಕರ್ನಿರೆ ಇವರ ಸಹಕಾರದಿಂದ "ಸುವರ್ಣ ಪ್ರತಿಷ್ಠಾನ ಕರ್ನಿರೆ" ಇದರ ವಾರ್ಷಿಕ ಕಾರ್ಯಕ್ರಮದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.


ಶ್ರೀ ದಿನೇಶ್ ಅಮ್ಮಣ್ಣಾಯರು, ಶ್ರೀ ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಶ್ರೀ ಬಾಲಕೃಷ್ಣ ಮವ್ವಾರು, ಶ್ರೀ ಶಶಿಧರ ಕುಲಾಲ್ ಕನ್ಯಾನ, ಶ್ರೀ ರಾಹುಲ್ ಕುಡ್ಲ, ಶ್ರೀ ವಿಕ್ರಂ ಮಯ್ಯ, ಶ್ರೀ ಲಕ್ಷ್ಮಣ್ ಮರಕಡ, ಶ್ರೀ ಧನು ಎಡನೀರು, ಶ್ರೀ ನಾರಾಯಣ ಎಡನೀರು ಮುಂತಾದವರು ಅವಕಾಶ ಕಲ್ಪಿಸುವುದರ ಜೊತೆಗೆ ಸದಾ ಪ್ರೋತ್ಸಾಹಿಸುತ್ತಿದ್ದರು ಎಂದು ಶರತ್ ಅವರು ಹೇಳುತ್ತಾರೆ.

ಪ್ರಸ್ತುತ ಯಕ್ಷಗಾನ ಅಭ್ಯಾಸ ತರಗತಿ ದುಬೈ ಇದರ ಸಕ್ರಿಯ ಸದಸ್ಯನಾಗಿ ಯು.ಎ.ಇ. ಯ ವಿವಿಧ ಭಾಗಗಳಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದಾರೆ.


ಆಳ್ವಾಸ್ ನ ಪ್ರಾಥಮಿಕ ತರಗತಿಯ ಮಕ್ಕಳಿಗೆ ಪ್ರಸಂಗ ತರಬೇತಿ ನೀಡಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ತನ್ನದಾಗಿಸಿಕೊಂಡದ್ದು. ಗುರು ಸದಾಶಿವ ಶೆಟ್ಟಿಗಾರ್ ಕಿನ್ನಿಗೋಳಿ ಇವರ ಮೂಲಕ ಮಂಗಳೂರು ವಿಶ್ವ ವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ.ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಯಕ್ಷ ಮಂಗಳದಲ್ಲಿ ಶ್ರೀ ಚೆನ್ನಪ್ಪ ಗೌಡ, ಶ್ರೀ ಧನಂಜಯ ಕುಂಬ್ಳೆ, ಶ್ರೀ ಸತೀಶ್ ಕೊಣಾಜೆ, ಶ್ರೀಮತಿ ರಾಜಶ್ರೀ ಇವರೆಲ್ಲರ ಪ್ರೋತ್ಸಾಹ ಸಹಕಾರದಿಂದ ಗುರುವಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುವುದರ ಮುಖೇನ ಉತ್ತಮವಾದ ಯಕ್ಷಗಾನ ಪ್ರದರ್ಶನ. ಪ್ರಸ್ತುತ ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಇಲ್ಲಿ ಗುರುಗಳಾದ ಶ್ರೀ ಶೇಖರ್ ಡಿ ಶೆಟ್ಟಿಗಾರ್ ಕಿನ್ನಿಗೋಳಿ ತಂಡದ ಸಂಚಾಲಕರಾದ ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ಹಾಗೂ ಎಲ್ಲಾ ಯಕ್ಷ ಕಲಾಭಿಮಾನಿಗಳ ಸಹಕಾರದಿಂದ ನಾಟ್ಯ ಗುರುವಾಗಿ ಸೇವೆಯನ್ನು ಮಾಡುತ್ತಿದ್ದಾರೆ.


ಇವರು ಭಾಗವಹಿಸಿರುವ ಸ್ಪರ್ಧೆಯಲ್ಲಿ ಹಾಗೂ ಇವರಿಗೆ ಸಿಕ್ಕಿರುವ ಸನ್ಮಾನ ಪುರಸ್ಕಾರಗಳು:-

◆ ಕಟೀಲು ಯಕ್ಷಗಾನ ತಂಡದ ಸದಸ್ಯನಾಗಿ ಮಧುಸೂದನ ಕುಶೆ ಮಂಗಳೂರು ಇದರ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ತಂಡ ಪ್ರಶಸ್ತಿ.

◆ 2013 ಆಳ್ವಾಸ್ ಧೀಂಕಿಟ ಯಕ್ಷಗಾನ ತಂಡದ ಮೂಲಕ ಎಸ್.ಡಿ.ಎಂ ಮಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ತಂಡ ಪ್ರಶಸ್ತಿ.

◆ 2014 ರಲ್ಲಿ ಮುಲ್ಕಿ ವಿಜಯ ಕಾಲೇಜ್ ನ ಯಕ್ಷ ವಿಜಯ ಕೇಸರಿ ಸ್ಪರ್ಧೆಯಲ್ಲಿ ಪ್ರಥಮ ತಂಡ ಪ್ರಶಸ್ತಿ ಜೊತೆಗೆ ಇವರು ಮಾಡಿದ ಸುದರ್ಶನ ಪಾತ್ರಕ್ಕೆ ಪ್ರಥಮ ಪುಂಡುವೇಷ ಪ್ರಶಸ್ತಿ.

◆ ಮಂಗಳೂರಿನಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ಯಕ್ಷ ಭಾಗವತಿಕೆಗೆ ದ್ವಿತೀಯ ಪ್ರಶಸ್ತಿ ಜೊತೆಗೆ ಸಮಗ್ರ ತಂಡ ಪ್ರಶಸ್ತಿ.

◆ ಕುವೈಟ್ ಬಿಲ್ಲವ ಸಂಘ, ಮಸ್ಕತ್ ತುಳು ಸಂಘಟನೆ ವತಿಯಿಂದ ಪುರಸ್ಕಾರ.

◆ ಶ್ರೀ ವಾಸು ಬಾಯಾರು ಅವರ ಸಹಕಾರದಿಂದ ನಮ್ಮ ಕುಡ್ಲದಲ್ಲಿ ಯಕ್ಷ ಸಂದರ್ಶನ.


ಮಿಮಿಕ್ರಿ, ನಾಟಕ, ನೃತ್ಯ, ಕ್ರೀಡೆ ಇವರ ಹವ್ಯಾಸಗಳು.

ಕಟೀಲು ವಿದ್ಯಾ ಕೇಂದ್ರದಲ್ಲಿ ಎನ್.ಸಿ.ಸಿ ಪ್ರೌಢ ಶಾಲಾ ವಿಭಾಗದಲ್ಲಿ ಕಮಾಂಡರ್ ಆಗಿ ವಿವಿಧ ಕ್ಯಾಂಪ್ ಗಳಲ್ಲಿ ಭಾಗವಹಿಸಿದ್ದಾರೆ.

ಕಟೀಲು ವಿದ್ಯಾಕೇಂದ್ರದಲ್ಲಿ ಭಾರತೀ ಎಸ್.ಶೆಟ್ಟಿ ಅವರ ನಿರ್ದೇಶನದ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم