ಕತೆ: ದಿಯಾ ಎಂಬ ಹುಡುಗಿ ಮತ್ತು ಜೇನುತುಪ್ಪ...!!!

Upayuktha
0

(ಸತ್ಯ ಘಟನೆ ಆಧರಿಸಿದ ಕಾಲ್ಪನಿಕ ಕತೆ)




ಎರಡು ದಿನದಿಂದ ಅಡಿಕೆ ಒಣಗಿಸಲು ಸೋಲಾರ್ 'ಸ್ಥಾವರ' ನಿರ್ಮಾಣದ ಒತ್ತಡದಲ್ಲಿ 'ಜಂಗಮ ವಾಣಿ' ಕೈಗೆ ಬರಲಿಲ್ಲ!!


ಇವತ್ತು ಸೋಲಾರ್ ಸ್ಥಾವರದ ಅಡಿಯಲ್ಲೇ ಕುಳಿತು ಎಡಗೈಗೆ ಫೋನ್ ಹಿಡಿಸಿ ಬಲಗೈ ಹೆಬ್ಬೆರಳಿಗೆ ಅಕ್ಷರ ಒತ್ತುವುದಕ್ಕೆ ಹೇಳಿದೆ!! ಹೊರಗಡೆ ಸೋssssss ಅಂತ ಮಳೆ!!. 


ಒಳಗಡೆ ಮೋಡ ಕವಿದ ವಾತಾವರಣ!!!


ಚೊಗರು ಅಂಟಿಸಿಕೊಂಡ ಬಲಗೈ ಹೆಬ್ಬೆರಳು, ಒಂದು ಪುಟ್ಟ ಕಥೆ ಮತ್ತು ಅದಕ್ಕೆ ಸಾಮ್ಯತೆ ಇರುವ ಒಂದು ಹತ್ಯಾಕಾಂಡದ ಘಟನೆ ಹೇಳುವುದಕ್ಕೆ ಹೊರಟಿದೆ!! 


***


ಯಾವಾಗಲೂ ತಮಾಷೆನೇ ಆಯ್ತು, ಒಂದು ಗಂಭೀರ ಕತೆ ಬರೆಯೋಕೆ ಆಗಲ್ವಾ? ಅಂತ ಯಾರಾದರೂ ಕೇಳಿದರೆ..... ತಗಳಿ, ತೆಗಳಿ ಅಂತ ಕೊಡೋಕೆ ಈ ಕತೆ!!!


***

ಕತೆ ಶುರುವಾಗೋದು ಇಲ್ಲಿಂದ...


ನಾವಾಗ ಬೆಂಗಳೂರಿನ ಜಿಗಣಿ ಸಮೀಪದ ನಿಸರ್ಗ ಲೇಔಟ್‌ನಲ್ಲಿ ಇದ್ವಿ. ನಾವು ಅಂದ್ರೆ ನಾನು, ಹೆಂಡತಿ ಮತ್ತು ಮಗ. ನಾವು ವಾಸವಿದ್ದ ಎದುರು ಮನೆಯಲ್ಲಿ ದಿಯಾ ಅಂತ ಒಂದು ಪುಟ್ಟ ಹುಡುಗಿ. ಹಳೇ ಸಿನಿಮಾಗಳಲ್ಲಿ ಬೇಬಿ ಶಾಮಿಲಿ ಅಂತ ಇರ್ಲಿಲ್ವಾ, ಸೇಮ್ ಅವಳ ಜೆರಾಕ್ಸ್!! ಮಾತಿನ ಪಟಾಕಿ!!


ನಿಸರ್ಗ ಲೇಔಟ್‌ನ ಹೊರ ಭಾಗದಲ್ಲಿ ಬುಕ್‌ಸಾಗರ ಎನ್ನುವ ಸಣ್ಣ ಊರು. ಸುತ್ತ ಮುತ್ತಲಿನ ಅನೇಕರು ಬೆಳಗ್ಗೆ ಹಾಲನ್ನು ತಂದು ಅಲ್ಲಿಯ ಡೈರಿಗೆ ಕೊಡ್ತಾ ಇದ್ರು. ನಾವು 'ವಾಕಿಂಗೂ ಆಗುತ್ತೆ, ಫ್ರೆಶ್ ಹಾಲು ಸಿಗುತ್ತೆ ಅಂತ ಅಲ್ಲಿಂದ ಹಾಲನ್ನು ತರ್ತಾ ಇದ್ವಿ.  


ಒಂದಿನ ಎದುರು ಮನೆ ಮಾತಿನ ಪಟಾಕಿ ದಿಯಾ "ನಾನೂ ನಿಮ್ಜೊತೆ ಬೆಳಗ್ಗೆ ವಾಕಿಂಗ್ ಬರ್ತೀನಿ" ಅಂತ ಹೇಳಿ, ಮರುದಿನದಿಂದ ಬೆಳಗ್ಗೆ ಏಳುಗಂಟೆಗೆ ಬರೋದಕ್ಕೆ ಶುರು ಮಾಡಿದಳು!!. "ದಿನಾ ನಮ್‌ಜೊತೆ ಬರೋದಾದರೆ ಫ್ರೀ ವಾಕಿಂಗ್ ಕರ್ಕೊಂಡು ಹೋಗೋಕಾಗಲ್ಲ, ದುಡ್ಡು ಕೊಡಬೇಕಾಗುತ್ತೆ ಅಂದೆ".  ದುಡ್ಡೆಲ್ಲ ಕೊಡಕಾಗಲ್ಲ ಅಂತ ವಾದ ಮಾಡಿ!!, ಕೊನೇಗೆ... "ಸರಿ ಕೊಡ್ತೀನಿ, ಎಷ್ಟು ಕೊಡಬೇಕು?" ಅಂದಳು.  "ವರ್ಷಕ್ಕೆ ಒಂದು ರುಪಾಯಿ ಆಗುತ್ತೆ" ಅಂದೆ!!  


ಅಂತು ವರ್ಷಕ್ಕೆ ಒಂದು ರುಪಾಯಿ ಅಗ್ರಿಮೆಂಟ್ ಮೇಲೆ ದಿನಾ ದಿಯಾಳನ್ನ ನಾವು ಬೆಳಗ್ಗೆ ವಾಕಿಂಗ್ ಕರ್ಕೊಂಡು ಹೋಗೋದು ಅಂತಾಯ್ತು!!


ನನಗಿರುವ ಸಹಸ್ರ ನಾಮಗಳಲ್ಲಿ ದಿಯಾ ಇಟ್ಟ "ಒಂದ್ರುಪಾಯ್ ಅಂಕಲ್" ಅನ್ನುವುದೂ ಒಂದು!!!!


ಹಾಲಿಗೆ ಕಮ್ ವಾಕಿಂಗ್‌ಗೆ ಹೋಗುವ ದಾರಿಯಲ್ಲಿ ಒಂದು ದೊಡ್ಡ ಗಾತ್ರದ ಮರ. ಅದರ ಬಾಗಿದ ಒಂದು ಕೊಂಬೆಯಲ್ಲಿ ಒಂದು ಹೆಜ್ಜೇನು.   


ದಿನಾ ಆ ಮರದ ಬಳಿ ಬಂದಾಗ ಆ ಜೇನಿನ ಬಗ್ಗೆ ಮಾತಾಡಿಯೇ ಮುಂದಕ್ಕೆ ಹೋಗಬೇಕು!! ನಾನು ಅವಳು ಕೇಳುವ, ಮಗ ಕೇಳುವ ಜೇನು ಸಂಬಂಧಿತ ಪ್ರಶ್ನೆಗಳಿಗೆ ಇಂಟರ್‌ನೆಟ್ ಹುಡುಕಿ ಮರುದಿನ ಹೇಳುವುದು.  ಜೇನು, ಜೇನು ಮಕರಂದ ತರುವುದು, ಸಿವಿಲ್ ಇಂಜನಿಯರ್ ಓದದೇ ಅವು ಮನೆ ಕಟ್ಟುವ ಪರಿ, ತುಪ್ಪ ಮಾಡುವ ಕ್ರಮ, ಗಾಳಿಗೆ ಹೆದರುವ ಅವುಗಳ ಭಯ, ಅವು ಕಚ್ಚಿದರೆ ಆಗುವ ಪರಿಣಾಮ, ಜೇನು ತುಪ್ಪದ ಔಷಧ ಗುಣ.... ಹೀಗೆ ದಿನಾ ಏನಾದರು ಹೇಳಲೇ ಬೇಕು!!  


ಹೀಗಿರುವಾಗ ಒಂದು ಭಾನುವಾರ ಸಂಜೆ ಹೊತ್ತು 'ಮಿಲ್ಕ್ ವಾಕಿಂಗ್‌'ಗೆ ಹೋಗುವಾಗ ಮಗನೂ ಇದ್ದ, ದಿಯಾನೂ ಬಂದಿದ್ಲು.  


ಅವತ್ತು ಆ ಮರದ ಸಮೀಪ ಒಂದು ಶಾಕಿಂಗ್ ಘಟನೆ!!!


ಆ ದೊಡ್ಡ ಮರದ ಸಮೀಪ ಇದ್ದ ನಾಲ್ಕಂತಸ್ತಿನ ಮನೆ. ಅಲ್ಲಿ ಬಾಡಿಗೆಗೆ ಇದ್ದವರು ಒಂದು ಕಂಪ್ಲೇಂಟ್ ಕೊಟ್ಟಿದ್ದಾರೆ. "ತುಂಬ ಬಿಸಿಲಿದ್ದಾಗ ಹೆಜ್ಜೇನು ಹುಳುಗಳೆಲ್ಲ ಹಾರಾಡ್ತಾ ಇರ್ತಾವೆ, ನಮಗೆ ತಿರುಗಾಡೋಕೆ ಹೆದರಿಕೆ ಆಗುತ್ತೆ, ಏನಾದರೂ ಮಾಡಿ ಹೆಜ್ಜೇನನ್ನು ಅಲ್ಲಿಂದ ತೆಗಿಸಿ" ಅಂತ.


ಸರಿ, ಓನರ್ರು ನಿಸರ್ಗ ಲೇಔಟ್‌ನಲ್ಲಿದ್ದ PCI (ಪೆಸ್ಟ್ ಕಂಟ್ರೋಲ್ ಆಫ್ ಇಂಡಿಯಾ) ದ ಶ್ರೀನಿವಾಸ್ ಎಂಬುವರಿಗೆ ಹೇಳಿ, ಜೇನು ಹುಳಗಳನ್ನು ಸಾಯಿಸಲು ಅದ್ಯಾವುದೋ ಕೀಟ ನಾಶಕ ಹೊಡೆಸಿ, ಸಂಪೂರ್ಣ ಹುಳಗಳನ್ನು ಸಾಯಿಸಿದ್ದರು!! ಸತ್ತ ಸಾವಿರಾರು ಹುಳಗಳು ರಸ್ತೆ ಮೇಲೆ ಬಿದ್ದಿದಾವೆ. ಅವುಗಳ ಪಾರ್ಥಿವ ಶರೀರದ ಮೇಲೆ ವಾಹನಗಳು ಓಡಾಡಿದಾವೆ!! 


PCI ಶ್ರೀನಿವಾಸ್ ಅಲ್ಲೇ ಜೇನು ಸಾಯಿಸುವ ಮೇಲ್ವಿಚಾರಣೆ ಮಾಡುತ್ತ ಅಲ್ಲೇ ನಿಂತಿದಾರೆ.


ದಿಯಾಳ ಮುಖ ಚಿಕ್ಕದಾಯ್ತು. ನೇರ ಔಷಧಿ ಸ್ಪ್ರೇ ಯಂತ್ರ ಹಿಡಿದು ನಿಂತಿದ್ದ PCI ಶ್ರೀನಿವಾಸ್ ಬಳಿ ಹೋಗಿ "ಅಂಕಲ್, ಆ ಹುಳಗಳು ಇನ್ಯಾವತ್ತೂ ಹಾರೋದೇ ಇಲ್ವಾ?  ಅವು ಜೇನು‌ತುಪ್ಪ ಮಾಡೋದೇ ಇಲ್ವಾ?" ಅಂತ ಕೇಳಿದರೆ, ಶ್ರೀನಿವಾಸ್ "ಇಲ್ಲ ಪುಟ್ಟಿ, ಅವು ಯಾರಿಗಾದರು ಕಚ್ಚಬಹುದು ಅಂತ ಅವುಗಳನ್ನೆಲ್ಲ ಸಾಯಿಸಿದ್ದೇವೆ.  ಯಾರಿಗೂ ತೊಂದರೆ ಆಗಬಾರದಲ್ವಾ?" ಅಂತ ದಿಯಾಳನ್ನು ಕನ್ವಿನ್ಸ್ ಮಾಡ್ತಾ ಇದ್ರೆ, ನನಗೂ, ನನ್ನ ಮಗನಿಗೂ, ನೋಡ್ತಾ ನಿಂತಿದ್ದ ಅನೇಕರಿಗೆ ಸಂಕಟ ಆಗ್ತಾ ಇತ್ತು.  


ವಿಷದ ವಾಸನೆ, ಸತ್ತ ಜೇನು ಹುಳುಗಳ ರಸ್ತೆ!! ಯಾರಿಗೆ ಸಂಕಟ ಆಗಲ್ಲ!?


**


ಇದಾಗಿ ಕೆಲವು ತಿಂಗಳು ಕಳೆದಿತ್ತು...


PCI ಶ್ರೀನಿವಾಸ್‌ರ ಎರಡು ವರ್ಷದ ಮೊಮ್ಮಗನಿಗೆ ಜ್ವರ-ಸೀತ. ಬುಕ್‌ಸಾಗರದ ಆಯುರ್ವೇದಿಕ್ ವೈದ್ಯರೊಬ್ಬರು ಒಂದು ಬೇರು ಕೊಟ್ಟಿದಾರೆ. ಅದನ್ನು ಗಂಧ ತೇಯ್ದ ಹಾಗೆ ತೇಯ್ದು, ಜೇನುತುಪ್ಪದಲ್ಲಿ ಬೆರಸಿ ಮೊಮ್ಮಗನಿಗೆ ತಿನ್ನಿಸಲು ಹೇಳಿದ್ದಾರೆ. ಒಳ್ಳೆ ಮಲೆನಾಡಿನ ಜೇನು ತುಪ್ಪ ನಮ್ಮ ಮನೆಯಲ್ಲಿ ಸಿಗಬಹುದು ಅಂತ PCI ಶ್ರೀನಿವಾಸರು ನಮ್ಮ ಮನೆಗೆ ಬಂದಿದಾರೆ. ಅವತ್ತು ದಿಯಾ ಆಟವಾಡುತ್ತ ನಮ್ಮ ಮನೆಯಲ್ಲಿ ಇದ್ದಾಳೆ!!!


ಶ್ರೀನಿವಾಸ್ ಜೇನು ತುಪ್ಪ ತೆಗೆದುಕೊಂಡು ಹೋದರು. ದಿಯಾಳ ಕಣ್ಣುಗಳು ಇದನ್ನು ಗಮನಿಸಿದ್ದಾವೆ!!!


ಕೇರಮ್ ಆಡುತ್ತಿದ್ದ ದಿಯಾ "ನೀವು ಶ್ರೀನಿವಾಸ್ ಅಂಕಲ್‌ಗೆ ಯಾಕೆ ಜೇನ್ತುಪ್ಪ ಕೊಟ್ಟಿದ್ದು, ನಿಮ್ ಜೊತೆ ಟೂ" ಅಂತ ಹೇಳಿ ಆಟ ನಿಲ್ಲಿಸಿ ಮನೆಗೆ ಹೋದಳು.


ಜೇನು ಹುಳುಗಳ ಕೊಲೆಗಾರರಿಗೆ ಜೇನುತುಪ್ಪ ಕೊಡಬಹುದಾ!!? ಅಂತ ಅವಳ ಭಾವ ಇರಬೇಕು!!!


**


ಕತೆ ಇಲ್ಲಿಗೆ ಮುಗಿಯಿತು.


ಅಗ್ರಿಮೆಂಟ್ ಪ್ರಕಾರ ದಿಯಾ  ಕೊಡಬೇಕಿದ್ದ ಏಕ್ ರುಪಾಯ್ ಅಬಿತಕ್ ನಹಿ 'ದಿಯಾ'!!! 


ಪರವಾಗಿಲ್ಲ!! ಕಾಲ್ಪನಿಕ ಕತೆಯ ಹುಡುಗಿ ದಿಯಾ, ಓದಿ ಕೆಲಸಕ್ಕೆ ಸೇರಿದ ಮೇಲೆ ಯಾವುದಾದರು ಕತೆಯಲ್ಲಿ ನನ್ನ ಒಂದು ರುಪಾಯಿಯನ್ನು ನನಗೆ ಕೊಟ್ಟಾಳು!!?


**


ಘಟನೆ


ಮೇಲ್ಗಡೆ ಹೇಳಿದ್ದು ಸತ್ಯ ಘಟನೆ ಆಧರಿಸಿದ ಕಾಲ್ಪನಿಕ ಕತೆ!! ಅದು ಕತೆ ಅಷ್ಟೇ!!


ಆದರೆ ನಿನ್ನೆ ನೆಡೆದ ಘಟನೆ...


ಅಡಿಕೆ ಒಣಗಿಸಲು ಸೋಲಾರ್ ಟಾರ್ಪಲ್ ಸೂಕ್ತ ಅಂತ ಭಾವಿಸಿ, ಒಂದು ಸ್ಟ್ರಕ್ಚರ್ ಮಾಡಿ ಮನೆಯ ಮುಂದೆ ಒಂದು ಸೋಲಾರ್ ಟಾರ್ಪಲ್ ಬಳಸಿ ಅಡಿಕೆ ಡ್ರೈಯರ್ ಮಾಡಿದ್ದಾಯ್ತು!!


ಮೊನ್ನೆ ರಾತ್ರಿ ಹತ್ತು ಗಂಟೆಗೆ ಡ್ರೈಯರ್ ಸಿದ್ದವಾಯ್ತು. ನಿನ್ನೆ ಬೆಳಗ್ಗೆ ಅದಕ್ಕೆ ಅಡಿಕೆ ಹರಡಿದ ಮೆಶ್ ಟ್ರೇ ಇಡುವಾಗ ಡ್ರೈಯರ್ ಪಕ್ಕದಲ್ಲಿದ್ದ ಜೇನು ಪೆಟ್ಟಿಗೆಯಿಂದ ಒಂದಿಷ್ಟು ಹುಳಗಳು ಸೋಲಾರ್ ಟಾರ್ಪಲ್‌ ಮಾಡಿನ ಒಳಗೆ ಬಂದಿದಾವೆ. ಬಂದ ಜೇನು ಹುಳಗಳಲ್ಲಿ ಕೆಲವು ಟಾರ್ಪಲ್‌ನ ಬ್ರೈಟ್‌ನೆಸ್‌ ಆಕರ್ಷಣೆಗೆ ಅಲ್ಲಿಂದ ಹೊರ ಹೋಗುವ ಪ್ರಯತ್ನ ಮಾಡಲೇ ಇಲ್ಲ!! 


ಸಂಜೆ ಹೊತ್ತಿಗೆ ಅನೇಕ ಜೇನು ಹುಳಗಳು ಸೋಲಾರ್ ಟಾರ್ಪಲ್‌ಗೆ ನೇತುಬಿದ್ದು ಆತ್ಮಹತ್ಯೆ ಮಾಡಿಕೊಂಡಿವೆ!!!


ಏನು ಮಾಡುವುದು ತೋಚಲಿಲ್ಲ. ರಾತ್ರಿ ಎಂಟು ಗಂಟೆಗೆ ಜೇನು ಪೆಟ್ಟಿಗೆಯನ್ನು ಮೂವತ್ತಡಿ ದೂರಕ್ಕೆ ಸ್ಥಳಾಂತರ ಮಾಡಿ, ಆಕಾಶ ನೋಡಿ ಕೈ ಮುಗಿದೆ.  


ಪೆಟ್ಟಿಗೆ ಸ್ಥಳಾಂತರ ಮಾಡಿದ್ದರೂ, ಇವತ್ತೂ ಕೆಲವು ಹುಳಗಳು ಟಾರ್ಪಲ್ ಆಕರ್ಷಣೆಗೆ ಬಿದ್ದು ಜೀವ ತೆಕ್ಕೊಂಡಿದಾವೆ. ಉದ್ದೇಶಪೂರ್ವಕವಾಗಿ ಅವುಗಳ ಸಾವಿಗೆ ಕಾರಣ ಅಲ್ಲದೇ ಇದ್ದರೂ ಕತೆಯಲ್ಲಿ ಬರುವ PCI ಶ್ರೀನಿವಾಸ್‌ಗೂ ನನಗೂ ವ್ಯತ್ಯಾಸ ಇಲ್ವೇನೋ ಅಂತ ಅನಿಸುತ್ತಿದೆ.

ಕಾಲ್ಪನಿಕ ಕತೆಯ ದಿಯಾಗೆ ಈ ವಿಷಯ ಹೇಳಿದರೆ, ಕತೆಯಲ್ಲೂ ಆ ಪುಟ್ಟಿ ನಂಜೊತೆ ಟೂ ಬಿಡಬಹುದು!!?


***

ಯಾರಾದರೂ ಅಡಿಕೆ ಒಣಗಿಸಲು ಸೋಲಾರ್ ಟಾರ್ಪಲ್ ಬಳಸಿ ಡ್ರೈಯರ್ ಮಾಡೋದಾದರೆ, ಜೇನು ಪೆಟ್ಟಿಗೆಯಿಂದ ಆದಷ್ಟು ದೂರದಲ್ಲಿ ಮಾಡುವುದು ಒಳ್ಳೆಯದು. ಆಥವಾ ಡ್ರೈಯರ್ ಮಾಡುವ ನಾಲ್ಕು ದಿನ ಮುಂಚೆಯೇ ಜೇನು ಪೆಟ್ಟಿಗೆ ಸ್ಥಳಾಂತರ ಮಾಡುವುದು ಒಳ್ಳೆಯದು. 

***

-ಅರವಿಂದ ಸಿಗದಾಳ್, ಮೇಲುಕೊಪ್ಪ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top