|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟದ ಸಮಾರೋಪ, ಯಕ್ಷಗಾನ ಕಲಾವಿದರಿಗೆ ಸನ್ಮಾನ

ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟದ ಸಮಾರೋಪ, ಯಕ್ಷಗಾನ ಕಲಾವಿದರಿಗೆ ಸನ್ಮಾನ


ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಡಿ. ವೀರೇಂದ್ರ ಹೆಗ್ಗಡೆಯವರು, ಮಾಣಿಲದ ಮೋಹನದಾಸ ಸ್ವಾಮೀಜಿ, ಡಿ. ಹರ್ಷೇಂದ್ರ ಕುಮಾರ್, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.


ಶಿಬಿರಾರ್ಥಿಗಳಿಂದ ನೃತ್ಯ ಭಜನೆ ಪ್ರದರ್ಶನ; ಭಜನೆಯಿಂದ ಭಗವಂತನ ಸಾಕ್ಷಾತ್ಕಾರ


ಉಜಿರೆ: ಕಲಿಯುಗದಲ್ಲಿ ಪಾಮರರಿಂದ ಪಂಡಿತರವರೆಗೂ ಎಲ್ಲರೂ ಭಜನೆಯ ಮೂಲಕ ಭಗವಂತನನ್ನು ಒಲಿಸಿಕೊಳ್ಳಬಹುದು. ಭಜನೆಯ ಮೂಲಕ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಎಂದು ಕಾಸರಗೋಡು ಎಡನೀರು ಮಠದ ಪೂಜ್ಯ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.


ಅವರು ಗುರುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 23ನೆ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.


ಬೇರೆ ಬೇರೆ ಕಡೆಗಳಿಂದ ಬರುವ ನದಿಗಳು ಸಮುದ್ರವನ್ನು ಸೇರುವಂತೆ ಭಕ್ತರು ಪರಿಶುದ್ಧ ಭಕ್ತಿಯಿಂದ ಯಾವ ರೀತಿ ಭಜಿಸಿದರೂ ಭಗವಂತನನ್ನು ಒಲಿಸಿಕೊಳ್ಳಬಹುದು.


ಗ್ರಾಮಾಭಿವೃದ್ಧಿ ಯೋಜನೆ, ಸ್ವಚ್ಛತೆ, ಮದ್ಯವರ್ಜನ ಶಿಬಿರ, ತಾಳೆಗರಿ, ಶಾಸನಗಳು ಹಾಗೂ ಅಪೂರ್ವ ಗ್ರಂಥಗಳ ಸಂರಕ್ಷಣೆ ಮೊದಲಾದ ಅನೇಕ ಸೇವಾ ಕಾರ್ಯಗಳ ಮೂಲಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆರೋಗ್ಯಪೂರ್ಣ ಸಮಾಜ ರೂಪಿಸಿ ಧರ್ಮಸ್ಥಳವನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಭಜನೆಯ ಸಂಸ್ಕಾರ ಹಾಗೂ ಸತ್ಸಂಗದಿಂದ ದುಶ್ಚಟ ಮುಕ್ತ ಮತ್ತು ಆರೋಗ್ಯಪೂರ್ಣ ಸಮಾಜ ರೂಪುಗೊಳ್ಳುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. 


ಕೊರೊನಾ ಮಹಾಮಾರಿ ಆದಷ್ಟು ಶೀಘ್ರ ಸಂಪೂರ್ಣ ನಿರ್ಮೂಲನೆಯಾಗಲಿ ಎಂದು ಅವರು ಹಾರೈಸಿದರು.  


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ನಿತ್ಯವೂ ಮನೆಯಲ್ಲಿ ಭಜನೆ ಮಾಡಬೇಕು. ಆದರ್ಶ ನಾಯಕತ್ವದೊಂದಿಗೆ ಸಮಾಜ ಸಂಘಟನೆ ಮತ್ತು ಬಲವರ್ಧನೆಗೆ ಶ್ರಮಿಸಬೇಕು. ತಮ್ಮ ಊರಿನಲ್ಲಿ ಭಜನೆಯ ಸಂದೇಶವನ್ನು ಸಾರಿ, ಸರ್ವತೋಮುಖ ಪ್ರಗತಿಯ ರೂವಾರಿಗಳಾಗಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.


ಧರ್ಮಸ್ಥಳ ಯಕ್ಷಗಾನ ಮೇಳದ ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್ ಪ್ರಾಯೋಜಕತ್ವದಲ್ಲಿ ರಾಜ್ಯದ ಮೂವತ್ತು ಮಂದಿ ಹಿರಿಯ ಕಲಾವಿದರಿಗೆ “ಪಾತಾಳ ಕಲಾ ಮಂಗಳ ಪ್ರಶಸ್ತಿ” ಪ್ರದಾನದೊಂದಿಗೆ ತಲಾ ಹತ್ತು ಸಾವಿರ ರೂ. ಗೌರವ ಧನ ನೀಡಿ ಗೌರವಿಸಿದ ಹೆಗ್ಗಡೆಯವರು ಯಕ್ಷಗಾನ ಕಲಾವಿದರು ದೀರ್ಘಾಯುಷಿಗಳಾಗಿ ಹೊಸ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.


ಧರ್ಮಸ್ಥಳ ಮೇಳಕ್ಕೆ ಇನ್ನೂರು ವರ್ಷಗಳ ಭವ್ಯ ಇತಿಹಾಸವಿದ್ದು, ಮೈಸೂರು ಮಹಾರಾಜರು ಮೇಳದ ಕಲಾವಿದರನ್ನು ತಮ್ಮ ಅರಮನೆಗೆ ಆಹ್ವಾನಿಸಿ ಯಕ್ಷಗಾನ ಪ್ರದರ್ಶನ ವೀಕ್ಷಿಸಿ ಮೆಚ್ಚಿರುವುದನ್ನು ಉಲ್ಲೇಖಿಸಿದರು.


ಧರ್ಮಸ್ಥಳ ಮೇಳದಲ್ಲಿ ವಿಟ್ಲ ಗೋಪಾಲಕೃಷ್ಣ ಜೋಶಿ, ಶೇಣಿ ಗೋಪಾಲಕೃಷ್ಣ ಭಟ್, ಕುಂಬ್ಳೆ ಸುಂದರರಾವ್, ಕೆ. ಗೋವಿಂದ ಭಟ್, ಪುತ್ತೂರು ನಾರಾಯಣ ಹೆಗ್ಡೆ, ಶ್ರೀಧರ ಭಂಡಾರಿ, ಉಬರಡ್ಕ ಉಮೇಶ್ ಶೆಟ್ಟಿ ಮೊದಲಾದವರ ಕಲಾ ಸೇವೆ, ಸಾಧನೆಯನ್ನು ಸ್ಮರಿಸಿದರು.


ಸನ್ಮಾನಿತರ ಪರವಾಗಿ ಬಳ್ಕೂರು ಕೃಷ್ಣಯಾಜಿ ಕೃತಜ್ಞತೆ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮತ್ತು ಹರಿಕೃಷ್ಣ ಪುನರೂರು ಶುಭಾಶಂಸನೆ ಮಾಡಿದರು.


ಮಾಣಿಲದ ಮೋಹನದಾಸ ಸ್ವಾಮೀಜಿ, ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಬಿ. ಜಯರಾಮ ನೆಲ್ಲಿತ್ತಾಯ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.


ಒಂದು ವಾರ ನಡೆದ ಭಜನಾ ತರಬೇತಿ ಕಮ್ಮಟದಲ್ಲಿ 128 ಭಜನಾ ಮಂಡಳಿಗಳಿಂದ 138 ಪುರುಷರು ಹಾಗೂ 75 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 213 ಮಂದಿ ಭಾಗವಹಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post