ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ನಾಡಿನ ಒಂದು ಪ್ರತಿಷ್ಠಿತ ಮತ್ತು ಹೆಗ್ಗಳಿಕೆಯ ಸಂಸ್ಥೆಯಾಗಿದ್ದು ಕಸಾಪದ ಬಹು ನಿರೀಕ್ಷಿತ ಚುನಾವಣೆಯಲ್ಲಿ ನಾನು ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಮತ್ತು ನನಗೆ ಮತ ನೀಡಿ ಎಂದು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಯಣ್ಣ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಮತದಾರರನ್ನು ಮಾಧ್ಯಮದ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನಾನು, ಈವರೆಗೆ 80 ಸಾವಿರ ಕಿಲೋಮೀಟರ್ ನಷ್ಟು ಪ್ರಚಾರ ನಿಮಿತ್ತ ಕರ್ನಾಟಕದ ಮೂಲೆ ಮೂಲೆಗೆ ಪ್ರವಾಸ ಮಾಡಿದ್ದೇನೆ. ಪ್ರಚಾರಕ್ಕಾಗಿ ಕೆಲವು ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ಮತ್ತೊಮ್ಮೆ ಪ್ರವಾಸ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಜಾತಿ, ಮತ, ಪಂಥ, ಪಕ್ಷ ಮತ್ತು ಧರ್ಮ ಹೀಗೆ ಯಾವುದೇ ಕಟ್ಟು ಪಾಡುಗಳಿಗೆ ಬೀಳದೇ ಸರ್ವರಿಗೂ ಕನ್ನಡ ಸಾಹಿತ್ಯ ಪರಿಷತ್ತು ಪರಿಕಲ್ಪನೆ ಇಟ್ಟುಕೊಂಡು ಸ್ಪರ್ಧಿಸುತ್ತಿದ್ದೇನೆ. ಅನೇಕ ಸಾಹಿತಿಗಳು ಬರಹಗಾರರು ಸೇರಿದಂತೆ ಅನೇಕರು ನನ್ನ ಉಮೇದುವಾರಿಕೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಮಾಯಣ್ಣ ಅವರು ಇತ್ತೀಚೆಗೆ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಗಡಿನಾಡು ಭಾಗದ ಮತಗಳು ನನಗೆ ತುಂಬಾ ಮುಖ್ಯವಾಗಿದ್ದು ಹಾಗಾಗಿ ಕರಾವಳಿ ಜಿಲ್ಲೆಗೆ ಎರಡನೇ ಬಾರಿಗೆ ಭೇಟಿ ನೀಡುತ್ತಿದ್ದೇನೆ ಮತ್ತು ಕರಾವಳಿಗೆ ಅನೇಕ ಪ್ರಮುಖರ ಜೊತೆ ಮಾತುಕತೆ ಮಾಡಿದ್ದೇನೆ.
ಕನ್ನಡ ಸಾಹಿತ್ಯ ಪರಿಷತ್ತಿನ ಈ ಬಾರಿಯ ಚುನಾವಣಾ ಕಣ ಕುತೂಹಲದ ಹಂತ ತಲುಪುತ್ತಿದ್ದು ನವೆಂಬರ್ 21ರಂದು ನಡೆಯುವ ಚುನಾವಣೆಯಲ್ಲಿ ಕರಾವಳಿ ಭಾಗದ ಮತಗಳು ನಿರ್ಣಾಯಕವಾಗಲಿವೆ. ಹಾಗಾಗಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಮತ್ತು ಬಣಾತೀತವಾಗಿ ಸ್ಪರ್ಧಿಸುತ್ತಿರುವ ನನಗೆ ಕಸಾಪ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ಮತದಾರರು ತಮ್ಮ ಅಮೂಲ್ಯ ಮತಗಳನ್ನು ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದೊಡ್ಡ ಮಟ್ಟದ ಸೇವೆಗೆ ಅವಕಾಶ ನೀಡಬೇಕೆಂದು ಮಾಧ್ಯಮದ ಮೂಲಕ ಮತದಾರರನ್ನು ಮಾಧ್ಯಮಗಳ ಮೂಲಕ ವಿನಂತಿಸಿಕೊಂಡರು.
ನಾನು ಗೆದ್ದ ಕೂಡಲೇ ರಾಜ್ಯದಾದ್ಯಂತ ಕನ್ನಡ ಸಾಹಿತ್ಯ ಪರಿಷತ್ತಿನ ಡಿಜಿಟಲ್ ಸಾಹಿತ್ಯ ಅಭಿಯಾನ ಆರಂಭಿಸುವವನಿದ್ದು,ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಸದಸ್ಯತ್ವಾಕಾಂಕ್ಷಿಗಳಿಗೆ ಜಿಲ್ಲಾ ಕೇಂದ್ರಗಳಲ್ಲೇ ಸದಸ್ಯತ್ವ ಗುರುತಿನ ಚೀಟಿ ಲಭ್ಯವಾಗುವಂತೆ ಮಾಡಲಾಗುವುದು. ಸದ್ಯ ಸದಸ್ಯತ್ವಕ್ಕೆ ಅರ್ಜಿ ಹಾಕಿದ್ದರೂ ಇನ್ನೂ ಸದಸ್ಯತ್ವ ದೊರಕದ ಆಕಾಂಕ್ಷಿಗಳಿಗೆ ಅವರ ಬಾಕಿ ಉಳಿದಿರುವ ಸದಸ್ಯತ್ವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗುವುದು.
ಅದಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸರಕಾರದಿಂದ ಅತೀ ಹೆಚ್ಚಿನ ಅನುದಾನ ಸಿಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಭರವಸೆಯನ್ನು ನಾನು ನೀಡುತ್ತೇನೆ. ಅದಲ್ಲದೇ ಹೋಬಳಿ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಕಂಪನ್ನು ಹಬ್ಬಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಏಳಿಗೆಯ ಪಥಕ್ಕೆ ಏರಿಸುವ ಪ್ರಯತ್ನಗಳನ್ನು ಮಾಡುತ್ತೇನೆ.
ಹಿರಿಯ ಸಾಹಿತಿಗಳನ್ನು ಸಮರ್ಪಕವಾಗಿ ಗುರುತಿಸುವುದಲ್ಲದೆ ಉದಯೋನ್ಮುಖ ಕವಿ ಸಾಹಿತಿಗಳಿಗೂ ಹೆಚ್ಚಿನ ಅವಕಾಶಗಳ ವೇದಿಕೆಗಳನ್ನು ಒದಗಿಸಿಕೊಡುವುದಲ್ಲದೆ ನಿರಂತರವಾಗಿ ಹಿರಿಯ ಕಿರಿಯ ಬರಹಗಾರರ ಕೃತಿಗಳನ್ನು ಪ್ರಕಟಿಸಿ ಪರಿಷತ್ತಿನಿಂದಲೇ ಸಹಾಯಧನ ಕೊಡಿಸುವ ವ್ಯವಸ್ಥೆ ಮಾಡುವ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಮುಂದಿನ 5 ವರ್ಷಗಳಲ್ಲಿ 40 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮಾಯಣ್ಣ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾಯಣ್ಣ ಅವರ ದಕ್ಷಿಣ ಜಿಲ್ಲಾ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿರುವ ಉದ್ಯಮಿ, ಸಾಹಿತ್ಯ ಪೋಷಕ ಗುರುಪ್ರಸಾದ್ ಕಡಂಬಾರ್, ಕವಿ ಸಂಘಟಕ ಕಾ.ವೀ.ಕೃಷ್ಣದಾಸ್ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ