ಯಾರೀ ತುಳಸಿ? ತುಳಸೀ ಪೂಜೆಯ ಕುರಿತ ವಿಶೇಷ ಲೇಖನ ಮಾಲೆ (ಸಂಚಿಕೆ- 2)

Upayuktha
0


(ಒಂದನೇ ಸಂಚಿಕೆಯಲ್ಲಿ ತುಳಸಿ ಪೂಜೆಯ ಬಗ್ಗೆ ಸ್ವಲ್ಪ ಮಾಹಿತಿ ಕೊಟ್ಟು ಅದರ ಬಗ್ಗೆ ಇರುವ ಕತೆಯನ್ನು ಸ್ವಲ್ಪ ಕೊಟ್ಟಿರುತ್ತೇನೆ. ಅದರಲ್ಲಿ ಇಂದ್ರ ಶಿವನೊಂದಿಗೆ ಯುದ್ದಕ್ಕೆ ಹೋದುದನ್ನು ತಿಳಿಸಿದ್ದೇನೆ. ಉಗ್ರರೂಪ ತಾಳಿದ ಶಿವ ಹತೋಟಿ ತಪ್ಪಿದ ತನ್ನ ಕ್ರೋದಾಗ್ನಿಯನ್ನು ಕಡಲಿನಲ್ಲಿ ಬಿಡುತ್ತಾನೆ. ಅದು ರಾಕ್ಷಸ ರೂಪವನ್ನು ತಾಳುತ್ತದೆ. ಶುಕ್ರಾಚಾರ್ಯರು ಅವನಿಗೆ ಜಲಂಧರನೆಂಬ ನಾಮಕರಣ ಮಾಡಿ ರಾಕ್ಷಸ ರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತಾರೆ. ಮುಂದೆ ಓದಿ..)


ರಾಜನಾಗಿ ಅಧಿಕಾರ ವಹಿಸಿಕೊಂಡ ಜಲಂಧರ ತನ್ನ ರಾಜ್ಯವನ್ನು ವಿಸ್ತರಿಸುತ್ತಾ ಹೋಗುತ್ತಾನೆ. ಎಲ್ಲಾ ಲೋಕಗಳನ್ನೂ ಜಯಿಸುತ್ತಾ ಹೋದ ಜಲಂಧರ ಕೊನೆಗೆ ಇಂದ್ರಲೋಕವನ್ನೂ ಆಕ್ರಮಿಸಿ ಇಂದ್ರನನ್ನು ಸೋಲಿಸುತ್ತಾನೆ. ಸೋತ ಇಂದ್ರ ಬ್ರಹ್ಮನ ಬಳಿ ಬಂದು ಪರಿಹಾರ ಕೇಳುತ್ತಾನೆ. ಬ್ರಹ್ಮ ಜಲಂಧರನನ್ನು ನಿಗ್ರಹಿಸಲು ಶಿವನಿಗೆ ಮಾತ್ರ ಸಾಧ್ಯ ಅನ್ನುತ್ತಾನೆ.


ಇತ್ತ ಕಾಲನೇಮಿ (ಈತ ರಾವಣನ ಚಿಕ್ಕಪ್ಪ ಅಂತ ಹೇಳುತ್ತಾರೆ) ಎಂಬ ರಾಕ್ಷಸನಿಗೆ ವೃಂದೆ ಎಂಬ ಮಹಾ ವಿಷ್ಣು ಭಕ್ತೆ ಮಗಳೊಬ್ಬಳಿರುತ್ತಾಳೆ.


ಕಾಲನೇಮಿ ವೃಂದೆಯನ್ನು ಜಲಂಧರನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಮಹಾ ಪತಿವೃತೆಯಾದ ವೃಂದೆ ಗಂಡನ ಒಳಿತಿಗಾಗಿಯೂ ದೀರ್ಘಾಯುಸ್ಸಿಗಾಗಿಯೂ ದಿನಾ ಮಹಾವಿಷ್ಣುವಿನ ಪೂಜೆ ಮಾಡುತ್ತಿರುತ್ತಾಳೆ. ಅವಳ  ಪೂಜೆಗೆ ಭಂಗ ಬರುವಲ್ಲಿಯವರೆಗೂ ಪಾತಿವೃತ್ಯ ಕೆಡುವಲ್ಲಿಯ ವರೆಗೂ  ಜಲಂಧರನಿಗೆ ಸೋಲು ಹಾಗೂ ಸಾವಿಲ್ಲ ಎಂಬ ವರವನ್ನೂ ಪಡೆಯುತ್ತಾಳೆ. ಇದರಿಂದಲಾಗಿ ಜಲಂದರನಿಗೆ ಸೋಲೇ ಇಲ್ಲದೆ ಅವ ಸಾರ್ವಬೌಮನಾಗಿ ಮೆರೆಯುತ್ತಿರುತ್ತಾನೆ. ಸೋಲಿಲ್ಲದ ಜಲಂದರ ಲೋಕ ಕಂಟಕನಾಗುತ್ತಾನೆ. 


ಈ ಜಲಂಧರ ಸ್ವತ: ಶಿವನ ಶಕ್ತಿ ಅದರೊಂದಿಗೆ ವೃಂದೆಯಿಂದಾಗಿ ಸೇರಿದ ವಿಷ್ಣುವಿನ ಶಕ್ತಿಯೂ ಸೇರಿದುದರಿಂದ ಅವನನ್ನು  ಸೋಲಿಸುವುದು ಅಸಾಧ್ಯದ ಮಾತೇ ಆಗಿ ಹೋಗಿತ್ತು. ಸೋತು ಸುಣ್ಣವಾಗಿದ್ದ ಇಂದ್ರ ಶಿವನ ಮೊರೆ ಹೋಗುತ್ತಾನೆ. ಜಲಂಧರನನ್ನು ವಧಿಸುವುದಾಗಿ ಇಂದ್ರನಿಗೆ ಅಭಯ ಕೊಟ್ಟು ಶಿವ ಅವನನ್ನು ಕಳುಹಿಸುತ್ತಾನೆ.

ಭಾಗ-1 ಓದಲು ಇಲ್ಲಿ ಕ್ಲಿಕ್ ಮಾಡಿ:


ಸ್ವತ: ಶಿವನೇ ಜಲಂಧರನನ್ನು ಯುದ್ಧಕ್ಕೆ ಕರೆಯುತ್ತಾನೆ. ಎರಡು ದಿನಗಳಷ್ಟು ಕಾಲ ಯುದ್ಧ ಮುಂದುವರಿದಾಗ ಶಿವನಿಗೆ ಜಲಂಧರನನ್ನು ಸೋಲಿಸುವುದು ಸುಲಭವಲ್ಲ ಎಂದು ತಿಳಿಯುತ್ತದೆ. ಜ್ಞಾನ ದೃಷ್ಟಿಯಿಂದ ವೃಂದೆ ಮಾಡುವ ಪೂಜೆಗೆ ಭಂಗಬಾರದೆ ಅವಳ ಪಾತಿವೃತ್ಯ ಕೆಡದೆ ಜಲಂಧರನನ್ನು ಕೊಲ್ಲುವುದು ಅಸಾಧ್ಯ ಎಂದು ತಿಳಿದು ಕೊಳ್ಳುತ್ತಾನೆ. ಈಗ ಶಿವ ವಿಷ್ಣುವನ್ನು ಸಂಧಿಸಿ ಲೋಕ ಹಿತದ ದೃಷ್ಟಿಯಿಂದ ಜಲಂಧರನನ್ನು ಕೊಲ್ಲಲೇ ಬೇಕಾಗಿದೆ ಎಂದು ತಿಳಿಸುತ್ತಾನೆ. ವೃಂದೆಯ ಪೂಜೆಗೆ ಭಂಗತರುವ ಕೆಲಸವನ್ನು ವಿಷ್ಣುವೇ ಮಾಡಬೇಕೆಂದೂ ತಿಳಿಸುತ್ತಾನೆ.  


ವಿಷ್ಣುವಿಗೋ ಉಭಯ ಸಂಕಟ. ಯಾವುದೇ ತಪ್ಪು ಮಾಡದ ಮಹಾಭಕ್ತೆ ವೃಂದೆ ಒಂದು ಕಡೆಯಾದರೆ ಲೋಕ ಕಲ್ಯಾಣಾರ್ಥ ಜಲಂಧರನನ್ನು ನಿಗ್ರಹಿಸಲೇ ಬೇಕಾದ ಅನಿವಾರ್ಯತೆ ಇನ್ನೊಂದೆಡೆ. ಆದರೆ ಲೋಕ ಕಲ್ಯಾಣಕ್ಕಾಗಿ ಮಾಡುವ ಯಾವ ಕೆಲಸವೂ ತಪ್ಪಲ್ಲ ಅನ್ಯಾಯವೂ ಅಲ್ಲ ಅದು ಅನಿವಾರ್ಯತೆ ಅದು ವಿಷ್ಣುವಿಗೂ ಗೊತ್ತು. ವಿಷ್ಣು ಶಿವನೊಡನೆ "ನೀವು ಯುದ್ಧ ಮುಂದುವರಿಸಿ ವೃಂದೆಯ ಪಾತಿವೃತ್ಯ ಹಾಗೂ ಪೂಜೆ ಕೆಡಿಸುವ ಕಾರ್ಯ ನಾನು ಮಾಡುತ್ತೇನೆ" ಎಂದು ಆಶ್ವಾಸನೆ ಕೊಡುತ್ತಾನೆ.


ಶಿವನೊಂದಿಗೆ ಯುದ್ದದಲ್ಲಿ ತೊಡಗಿದ ಜಲಂಧರನ ಸುರಕ್ಷೆಗಾಗಿ ವೃಂದೆ ಪೂಜೆ ಮಾಡುತ್ತಿರುವ ಸಮಯವನ್ನೇ ವಿಷ್ಣು ಆಯ್ಧು ಕೊಳ್ಳುತ್ತಾನೆ. ಜಲಂಧರನ ರೂಪದಲ್ಲಿ ವೃಂದೆ ಪೂಜೆ ಮಾಡುವಲ್ಲಿಗೆ ಬರುತ್ತಾನೆ. ಬಂದವನೇ ಜಲಂದರನದ್ದೇ ಧಾಟಿಯಲ್ಲಿ ಗಹಗಹಿಸಿ ನಗುತ್ತಾ "ನಾನು ಅಂದರೆ ಏನು ಅಂತ ತಿಳಿದಿದ್ದಾನೆ ಆ ಶಿವ? ಇಂದಿನ ನನ್ನ ಪೆಟ್ಟನ್ನು ಸಹಿಸಲಾರದೆ ರಣರಂಗವನ್ನೇ ತೊರೆದು ಓಡಿಯೇ ಹೋದ ರಣಹೇಡಿ" ಎನ್ನುತ್ತಾನೆ. ಪೂಜೆಯಲ್ಲಿ ತೊಡಗಿದ್ದ ವೃಂದೆ ಪೂಜಾ ಮಧ್ಯದಲ್ಲೇ ಎದ್ಧು ಬರುತ್ತಾಳೆ. "ಇಷ್ಟು ಬೇಗ ಯುದ್ಧ ಮುಗಿಯಿತೇ? ಆಶ್ಚರ್ಯ ಪರಮಾಶ್ಚರ್ಯ ಅನ್ನುತ್ತಾಳೆ.


ನಾನೆಂದರೆ ಏನೆಂದು ತಿಳಿದಿದ್ದಿಯಾ? ಎಂದ ವಿಷ್ಣು ಜಲಂಧರನ ರೂಪದಲ್ಲೇ ಅವಳನ್ನು ಮುದ್ಧು ಮಾಡಿ ಅವಳ ಪಾತಿವೃತ್ಯವನ್ನು ಕೆಡಿಸುತ್ತಾನೆ. ತನ್ನೊಂದಿಗೆ ಇದ್ದವ ಜಲಂಧರ ಅಲ್ಲ ಅಂದು ವೃಂದೆಗೆ ತಿಳಿಯುವಾಗ ತಡವಾಗಿರುತ್ತದೆ. ಕ್ರೋದ ಹಾಗೂ ದು:ಖದಿಂದ ನೀನು ಯಾರು? ಏನು ನಿನ್ನ ಉದ್ದೇಶ? ಎಂದು ಕೇಳುತ್ತಾಳೆ. ಆಗ ವಿಷ್ಣು ತನ್ನ ನಿಜರೂಪವನ್ನು ಅವಳಿಗೆ ತೋರಿಸಿ ಲೋಕ ಕಲ್ಯಾಣಕ್ಕಾಗಿ ಇದರ ಅವಶ್ಯಕತೆ ಇತ್ತು ಎಂದು ಮಾತ್ರ ತಿಳಿಸುತ್ತಾನೆ.


ವೃಂದೆಯ ಪೂಜಾ ಭಂಗವಾಗಿ ಅವಳ ಪಾತಿವೃತ್ಯ ಕೆಡುತ್ತಿದ್ದಂತೆಯೇ ಶಿವನು ವಿಜ್ರಂಭಿಸಿ ಜಲಂಧರನನ್ನು ಕೊಲ್ಲುತ್ತಾನೆ.


ವೃಂದೆಗೆ ತನ್ನ ಆರಾಧ್ಯ ದೇವರು ಪ್ರತ್ಯಕ್ಷನಾದ ಖುಷಿ ಒಂದು ಕಡೆ ಒಟ್ಟಿಗೆ ತನ್ನ ಗಂಡನ ಬಗೆಗೆ ಆತಂಕವೂ  ಮೂಡುತ್ತದೆ. ವಿಷ್ಣುವಿನ ಬಳಿ "ಯಾಕೆ ವೇಷ ಮರೆಸಿ ಬಂದಿರಿ? ನನ್ನ ಗಂಡನಿಗೆ ಏನಾಯಿತು?" ಎಂದು ಕೇಳುತ್ತಾಳೆ. ವಿಷ್ಣು "ಲೋಕ ಕಲ್ಯಾಣಕ್ಕಾಗಿ ಯಾವುದು ಆಗ ಬೇಕೋ ಅದು ಆಗಲೇ ಬೇಕು. ಲೋಕ ಕಲ್ಯಾಣಕ್ಕಾಗಿ ಕೊಡಬೇಕಾದ ಬಲಿ ಕೊಡಲು ನಿನ್ನನ್ನು ದಾಳವಾಗಿ‌ ಉಪಯೋಗಿಸಬೇಕಾದ ಅನಿವಾರ್ಯತೆಯೂ ಇತ್ತು; ಆ ಕೆಲಸ ನಾನು ಮಾಡಿದ್ದೇನೆ. ಈಗಾಗಲೇ ಜಲಂಧರನೆಂಬ ಮಹಾ ಪಾಪಿಯ ಅಂತ್ಯವಾಗಿರಬಹುದು" ಎನ್ನುತ್ತಾನೆ.  


ಇದರಿಂದ ಕುಪಿತಳಾದ ವೃಂದೆ "ನೀನು ಕಲ್ಲು ಹೃದಯದವ; ನಿನ್ನನ್ನು ಪ್ರತಿಕ್ಷಣವೂ ಧ್ಯಾನಿಸುತ್ತಿದ್ದೆ ಅಂತಹ ನೀನು ನಾನು ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸುತ್ತಿದ್ದ ನನ್ನ ಗಂಡನ ಮರಣಕ್ಕೇ ಕಾರಣನಾದೆ. ಆದ್ದರಿಂದ ಇನ್ನು ಮುಂದೆ ಜನಗಳು ನಿನ್ನನ್ನು ಕಲ್ಲಿನ ರೂಪದಲ್ಲಿ ಮಾತ್ರ ಕಾಣುವಂತಾಗಲಿ ಎಂದು ಶಪಿಸುತ್ತಾಳೆ. 


ಪತಿವ್ರತೆ ಕೊಟ್ಟ ಶಾಪ ಅದು ಸತ್ಯ ಆಗಲೇ ಬೇಕು. ಆದ್ದರಿಂದ ವಿಷ್ಣು ಈ ಶಾಪವನ್ನು ಒಪ್ಪಿಕೊಂಡು ಇನ್ನು ಮುಂದೆ ಗಂಡಕೀ ನದಿಯಲ್ಲಿ ತಾನು ಸಾಲಿಗ್ರಾಮ ಎಂಬ ಕಲ್ಲಿನ ರೂಪದಲ್ಲಿ ಮಾತ್ರ ಜನರಿಗೆ ಕಾಣಸಿಗುವುದಾಗಿ ಹೇಳುತ್ತಾನೆ. ಆದರೆ ಇದರಿಂದಲೂ ಸಿಟ್ಟು ತಣಿಯದ ವೃಂದೆ "ನಿನ್ನನ್ನು ಅತಿ ಭಕ್ತಿಯಿಂದ ಪೂಜಿಸಿಯೂ ನನ್ನನ್ನು ಗಂಡನಿಂದ ಬೇರೆ ಮಾಡಿದ ಕಾರಣ ನೀನೂ ನಿನ್ನ ಪತ್ನಿಯನ್ನು ಕಳೆದುಕೊಂಡು ಅವಳನ್ನು ಹುಡುಕಿ ಅಲೆಯುವಂತೆ ಆಗಲಿ; ಕೊನೆಗೆ ಮಂಗಗಳಂತಹಾ ಸಾಮಾನ್ಯ ಪ್ರಾಣಿಗಳ ಸಹಾಯದಿಂದ ಮಾತ್ರ ಅವಳನ್ನು ಪುನ: ಪಡೆಯುವಂತೆ ಆಗಲಿ" ಎಂದು ಶಪಿಸುತ್ತಾಳೆ.


ವಿಷ್ಣು ಮನದಲ್ಲೇ ನಗುತ್ತಾ ದುಷ್ಟ ಸಂಹಾರಕ್ಕಾಗಿ ತನ್ನ ಇನ್ನೊಂದು ಅವತಾರದ ಅವಶ್ಯವಿದೆ ಅದಕ್ಕೆ ಒಂದು ಭೂಮಿಕೆ ಸಿದ್ದವಾಯಿತು ಅಂದುಕೊಳ್ಳುತ್ತಾನೆ.


ಎಲ್ಲಾ ಶಾಪ ಕೊಟ್ಟು ವೃಂದಳ ಸಿಟ್ಟು ತಣಿಯ ತೊಡಗುತ್ತದೆ. ಅಳಲು ತೊಡಗುತ್ತಾಳೆ. ತನ್ನ ಆರಾಧ್ಯ ದೇವರೊಡನೆ "ಪರಮಾತ್ಮಾ ನನ್ನನ್ನು ಮನ್ನಿಸು ಜಲಂಧರನ ಪತ್ನಿಯಾದ ನಾನು ಕಲುಷಿತವಾದ ಈ ದೇಹವನ್ನು ಇಟ್ಟುಕೊಂಡು ಇನ್ನು ಬದುಕಲು ಅಪೇಕ್ಷಿಸುವುದಿಲ್ಲ. ಆದ್ದರಿಂದ ನಾನು ನನ್ನ ದೇಹತ್ಯಾಗ ಮಾಡುತ್ತಿದ್ದೇನೆ" ಅನ್ನುತ್ತಾಳೆ. ವಿಷ್ಣು ಒಪ್ಪಿಗೆ ಕೊಡುತ್ತಾನೆ.


ಈಗ ವೃಂದೆ ಕೊನೆಯದಾಗಿ ಒಂದು ಪ್ರಶ್ನೆ ಎಂದು ಕೇಳುತ್ತಾಳೆ. "ನಾನು ಮನ:ಪ್ಪೂರ್ವಕ ನಿನ್ನನ್ನು ಧ್ಯಾನಿಸಿಯೂ ನನಗೆ ಯಾಕೆ ಈ ಸ್ಥಿತಿ ಬಂತು? ನಾನ್ಯಾಕೆ ಕಟುಕ ರಾಕ್ಷಸನ ಪತ್ನಿಯಾದೆ ಎಂದು ಕೇಳುತ್ತಾಳೆ. ವಿಷ್ಣು ಅವಳೊಡನೆ "ನೀನು ಲಕ್ಷ್ಮಿಯ ಒಂದು ಭಾಗವೇ ಆಗಿದ್ದಿಯಾ; ಮುನಿಜನಗಳಿಗೆ ಮಾಡಿದ ಅಪಚಾರದ ಶಾಪದಿಂದಲಾಗಿ ನೀನು ವೃಂದೆಯಾಗಿ ಜಲಂಧರನ ಪತ್ನಿಯಾಗ ಬೇಕಾಯಿತು. ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಇನ್ನು ನೀನು ನನ್ನ ಭಾಗವಾಗುವ ಸಮಯವೂ ಬಂದಿದೆ. ನೀನು ದೇಹ ತೊರೆದ ಮೇಲೆ ಒಂದು ಸುಂದರ ಸಸಿಯಾಗುತ್ತಿಯಾ; ಆ ಸಸಿಯ ಎಲೆಗಳನ್ನು ಸಮರ್ಪಿಸದೆ ನನ್ನ ಪೂಜೆ ಸಂಪೂರ್ಣ ಆಗುವುದಿಲ್ಲ. ತುಳಸಿ ಎಂಬ ಹೆಸರಿನಿಂದ ನೀನು ಸದಾ ವಿಷ್ಣು ಪ್ರಿಯೆಯಾಗಿಯೇ ಇರುತ್ತಿಯಾ" ಅನ್ನುತ್ತಾನೆ. ಹಾಗೆಯೇ ಭಕ್ತ ವೃಂದಕ್ಕೆ ಇನ್ನು‌ ಮುಂದೆ ತುಳಸಿ‌ ಇಲ್ಲದೆ ಮಾಡಿದ ಯಾವ ಪೂಜೆಯೂ ತನ್ನನ್ನು ತೃಪ್ತಿಗೊಳಿಸಲಾರದು ಅನ್ನುತ್ತಾನೆ.


ವೃಂದೆ ಕೂಡಲೇ ತನ್ನ ದೇಹ ತ್ಯಾಗ ಮಾಡುತ್ತಾಳೆ. ಆ ಜಾಗದಲ್ಲಿ ಒಂದು ಸುಂದರ ಸಸಿ ಬೆಳೆಯುತ್ತದೆ. ವಿಷ್ಣುವಿನ ನಿರ್ದೇಶದಂತೆ ಆ ಸಸಿಗೆ ತುಳಸಿ ಎಂದು ಹೆಸರಿಡುತ್ತಾರೆ. ವಿಷ್ಣುವಿನ ನಿರ್ಧೇಶಾನುಸಾರ ತುಳಸಿಯನ್ನು ವಿಷ್ಣುವಿಗೆ ವಿವಾಹ ಮಾಡಿ ಕೊಡುತ್ತಾರೆ.


ಹೀಗೆ ವೃಂದೆ ತುಳಸಿಯಾದ ದಿನವನ್ನು ತುಳಸೀಪೂಜೆ ಮಾಡಿ ಆಚರಿಸುತ್ತಾರೆ ಎಂದೊಂದು ಹೇಳಿಕೆಯಾದರೆ ವಿಷ್ಣು ಹಾಗೂ ತುಳಸಿಯರ ವಿವಾಹವಾದ ದಿನವಾದ ಕಾರಣ ತುಳಸೀ ವಿವಾಹ ಎನ್ನುತ್ತಾರೆ ಎಂದು ಇನ್ನೊಂದು ಹೇಳಿಕೆ.


ಜಲಂಧರನ ಅಂತ್ಯವಾಗಿ ವೃಂದೆ ತುಳಸಿಯಾಗಿ ಬದಲಾಗಿ ವಿಷ್ಣು ಪ್ರಿಯೆಯಾದ ದಿನ ದ್ವಾದಶಿಯಂತೆ. ಆದ್ದರಿಂದಲೇ ಈ ದ್ವಾದಶಿಯನ್ನು ತುಳಸೀ ಪೂಜೆ ಅಥವಾ ತುಳಸೀ ಹಾಗೂ ವಿಷ್ಣುವಿನ  ವಿವಾಹದ ದಿನವನ್ನಾಗಿ ಆಚರಿಸುತ್ತಾರೆ ಎಂಬುದು ಸೂಕ್ಷ್ಮವಾಗಿ ಸಾರಾಂಶ. ಇನೂ ಒಂದಷ್ಟು ಕತೆ ಇದೆ. ಸಧ್ಯಕ್ಕೆ ಇಷ್ಟೇ ಸಾಕು.

ಹೆಚ್ಚಿನ ವಿವರ ಹಾಗೂ ಕತೆಯೊಂದಿಗೆ ಮುಂದಿನ ಸಂಚಿಕೆಯಲ್ಲಿ ನಾಡದು ನಿಮ್ಮ ಮುಂದೆ ಹಾಜರಿರುತ್ತೇನೆ.


ತುಳಸೀ ಕತೆಯನ್ನು ಸಂಗ್ರಹಿಸಿ ಹಂಚಿದವರು:

-ಎಡನಾಡು ಕೃಷ್ಣ ಮೋಹನ ಭಟ್ಟ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top