|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಂಗ ನಿಷ್ಠ, ಯಕ್ಷ ಕಿರೀಟಿ ಸುಬ್ರಾಯ ಹೊಳ್ಳ ಕಾಸರಗೋಡು

ರಂಗ ನಿಷ್ಠ, ಯಕ್ಷ ಕಿರೀಟಿ ಸುಬ್ರಾಯ ಹೊಳ್ಳ ಕಾಸರಗೋಡು


ಸುಬ್ರಾಯ ಹೊಳ್ಳ ಕಾಸರಗೋಡು ಅವರು ಸತತ ಸಾಧನೆ, ಅರ್ಹತೆಯನ್ನು ಹೊಂದಿ ಹಂತ ಹಂತವಾಗಿ ಬೆಳದು ಬಂದವರು. ನೀರಾಳ ನಾರಾಯಣ ಹೊಳ್ಳ ಹಾಗೂ ಪದ್ಮಾವತಿ ಹೊಳ್ಳರ ಮಗನಾಗಿ 17.12.1965 ರಂದು ಕಾಸರಗೋಡಿನಲ್ಲಿ ಜನಿಸಿದರು. ಸಿರಿಬಾಗಿಲು ಸಮೀಪ ನೀರಾಳ ಇವರ ಮೂಲ ಮನೆ. ನಾರಾಯಣ ಹೊಳ್ಳರ 10 ಮಂದಿ ಮಕ್ಕಳಲ್ಲಿ ಇವರು ಮೂರನೆಯವರು. ಸುಬ್ರಾಯ ಹೊಳ್ಳರ ತಂದೆ ಕಾಸರಗೋಡು ಪೇಟೆಯ ವೆಂಕಟರಮಣ ದೇವಸ್ಥಾನದ ಬಳಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು. ತಂದೆಯವರು ಪ್ರಾರಂಭಿಸಿದ ಹೋಟೆಲ್ ಉದ್ಯಮವನ್ನು ಹೊಳ್ಳರ ಸಹೋದರರು ಈಗಲೂ ನಡೆಸುತ್ತಿದ್ದಾರೆ. ಸುಬ್ರಾಯ ಹೊಳ್ಳರು ಕಾಸರಗೋಡು ಸರ್ಕಾರಿ ಶಾಲೆಯಲ್ಲಿ 4ನೇ ತರಗತಿವರೆಗೆ BEM ಹೈಸ್ಕೂಲ್ ನಲ್ಲಿ 9ನೇ ತರಗತಿವರೆಗೆ ಓದಿ ಅನಿವಾರ್ಯವಾಗಿ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಬೇಕಾಯಿತು. ಹೋಟೆಲ್ ಉದ್ಯಮ ನಡೆಸುತ್ತಿದ್ದ ತಂದೆಯವರಿಗೆ ಸಹಾಯಕನಾಗಿ ದುಡಿಯತೊಡಗಿದರು. ಶಾಲಾ ವಿದ್ಯಾರ್ಥಿ ಆಗಿದ್ದಾಗ ಎಡನೀರು ಮಠದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು. ಹಾಗಾಗಿ ಯಕ್ಷಗಾನ ಕ್ಷೇತ್ರಕ್ಕೆ ಆಕರ್ಷಿತರಾದರು.ಮಠದಲ್ಲಿ ನಡೆಯುವ ಪ್ರದರ್ಶನಗಳನ್ನು ನೋಡಿ ಸುಬ್ರಾಯ ಹೊಳ್ಳರಿಗೂ ಕಲಾವಿದನಾಗಬೇಕೆಂಬ ಆಸೆ ಚಿಗುರೊಡೆಯಿತು. ನಾಟ್ಯ ಕಲಿಯಲು ನಿರ್ಧರಿಸಿದರು.


ಕಾಸರಗೋಡು ನುಳ್ಳಿಪ್ಪಾಡಿಯ ಶ್ರೀ ಧರ್ಮಶಾಸ್ತಾ ಭಜನಾ ಸಂಘದಲ್ಲಿ ನಡೆಯುತ್ತಿದ್ದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹೊಳ್ಳರು ಕೂಡ್ಲು ಆನಂದನವರಿಂದ ನಾಟ್ಯಾಭ್ಯಾಸ ಆರಂಭಿಸಿದರು. ತರಗತಿ ಅನಿವಾರ್ಯ ಕಾರಣಗಳಿಂದ ನಿಂತು ಹೋಯಿತು. ಆದರೂ ಅನಂದರು ಮನೆಗೆ ಬಂದು ಕಲಿಸುತ್ತಿದ್ದರು. ಕೂಡ್ಲು ನಾರಾಯಣ ಬಲ್ಯಾಯಾರಿಂದಲೂ ಕಲಿತರು. ನಂತರ ಹವ್ಯಾಸೀ ಕಲಾವಿದರಾಗಿ ಹೊಳ್ಳರು ಧನ್ವಂತರೀ ಯಕ್ಷಗಾನ ಕಲಾ ಸಂಘ,ಮುಳಿಯಾರು ಸುಬ್ರಹ್ಮಣ್ಯ ಕಲಾ ಸಂಘ ಅಲ್ಲದೆ ಉಪ್ಪಳ ಭಗವತಿ ಮೇಳದ ಪ್ರದರ್ಶನದಲ್ಲಿ ಭಾಗವಹಿದರು. ಮೊದಲು ವೇಷ ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ. ಮುಳಿಯಾರು ಸಂಘದ ಮಲ್ಲ ಕ್ಷೇತ್ರದ ಜಾತ್ರಾ ಮಹೋತ್ಸವದ ಪ್ರದರ್ಶನದಲ್ಲಿ. ಭಾಗವತ ಪುತ್ತಿಗೆ ಚಂದ್ರಶೇಖರ ಹೊಳ್ಳರಿಂದ (ಪುತ್ತಿಗೆ ರಘುರಾಮ ಹೊಳ್ಳರ ಅಣ್ಣ) ಗೆಜ್ಜೆ ಪಡೆದು ಸುಬ್ರಾಯ ಹೊಳ್ಳರು ರಂಗಪ್ರವೇಶ ಮಾಡಿದರು. ಕಟೀಲು ಮೇಳದಲ್ಲಿ ತಿರುಗಾಟ ಮಾಡಬೇಕೆಂಬ ಆಸೆಯಾಗಿ ಕಾರ್ಯಪ್ರವೃತ್ತರಾದರು. ಆ ಸಮಯದಲ್ಲಿ ಕಟೀಲು ಮೇಳಕ್ಕಿಂತ ಮೊದಲೇ ಕರ್ನಾಟಕ ಮೇಳವು ತಿರುಗಾಟಕ್ಕೆ ಹೊರಡುತ್ತಿತ್ತು.


1984ರಲ್ಲಿ ಇರಾ ದೇವಸ್ಥಾನದಲ್ಲಿ ಕರ್ನಾಟಕ ಮೇಳದ ಸೇವೆಯಾಟ. ಸುಬ್ರಾಯ ಹೊಳ್ಳರ ವೇಷವನ್ನು ನೋಡಿ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ರು ಮತ್ತು ಭಾಗವತರಾದ ದಾಮೋದರ ಮಂಡೆಚ್ಚರು ವೇಷ ಆದೀತು ಎಂದು ತೀರ್ಮಾನಿಸಿದರು. ಕಟೀಲು ಸೇವೆಗೆ ಬರಲು ಸೂಚನೆಯೂ ಸಿಕ್ಕಿತು. ಆಗ ಕಟೀಲು 3 ಮೇಳಗಳು. 1ನೇ ಮೇಳದಲ್ಲಿ ಇರಾ ಗೋಪಾಲಕೃಷ್ಣ ಭಾಗವತರೂ, 2ನೇ ಮೇಳದಲ್ಲಿ ಬಲಿಪರೂ, 3ನೇ ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳೂ ಭಾಗವತರಾಗಿದ್ದರು. ಸೇವೆಯ ದಿನ ವೇಷ ಮಾಡಿದ ಹೊಳ್ಳರು 2ನೇ ಮೇಳಕ್ಕೆ ಆಯ್ಕೆಯಾಗಿದ್ದರು. ಕಟೀಲು ಮೇಳದಲ್ಲಿ 1 ವರ್ಷ, ಪುತ್ತೂರು ಮೇಳದಲ್ಲಿ 1 ವರ್ಷ, ಕದ್ರಿ ಮೇಳದಲ್ಲಿ 2 ವರ್ಷ, ಕರ್ನಾಟಕ ಮೇಳದಲ್ಲಿ 1 ವರ್ಷ, ಮಧೂರು ಮೇಳದಲ್ಲಿ 2 ವರ್ಷ, ಬಪ್ಪನಾಡು ಮೇಳದಲ್ಲಿ 3 ವರ್ಷ ತಿರುಗಾಟ ನಡೆಸಿ ಕಲ್ಲಾಡಿ ವಿಠಲ ಶೆಟ್ರ ಅಪೇಕ್ಷೆಯಂತೆ ಕಟೀಲು ಮೇಳಕ್ಕೆ ಪೀಠಿಕೆ ವೇಷಧಾರಿಯಾಗಿ ಸೇರ್ಪಡೆಗೊಂಡರು.




12 ವರ್ಷಗಳ ತಿರುಗಾಟ ನಡೆಸಿ ಹೊಸನಗರ ಮೇಳ ಆರಂಭವಾದ ವರ್ಷ ಸದ್ರಿ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ಮತ್ತೆ ಕಟೀಲು 4ನೇ ಮೇಳದಲ್ಲಿ 6 ವರ್ಷ, ಹೊಸನಗರ, ಎಡನೀರು ಮೇಳಗಳಲ್ಲಿ 4 ವರ್ಷ ತಿರುಗಾಟ ನಡೆಸಿ ಕಳೆದ ವರ್ಷದಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕಟೀಲು 2ನೇ ಮೇಳದಲ್ಲಿ ಬಲಿಪ ಭಾಗವತರಿಂದ, ಮದ್ಲೆಗಾರ ಪೆರುವಾಯಿ ನಾರಾಯಣ ಭಟ್ಟರಿಂದ ನಿರ್ದೇಶನ ಸಿಕ್ಕಿತ್ತು. ನಂತರ ಹೊಸಹಿತ್ಲು ಮಹಾಲಿಂಗ ಭಟ್, ಕೋಳ್ಯೂರು ರಾಮಚಂದ್ರ ರಾವ್, ತೆಂಕಬೈಲು ಶಾಸ್ತ್ರಿಗಳು, ಬೊಟ್ಟಿಕೆರೆ ಪುರುಷೋತ್ತಮ ಪೂಂಜರು, ಸುಣ್ಣಂಬಳ ವಿಶ್ವೇಶ್ವರ ಭಟ್ ಮೊದಲಾದ ಕಲಾವಿದರ ಸಹಕಾರ, ಪ್ರೇರಣೆಯೂ ಸಿಕ್ಕಿತು. ಕಟೀಲು ಮೇಳದ ತಿರುಗಾಟ ಒಂದು ವಿಶೇಷ ಅನುಭವ. ಎಲ್ಲರ ಸಹಕಾರ ಮತ್ತು ಅವಕಾಶಗಳೂ ಸಿಕ್ಕಿದ ಕಾರಣ ನಾನು ಕಲಾವಿದನಾಗಿ ಗುರುತಿಸಿಕೊಂಡೆ ಎಂದು ಸುಬ್ರಾಯ ಹೊಳ್ಳರು ಹೇಳುತ್ತಾರೆ.


1991ರಲ್ಲಿ ಶ್ರೀ ಸುಬ್ರಾಯ ಹೊಳ್ಳರು ಸಹೋದರರಾದ ಪರಮೇಶ್ವರ ಹೊಳ್ಳ, ವೆಂಕಟರಮಣ ಹೊಳ್ಳ, ಗೋಪಾಲಕೃಷ್ಣ ಹೊಳ್ಳ (ಪುಟ್ಟಣ್ಣ), ರಾಮಕೃಷ್ಣ ಹೊಳ್ಳ, ಬಾಲಕೃಷ್ಣ ಹೊಳ್ಳ, ರಾಧಾಕೃಷ್ಣ ಹೊಳ್ಳ ಇವರ ಸಹಕಾರದಿಂದ ಶ್ರೀ ವೆಂಕಟರಮಣ ಸ್ವಾಮೀ ಕೃಪಾಶ್ರಿತ ಯಕ್ಷಗಾನ ಕಲಾಸಂಘ ಕಾಸರಗೋಡು ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಪ್ರದರ್ಶನಕ್ಕೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸಿಕೊಂಡರು. ಯಕ್ಷಗಾನದ ಡ್ರೆಸ್, ಕಿರೀಟ, ಆಭರಣಗಳನ್ನು ತಯಾರಿಸುವ, ಮೇಕಪ್ ಮಾಡುವ ಕಲೆ ಇವರೆಲ್ಲರಿಗೂ ಕರಗತವಾಗಿತ್ತು. ಹೊಳ್ಳ ಸಹೋದರರು ಸದ್ರಿ ಸಂಸ್ಥೆಯನ್ನು ಈಗಲೂ ನಡೆಸುತ್ತಿದ್ದಾರೆ.


ಶ್ರೀ ಸುಬ್ರಾಯ ಹೊಳ್ಳರು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ 3 ವರ್ಷಗಳ ಕಾಲ ನಾಟ್ಯ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಿ ಅವರು ಗುಜರಾತ್‍ನ ಸೂರತ್, ಬರೋಡ, ಅಹಮ್ಮದಾಬಾದ್ ನಗರಗಳಲ್ಲಿ ಪ್ರದರ್ಶನಗಳನ್ನು ನೀಡಲು ಕಾರಣರಾಗಿದ್ದರು. ನೆಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ತಿರುಗಾಟದಲ್ಲಿ 15 ವರ್ಷ ಭಾಗವಹಿಸಿರುತ್ತಾರೆ. ದಕ್ಷ, ಅರ್ಜುನ, ಹಿರಣ್ಯಾಕ್ಷ, ಇಂದ್ರಜಿತು, ಶಿಶುಪಾಲ, ದೇವೇಂದ್ರ, ರಕ್ತಬೀಜ, ಋತುಪರ್ಣ, ಕಂಸ, ಹಿರಣ್ಯಕಶ್ಯಪು, ಸೀತಾ ಕಲ್ಯಾಣ ಪ್ರಸಂಗದ ರಾವಣ ಮೊದಲಾದ ವೇಷಗಳಲ್ಲಿ ರಂಜಿಸಿದರು. ಕಿರಾತಾರ್ಜುನ ಪ್ರಸಂಗದ ಅರ್ಜುನ, ಪಾಂಡವಾಶ್ವಮೇಧ ಪ್ರಸಂಗದ ತಾಮ್ರಧ್ವಜ ಮೊದಲಾದ ಪಾತ್ರಗಳನ್ನು ನಿರ್ವಹಿಸುವುದು ಸುಲಭವಲ್ಲ. ರಂಗನಡೆಗಳನ್ನು ಬಲ್ಲ ಹೊಳ್ಳರು ಸುಲಭವಾಗಿ ಅಂತಹ ಪಾತ್ರಗಳನ್ನು ಮಾಡುತ್ತಾರೆ. ಇವರು ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲರು.


ಕಳೆದ ಮಳೆಗಾಲದಲ್ಲಿ  ಸುರತ್ಕಲ್ಲಿನಲ್ಲಿ ದೇವೀ ಮಹಾತ್ಮ್ಯೆ ಪ್ರಸಂಗದ ಶುಂಭಾಸುರನಾಗಿ ಕೇಶಾವರೀ ಕಿರೀಟದಲ್ಲಿ ಕಾಣಿಸಿಕೊಂಡಿದ್ದರು. ಆಗಸ್ಟ್ 18, 2018ರಂದು ಮುಂಬೈಯಲ್ಲಿ ಮಹಿಷಾಸುರನಾಗಿಯೂ ಅಭಿನಯಿಸಿದ್ದರು. ಇವರು ಭಾಗವತಿಕೆಯನ್ನೂ ಮಾಡಬಲ್ಲರು. ಶ್ರೀ ರಾಮಕೃಷ್ಣ ಮಯ್ಯರೂ, ಸುಬ್ರಾಯ ಹೊಳ್ಳರೂ ಜತೆಯಾಗಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ಭಾಗವತಿಕೆ ಅಭ್ಯಾಸ ಮಾಡಿದ್ದರು. ಯಕ್ಷಗಾನ ಕಲಾವಿದನಾದುದರಿಂದ ಅನೇಕ ಜನರ ಪರಿಚಯವಾಯಿತು. ಅಭಿಮಾನಿಗಳು ಪ್ರೀತಿಸಿದರು, ಪ್ರೋತ್ಸಾಹಿಸಿದರು. ಯಕ್ಷಗಾನವು ಅನೇಕ ಭಾಷೆಗಳಲ್ಲಿ ಪ್ರದರ್ಶನಗೊಳ್ಳುವುದು ಸಂತಸದ ವಿಷಯವೇ ಹೌದು. ವ್ಯಾಪ್ತಿ ವಿಸ್ತರಣೆ ಆದಷ್ಟು ಒಳ್ಳೆಯದು. ಆದರೂ ಕನ್ನಡ ಭಾಷೆಯೇ ಸೂಕ್ತ ಎನ್ನುವ ಶ್ರೀ ಹೊಳ್ಳರು ಮೊದಲೆಲ್ಲಾ ಮೇಳದ ತಿರುಗಾಟದಲ್ಲಿ ಬಿಡಾರ ಮತ್ತು ಚೌಕಿಯಲ್ಲಿ ಕಲಾವಿದರು ಸತತ ಅಭ್ಯಾಸ ಮಾಡುತ್ತಿದ್ದರು. ಹಿರಿಯ ಕಲಾವಿದರಿಂದ ಕೇಳಿ ತಿಳಿಯುತ್ತಿದ್ದರು. ಒಂದೇ ಮನೆಯವರಂತೆ ಇರುತ್ತಿದ್ದರು. ಆದರೆ ಈಗ ಸಾಂಘಿಕ ಪ್ರಯತ್ನ ಇಲ್ಲದೆ ಕಲಾವಿದರು ಸಿದ್ಧವಾಗುತ್ತಿಲ್ಲ ಎಂಬ ನೋವನ್ನೂ ವ್ಯಕ್ತಪಡಿಸುತ್ತಾರೆ.


1997ರಲ್ಲಿ ಶಾರದಾ ಅವರನ್ನು ವಿವಾಹವಾದ ಸುಬ್ರಾಯ ಹೊಳ್ಳರು, ಇಬ್ಬರು ಮಕ್ಕಳು ಪುತ್ರ ಹರಿನಾರಾಯಣ, ಪುತ್ರಿ ಪದ್ಮಶ್ರೀ ಅವರೊಂದಿಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಏಲಬೆ ಎಂಬಲ್ಲಿ ‘ತೇಜೋಧಾಮ’ ಮನೆಯಲ್ಲಿ ವಾಸಿಸುತ್ತಿದ್ದಾರೆ. ಶ್ರೀ ಹೊಳ್ಳರು ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ರಾಜ್ಯದ ನಗರಗಳಲ್ಲಿ ಅಲ್ಲದೆ ವಿದೇಶಗಳಲ್ಲಿ (ಸಿಂಗಾಪುರ್, ಬಹ್ರೈನ್) ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ. 


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Pics: Suresh Suri, Shree Ranga Rao, Krishna Kumar, Ashwith Shetty, Ganesh Acharya Gumpalaje, Manjunath Bairy, Sharavoor Shikhin Sharma, Murli Navada Madhur.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم