|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಡಿಎಸ್ ಜನರಲ್ ಬಿಪಿನ್ ರಾವತ್‌: ಅನುಪಮ ಸೇವೆಯ ಮಹಾನ್ ದಂಡನಾಯಕನಿಗೆ ದೇಶದ ನಮನ

ಸಿಡಿಎಸ್ ಜನರಲ್ ಬಿಪಿನ್ ರಾವತ್‌: ಅನುಪಮ ಸೇವೆಯ ಮಹಾನ್ ದಂಡನಾಯಕನಿಗೆ ದೇಶದ ನಮನ



ಬಿಪಿನ್ ರಾವತ್ ಅವರು ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ 1958ರ ಮಾರ್ಚ್ 16ರಂದು ಜನಿಸಿದರು. ಇವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಅವರು ಕೂಡ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಬಿಪಿನ್ ರಾವತ್ ಅವರು ಸಾವಿರ 1978 ರಲ್ಲಿ ಸೇನೆಗೆ ಸೇರಿ ಸುಮಾರು 43 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.


ಬಿಪಿನ್ ರಾವತ್ ಅವರು ಡೆಹರಾಡೂನ್ ಕೇಂಬ್ರಿಡ್ಜ್ ಹಾಲ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಹಾಗೂ ಸಿಮ್ಲಾದ ಸೆಂಟ್ ಎಡ್ವರ್ಡ್ ಸ್ಕೂಲ್ ನಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಡೆಹರಾಡೂನ್ ನಲ್ಲಿ ಮಿಲಿಟರಿ ಅಕಾಡೆಮಿಗೆ ಸೇರ್ಪಡೆಯಾಗಿ ಸೈನ್ಯದ ತರಬೇತಿಯನ್ನು ಪಡೆದುಕೊಂಡಿದ್ದರು.


ಇವರು 1978 ರಲ್ಲಿ ಗೂರ್ಖಾ ರೆಜಿಮೆಂಟ್ ಮುಖಾಂತರ ಸೇನೆಗೆ ನಿಯುಕ್ತಿಗೊಂಡರು. ಬ್ರಿಗೇಡ್ ಕಮಾಂಡರ್, ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಜಿಒಸಿ-ಸಿ), ಸದರ್ನ್ ಕಮಾಂಡ್, ಮಿಲಿಟರಿ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿ ಜನರಲ್ ಸ್ಟಾಪ್ ಆಫೀಸರ್ ಗ್ರೇಡ್ 2, ಕರ್ನಲ್ ಮಿಲಿಟರಿ ಕಾರ್ಯದರ್ಶಿ ಹಾಗೂ ಉಪ ಮಿಲಿಟರಿ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಮಿಲಿಟರಿ ಕಾರ್ಯದರ್ಶಿಯ ಶಾಖೆ ಹಾಗೂ ಜೂನಿಯರ್ ಕಮ್ಯಾಂಡ್ ವಿಂಗ್ ನಲ್ಲಿ ಹಿರಿಯ ಬೋಧಕರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ.


ಬಿಪಿನ್ ರಾವತ್ ಯುನೈಟೆಡ್ ನೇಷನ್ಸ್ ಪೀಸ್ ಕೀಪಿಂಗ್ ಫೋರ್ಸ್ ಇದರ ಭಾಗವಾಗಿದ್ದರು. ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್ ಗೆ ಕಮಾಂಡರ್ ಆಗಿ ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2016ರಲ್ಲಿ ಭಾರತದ ಮೂರು ಸೇನಾಪಡೆಗಳ ಮುಖ್ಯಸ್ಥರಾಗಿ ನಿಯೋಜನೆ ಹೊಂದಿದರು.


ಬಿಪಿನ್ ರಾವತ್ ಅವರ ವೈಯುಕ್ತಿಕ ಬದುಕು


ಮಧುಲಿಕಾ ರಾವತ್ ಅವರ ಜೊತೆ ವಿವಾಹವಾದ ಬಿಪಿನ್ ರಾವತ್ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಇವರ ಪತ್ನಿ ಮಧುಲಿಕಾ ರಾವತ್ ಭಾರತೀಯ ಸೇನೆಯಲ್ಲಿ ಮಹಿಳಾ ಕಲ್ಯಾಣ ಸಂಘದ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಸೇನಾ ಕುಟುಂಬ


ಬಿಪಿನ್ ರಾವತ್ ಅವರ ಕುಟುಂಬವೇ ಭಾರತೀಯ ಸೈನ್ಯಕ್ಕೆ ಸೇವೆಯನ್ನು ಸಲ್ಲಿಸಿತ್ತು. ಇವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಇವರ ಚಿಕ್ಕಪ್ಪಂದಿರಾದ ಹರಿನಂದನ್, ಭರತ್ ಸಿಂಗ್ ರಾವತ್ ಅವರು ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.


ಸೇನೆಗೆ ಕೊಡುಗೆ


1987ರಲ್ಲಿ ಅರುಣಾಚಲ ಪ್ರದೇಶದ ಸುಮದೊರೋಂಗ್ ಚು ಕಣಿವೆಯಲ್ಲಿ ಚೀನಾ ಹಾಗೂ ಭಾರತ ಸೇನೆಯು ಎದುರುಬದುರಾದಾಗ ಬಿಪಿನ್ ರಾವತ್ ನೇತೃತ್ವದ ಬೆಟಾಲಿಯನ್ ಮಹತ್ವದ ಪಾತ್ರವನ್ನು ನಿರ್ವಹಿಸಿತ್ತು. 2015ರಲ್ಲಿ ಮಯನ್ಮಾರ್ ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಬಿಪಿನ್ ರಾವತ್ ಅವರ ಪ್ರಮುಖ ಪಾತ್ರವಿತ್ತು. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಭಾರತೀಯ ಸೇನೆಯ ನೇತೃತ್ವವನ್ನು ಬಿಪಿನ್ ರಾವತ್ ಅವರು ವಹಿಸಿಕೊಂಡಿದ್ದರು.


ಪ್ರಶಸ್ತಿಗಳು


ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ, ಸೇನಾ ಪದಕ, ವಿಶಿಷ್ಟ ಸೇವಾ ಪದಕ ಮುಂತಾದ ಪ್ರಶಸ್ತಿಗಳನ್ನು ಬಿಪಿನ್ ರಾವತ್ ಪಡೆದುಕೊಂಡಿದ್ದರು. 


ಹಲವಾರು ಸೇನಾನುಭವ ಹಾಗೂ ಯುದ್ಧಾನುಭವ ಹೊಂದಿದ್ದ ಬಿಪಿನ್ ರಾವತ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಹಾಗೂ ಮೌಲ್ಯಯುತವಾದುದು. ಬಿಪಿನ್ ರಾವತ್ ಅವರ ಅಗಲಿಕೆ ನಿಜವಾಗಿಯೂ ದೇಶಕ್ಕೆ ತುಂಬಲಾರದ ನಷ್ಟವೇ ಸರಿ. ಭಗವಂತನು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತವಾಗಲಿ ಎಂಬುದು ನಮ್ಮ ಕೋರಿಕೆ.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post