ಹಕ್ಕಿಗಳಿಂದ ನಿಸರ್ಗಕ್ಕೆ ಚೈತನ್ಯ, ಮನಸ್ಸಿಗೆ ಸಂತೋಷ - ಕವಿ ಸುಬ್ರಾಯ ಚೊಕ್ಕಾಡಿ ಬಣ್ಣನೆ

Upayuktha
0

 


ಪುತ್ತೂರು: ನಮ್ಮ ಮನೆಯಂಗಳದಲ್ಲಿ ಸದಾ ಕಂಡುಬರುತ್ತಿದ್ದ ಗುಬ್ಬಚ್ಚಿ, ಕಾಗೆಯಂತಹ ಪಕ್ಷಿಗಳು ಕಣ್ಮರೆಯಾಗುತ್ತಿರುವುದು ಕಳಕಳವದ ಸಂಗತಿ. ಹಕ್ಕಿಗಳಿಲ್ಲದ ನಿಸರ್ಗವನ್ನು ಊಹಿಸುವುದೂ ಸಾಧ್ಯವಿಲ್ಲ ಎಂದು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಹೇಳಿದ್ದಾರೆ.

ಅವರು ಇಲ್ಲಿಗೆ ಸಮೀಪದ ಪರ್ಪುಂಜದಲ್ಲಿರುವ ‘ಸೌಗಂಧಿಕ’ದಲ್ಲಿ ಪತ್ರಕರ್ತ, ವನ್ಯಜೀವಿ ಛಾಯಾಗ್ರಾಹಕ ಕೆ. ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರ ಛಾಯಾಚಿತ್ರ ಪದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು. ಪಕ್ಷಿಗಳು ಪ್ರಕೃತಿಗೆ ಚೈತನ್ಯವನ್ನೂ ಲವಲವಿಕೆಯನ್ನೂ ತಂದುಕೊಡುತ್ತವೆ. ನಮ್ಮ ಮನಸ್ಸಿಗೂ ಮುದನೀಡುತ್ತವೆ. ಈ ಪ್ರದರ್ಶನದಲ್ಲಿರುವ ಛಾಯಾಚಿತ್ರಗಳು ಅಂತಹ ಪಕ್ಷಿಗಳನ್ನು ವಿಶಿಷ್ಟ ರೀತಿಯಲ್ಲಿ ನಮಗೆ ಪರಿಚಯಿಸುತ್ತವೆ. ಪಕ್ಷಿಪ್ರಪಂಚದ ದಾಖಲೀಕರಣ ಎಳೆಯ ತಲೆಮಾರಿಗೆ ಸಹಕಾರಿಯಾಗಲಿದೆ ಎಂದರು. ಹಕ್ಕಿಗಳ ಜತೆಗೆ ತಮಗಿರುವ ಅನನ್ಯ ನಂಟು ತಮ್ಮ ಅನೇಕ ಕವನಗಳಲ್ಲಿ ಚಿತ್ರಿತವಾಗಿದೆ. ಪಕ್ಷಿ, ಪರಿಸರ ಪ್ರೇಮ ಬೆಳೆಸುವ ಕೆಲಸಗಳು ಹೆಚ್ಚು ನಡೆಯಲಿ ಎಂದು ಆಶಿಸಿದರು.

 

ಶಿವಸುಬ್ರಹ್ಮಣ್ಯ ಮಾತನಾಡಿ, ಹುಟ್ಟೂರಲ್ಲಿ  ತಮ್ಮ ಛಾಯಾಚಿತ್ರ ಪ್ರದರ್ಶನ ಏರ್ಪಟ್ಟಿರುವುದು ಅಭಿಮಾನದ ಸಂಗತಿ. ಒತ್ತಡ ನಿವಾರಣೆಗೆ ಸಹಕಾರಿಯಾಗಿರುವ ಛಾಯಾಗ್ರಹಣ, ನಮ್ಮಲ್ಲಿ ತಾಳ್ಮೆ, ಧೈರ್ಯ, ಚಾಣಾಕ್ಷ್ಯತನ ಬೆಳೆಸುತ್ತದೆ. ಯುವ ಉತ್ಸಾಹಿಗಳು ಈ ದೃಷ್ಟಿಯಿಂದ ಇದನ್ನೊಂದು ಹವ್ಯಾಸವಾಗಿ ಪರಿಗಣಿಸಬಹುದು. ಕೇವಲ ವಾಣಿಜ್ಯ ಉದ್ದೇಶದಿಂದ ನೋಡಿದರೆ ಇದು ನಷ್ಟದ ಬಾಬತ್ತೇ ಸರಿ ಎಂದರು.

 

ಹಿಮಾಲಯದಿಂದ ವಲಸೆಬರುವ ಇಂಡಿಯನ್ ಪಿಟ್ಟಾ ಹಕ್ಕಿಯ ಛಾಯಾಗ್ರಹಣಕ್ಕೆ ತಿಂಗಳುಗಟ್ಟಲೆ ತಾವು  ಸತತ ಪರಿಶ್ರಮಪಟ್ಟು ಕೊನೆಗೆ ಆ ಹಕ್ಕಿ ತಮ್ಮ ಹೆಗಲೇರಿ ಕುಳಿತುಕೊಳ್ಳುವಷ್ಟು ವಿಶ್ವಾಸ ಹೊಂದಿದಾಗ ಭಾವುಕರಾದ ಘಟನೆಯನ್ನು ವಿವರಿಸಿದರು. ಭಾರತದ ಎಲ್ಲ ಪಕ್ಷಿಗಳು ರೈತಮಿತ್ರವೆನಿಸಿವೆ. ಸಸ್ಯವೈವಿಧ್ಯ ಉಳಿಸಿ, ಬೆಳೆಸುವಲ್ಲಿ ಅವುಗಳ ಕೊಡುಗೆ ಅಪಾರ. ಅವುಗಳ ಉಳಿವು, ಪೋಷಣೆಗೆ ನಾವು ಎಲ್ಲ ರೀತಿಯಲ್ಲಿ ಪ್ರಯತ್ನಿಸಬೇಕಿದೆ ಎಂದರು.


ಪ್ರೊ. ವಿ.ಬಿ. ಅರ್ತಿಕಜೆ, ಡಾ. ನರೇಂದ್ರ ರೈ ದೇರ್ಲ, ಡಾ. ಶ್ರೀಶ ಕುಮಾರ್, ಐ.ಕೆ. ಬೊಳುವಾರು, ಡಾ. ದೀಪಾ ಫಡ್ಕೆ, ಗೌತಮಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು. ಶೋಭಾ ಮಾಧವ ಪುತ್ತೂರು ಸ್ವಾಗತಿಸಿ, ವಿನಿತ ಶೆಟ್ಟಿ ವಂದಿಸಿದರು. ಮಾಧವ, ಕಿರಣ್ ಮಯ್ಯ, ವಿನಾಯಕ ನಾಯಕ್, ರಾಜೇಶ್ ಶರ್ಮ, ಅನ್ನಪೂರ್ಣ ರಾವ್, ಶೋಭಾ, ಅಂಜಲಿ, ಪೃಥ್ವಿ, ವಿದ್ಯಾ, ಅಜಿತ್ ರೈ ಮತ್ತಿತರರು ಸಹಕರಿಸಿದ್ದರು. ವಿವಿಧ ಹಕ್ಕಿಗಳ 30ಕ್ಕೂ ಹೆಚ್ಚು ಆಕರ್ಷಕ ಛಾಯಾಚಿತ್ರಗಳನ್ನು ಒಳಗೊಂಡ ಪ್ರದರ್ಶನ ಈ ತಿಂಗಳ 21ರ ವರೆಗೆ ಪ್ರತಿ ದಿನ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top