ವಸಂತ ಮಾಸವು ಬಂದರೆ ಸಾಕು
ಕೋಗಿಲೆ ತಾನೇ ಹಾಡುವುದು
ಚೆಲವೆಯೆ ನೀನು ಹಾಡಿದರಲ್ಲಿ
ಕೋಗಿಲೆಯೂ ತಲೆ ಬಾಗುವುದು.
ಬಾನಲಿ ಮೋಡವು ಹಾಕಲು ಮುಸುಕು
ಸಹಜದಿ ನವಿಲು ಕುಣಿಯುವುದು
ಚೆಲುವೆಯೆ ನೀನು ನಡೆದರೆ ಸಾಕು
ನವಿಲೂ ಕುಣಿತವ ನಿಲಿಸುವುದು
ಸೂರ್ಯನ ನೋಟವು ಬಿದ್ದರೆ ಸಾಕು
ಹಿಮವೇ ಕರಗಿ ನೀರಾಗುವುದು
ನಿನ್ನಯ ಕಣ್ಣಿನ ನೋಟಕೆ ತರಳೆಯೆ
ಮಂಜಿನ ಬೆಟ್ಟವೆ ನಡುಗುವುದು
ಬೆಟ್ಟದಿ ಜಾರುತ ಕೆಳಗಿಳಿವಂಥ
ನೊರೆ ನೊರೆ ನೀರೇ ಬಲು ಚಂದ
ಬಳುಕುತ ನಡೆಯುವ ನಿನ್ನನು ನೋಡಿ
ನೀರಂದಿತು ನೀರೇ ನೀನಂದ
ಯುದ್ಧೋನ್ಮಾದದ ಮನದಂಗಳದಲಿ
ದ್ವೇಷಾಗ್ನಿಯೆ ವಿಜ್ರಂಭಿಸುವುದು
ನಿನ್ನಯ ಕಣ್ಣಂಚಿನ ಹನಿಯೊಂದು
ರೋಷಾಗ್ನಿಯನೆ ತಣಿಸುವುದು
ಮುಸ್ಸಂಜೆಯ ಆ ಕಪ್ಪಿನ ಮೋಡವು
ಬಾನಿಗೆ ಶೋಭೆಯ ತುಂಬುವುದು
ನಿನ್ನಯ ಮೋಹಕ ಮುಂಗುರುಳಿಗೆ
ಮೋಡವೆ ಮುಜುಗರ ತಾಳಿಹುದು.
ಆಕಾಶದಲಿ ತಾರಾಲೋಕದಿ
ಚಂದಿರ ತಾನೆ ಬಲು ಚಂದ
ನಿನ್ನಯ ವದನವ ನೋಡುತ ಚಂದಿರ
ನಾ ನಿನಗೆ ಸಮನಲ್ಲೆಂದ
**********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ