ಸ್ನೇಹಿತರೊಬ್ಬರು ತುಳಸಿಹಬ್ಬದ ಬಗ್ಗೆ ಲೇಖನ ಬರೆಯಿರಿ ಅಂದಿದ್ದರು. ನಾನು ತುಂಬಾ ಓದಿದವನಲ್ಲ ಪ್ರಾಜ್ಞನೂ ಅಲ್ಲ. ಎಲ್ಲೋ ಅಲ್ಲಿ ಇಲ್ಲಿ ಸ್ವಲ್ಪ ಸ್ವಲ್ಪ ಸಿಕ್ಕಿದ್ದನ್ನು ಕೇಳಿದ್ದನ್ನೂ ಬರೆಯುವವ. ನನ್ನ ಸೀಮಿತ ಜ್ಞಾನದಲ್ಲಿ ಆ ಬಗ್ಗೆ ಗೊತ್ತಿದ್ದಷ್ಟನ್ನು ಹೇಳಿ ಬಿಡೋಣ ಅನ್ನಿಸಿದೆ.
ತುಳಸೀ ಬಗ್ಗೆ ಹಿರಿಯವರು ಹೇಳಿದ ಕತೆಗಳು ಹಾಗೂ ಕೆಲವು ಪುಸ್ತಕದಲ್ಲಿ ಓದಿದುದು ಹಾಗೂ ಇನ್ನೊಂದಷ್ಟು ಕಲ್ಪನೆಯನ್ನು ಸೇರಿಸಿ ಬರೆಯಲು ನಿಶ್ಚಯಿಸಿದ್ದೇನೆ.
ಇಂದು ಉತ್ಥಾನ ದ್ವಾದಶಿ ತುಳಸೀ ಪೂಜೆ ಅಥವಾ ತುಳಸೀ ವಿವಾಹ ಮಾಡುವ ದಿನ. ಇಂದೇ ಈ ಲೇಖನ ಬರೆಯಲು ಪ್ರಶಸ್ತ ದಿನ ಅನ್ನಿಸಿದೆ. ನನ್ನ ಭಂಡಾರದಲ್ಲಿ ಇರುವುದನ್ನು ನಿಮ್ಮ ಎದುರು ಇಡುವ ಒಂದು ಚಿಕ್ಕ ಪ್ರಯತ್ನ ಇದು.
ನನಗೆ ಬಂದ ಮೊದಲ ಸಂದೇಹವೇ ಈ "ಉತ್ಥಾನ ದ್ವಾದಶಿ" ಎಂಬ ಹೆಸರಿಗೂ ತುಳಸಿಗೂ ಏನು ಸಂಬಂಧ? ಎಂದು. ಉತ್ಥಾನಪಾದ ಎನ್ನುವ ರಾಜ ದ್ರುವನ ಅಪ್ಪ. ಅವನಿಗೂ ತುಳಸಿಪೂಜೆಗೂ ಏನಪ್ಪಾ ಸಂಬಂಧ ಎಂದು ತಲೆ ಕೆರೆದು ಕೊಂಡೆ. ನನ್ನ ಸ್ನೇಹಿತರಿಂದ, ಪುಸ್ತಕಗಳಿಂದ ಏನೂ ಪ್ರಯೋಜನ ಕಾಣಲಿಲ್ಲ. ಕೊನೆಗೂ ಒಬ್ಬ ಸ್ನೇಹಿತರೇ ಒಂದಷ್ಟು ವಿವರ ಕೊಟ್ಟರು. ಉತ್ಥಾನ ದ್ವಾದಶಿ ಅಂದರೆ ಏನು ಎಂದೂ ವಿವರಿಸಿದರು. ವಿಷ್ಣು ಯೋಗ ನಿದ್ರೆಯಿಂದ ಏಳುವ (ಉತ್ಥಾನನಾಗುವ) ದಿನವೇ ಉತ್ಥಾನ ದ್ವಾದಶಿ ಎಂದು ತಿಳಿಸಿದರು.
ಉತ್ಥಾನ ದ್ವಾದಶಿಯ ಕತೆ ಅವರಂದಂತೆ ಹೀಗಿದೆ. ಮಹಾವಿಷ್ಣು ವರ್ಷದ ನಾಲ್ಕು ತಿಂಗಳು ಯೋಗನಿದ್ರೆಯಲ್ಲಿ ಇರುತ್ತಾನಂತೆ. ಆ ಸಮಯದಲ್ಲಿ ಸನ್ಯಾಸಿಗಳು, ಸಾಧುಸಂತರು ತಮ್ಮ ತಿರುಗಾಟಗಳನ್ನೆಲ್ಲಾ ನಿಲ್ಲಿಸಿ ಚಾತುರ್ಮಾಸ್ಯ ವೃತ ಮಾಡ್ತಿದ್ದರಂತೆ. ಉತ್ಥಾನ ದ್ವಾದಶಿಯ ನಂತರವೇ ವಿವಾಹಕ್ಕೆ ಸಂಬಂಧಿಸಿದ ಸಮಾರಂಭಗಳನ್ನು ತೊಡುಗುವುದೇ ಸಂಪ್ರದಾಯ ಹಾಗೂ ಕ್ಷೇಮ ಎಂಬ ಅಭಿಪ್ರಾಯ ಇದೆ. ಇದಕ್ಕೆ ಕಾರಣ ವಧೂವರರನ್ನು ಲಕ್ಷ್ಮೀ ನಾರಾಯಣರೆಂಬ ಭಾವನೆಯಲ್ಲಿ ಮಾಡುವ ವಿವಾಹವನ್ನು ವಿಷ್ಣು ಯೋಗ ನಿದ್ರೆಯಲ್ಲಿರುವಾಗ ನಡೆಸುವುದು ಸರಿಯಲ್ಲ ಎಂಬ ಭಾವನೆ.
ಈ ರೀತಿ ಯೋಗ ನಿದ್ರೆಯಿಂದ ಎದ್ದ ಮಹಾವಿಷ್ಣುವನ್ನು ವರನನ್ನಾಗಿಸಿ ತುಳಸಿಯೊಂದಿಗೆ ವಿವಾಹ ಮಾಡುವುದೇ ಸಂಪ್ರದಾಯ. ಆದ್ದರಿಂದ ಉತ್ಥಾನ ದ್ವಾದಶಿಯ ವಿಶೇಷವೇ ಈ ತುಳಸೀ ವಿವಾಹ. "ತುಳಸೀ ವಿವಾಹ" ಎಂಬ ಹೆಸರೂ ಈ ದಿನಕ್ಕೆ ಬರಲು ಇದೇ ಕಾರಣ.. ಯಾರೀ ತುಳಸಿ? ಹಾಗಿದ್ದರೆ. ಆ ಕತೆಯೂ ಬೇಕಲ್ಲವೇ? ವಿಷ್ಣು ತುಳಸಿಯನ್ನು ವಿವಾಹ ವಾಗಲು ಕಾರಣವೇನು? ಆ ಕತೆಯ ಪ್ರಕಾರ ಹಾಲಿನೊಂದಿಗೆ ಸೇರಿ ತುಳಸಿ ಸಮುದ್ರ ಮಥನ ಕಾಲದಲ್ಲಿ ಬಂದವಳು. ಹಾಗೆ ಹೊರ ಬಂದ ತುಳಸಿ ವಿಷ್ಣುವನ್ನು ಬಯಸುತ್ತಾಳೆ. ವಿಷ್ಣು ವಿವಾಹಕ್ಕೆ ಒಪ್ಪಿಗೆ ಕೊಟ್ಟು ಯೋಗ ನಿದ್ರೆ ಕಳೆದು ಎಚ್ಚರವಾದಾಗ ನಿನ್ನನ್ನು ವರಿಸುತ್ತೇನೆ ಎನ್ನುತ್ತಾನೆ. ಇಷ್ಟೇ ಆ ಸ್ನೇಹಿತರು ಕೊಟ್ಟ ಕತೆಯಲ್ಲಿ ಸಿಕ್ಕಿದ ಮಾಹಿತಿ. ಆದರೆ ನನಗೆ ತುಳಸಿ ಬಗ್ಗೆ ಗೊತ್ತಿರುವ ಒಂದಷ್ಟು ಕತೆ ಇದೆ. ಅದನ್ನು ಹೇಳದಿದ್ದರೆ ಕತೆ ಪೂರ್ಣವಾಗದಲ್ಲಾ?
ಈಗ ಹೇಳುವ ಕತೆಯಂತೆ ಲೋಕದ ಎಲ್ಲಾ ವ್ಯವಹಾರಗಳನ್ನೂ ತ್ರಿಮೂರ್ತಿಗಳು ತಮ್ಮೊಳಗೇ ಹಂಚಿ ಕೊಂಡಿದ್ದರು. ಸೃಷ್ಟಿಗೆ ಬ್ರಹ್ಮನಾದರೆ ಸ್ಥಿತಿಗೆ ಮಹಾವಿಷ್ಣು; ಲಯಕ್ಕೆ ಶಿವ.
ಇದರಿಂದಲಾಗಿ ದೇವೇಂದ್ರನಿಗೆ ಈ ಪಟ್ಟ ಬರೇ ಹೆಸರಿಗೆ ಮಾತ್ರ. ನಾನೊಬ್ಬ ನಿಷ್ಪಯೋಜಕ ಸದಾ ಇನ್ನೊಬ್ಬನ ಆಜ್ನೆ ಪಾಲಿಸಿ ಕೊಂಡಿರ ಬೇಕಾದವ ಅನ್ನಿಸಿ ಕೀಳರಿಮೆ ಬರ ತೊಡಗಿತಂತೆ. ದೇವೇಂದ್ರ ಎಂಬ ಪಟ್ಟದಿಂದಲಾಗಿ ಸಾಕಷ್ಟು ಶಕ್ತಿ ತುಂಬಿ ಕೊಂಡಿದ್ದ ಇಂದ್ರನಿಗೆ ಯಾವುದಾದರೂ ಒಂದು ಜವಾಬ್ಧಾರಿ ಸ್ವಯಂ ನಿರ್ವಹಿಸ ಬೇಕು ಅನ್ನಿಸ ತೊಡಗಿತು. ಆಲೋಚಿಸುತ್ತಾ ಹೋದವನಿಗೆ ತ್ರಿಮೂರ್ತಿಗಳಲ್ಲಿ ಯಾರನ್ನಾದರೂ ಒಬ್ಬನನ್ನು ಸೋಲಿಸಿ ಆ ಸ್ಥಾನ ತಾನೇ ನಿಭಾಯಿಸುವುದು ಸೂಕ್ತ ಪರಿಹಾರ ಅನ್ನಿಸಿತು. ಯಾರನ್ನು ಸೋಲಿಸಲಿ ಎಂದು ಆಲೋಚಿಸುತ್ತಾ ಹೋದಾಗ ಬ್ರಹ್ಮನ ಕೆಲಸ ತುಂಬಾ ಕಷ್ಟ ಅದು ಆಗಲಾರದು. ಸದಾ ವಿಷಯ ಲೋಲುಪನಾದ ತನಗೆ ಆ ರೀತಿ ಬಿಡುವಿಲ್ಲದ ಕೆಲಸ ಪೂರೈಸುವುದು ಕಷ್ಟ ಅನ್ನಿಸಿ ಬ್ರಹ್ಮನ ಹೆಸರನ್ನು ಆಲೋಚನೆಯಿಂದ ಬಿಟ್ಟು ಬಿಟ್ಟ.
ಇನ್ನು ವಿಷ್ಣುವಿನ ಬಗ್ಗೆ ಯೋಚಿಸಿದ. ಅವ ಎಷ್ಟೋ ಸಲ ಸಹಾಯಕ್ಕೆ ಬಂದವ ಅಲ್ಲದೆ ಕುಶಾಗ್ರಮತಿ. ಬುದ್ಧಿಮತ್ತೆಯಲ್ಲಿ ತಾನು ಅವನನ್ನು ಸರಿಗಟ್ಟಲಾರೆ ಎಂದೂ ಅನ್ನಿಸಿತು. ಈಗ ವಿಷ್ಣುವಿನ ವಿಚಾರ ತಲೆಯಿಂದ ಸಂಪೂರ್ಣ ತೆಗೆದು ಹಾಕಿದ.
ಇನ್ನು ಉಳಿದವ ಶಿವ, ಇವನೇ ಸರಿ ಅನ್ನಿಸಿತು. ಸುಮ್ಮನೇ ಬೂದಿ ಬಳಿದುಕೊಂಡು ಕೈಲಾಸದಲ್ಲಿ ಇರುತ್ತಾನೆ. ಎಲ್ಲಾ ಕೆಲಸ ತನ್ನ ಗಣಗಳ ಮೂಲಕ ಮಾಡಿಸಿ ಕೊಂಡಿರುತ್ತಾನೆ. ಇವನನ್ನು ಎದುರು ಹಾಕಿಕೊಂಡರೆ ತೊಂದರೆ ಬರಲಾರದು. ನನ್ನ ವಜ್ರಾಯುಧದ ಏಟಿಗೆ ಸೋಲೊಪ್ಪಿ ಶರಣಾಗುತ್ತಾನೆ ಅನ್ನಿಸಿತು. ತಲೆಯಲ್ಲಿ ವಿಚಾರ ಬಂದಮೇಲೆ ತಡವೇಕೆ? ಎಂದು ವಜ್ರಾಯುಧ ಹಿಡಿದುಕೊಂಡು ಕೈಲಾಸಕ್ಕೆ ಹೊರಟೇ ಬಿಟ್ಟ.
ಇಂದ್ರ ಹೊರಡುತ್ತಿದ್ದಂತೆ ಶಿವನಿಗೆ ಜ್ಞಾನ ದೃಷ್ಟಿಯಿಂದ ಅವನ ಉದ್ದೇಶದ ಅರಿವಾಗುತ್ತದೆ. ಇವನ ಅಹಂಕಾರ ಇಳಿಸಲೇ ಬೇಕೆಂಬ ನಿರ್ಧಾರಕ್ಕೆ ಬರುತ್ತಾನೆ ಶಿವ. ಕೂಡಲೇ ಬಾಗಿಲಲ್ಲಿ ಕಾವಲುಗಾರನ ವೇಷ ಧರಿಸಿ ತ್ರಿಶೂಲ ಸಮೇತ ನಿಲ್ಲುತ್ತಾನೆ.
ಅಹಂಕಾರದಿಂದ ಮೆರೆಯುತ್ತಿದ್ದ ಇಂದ್ರ ಕಾವಲುಗಾರನನ್ನು ಸೂಕ್ಷ್ಮ ದೃಷ್ಟಿಯಿಂದ ನೋಡದೆ ತುಚ್ಛೀಕಾರ ಭಾವದಿಂದ "ಎಲೋ ಅಲ್ಪ ಕಾವಲುಗಾರನೇ ಆ ಬೂದಿ ಬಡುಕ ಶಿವನನ್ನು ಹೊರಗೆ ಬರೋದಕ್ಕೆ ಹೇಳು" ಅನ್ನುತ್ತಾನೆ. ಕಾವಲುಗಾರನ ವೇಷದ ಶಿವ "ನೀವು ಯಾರು? ಬಂದ ಉದ್ದೇಶವೇನು? ಒಂದೂ ತಿಳಿಯದೆ ಅವರಲ್ಲಿ ನಾನು ಏನೆಂದು ಹೇಳಲಿ? ಎನ್ನುತ್ತಾನೆ.
"ಲೋ ಮೂರ್ಖ ನಾನು ದೇವೇಂದ್ರ ಬಂದಿದ್ದೇನೆ ಎಂಬುದನ್ನೂ ಗುರುತಿಸಲಾರದ ನಿನ್ನಂತಹವನನ್ನು ಕೆಲಸಕ್ಕೆ ಇರಿಸಿಕೊಂಡ ಆ ಶಿವನ ಬುದ್ದಿಯೇ ಪ್ರಶ್ನಾರ್ಹವಾಗಿದೆ. ಇನ್ನು ಅವ ಅವನ ಕರ್ತವ್ಯ ಸರಿಯಾಗಿ ನಿಭಾಯಿಸಬಹುದು ಎಂದು ನನಗನ್ನಿಸುತ್ತಿಲ್ಲ. ಆದ್ದರಿಂದ ಆ ಬೂದಿ ಬಡುಕ ಅವನಿಗೊಪ್ಪಿಸಿದ ಲಯದ ಕಾರ್ಯ ವನ್ನು ನನಗೆ ಒಪ್ಪಿಸಿ ಎಲ್ಲಾದರೂ ಹೋಗಿ ಬದುಕಿಕೊಳ್ಳಲಿ; ಅಷ್ಟು ಹೇಳು" ಎನ್ನುತ್ತಾನೆ.
"ನಾನು ಇಲ್ಲಿಯ ಕಾವಲುಗಾರ ನಿನ್ನ ಉದ್ದೇಶ ದುರುದ್ದೇಶವಾಗಿರುವ ಕಾರಣ ನನ್ನನ್ನು ಸೋಲಿಸದೆ ನಿನ್ನನ್ನು ಒಳಗೆ ಬಿಡಲು ಸಾಧ್ಯವೇ ಇಲ್ಲ" ಎನ್ನುತ್ತಾನೆ ಕಾವಲುಗಾರನ ರೂಪದ ಶಿವ. "ಮೊದಲು ನನ್ನೊಡನೆ ಯುದ್ಧ ಮಾಡಿ ಸಾಧ್ಯ ಇದ್ದರೆ ಸೋಲಿಸು ಆ ಮೇಲೆ ನಿನ್ನ ಸಂದೇಶ ಶಿವನಿಗೆ ತಲಪಿಸುವ ಮಾತು" ಅನ್ನುತ್ತಾನೆ ಶಿವ. ನಾನು ಯಾರು ಎಂದು ತಿಳಿದೂ ನೀನು ಈ ಮಾತನ್ನು ಹೇಳ ಬೇಕಿದ್ದರೆ ನಿನಗೆ ಅಹಂಕಾರ ಎಷ್ಟಿರ ಬೇಡ? ಎಂದು ಕೇಳಿದ ಇಂದ್ರ. "ಬಹುಶ: ನಿನ್ನ ಮರಣ ನನ್ನ ಕೈಯಲ್ಲಿ ಬರೆದಿದೆ ಅನ್ನಿಸುತ್ತಿದೆ. ನಾನೇನು ಮಾಡಲಿ ನಿನ್ನ ಹಣೆಬರಹ?" ಎಂದ ಇಂದ್ರ ತನ್ನ ವಜ್ರಾಯುಧದಿಂದ ಪ್ರಹರಿಸುತ್ತಾನೆ. ಆದರೆ ವಜ್ರಾಯುಧದ ಪೆಟ್ಟು ಶಿವನ ಮೈಯ್ಯನ್ನೂ ತಾಗುವುದಿಲ್ಲ. ಕಾವಲುಗಾರನ ರೂಪದ ಶಿವ ಈಗ ತನ್ನ ಕಾಲಿನಿಂದ ಇಂದ್ರನನ್ನು ಒದೆಯುತ್ತಾನೆ. ಆ ಒದೆತಕ್ಕೆ ಇಂದ್ರ ಯೋಜನಗಳಷ್ಟು ದೂರಕ್ಕೆ ಹೋಗಿ ಬೀಳುತ್ತಾನೆ. ಆಗ ಇಂದ್ರನಿಗೆ ಇವ ಸಾಮಾನ್ಯ ಕಾವಲುಗಾರ ಅಲ್ಲ ಎಂಬ ಅರಿವಾಗುತ್ತದೆ. ಸಾಕ್ಷಾತ್ ಶಿವನೇ ತನಗೆ ಪಾಠ ಕಲಿಸಲು ಕಾವಲುಗಾರನ ರೂಪಿನಲ್ಲಿ ಬಂದಿದ್ದಾನೆ ಎಂಬ ಸತ್ಯ ತಿಳಿಯುತ್ತದೆ.
ಶಿವನ ಕಾಲ ಮೇಲೆ ಬಿದ್ಧು ನನ್ನನ್ನು ಕ್ಷಮಿಸಿ ಎಂದು ಬೇಡಿಕೊಳ್ಳುತ್ತಾನೆ. ಆದರೆ ಶಿವ ಆಗಲೇ ತನ್ನ ಕ್ರೋದದ ಅಂತಿಮ ಹಂತವನ್ನು ತಲಪಿ ಮೂರನೇ ಕಣ್ಣನ್ನು ತೆರೆಯುವ ಸ್ಥಿತಿಗೆ ಮುಟ್ಟಿದ್ದ. ಕಷ್ಟಪಟ್ಟು ತನ್ನ ಕೋಪವನ್ನು ಹತೋಟಿಗೆ ತಂದುಕೊಂಡ ಶಿವ "ನೀನು ನನ್ನ ಕಾಲಮೇಲೆ ಬಿದ್ದು ಕೇಳಿಕೊಂಡ ಮೇಲೆ ಕ್ಷಮಿಸಲೇ ಬೇಕಾಗಿದ. ಆದರೆ ನನ್ನ ಹತೋಟಿ ತಪ್ಪಿದ ಕೋಪದ ಜ್ವಾಲೆಯನ್ನು ಎಲ್ಲಾದರೂ ಬಿಡುವುದು ಅನಿವಾರ್ಯವಾಗಿದೆ" ಎನ್ನುತ್ತಾನೆ. ಮುಂದುವರಿದು "ಮುಂದೆ ಈ ಕೋಪದ ಜ್ವಾಲೆಯೇ ನಿನ್ನ ಮೇಲೆ ಆಕ್ರಮಣ ಮಾಡಲೂ ಸಾಕು" ಅಂದು ಆ ಕ್ಷಣ ಇಂದ್ರನನ್ನು ಕ್ಷಮಿಸಿ ಕಳುಹಿಸುತ್ತಾನೆ.
ಹತೋಟಿ ತಪ್ಪಿದ ತನ್ನ ಕ್ರೋದಾಗ್ನಿಯನ್ನು ಶಿವ ಕಡಲಲ್ಲಿ ಬಿಡುತ್ತಾನೆ. ಆ ಕ್ರೋದಾಗ್ನಿ ರಾಕ್ಷಸ ರೂಪವನ್ನು ತಾಳುತ್ತದೆ. ಮಹಾ ಭೀಕರನೂ ಶಕ್ತಿವಂತನೂ ಆದ ರಾಕ್ಷಸನಾಗಿ ಬೆಳೆಯುತ್ತದೆ ಆ ಕ್ರೋದಾಗ್ನಿ. ಶಿವ ಗಣಗಳು ಅವನನ್ನು ತಮ್ಮೊಂದಿಗೆ ಸೇರಲು ಆಹ್ವಾನಿಸುತ್ತಾರೆ ಆದರೆ ಆ ರಾಕ್ಷಸ ಅವರನ್ನು ನಿರ್ಲಕ್ಷಿಸುತ್ತಾನೆ. ರಾಕ್ಷಸ ಗುರು ಶುಕ್ರಾಚಾರ್ಯರು ಈ ಪರಿಸ್ಥಿತಿಯ ಲಾಭ ಪಡೆದು ಅವನಿಗೆ ಜಲಂಧರನೆಂಬ ನಾಮಕರಣ ಮಾಡಿ ರಾಕ್ಷಸರ ರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತಾನೆ.
ಸಂಚಿಕೆ ಉದ್ದವಾಗುವ ಭಯದಿಂದ ಇಂದಿಗೆ ಇಷ್ಟಕ್ಕೆ ನಿಲ್ಲಿಸುತ್ತೇನೆ.
(ಮುಂದಿನ ಭಾಗ ನಾಳೆಗೆ)-
ತುಳಸೀ ಕತೆಯನ್ನು ಸಂಗ್ರಹಿಸಿ ಹಂಚುತ್ತಿರುವವ
-ಎಡನಾಡು ಕೃಷ್ಣ ಮೋಹನ ಭಟ್ಟ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ