ಉಜಿರೆ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಮಾಡಿದ ಪೂಜ್ಯ ಆರ್ಯಿಕಾ ಚಿಂತನಮತಿ ಮಾತಾಜಿ ಮತ್ತು ಕ್ಷಲ್ಲಿಕಾ ಸುಶೇಯಾಮತಿ ಮಾತಾಜಿ ಅವರ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪ ಸಮಾರಂಭ, ಕಲಶ ವಿಸರ್ಜನೆ ಮತ್ತು ಭವ್ಯ ಪಿಂಛಿ ಪರಿವರ್ತನಾ ಸಮಾರಂಭ ಭಾನುವಾರ ಧರ್ಮಶ್ರೀ ಸಭಾ ಭವನದಲ್ಲಿ ನಡಯಿತು.
ಪೂಜ್ಯ ಆರ್ಯಿಕಾ ಚಿಂತನಮತಿ ಮಾತಾಜಿ ಆಶೀರ್ವಚನ ನೀಡಿ, ಸಕಲ ಜೀವಿಗಳೂ ಮೋಕ್ಷ ಪ್ರಾಪ್ತಿಗೆ ಅರ್ಹವಾಗಿವೆ. ಆತ್ಮಿನಿಗಂಟಿದ ಎಲ್ಲಾ ಪಾಪಕರ್ಮಗಳ ಕ್ಷಯವಾದಾಗ ಆತ್ಮನೇ ಪರಮಾತ್ಮನಾಗಬಲ್ಲ. ಮೋಕ್ಷ ಪ್ರಾಪ್ತಿಯೇ ಜೀವನದ ಮುಖ್ಯ ಗುರಿಯಾಗಬೇಕು ಎಂದು ಹೇಳಿದರು.
ದೇವರು, ಗುರು, ಮತ್ತು ಶಾಸ್ತ್ರದಲ್ಲಿ ದೃಢ ನಂಬಿಕೆಯೊಂದಿಗೆ ಸಾಧು-ಸಂತರ ಸೇವೆಯನ್ನು ಶ್ರದ್ಧಾ-ಭಕ್ತಿಯಿಂದ ಮಾಡಬೇಕು. ಸಂಯಮದಿಂದ ವ್ರತ-ನಿಯಮಗಳನ್ನು ಪಾಲಿಸಿದಾಗ ಜೀವನ ಪಾವನವಾಗುತ್ತದೆ ಎಂದು ಅವರು ಹೇಳಿದರು. ಕ್ಷಲ್ಲಿಕಾ ಸುಶ್ರೇಯಾಮತಿ ಮಾತಾಜಿ ಮಾತನಾಡಿ, ಸ್ವಾಧ್ಯಾಯದಿಂದ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಆತ್ಮನು ಅನಂತಗುಣಗಳನ್ನು ಹೊಂದಿದ್ದು ಸ್ವಾಧ್ಯಾಯದಿಂದ ಕರ್ಮನಿರ್ಜರೆಯಾಗಿ ಅಮಿತಾನಂದ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಮಾತಾಜಿಯವರ ದರ್ಶನ ಮಾಡಿ, ಆಶಿರ್ವಾದ ಪಡೆಯುವುದು ತನ್ನ ಯೋಗವೂ, ಭಾಗ್ಯವೂ ಆಗಿದೆ. ತನ್ನ ಮೂಲಕ ಇಡೀ ತಾಲ್ಲೂಕಿನ ಜನತೆಗೆ ಮಾತಾಜಿಯವರ ಆಶೀರ್ವಾದ ದೊರಕಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ನಾರಾವಿ ಬಸದಿಯ ಜೀರ್ಣೋದ್ಧಾರ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೆ 15 ಲಕ್ಷ ರೂ. ಅನುದಾನ ಮಂಜೂರಾಗಿದೆ. ಜೈನ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ದೊರಕಿದ್ದು ಸೂಕ್ತ ಕೇಂದ್ರ ಸ್ಥಳದಲ್ಲಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಅಹಿಂಸೆ, ಸತ್ಯ, ತ್ಯಾಗ, ಸೇವಾ ಮನೋಭಾವ ಮೊದಲಾದ ಜೈನ ಧರ್ಮದ ಉದಾತ್ತ ತತ್ವಗಳಿಂದ ತಾನು ಪ್ರಭಾವಿತನಾಗಿದ್ದು, ಶುದ್ಧ ಸಸ್ಯಾಹಾರಿಯಾಗಿ ರಾತ್ರಿ ಭೋಜನವನ್ನೂ ತ್ಯಾಗ ಮಾಡಿ ಜೈನರ ತತ್ವ-ಸಿದ್ಧಾಂತಗಳನ್ನು ಸಾಧ್ಯವಾದಷ್ಟು ತನ್ನ ಜೀವನದಲ್ಲಿ ಅನುಷ್ಠಾನಗೊಳಿಸುವುದಾಗಿ ಮಾತಾಜಿಯವರ ಸಮ್ಮುಖದಲ್ಲಿ ದೃಢ ಸಂಕಲ್ಪ ಮಾಡಿದರು.
ಮೂಡಬಿದ್ರೆ ಜೈನ್ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ, ಆಚಾರ-ವಿಚಾರಗಳ ಪರಿಪೂರ್ಣ ಸಂಸ್ಕೃತಿಯೇ ಧರ್ಮವಾಗಿದೆ. ಚಾತುರ್ಮಾಸ್ಯದ ಸಂದರ್ಭ ಮಾತಾಜಿಯವರ ನಡೆ-ನುಡಿ ಹಾಗೂ ಮಂಗಲ ಪ್ರವಚನ ಶ್ರಾವಕರು-ಶ್ರಾವಕಿಯರಲ್ಲಿ ಗಾಢ ಪ್ರಭಾವ ಬೀರಿದೆ. ಕಾರ್ಯಕರ್ತರಲ್ಲಿ ಸಂತೋಷ, ಸಂತೃಪ್ತಿಯನ್ನು ಮೂಡಿಸಿದೆ ಎಂದರು.
ಮೂಡಬಿದ್ರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ, ಮಾನವ ಜನ್ಮ ಶ್ರೇಷ್ಠವಾಗಿದ್ದು, ಸತ್ಕರ್ಮಗಳಿಂದ ಪುಣ್ಯ ಸಂಚಯ ಮಾಡಿ ಸಾರ್ಥಕ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಕಾರ್ಕಳದ ಹಿರಿಯ ವಕೀಲ ಎಂ. ಕೆ. ವಿಜಯ ಕುಮಾರ್ ಮಾತನಾಡಿ, ಜೈನ ಧರ್ಮವು ಅತ್ಯಂತ ಪ್ರಾಚೀನವಾದ ಹಾಗೂ ಎಲ್ಲರೂ ಒಪ್ಪುವ ವಿಶ್ವಧರ್ಮವಾಗಿದೆ. ಜೈನರು ಸುಮನಸರಾಗಿದ್ದು ಅಹಿಂಸೆ, ತ್ಯಾಗ ಮೊದಲಾದ ಮಾನವೀಯ ಮೌಲ್ಯಗಳಿಂದ ಮಾನಸಿಕ ಪರಿವರ್ತನೆಯೊಂದಿಗೆ ಎಲ್ಲರಲ್ಲಿಯೂ ಉತ್ತಮ ಸಂಸ್ಕಾರ ಮೂಡಿ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಎಂ.ಕೆ. ವಿಜಯಕುಮಾರ್ ಶ್ರುತಪೀಠ ಪ್ರಕಾಶನವನ್ನು ಉದ್ಘಾಟಿಸಿ “ಆತ್ಮ ಮೀಮಾಂಸಾ ವೃತ್ತಿ” ಎಂಬ ಕನ್ನಡ ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಬಸದಿಯ ಆಡಳಿತ ಸಮಿತಿಯ ಅಧ್ಯಕ್ಷ ಬಿ. ನಿರಂಜನ ಅಜ್ರಿ ಮತ್ತು ಕಾರ್ಯಾಧ್ಯಕ್ಷ ಎನ್. ಪ್ರೇಮ್ ಕುಮಾರ್, ಹೊಸ್ಮಾರು ಉಪಸ್ಥಿತರಿದ್ದರು. ಚಾತುರ್ಮಾಸ ಸಮಿತಿಯ ಅಧ್ಯಕ್ಷ ಶಿಶುಪಾಲ ಜೈನ್ ಸ್ವಾಗತಿಸಿದರು. ಪವಿತ್ರಾ ಜೈನ್ ಧನ್ಯವಾದವಿತ್ತರು. ಕರುಣಾಕರ ಜೈನ್ ಮತ್ತು ಬಜಗೋಳಿ ಭರತ್‌ರಾಜ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಇದೇ 22 ರಿಂದ ಮಾತಾಜಿಯವರು ಮಹಾರಾಷ್ಟ್ರಕ್ಕೆ ವಿಹಾರ ಮಾಡಲಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ