|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಯಕ್ಷಗಾನ ಪ್ರಸಂಗಕರ್ತೆ ಶುಭಾಶಯ

ಪರಿಚಯ: ಯಕ್ಷಗಾನ ಪ್ರಸಂಗಕರ್ತೆ ಶುಭಾಶಯ


ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಆದರೆ ಯಕ್ಷಗಾನ ಮಹಿಳಾ ಕಥಾಕರ್ತೆಯರು ಕಾಣ ಸಿಗುವುದು ಅಪರೂಪ. ಇಂತಹ ಪ್ರಸಂಗಕರ್ತೆ ಪೈಕಿ ಮಿಂಚುತ್ತಿರುವವರು ಶುಭಾಶಯ.


ಸುಳ್ಯ ತಾಲೂಕು ಬಲ್ನಾಡುವಿನ ಬಸದಿ ಮನೆಯಲ್ಲಿ ಡಿಸಂಬರ್ 03 ರಂದು ಶ್ರೀಮತಿ ಯಶೋದಾ ಮತ್ತು ಆದಿರಾಜ ಇಂದ್ರ ಇವರ ಮಗಳಾಗಿ ಜನನ. ಎಂ ಎಸ್ಸಿ ಸೈಕಾಲಜಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕ ಪದವಿ, ಹಾಗು ಡಿಎಂ ಎಲ್ ಟಿ ಇವರ ವಿದ್ಯಾಭ್ಯಾಸ. ಯಕ್ಷಗಾನವೇ ಪ್ರಸಂಗ ಬರೆಯಲು ಪ್ರೇರಣೆ ಎಂದು ಹೇಳುತ್ತಾರೆ ಶುಭಾಶಯ.


ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಇದೆಯಾ ಹಾಗೂ ವೇಷ ಮಾಡಿದ ಅನುಭವದ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ವೇಷ ಮಾಡುವ ಆಸಕ್ತಿ ಇಲ್ಲ. ಹೈಸ್ಕೂಲು ದಿನಗಳಲ್ಲಿ, 3 ವರ್ಷ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳ ಕುಪ್ಪೆಪದವಿನಲ್ಲಿ ತೆಂಕು ತಿಟ್ಟು ನಾಟ್ಯಗಾರಿಕೆ ಕಲಿತು ಹಲವು ವೇಷಗಳನ್ನು ಮಾಡಿದ್ದೇನೆ, ದೇವೇಂದ್ರ, ಪ್ರೇತ, ರಾಕ್ಷಸ ಬಲ, ಸ್ತ್ರೀ ವೇಷ ನಿರ್ವಹಿಸಿದ್ದೇನೆ ಎಂದು ಹೇಳುತ್ತಾರೆ ಶುಭಾಶಯ.


ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪಗಳಿವೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಹಿಂದೆಯೆಲ್ಲ ಯಕ್ಷಗಾನವೇ ಒಂದು ಶಾಲೆ ಇದ್ದಂತೆ ಎಂದು ಹೇಳ್ತಾ ಇದ್ರು. ಯಕ್ಷಗಾನದಲ್ಲಿ ಸಾಕಷ್ಟು ವಿಚಾರಗಳು ನೀತಿ ಬೋಧನೆಗಳು ಸಿಗುತ್ತಿದ್ದವು. ಈಗ ಹೊಸ ಪ್ರಸಂಗಗಳಲ್ಲಿ ಸಂದೇಶ ಹಾಗು ನೀತಿ ಕಡಿಮೆಯಾದಾಗ ಅಥವಾ, ಮನರಂಜನೆಯ ಹೆಸರಿನಲ್ಲಿ ವಿಹಿತವಲ್ಲದ ಪ್ರಯೋಗಗಳಾದಾಗ ಆಕ್ಷೇಪಗಳು ಸಹಜ. ಅಂತಿಮವಾಗಿ ಪ್ರೇಕ್ಷಕನ ಬೇಕು ಬೇಡವೇ ಇಲ್ಲಿ ಮುಖ್ಯ.


ಯಕ್ಷಗಾನ ಪ್ರಸಂಗದ ಪದ್ಯ ಬರೆಯುವ ಬಗ್ಗೆ ನಿಮ್ಮ ನಿಲುವು ಏನು ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ನಮ್ಮ ಕಥೆಗೆ ನಾವೇ ಪದ್ಯ ಬರೆಯುವುದು ಖುಷಿಯ ವಿಚಾರ. ಯಕ್ಷಗಾನದ ನಿಜವಾದ ಸೌಂದರ್ಯ ಅರಿವಾಗಬೇಕಾದರೆ ಛಂದಸ್ಸಿನ ಬಗ್ಗೆ  ತಿಳಿದುಕೊಳ್ಳಬೇಕು. ಯಕ್ಷಗಾನ ಸಾಹಿತ್ಯದಲ್ಲಿ ಬಳಕೆಯಾಗಿರುವ ಛಂದಸ್ಸುಗಳು ಸುಂದರವಾದ ಅದ್ಭುತ ರಚನೆಗಳು. ಕೆಲವು ಛಂದಸ್ಸುಗಳು ಸಂಕೀರ್ಣವಾಗಿದೆ. ಛಂದಸ್ಸಿನಲ್ಲಿ ಸಾಹಿತ್ಯ ರಚಿಸೋದು ಕ್ಲಿಷ್ಟವಾದರೂ ಒಮ್ಮೆ ಸಾಹಿತ್ಯದ ಆಸಕ್ತಿ ಮೂಡಿದ್ರೆ ಈ ರಚನೆಗಳು ತುಂಬಾ ಮೋಡಿ ಮಾಡಿ  ಬಿಡುತ್ತವೆ. ಕೇವಲ ಛಂದಸ್ಸು ಮಾತ್ರವಲ್ಲದೆ ಪದ್ಯದ ಗೇಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಪದ್ಯ ರಚನೆ ಮಾಡೋದು ಯಕ್ಷಗಾನ ಸಾಹಿತ್ಯದ ವೈಶಿಷ್ಟ್ಯತೆ. ನಮ್ಮ ಕಥಾ ಹಂದರಕ್ಕೆ ನಾವೇ ಪದ್ಯ ಬರೆದಾಗ ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಎಲ್ಲೋ ಎಂ ಕೆ ಯಂಥವರು ಕೆಲವರು ಮಾತ್ರ ಇನ್ನೊಬ್ಬರ  ಕಥೆಯನ್ನು ಅರ್ಥ ಮಾಡಿಕೊಂಡು ಸಮರ್ಥವಾಗಿ ಪದ್ಯ ಬರೆಯಬಲ್ಲರು.




ಪ್ರಸಂಗ ಬಿಟ್ಟು ಬೇರೆ ಯಾವ ರೀತಿಯ ಬರವಣಿಗೆ ಅಳವಡಿಸಿಕೊಂಡಿದ್ದೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

Shubhashayaspeaking.blogspot.com ಎಂಬ ಹೆಸರಿನಲ್ಲಿ 1000ಕ್ಕೂ ಹೆಚ್ಚು ಬ್ಲಾಗ್ ಬರೆದಿದ್ದೇನೆ ಎಂದು ಹೇಳುತ್ತಾರೆ ಶುಭಾಶಯ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಇಂದು ಯಕ್ಷಗಾನ ತುಂಬಾ ಉಛ್ಛ್ರಾಯ ಸ್ಥಿತಿಯಲ್ಲಿದೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ಪ್ರೇಕ್ಷಕರಲ್ಲಿ ಕೆಲವರು ವೇಷದ ಆಕರ್ಷಣೆ, ನಾಟ್ಯದ ಆಕರ್ಷಣೆ, ಹಾಗೂ ಗಾನದ ಆಕರ್ಷಣೆಗೆ ಮಾತ್ರ ಬರುವವರು ಇದ್ದಾರೆ. ಮತ್ತೂ ಕೆಲವರು ಸಂಪೂರ್ಣ ಯಕ್ಷಗಾನವನ್ನು ಆಸ್ವಾದಿಸಲು ಬರುವವರ ವರ್ಗವು ಇದೆ. ಇದು ಸಣ್ಣ ವರ್ಗ. ಈ ವರ್ಗ ಪ್ರತಿಯೊಂದು ವಿಭಾಗವನ್ನು ಸೂಕ್ಷ್ಮವಾಗಿ ಗಮನಿಸಬಲ್ಲರು. ಒಂದು ಯಕ್ಷಗಾನ ಪ್ರದರ್ಶನವು ತನ್ನ ಸತ್ವ ಕಳೆದುಕೊಂಡಾಗ ಇಂತಹ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ. ಹಾಗಾಗಿ ಸಂಪೂರ್ಣ ಯಕ್ಷಗಾನದ ಬಗ್ಗೆ ಬಹುಪಾಲು ಜನರಲ್ಲಿ ಸದಭಿರುಚಿ ಮೂಡಿಸಬೇಕಾದ ಅಗತ್ಯವಿದೆ. ಈಗಿನ ಯಕ್ಷಗಾನ ಪ್ರೇಕ್ಷಕರು ಸಾಮಾಜಿಕ ಪ್ರಸಂಗಗಳನ್ನು ಇಷ್ಟ ಪಡುವುದರಿಂದ, ಪೌರಾಣಿಕ ಪ್ರಸಂಗಗಳ ಎತ್ತರಕ್ಕೆ ಸಾಮಾಜಿಕ ಜವಾಬ್ದಾರಿಯುಳ್ಳ ಪ್ರಸಂಗಗಳು ಮೂಡಿ ಬರಬೇಕಾದ ಅಗತ್ಯವಿದೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಇನ್ನಷ್ಟು ಹೊಸ ವಿಚಾರಧಾರೆಗಳನ್ನು ಯಕ್ಷಗಾನದಲ್ಲಿ ಪ್ರಯೋಗಿಸಬೇಕು, ಹಳೆಯ ಛಂದಸ್ಸು ಹಾಗು ಪ್ರಸಂಗಗಳ ಬಗ್ಗೆ ಇನ್ನಷ್ಟು ಅಧ್ಯಯನ ಮಾಡುವುದು ಮುಂದಿನ ಯೋಜನೆ ಎಂದು ಹೇಳುತ್ತಾರೆ ಶುಭಾಶಯ.


ಯಕ್ಷರಂಗದಲ್ಲಿ ನಿಮಗೆ ಮಾರ್ಗದರ್ಶನ ನೀಡಿದವರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಹೆಜ್ಜೆ ಕಲಿತದ್ದು, ಸೂರ್ಯ ನಾರಾಯಣ ಪದಕಣ್ಣಾಯ ಭಟ್ ಅವರಲ್ಲಿ. ಛಂದಸ್ಸಿನ ಬಗ್ಗೆ, ಗುರುಗಳಾದ ಗಣೇಶ್ ಕೊಲೆಕಾಡಿಯವರಿಂದ ಮಾರ್ಗದರ್ಶನ ಪಡೆಯುತ್ತಿದ್ದೇನೆ. ಪ್ರಸಂಗ ನಡೆ ಹಾಗು ಇನ್ನಿತರ ಕ್ರಮಗಳ ಬಗ್ಗೆ ಎಂ.ಕೆ ರಮೇಶ್ ಆಚಾರ್ ತಿಳಿಸಿಕೊಡುತ್ತಾರೆ.


ಶ್ರೀಮತಿ ಶುಭಾಶಯ ಅವರು ಬರೆದಿರುವ ಪ್ರಸಂಗಗಳು:-

◆ ಗರ್ಭಗುಡಿ (ಪದ್ಯ ರಚನೆ: ಎಂ ಕೆ ರಮೇಶ್ ಆಚಾರ್)

◆ ಭಾವನಂ ಭಾವ ನಾಶನಂ (ಪ್ರದರ್ಶನ ಕಂಡಿದೆ)

◆ ಶತರೂಪೆ (ಪೌರಾಣಿಕ)

◆ ನೀಲಾಂಜನಾ (ಪೌರಾಣಿಕ)

◆ ಮಾಳವಿಕಾ (ಪೌರಾಣಿಕ)

◆ ಕಾದಂಬರಿ (ಕಾಲ್ಪನಿಕ)

◆ ವಾಗ್ದೇವಿ ಶ್ರೀದೇವಿ (ಕಾಲ್ಪನಿಕ)

◆ ಚಂದಮಾಮ (ಶಿಶು ಪ್ರಸಂಗ)


ಬೈಕಿಂಗ್, ಯೋಗ, ಸ್ವಿಮ್ಮಿಂಗ್, ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಗಳನ್ನು ಓದುವುದು ಇವರ ಹವ್ಯಾಸಗಳು.

ನಾನು ಯಾವುದೇ ಹಣ ಸಂಪಾದನೆ, ಸನ್ಮಾನ ಪ್ರಶಸ್ತಿ ಹಾಗೂ ಪ್ರಚಾರಕ್ಕಾಗಿ ಪ್ರಸಂಗ ಬರೆಯುತ್ತಿಲ್ಲ. ಯಕ್ಷಗಾನದ ಸಾಹಿತ್ಯ ನನ್ನನ್ನು ಬಹಳ ಆಕರ್ಷಿಸಿದೆ. ಆ ಹಿನ್ನಲೆಯಲ್ಲಿ, ಒಂದಷ್ಟು ಛಂದಸ್ಸಿನ ಪುಸ್ತಕ, ಹಾಗೂ ಹಳೆಯ ಪ್ರಸಂಗಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುತ್ತಿದ್ದೇನೆ. ನನಗೆ ದೊರಕಿರುವ ಆತ್ಮ ತೃಪ್ತಿ ಹಾಗೂ ಸಂತೋಷವೇ ನನಗೆ ಸಿಕ್ಕಿರುವ ಅತಿ ದೊಡ್ಡ ಸನ್ಮಾನ ಎಂದು ಹೇಳುತ್ತಾರೆ ಶುಭಾಶಯ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم