ಚಾತುರ್ಮಾಸ್ಯ ವ್ರತಾಚರಣೆ: ಕಲಶ ವಿಸರ್ಜನೆ, ಪಿಂಛಿ ಪರಿವರ್ತನಾ ಕಾರ್ಯಕ್ರಮ

Upayuktha
0

ಉಜಿರೆ: ಜೈನ ಧರ್ಮದ ಪ್ರಭಾವನೆಯಿಂದ ಸಕಲ ಜೀವಿಗಳ ರಕ್ಷಣೆಯೊಂದಿಗೆ ಲೋಕ ಕಲ್ಯಾಣವಾಗುತ್ತದೆ. ಮುನಿಗಳಿಗೆ ಪಿಂಛಿದಾನದಿಂದ ಕರ್ಮಗಳ ನಾಶವಾಗಿ ಪುಣ್ಯ ಸಂಚಯವಾಗುತ್ತದೆ. ಮುನಿಗಳು ಪಿಂಛಿಯಿಂದ ಸಕಲ ಜೀವಿಗಳ ರಕ್ಷಣೆ ಮಾಡುತ್ತಾರೆ ಎಂದು ಪೂಜ್ಯ ಪುಣ್ಯನಂದಿ ಮುನಿ ಮಹಾರಾಜರು ಹೇಳಿದರು.  


ಅವರು ಶನಿವಾರ ವೇಣೂರಿನಲ್ಲಿ ಬಾಹುಬಲಿ ಸಭಾಭವನದಲ್ಲಿ ಚಾತುರ್ಮಾಸ್ಯ ಕಲಶ ವಿಸರ್ಜನೆ , ಸಮಾರೋಪ ಸಮಾರಂಭ ಹಾಗೂ ಪಿಂಛಿ ಪರಿವರ್ತನಾ ಕಾರ್ಯಕ್ರಮದಲ್ಲಿ ಮಂಗಲ ಪ್ರವಚನ ನೀಡಿದರು. ಅಹಿಂಸೆ ಮತ್ತು ಸಂಯಮದ ಸಂಕೇತವಾದ ಪಿಂಛಿ ಸಾಧುಗಳ ಸಾಧನೆಗೆ ಪೂರಕವಾಗಿದೆ. ಮುನಿಗಳ ಜಪ, ತಪ, ಧ್ಯಾನ ಹಾಗೂ ಸ್ವಾಧ್ಯಾಯದಿಂದ ಪಿಂಛಿಯಲ್ಲಿ ವಿಶೇಷ ಶಕ್ತಿ ಇದ್ದು ಮುನಿಗಳು ಪಿಂಛಿಯಿಂದಲೇ ಆಶೀರ್ವಾದ ಮಾಡುತ್ತಾರೆ.


ಸಮಾಜದವರ ಪುರುಷಾರ್ಥ, ಪುಣ್ಯ ಹಾಗೂ ಭಾಗ್ಯದಿಂದ ಮುನಿಗಳು ಚಾತುರ್ಮಾಸ್ಯ ವೃತ ಆಚರಣೆ ಮಾಡುತ್ತಾರೆ. ನಿತ್ಯವೂ ಬಾಹುಬಲಿಯ ದರ್ಶನ ಭಾಗ್ಯದಿಂದ ತಮಗೆ ಅತೀವ ಆನಂದವಾಗಿದೆ ಎಂದು ಹೇಳಿದ ಮುನಿಗಳು ಸುಗಮವಾಗಿ ಚಾತುರ್ಮಾಸ್ಯ ವೃತಾಚರಣೆಗೆ ಸಹಕರಿಸಿದ ಸರ್ವರನ್ನೂ ಹರಸಿ ಆಶೀರ್ವದಿಸಿದರು. ಮುನಿಗಳ ವಾಸ್ತವ್ಯದಿಂದ ಭೀಕರ ರೋಗಗಳು ನಿವಾರಣೆಯಾಗುತ್ತವೆ ಎಂದು ಹೇಳಿದರು.


ಸಮಾರಂಭವನ್ನು ಉದ್ಘಾಟಿಸಿದ ಮೂಡಬಿದ್ರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಮೋಕ್ಷ ಮಾರ್ಗದಲ್ಲಿ ಸಾಗಲು ಸಮಾಜಕ್ಕೆ ಮುನಿಗಳು ಮಾರ್ಗದರ್ಶನ ನೀಡುತ್ತಾರೆ. ಮುನಿಗಳು ಸಂಯಮದ ಉಪಕರಣವಾಗಿ ಪಿಂಛಿ ಬಳಸಿದರೆ, ಶೌಚಕ್ಕಾಗಿ ಕಮಂಡಲ ಮತ್ತು ಜ್ಞಾನವೃದ್ಧಿ ಹಾಗೂ ಸ್ವಾಧ್ಯಾಯಕ್ಕಾಗಿ ಶಾಸ್ತ್ರ ಗ್ರಂಥಗಳು - ಈ ಮೂರನ್ನು ಮಾತ್ರ ಬಳಸುತ್ತಾರೆ ಎಂದು ಹೇಳಿದರು.  
ಪಂಚ ನಮಸ್ಕಾರ ಮಂತ್ರ ಪಠಣದೊಂದಿಗೆ ಜೈನ ಸಮಾಜದ ವತಿಯಿಂದ ಮೂಡಬಿದ್ರೆಯ ಸ್ವಾಮೀಜಿ ಹಾಗೂ ಡಾ. ಪದ್ಮಪ್ರಸಾದ ಅಜಿಲರು ಪಿಂಛಿಯನ್ನು ಮುನಿಗಳಿಗೆ ಅರ್ಪಿಸಿದರು.
 

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿದರು. ವಿಜಯರಾಜ ಅಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಯೋಜಕರಾದ ಪ್ರವೀಣ ಕುಮಾರ್ ಇಂದ್ರ ಉಪಸ್ಥಿತರಿದ್ದರು. ವೇಣೂರು ಜೈನ ಮಿಲನ್ ಕಾರ್ಯದರ್ಶಿ ಜ್ಯೋತ್ಸ್ನಾ ಸ್ವಾಗತಿಸಿದರು. ಸುಧೀಂದ್ರ ಕುಮಾರ್ ಧನ್ಯವಾದವಿತ್ತರು. ಮಹಾವೀರ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರ್ವಹಿಸಿದರು.

 
(ಉಪಯುಕ್ತ ನ್ಯೂಸ್)

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top