ಆಗಸದಿ ತಿಳಿಕಂಪ ಬೆಳಕಿನಲಿ
ಚಿತ್ತಾರದ ಕಲೆಯ ಬಿಡಿಸಿದವರಾರು
ಬಾನಂಗಳದಿ ವರ್ಣ ಮೋಡಗಳಲಿ
ರುಜುವಿತ್ತು ಅಕ್ಷರವ ಬರೆದವರಾರು
ದಾರಿದೀಪದೊಡ ನಿನ್ನ ಮೌನಮಾತು
ದಾರಿಹೋಕರಿಗದು ಬರಿ ಮುಂಜಾನೆ ಹೊತ್ತು
ರವಿ ಇಣುಕುತ್ತಿಹನು ಸಂಧಿಯಲಿ
ಕಲ್ಪವೃಕ್ಷಮಾತೆಯ ಸೆರಗಿನಂಚಿನಲಿ
ದಾರಿ ಸ್ನೇಹಿತ ಆಮಂತ್ರಿಸುತ್ತಿರುವನು
ಜನರನ್ನಲ್ಲದೆ ತನ್ನ ಸಖ ನೇಸರನನ್ನು
ಇದ ಕಂಡ ನಿಮಗಿಲ್ಲಿ ಮುಂಜಾನೆ,
ಮುಸ್ಸಂಜೆಯೋ ಎಂಬ ದ್ವಂದ್ವವಿಲ್ಲಿ
ಈ ಸೊಬಗ ಕ್ಷಣ ದಿನದ ಆರಂಭವಿಲ್ಲಿ
ಪ್ರಕೃತಿಯೊಳು ಸೌಂದರ್ಯವ ಇಟ್ಟವರಾರು
ಮರಗಿಡಗಳಿಗೆ ಜೀವ ತುಂಬಿದವರಾರು
ಬಾನಿನಲಿ ತೇಲಿ ಬಂದ ಮೇಘಗಳ ನಡಿಗೆಯ ವರ್ಣಿಸಿ
ಗೆಜ್ಜೆ ಕಟ್ಟಿ ಅದ ಕುಣಿಸುವರಾರು.....?
-ಅರ್ಪಿತಾ ಕುಂದರ್