ಚೂರಿ ಹಿಡಿದ ಕೈ ಇಂದು ಚರಕ ನೂಲುತ್ತಿದೆ: ಲಕ್ಷ್ಮಣ ತುಕಾರಾಮ್ ಗೋಲೆ

Upayuktha
0

 

ಬೆಂಗಳೂರು: ಕ್ರೌರ್ಯದಿಂದ ಅನೇಕ ಅಪರಾಧ ಮಾಡಿದ ಪಾತಕಿಯೊಬ್ಬ ಪರಿವರ್ತಿತನಾದ ಬಗೆ ಬಲು ರೋಚಕ. ಮುಂಬೈನಲ್ಲಿ ಹೆಣ್ಣು ಮಗಳಿಗೆ ಚುಡಾಯಿಸಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಆರೋಪದಿಂದ ಜೈಲು ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕ ಮುಂದೆ ಪಾತಕಿಗಳ ಜೊತೆ ಸೇರಿ ಅನೇಕ ದುಶ್ಕೃತ್ಯಗಳನ್ನು ಮಾಡಿ ಕಾರಾಗೃಹದಲ್ಲಿ ಒಮ್ಮೆ ಗಾಂಧೀ ಆತ್ಮಚರಿತ್ರೆ "ನನ್ನ ಸತ್ಯಾನ್ವೇಷಣೆ"ಯನ್ನು ಓದಿ ಪ್ರೇರಿತನಾಗಿ ಸಂಪೂರ್ಣ ಬದಲಾದ ವ್ಯಕ್ತಿ ಇಂದು ಗಾಂಧಿ ತತ್ವ ಪ್ರಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರೆ ನಮಗೆ ಆಶ್ಚರ್ಯವಾಗಬಹುದು. ಆ ವ್ಯಕ್ತಿಯೇ ಸ್ವತಃ ತಮ್ಮ ಪರಿವರ್ತನೆಯ ಕಥೆಯನ್ನು ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಹಮ್ಮಿಕೊಂಡಿದ್ದ ಸಂವಾದದಲ್ಲಿ ಸಭಿಕರ ಮುಂದೆ ತೆರೆದಿಟ್ಟರು.


ಗಾಂಧಿ ಪರಿವಾರದ ಕಾರ್ಯಕರ್ತರೊಡನೆ ಅನುಭವ ವಿನಿಮಯ ಮಾಡಿಕೊಂಡ 43ರ ಪ್ರಾಯದ ಲಕ್ಷ್ಮಣ ತುಕಾರಾಮ್ ಗೋಲೆ ಮಾತನಾಡುತ್ತ ಸತ್ಯ, ಅಹಿಂಸಾ ಮಾರ್ಗದಲ್ಲಿ ನಡೆದ ಗಾಂಧಿ ನನಗೆ ಪ್ರೇರಣೆ. ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಪ್ರಾಮಾಣಿಕ ಬದುಕು ಸಾಗಿಸಲು ಅವರ ಆತ್ಮಕಥೆ ನನಗೆ ಮಾರ್ಗದರ್ಶಿಯಾಯಿತು ಎಂದು ತಿಳಿಸಿದರು. ಗಾಂಧೀಜಿಯವರು ಸಹ ತಮ್ಮ ಜೀವನದಲ್ಲೂ ಸತ್ಯವನ್ನೇ ನುಡಿದು ಅದರಂತೆ ನಡೆದು ಆದರ್ಶಯುತ ವ್ಯಕ್ತಿಯಾದರು.


ಚೂರಿ ಹಿಡಿದು ರಕ್ತ ಚಿಮ್ಮಿಸಿದ ನನ್ನ ಕೈಗಳು ಇಂದು ಚರಕ ನೂಲುತ್ತಿದೆ. ಪಶ್ಚಾತ್ತಾಪವೇ ಪ್ರಾಯಶ್ಚಿತ್ತ ಎಂದು ನಂಬಿ ಸಮಾಜದಿಂದ ದೂರ ಉಳಿದಿದ್ದ ನನ್ನನ್ನು ಇಂದು ಅನೇಕ ಕಡೆ ಕರೆದು ಗೌರವಿಸುತ್ತಿರುವುದು ಸತ್ಯ, ಪ್ರಾಮಾಣಿಕತೆಗೆ ಸಂದ ಮನ್ನಣೆ ಎಂದು ನಾನು ಭಾವಿಸಿದ್ದೇನೆ.


ಕಾರಾಗೃಹ ವಾಸ ಅನುಭವಿಸಿದ ಅನೇಕ ಮಹಾತ್ಮರು ಜೈಲಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಉದಾ: ಬಾಲ ಗಂಗಾಧರ ತಿಲಕರು ಭಗವದ್ಗೀತೆಗೆ 'ಗೀತಾ ರಹಸ್ಯ' ಬರೆದಿದ್ದು, ಜವಾಹರ್ ಲಾಲ್ ನೆಹರು 'ಡಿಸ್ಕವರಿ ಆಫ್ ಇಂಡಿಯಾ' ರಚಿಸುವುದರ ಮೂಲಕ ಸಕಾರಾತ್ಮಕ ಮನೋಭಾವವನ್ನು ಗಳಿಸಿಕೊಂಡಿದ್ದರು.


ನಾನು ನನ್ನ ಜೀವನದಲ್ಲಿ ಆಕಸ್ಮಿಕವಾಗಿ ದೊರೆತ ಗಾಂಧಿಯಾನದ ಕೃತಿ ಓದಿ ನನ್ನ ಆತ್ಮಾವಲೋಕನಕ್ಕೆ ಕಾರಣವಾಯಿತು. ಸಜಾ ಅವಧಿಯಲ್ಲಿ ಗಾಂಧಿಯವರ ಹನ್ನೊಂದು ವ್ರತಗಳನ್ನು ನಿಷ್ಠೆಯಿಂದ ಪಾಲಿಸಿದೆ. ಅಲ್ಲಿಂದ ಮುಂದೆ ಸಾಮಾಜಿಕ ಮೌಲ್ಯಾಧಾರಿತ ಬದುಕಿನ ಮತ್ತೊಂದು ಪರ್ವ ಪ್ರಾರಂಭವಾಯ್ತು. ಒಂದು ಕಾಲದಲ್ಲಿ ಮಾದಕ ದ್ರವ್ಯ ಸಾಗಾಣಿಕೆಯಲ್ಲಿ ನಿರತನಾಗಿದ್ದವ ಈಗ ಕಾಫೀ ಟೀಯನ್ನು ಮುಟ್ಟುವುದಿಲ್ಲ ಶುದ್ದ ಸಸ್ಯಾಹಾರಿಯಾಗಿ, ದಿನ ನಿತ್ಯ ಯೋಗಾಭ್ಯಾಸ ದಿಂದ ಮನಸ್ಸು ಮತ್ತು ದೇಹಶುದ್ದಿಯನ್ನು ಕಾಪಾಡಿಕೊಂಡಿದ್ದೇನೆ ಎಂದು ವಿವರಿಸಿದರು. ಇದೀಗ ಪೂರ್ಣಾವಧಿ ಸರ್ವೋದಯ ಕಾರ್ಯಕರ್ತನಾಗಿ ಸ್ವಾವಲಂಬನೆಯ ಬದುಕು ಸಾಗಿಸುತ್ತ ದೇಶಾದ್ಯಂತ ಖೈದಿಗಳ ಮನಃಪರಿವರ್ತನೆ ಮಾಡುವ ನಿಟ್ಟಿನಲ್ಲಿ ಅನೇಕ ಕಾರಾಗೃಹಗಳನ್ನು ಸಂದರ್ಶಿಸುತ್ತಿದ್ದಾರೆ.


ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ಮಾತನಾಡುತ್ತ 'ಎಲ್ಲೋ ಎಂದೋ, ಯಾರದೋ ಗುಂಡಿಗೆ ಬಲಿಯಾಗಿಬೇಕಿದ್ದ ಈ ಗೋಲೆಯನ್ನು ಗಾಂಧಿ ಕೈಹಿಡಿದು ಕಾಪಾಡಿದರು' ಅನ್ನುವ ಗೋಲೆಯ ಮಾತಿನಲ್ಲಿ ಎಲ್ಲ ಪಾತಕಿಗಳಿಗೊಂದು ಪಾಠವಿದೆ. ಹಿಂಸೆ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಈ ಪರಿವರ್ತನೆ ಯುವಜನತೆಗೊಂದು ಮಾದರಿ ಎಂದು ಅಭಿಪ್ರಾಯಪಟ್ಟರು.


ಕ.ಗಾ.ಸ್ಮಾ.ನಿ. ಗೌ.ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಕರ್ನಾಟಕ ಸರ್ವೋದಯ ಮಂಡಲದ ಗೌ.ಕಾರ್ಯದರ್ಶಿ ಡಾ.ಹೆಚ್.ಎಸ್.ಸುರೇಶ್, ಗಾಂಧಿ ಶಾಂತಿ ಪ್ರತಿಷ್ಠಾನದ, ಗೌ.ಕಾರ್ಯದರ್ಶಿ ಡಾ.ಸತ್ಯಮಂಗಲ ಮಹಾದೇವ, ಅಮರ ಬಾಪು ಚಿಂತನದ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top