ಬಿಪಿನ್ ರಾವತ್ ಬೇಕಿತ್ತು ಯಾವತ್ತೂ
ಭಾರತಾಂಬೆಗೆ ಒಂದು ರಕ್ಷಣೆಯ ಕವಚ
ಕುತ್ಸಿತ ಮನೋಭಾವ ತುಂಬಿ ನುಸುಳಿ
ಮಸೆಯುವವರಿಗೆ ಅವರು ಸಿಂಹ ಸ್ವಪ್ನ
ವಿಧಿಗೇಕೆ ಈ ರೀತಿ ಮುನಿಸು ಭಾರತಿಯಲ್ಲಿ
ಪುಷ್ಪಕವಿಮಾನವದು ರಾವಣನದಲ್ಲ
ನಿಧಿಯೊಂದು ಕಳೆದಾಗ ಬರುವ ದುಗುಡ
ಇರದಿಷ್ಟು ಘೋರ ನಿಜ ಮರಣ ಗಂಟೆ
ದೇಶಕ್ಕೆ ದೇಶವೇ ಕಣ್ಣೀರ ಕೋಡಿಯನು
ಹರಿಸುವುದು ಬರಿ ಕಪಟ ಧಾರೆಯಲ್ಲ
ನಷ್ಟವನು ಲೆಕ್ಕಕ್ಕೆ ಹಾಕುವುದು ಕಷ್ಟವೇ
ಆಗಿಹುದು ಇಂಥವರ ಕಳೆದು ಕೊಂಡು
ಅವರಾತ್ಮ ಚಿರವಾಗಿ ಅಮರವಾಗಲಿ ನಿತ್ಯ
ಮರಳಿ ಜನಿಸಲಿ ಭರತ ಭೂಮಿಯಲ್ಲಿ
ಬೇಕು ರಾಷ್ಟ್ರಕೆ ಬಹಳ ರಾವತ್ ರಂಥವರು
ಭದ್ರವಾಗಲು ನಮ್ಮ ನೆಲೆಯ ಕೋಟೆ
*******
ಮುಕ್ತಕ: ನಿರ್ಗಮನ
ದೂರವಾದರೆ ಬಹಳ ಬೆಲೆಯಿರುವ ಸೇನಾನಿ
ಹಾರುತಿರೆ ಗಗನದಲಿ ಬಹಳ ಖೇದ
ಶೂರ ರಾವತ್ ರವರ ನೆನೆಯುತಲಿ ದುಗುಡವದು
ಆರದಿಹ ದೀಪದೊಲು ಧೀರತಮ್ಮ.
ಡಾ ಸುರೇಶ ನೆಗಳಗುಳಿ
*****
ಗಝಲ್- ನುಡಿನಮನ
ಅರ್ಧಕಾಲವು ನಿದ್ದೆ ನಮ್ಮಲ್ಲಿ ಕೆಲವರಿಗೆ ಬದುಕಿನವಧಿಯಲಿ
ಅರ್ಧ ಶತಮಾನವೂ ದೇಶ ಯೋಧನಾದವಗೆ ಬದುಕಿನವಧಿಯಲಿ
ಕಾಯುತ್ತಿರುತ್ತಾರೆ ಹಲವರು ವಿಶ್ರಾಂತ ಕಾಲ ಬೇಗ ಬರಲೆಂದು
ಅವಿಶ್ರಾಂತ ಚುಟುವಟಿಕೆಯೇ ರಾವತ್ ಗೆ ಬದುಕಿನವಧಿಯಲಿ
ಸೆಟೆದು ನಿಲ್ಲವುದು ಪುಕ್ಕಲನಿಗೆ ಸಾಧ್ಯವಾಗದ ವಿಷಯ ಹೌದಲ್ಲ
ಬಾಗದೇ ನಡೆಯುವಾಸೆ ನಿಜ ಶೂರನಿಗೆ ಬದುಕಿನವಧಿಯಲಿ
ಎಲ್ಲಿರುವುದೋ ಹೇಗಿರುವುದೋ ಮರಣದ ಕರಿಛಾಯೆ
ಬಾಂದಳದಲ್ಲೂ ಅಫಘಾತವೇ ಕೊನೆಗೆ ಬದುಕಿನವಧಿಯಲಿ
ನುಡಿನಮನ ಅನಿವಾರ್ಯ ಮರಳಿ ಬರಿಸಲಾರೆನಾದರೂ ಈಶಾ
ನಮಗೂ ಇರಲಿ ಭಕ್ತಿ ಅವರ ಚರ್ಯೆಯ ಬಗೆಗೆ ಬದುಕಿನವಧಿಯಲಿ
-ಡಾ ಸುರೇಶ ನೆಗಳಗುಳಿ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ