ಸಂವಿಧಾನದ ಬಗೆಗಿನ ಅರಿವು ಎಲ್ಲರಿಗೂ ಅತ್ಯಂತ ಅಗತ್ಯ : ರಮೇಶ ಭಟ್
ಪುತ್ತೂರು: ಭಾರತೀಯ ಸಂವಿಧಾನ ಭಾರತದ ಎಲ್ಲಾ ನಾಗರಿಕರಿಗೂ ಅತ್ಯಂತ ಶ್ರೇಷ್ಠವಾದದ್ದು ಹಾಗೂ ಪವಿತ್ರವಾದದ್ದು. ಇಂತಹ ಸಂವಿಧಾನದ ದಿನಾಚರಣೆಯನ್ನು ಮಾಡಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸಂವಿಧಾನ ದಿನಾಚರಣೆ ಮಾಡುವಂತೆ ಸೂಚನೆ ನೀಡಿರುವುದು ಅತ್ಯಂತ ಸ್ವಾಗತಾರ್ಹ ವಿಚಾರ ಎಂದು ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಮೇಶ್ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ ಸಂವಿಧಾನ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅನೇಕ ಮಂದಿಗೆ ಭಾರತದ ಸಂವಿಧಾನದ ಬಗೆಗೆ ಅರಿವಿಲ್ಲ. ಪಿಯು ಹಂತದಲ್ಲಿ ಕಲಾ ವಿಭಾಗವನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿನ ಸಂವಿಧಾನ ಜ್ಞಾನ ಬರಬಹುದಾದರೂ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅಂತಹ ಅವಕಾಶ ದೊರೆಯುವುದಿಲ್ಲ. ಆ ನೆಲೆಯಿಂದಲೇ ಪದವಿ ಹಂತದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸಂವಿಧಾನದ ಬಗೆಗಿನ ಅಧ್ಯಯನವನ್ನು ಕಡ್ಡಾಯಗೊಳಿಸಲಾಗಿದೆ. ಸಂವಿಧಾನದಲ್ಲಿ ಎಲ್ಲಾ ಸಾಧ್ಯಾಸಾಧ್ಯತೆಗಳನ್ನೂ ತರ್ಕಿಸಿ ಉಲ್ಲೇಖಿಸಲಾಗಿದೆ. ಆದರೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನದ ಅವಕಾಶಗಳನ್ನು ದುರುಪಯೋಗಪಡಿಸಿ, ತುರ್ತುಪರಿಸ್ಥಿತಿ ಜಾರಿಗೊಳಿಸಿದ್ದು ದುರದೃಷ್ಟಕರ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ