'ಪ್ರೇಮಂ ಪೂಜ್ಯಂ' ಈ ವರ್ಷ ಚಿತ್ರ ರಸಿಕರಿಗೆ ಹಾಡುಗಳು ಮತ್ತು ಟ್ರೈಲರ್ ಮೂಲಕ ಕುತೂಹಲ ಮೂಡಿಸಿದ್ದ ಚಿತ್ರ

Upayuktha
0

ಇದೇ ಶುಕ್ರವಾರ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡು ಅದ್ಭುತ ಪ್ರದರ್ಶನ ಕಾಣುತ್ತಿರುವ ಚಿತ್ರ. ಇದರಲ್ಲಿ ನಮ್ಮ ನೆನಪಿರಲಿ ಪ್ರೇಮ್ ನಾಯಕ ನಟರಾಗಿ ನಟಿಸಿದ್ದು , ಬೃಂದಾ ಆಚಾರ್ಯರವರು ನಾಯಕಿ ನಟಿಯಾಗಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ನಿರ್ದೇಶನ ಮತ್ತು ಸಂಗೀತದ ಜವಾಬ್ದಾರಿ ಡಾ ರಾಘವೇಂದ್ರ ಬಿ.ಎಸ್ ಹೊತ್ತಿದ್ದರು. ಛಾಯಾಗ್ರಹಣ ನವೀನ ಕುಮಾರ್ ಅವರ ಕೈ ಚಳಕದಿಂದ ಸೆರೆಯಾಗಿತ್ತು. ಸಾಧುಕೋಕಿಲ ಮತ್ತು ಮಾಸ್ಟರ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.  


ನಿಷ್ಕಲ್ಮಶ ಪ್ರೇಮದ ಎಳೆಯನ್ನು ಹಿಡಿದುಕೊಂಡು  ಕನ್ನಡದಲ್ಲಿ ಅದ್ಬುತ ದೃಶ್ಯಕಾವ್ಯವನ್ನು ಪ್ರೇಕ್ಷಕರಿಗೆ ತೋರ್ಪಡಿಸುವಲ್ಲಿ ನಿರ್ದೇಶಕರಾದ ಡಾ. ರಾಘವೇಂದ್ರರವರು ತಮ್ಮ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಕನ್ನಡಕ್ಕೆ ಒಬ್ಬ ಪ್ರತಿಭಾವಂತ ಚಿತ್ರ ನಿರ್ದೇಶಕ ‌ಮತ್ತು ಸಂಗೀತ ನಿರ್ದೇಶಕರಾಗುವ ಭರವಸೆ ಮೂಡಿಸಿದ್ದಾರೆ. ಈ ಚಿತ್ರದ ಒಂದು ಎಳೆಯ ಕಥೆಯೆಂದರೆ ಬಡತನದಲ್ಲಿ ಹುಟ್ಟಿ ತಾನು ಬಡವರ ಆರೋಗ್ಯ ಸೇವೆ ಮಾಡಬೇಕು ಎನ್ನುವ ಹಂಬಲದಲ್ಲಿ ವೈದ್ಯಕೀಯ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುವ ನಾಯಕ ಹಾಗೆ ಅದೇ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಬಂದಿರುವ ನಾಯಕಿ ನಡುವೆ  ಉಂಟಾಗುವ ಸ್ನೇಹ ಮತ್ತು ಪ್ರೀತಿಯ ಪ್ರಯಾಣ.  


ಬಹು ಸಾಮಾನ್ಯವಾಗಿ ಕೇಳಲ್ಪಡುವ ಕಥೆಯಾದರೂ ಈ ಚಿತ್ರದಲ್ಲಿ ಪ್ರೀತಿಯ ಮೂಲ ಉದ್ದೇಶ ಮತ್ತು ನಿಜವಾದ ಪ್ರೀತಿ, ಸ್ನೇಹಕ್ಕೆ ಬೇಕಿರುವ ಅಂಶಗಳನ್ನು ಅದ್ಬುತವಾಗಿ ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಈ ಚಿತ್ರಕ್ಕೆ ಕನ್ನಡದ ಮಟ್ಟಿಗೆ ಪ್ರೇಮ್ ಬಿಟ್ಟು ಬೇರೆ ನಟರನ್ನು ಊಹಿಸಿಕೊಳ್ಳುವುದು ಕಷ್ಟ ಎನ್ನುವಷ್ಟು ಮನೋಜ್ಞವಾಗಿ ತನ್ನ ಕೆಲಸವನ್ನು ನಿರ್ವಹಿಸಿದ್ದಾರೆ. ನಾಯಕಿ ಬೃಂದಾ ಆಚಾರ್ಯರವರು ಕೂಡ ತನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.  


ಇನ್ನೂ ಮಾಸ್ಟರ್ ಆನಂದ್ ಮತ್ತು ಸಾಧುಕೋಕಿಲರವರು ಪರದೆ ಮೇಲೆ ಇರುವಷ್ಟು ಹೊತ್ತು ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಹೇಳಲೇಬೇಕಾದ ವಿಚಾರ ನವೀನ ಕುಮಾರ್ ಅವರ ಛಾಯಾಗ್ರಹಣ. ಚಿತ್ರ ಶುರುವಿನಿಂದ ಮುಗಿಯುವ ತನಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಚಿತ್ರೀಕರಣದ ಸ್ಥಳಗಳನ್ನು ತನ್ನ ಕೈ ಚಳಕದಲ್ಲಿ ಸೆರೆಹಿಡಿದ ರೀತಿ ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಂತಿತ್ತು. ಕಿವಿಗೆ ಮುದನೀಡುವ ಸಂಗೀತ ಊಟಕ್ಕೆ ಬೇಕಾದ ಉಪ್ಪಿನಕಾಯಿಯ ಹಾಗೆ ಎಲ್ಲಿಯೂ ಅತಿರೇಕ ಎನಿಸಿದೆ ಚಿತ್ರದುದ್ದಕ್ಕೂ ಪ್ರೇಕ್ಷಕರಿಗೆ ಇಷ್ಟವಾಗುವಂತಿತ್ತು.  


ಇಂದಿನ ಯುವಪೀಳಿಗೆಯು ತಿಳಿದಿರುವ ಪ್ರೀತಿಯ ವ್ಯಾಖ್ಯಾನಕ್ಕೆ ವ್ಯತಿರಿಕ್ತವಾಗಿರುವಂತೆ ಈ ಚಿತ್ರದಲ್ಲಿ ನಾಯಕ ತನ್ನ ನಿಷ್ಕಾಮ ಮತ್ತು ನಿಷ್ಕಲ್ಮಶ ಪ್ರೀತಿಯ ಸಂಕೇತವಾಗಿ ತಾನು ಪ್ರೀತಿಸಿ ಗೌರವಿಸುವ ಹುಡುಗಿಯನ್ನು ಹೃದಯದಲ್ಲಿ ದೇವತೆಯಾಗಿ ಪೂಜಿಸುವ ರೀತಿ ಮತ್ತು ಮದುವೆಯಾಗುವ ತನಕ ಆಕೆಯನ್ನು ಸ್ಪರ್ಶಿಸದೆ ಆಕೆಯ ನಂಬಿಕೆಯನ್ನು ಕಾಪಾಡಿಕೊಳ್ಳುವ ಹಾಗೂ  ಮನಸ್ಸಿನಲ್ಲಿ ಪ್ರೇಮವನ್ನು ಬಲಪಡಿಸುವ ದೃಶ್ಯಗಳನ್ನು ಮನಸ್ಸಿಗೆ ಮುಟ್ಟುವಂತೆ ತೋರಿಸುವಲ್ಲಿ ಯಶಸ್ಸು ಕಂಡಿದ್ದಾರೆ ನಿರ್ದೇಶಕರು.  


ಪ್ರೇಮವೆನ್ನುವುದು ಎರಡು ಮನಸ್ಸುಗಳ‌ ನಡುವೆ ಕಟ್ಟಲ್ಪಡುವ ನಂಬಿಕೆಯ ಸೇತುವೆಯೆ ಹೊರತು ಬಾಹ್ಯ ಆಕರ್ಷಣೆಗಳ ಆಗರವಲ್ಲ ಎನ್ನುವುದನ್ನು ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ವೈದ್ಯರು ಮತ್ತು ರೋಗಿಗಳ ನಡುವೆ ಇರುವ ಸಂಬಂಧದ ಬಗೆಗೂ ಸೊಗಸಾಗಿ ಹೇಳುವಲ್ಲಿ ನಿರ್ದೇಶಕರು ಸಫಲವಾಗಿದ್ದಾರೆ ಎನ್ನಬಹುದು. ಒಟ್ಟಾರೆ ಇತ್ತಿಚೆಗೆ ತೆರೆಕಂಡ ಪ್ರೇಮದ ಕಥೆ ಆಧಾರಿತ ಚಿತ್ರಗಳಲ್ಲಿ ಪ್ರೇಮಿ ಪೂಜ್ಯಂ ಒಂದು ನವಿರಾದ ಸಂಭಾಷಣೆ, ಕಥೆ, ಚಿತ್ರಕಥೆಯುಳ್ಳ ಚಿತ್ರವೆಂದರೆ ಅತಿಶಯೋಕ್ತಿಯಲ್ಲ. 


ಸಾಮಾನ್ಯವಾಗಿ ಬರುವ ಚಿತ್ರಗಳಿಗಿಂತ ತುಸು ಜಾಸ್ತಿ ಸಮಯದ ಚಿತ್ರವಾದರೂ ಕೂಡ ಚಿತ್ರಮಂದಿರದ ಒಳಗೆ ಕುಳಿತ ಪ್ರೇಕ್ಷಕರಿಗೆ ಯಾವ ಹಂತದಲ್ಲೂ ಬೇಸರ ಮೂಡಿಸದ ಹಾಗೆ ಕಥೆಯ ಕುತೂಹಲವನ್ನು ಕಾಯ್ದುಕೊಳ್ಳುವಲ್ಲಿ ನಿರ್ದೇಶಕರು ಯಶಸ್ಸು ಕಂಡಿದ್ದಾರೆ. ಪ್ರೀತಿಯನ್ನು ಆರಾಧಿಸುವ ಎಲ್ಲ ವರ್ಗದ ಮನಸ್ಸುಗಳು ಸಂಸಾರ ಸಮೇತ ಕುಳಿತು ನೋಡುವಂತಹ ಚಿತ್ರ. ಸಮಾಜಕ್ಕೆ ಒಳ್ಳೆಯ ಸಂದೇಶವುಳ್ಳ ಚಿತ್ರವನ್ನು ನೋಡುವುದರ ಮೂಲಕ ಇಂತಹ ಪ್ರತಿಭಾವಂತ ಯುವ ನಿರ್ದೇಶಕರನ್ನ ಬೆಂಬಲಿಸಿದರೆ ಮುಂದಿನ ಇಂತಹ ‌ಹಲವು ದೃಶ್ಯ ಕಾವ್ಯವನ್ನು ಅವರ ಬತ್ತಳಿಕೆಯಿಂದ ಬರುವಲ್ಲಿ ಯಾವ ನಿಸ್ಸಂದೇಹವು ಇಲ್ಲ.


ಪ್ರದೀಪ ಶೆಟ್ಟಿ ಬೇಳೂರು, ಕುಂದಾಪುರ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top