ಮಂಗಳೂರು: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಂದು ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದರು.
ರಾಜ್ಯ ಮತ್ತು ಜಿಲ್ಲೆಯಾದ್ಯಂತ ಸುಖ, ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಲಿ ಹಾಗೂ ಸಮಸ್ತ ನಾಗರಿಕರು ಶಾಂತಿಯುತ, ಸಹಬಾಳ್ವೆ ನಡೆಸುವಂತಾಗಲಿ ಎಂದು ತಾಯಿ ಭುವನೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೇನೆ ಎಂದು ಅವರು ನುಡಿದರು. ಕರ್ನಾಟಕವೆಂಬುದು ಕೇವಲ ಒಂದು ಭೂ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕವೆಂದರೆ ಒಂದು ಸಂಸ್ಕೃತಿ, ಒಂದು ಜನ ಸಮುದಾಯ, ಒಂದು ಜೀವನ ಪದ್ಧತಿ ಎಂಬ ವಿಶಾಲ ಅರ್ಥ ಹೊಂದಿದೆ.
ಇದಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯ, ಆಚಾರ್ಯ ಬಿ.ಎಂ ಶ್ರೀಕಂಠಯ್ಯ, ಅ.ನ. ಕೃಷ್ಣರಾಯ ಸೇರಿದಂತೆ ಹಲವಾರು ಮಹನೀಯರು ಹಾಗೂ ಅಸಂಖ್ಯಾತ ಲೇಖಕ - ಲೇಖಕಿಯರನ್ನು, ಸಂಘ - ಸಂಸ್ಥೆಗಳನ್ನು, ಪತ್ರಿಕೋದ್ಯಮಿಗಳನ್ನು ಹಾಗೂ ಹೋರಾಟಗಾರರನ್ನು ನೆನೆಯಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಕನ್ನಡ ಭಾಷೆಗೆ ದ.ಕ ಜಿಲ್ಲೆಯ ಕೊಡುಗೆ ಅನನ್ಯ. ಪಂಜೆ ಮಂಗೇಶರಾವ್, ಗೋವಿಂದ ಪೈ, ಸೇಡಿಯಾಪು ಕೃಷ್ಣಭಟ್ಟ, ಕಡೆಂಗೋಡ್ಲು ಶಂಕರಭಟ್ಟ, ಗೋಪಾಲ ಕೃಷ್ಣ ಅಡಿಗ, ಕಯ್ಯಾರ ಕಿಞ್ಣಣ್ಣ ರೈ, ಸೇರಿದಂತೆ ಹಲವು ಕವಿಗಳು ಕನ್ನಡ ಭಾಷೆಯನ್ನು ಕಟ್ಟುವ, ಉಳಿಸಿ - ಬೆಳೆಸುವ ಕಾಯಕದಲ್ಲಿ ತೊಡಗಿದ್ದರು. ಕನ್ನಡನಾಡು ಹರಿದು ಹಂಚಿ ಹೋಗಿದ್ದ ಅಂದಿನ ದಿನಗಳಲ್ಲಿ ಕನ್ನಡ ನಾಡಿನಾದ್ಯಂತ ಬೇರೆ ಬೇರೆ ಭಾಗಗಳಿಗೆ ಹೋಗಿ ಹಲವು ಹಿರಿಯರು ಕನ್ನಡದ ಕಹಳೆ ಮೊಳಗಿಸಿದರು.
ಕನ್ನಡದ ಮೊದಲ ದಿನಪತ್ರಿಕೆ ಮಂಗಳೂರು ಸಮಾಚಾರ 1842 ರಲ್ಲಿ ಮಂಗಳೂರಿನಿಂದ ಪ್ರಕಟಣೆಯನ್ನು ಪ್ರಾರಂಭಿಸಿರುವುದು ನಮ್ಮ ಹೆಮ್ಮೆ. ಆರೋಗ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಕಾರ್ಯಗಳನ್ನು ಶ್ಲಾಘಿಸಿದರು.
ಸ್ಮಾರ್ಟ್ ಸಿಟಿ ಹಾಗೂ ಆತ್ಮ ನಿರ್ಭರ ಭಾರತ ಪರಿಕಲ್ಪನೆಯ ಬಗ್ಗೆಯೂ ಪ್ರಸ್ತಾಪಿಸಿದರು. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 66ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಜಿಲ್ಲೆಯ 57 ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸಚಿವರು ಗೌರವಿಸಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಯು.ಟಿ. ಖಾದರ್, ಮೇಯರ್ ಪ್ರೇಮಾನಂದ ಶೆಟ್ಟಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಸಂತೋಷ್ ರೈ ಬೋಳಿಯಾರ್, ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ದಿ ನಿಗಮ ಮಂಡಳಿಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ನಗರ ಪೋಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿದ್ದರು.