|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಕ ಗಣಿತ: ಅಂಕೆಯೊಳಗಿದ್ದರೆ ಆರೋಗ್ಯ...

ಅಂಕ ಗಣಿತ: ಅಂಕೆಯೊಳಗಿದ್ದರೆ ಆರೋಗ್ಯ...




ಮಾನವನ ದೇಹವು ಒಂದು ಹಂತದವರೇಗೆ ಶರೀರದಲ್ಲಾಗುವ ಏರು ಪೇರುಗಳನ್ನು ಸಹಿಸಿಕೊಳ್ಳುತ್ತದೆ. ಯಾವಾಗ ಆ ಹಂತ ದಾಟಿತೋ ಆವಾಗ ಅಂಥ ಸ್ಥಿತಿಗೆ ಕಾಯಿಲೆ ಎನ್ನುತ್ತಾರೆ. ರಕ್ತದೊತ್ತಡವಿರಬಹುದು, ರಕ್ತದಲ್ಲಿನ ಸಕ್ಕರೆ ಅಂಶವಿರಬಹುದು, ಹೃದಯ ಬಡಿತವಿರಬಹುದು ಯಾವುದೂ ನಮ್ಮ ಅಂಕೆಯಲ್ಲಿರುವಾಗ ನಾವು ಆರೋಗ್ಯವಂತರು. ಅಂಕೆ ತಪ್ಪಿದರೆ ವೈದ್ಯಾಧೀನರು. ಸಾಮಾನ್ಯವಾಗಿ ಎಲ್ಲರೂ ಬಯಸುವುದು ಆರೋಗ್ಯವನ್ನೆ. ಆದರೂ ನಾವು ಆರೋಗ್ಯವಾಗಿದ್ದೇವೋ ಇಲ್ಲವೋ ಎಂದು ತಿಳಿದುಕೊಳ್ಳಬೇಕಾದರೂ ವೈದ್ಯರ ಭೇಟಿ ಅಗತ್ಯ. ನಮ್ಮಲ್ಲಿ ಯಾವುದೇ ರೋಗ ಲಕ್ಷಣಗಳು ಇರದಿದ್ದರೂ ಕೆಲವೊಮ್ಮೆ ಒಳಗಿಂದೊಳಗೆ ರೋಗ ಬಲಿತು ಉಲ್ಬಣವಾಗುವುದೂ ಇದೆ. ಆದ್ದರಿಂದ ಕೆಲವೊಂದು ಸಣ್ಣ ಪುಟ್ಟ ಪರೀಕ್ಷೆಗಳನ್ನು ನಾವೇ ಮನೆಯಲ್ಲಿ ಮಾಡಿಕೊಳ್ಳುವಂಥ ಸಾಧನಗಳು ಇವತ್ತು ದೊರಕುವುದರಿಂದ ಸಾಧಾರಣವಾಗಿ ಹೆಚ್ಚಿನ ಮನೆಗಳಲ್ಲಿ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ನೋಡುವ ವ್ಯವಸ್ಥೆ ಇರುತ್ತದೆ. 


ಅದೇರೀತಿ ನಮ್ಮಲ್ಲಿ ಕೂಡ ನನ್ನ ಮಡದಿ ಮಹಾಲಕ್ಷ್ಮಿಯ ಅನಾರೋಗ್ಯದ ವೇಳೆಯಲ್ಲಿ ಸಕ್ಕರೆ ಅಂಶ ನೋಡುವಂಥ ಗ್ಲೂಕೋ ಮೀಟರ್ ಒಂದನ್ನು ತರಿಸಿಕೊಂಡಿದ್ದೆ. ಅವಳಿಗೆ ಅದು ಬಹಳ ಉಪಯೋಗವಾಗಿತ್ತು. ಅವಳ ಅವಧಿಯ ನಂತರ ಈ ಸಾಧನವು ನೇಪಥ್ಯಕ್ಕೆ ಸೇರಿತ್ತು. ಆದರೂ ಬಳಕೆ ಮಾಡದಿದ್ದರೆ ಹಾಳಾಗಬಹುದೆಂದು ನಾನು, ನನ್ನ ಮಗಳು ಶಾರ್ವರಿ, ನನ್ನ ಮಾವನವರು ಆಗಾಗ್ಗೆ ನಮ್ಮ ಸಕ್ಕರೆ ಅಂಶವನ್ನು ನೋಡಿಕೊಳ್ಳುತ್ತಿದ್ದೆವು. ಒಂದು ಭದ್ರತೆಯ ಭಾವವೂ ಇತ್ತು. ಹಾಗೇ ಎಲ್ಲವೂ ಸರಿಯಾಗಿದ್ದುದರಿಂದ ಒಂದೈದಾರು ತಿಂಗಳವರೆಗೆ ನಾವು ಅದರ ಗೊಡವೆಗೇ ಹೋಗಿಲ್ಲ.


ಒಂದು ದಿನ ನಮ್ಮ ಮನೆಗೆ ನೆಂಟರೊಬ್ಬರು ಬಂದಿದ್ದರು. ಅದೇನೋ ಅವರಿಗೆ ತಮ್ಮ ಸಕ್ಕರೆ ಅಂಶದಲ್ಲಿ ಸಂಶಯ ಬಂದಾಗ ನಮ್ಮಲ್ಲಿ ಗ್ಲೂಕೋ ಮೀಟರಿರುವ ಕಾರಣ ನೋಡಬೇಕೆನ್ನಿಸಿತು. ಅವರಿಗೆ ಪ್ರತಿಯೊಂದು ಪರೀಕ್ಷೆಯಲ್ಲೂ ಮುನ್ನೂರು ಮೇಲೆಯೇ ಇರುತ್ತಿತ್ತು. ನಮ್ಮಲ್ಲಿ ಪರೀಕ್ಷೆ ಮಾಡಿದಾಗ ಬಂದಂಥ ನೂರ ಐವತ್ತು ಅಂಕೆ ನೋಡಿ ಬಹಳ ಖುಷಿಯಲ್ಲೇ ಇದ್ದರು. ಸರಿ.. ಅದಾಗಿ ನಾಲ್ಕೈದು ದಿನಗಳಲ್ಲಿ ನಾವು ಮೂವರೂ ಪರೀಕ್ಷೆ ಮಾಡಿಕೊಳ್ಳುವುದೆಂದು ನಿರ್ಧರಿಸಿದೆವು. ಹಾಗೆ ನೋಡಿದಾಗ ನನಗೆ ರಕ್ತದಲ್ಲಿ ಸಕ್ಕರೆ ಅಂಶ ಅರುವತ್ತಕ್ಕೆ ಬಂದಿತ್ತು. ಆದರೆ ನನಗೆ ಯಾವುದೇ ಕಾಯಿಲೆಯ ಲಕ್ಷಣಗಳಿರಲಿಲ್ಲ. ಆದರೂ ಯಾಕೋ ಬಹಳ ಖಿನ್ನತೆ ಅಂತೂ ಆಯಿತು. ಇರಲಿ ನನ್ನ ಮಗಳ ಪರೀಕ್ಷೆ ಮಾಡಿದಾಗಲೂ ಅವಳಿಗೂ ಸಕ್ಕರೆ ಅಂಶ ಕಡಿಮೆ ಅಂದರೆ ಎಪ್ಫತ್ತಕ್ಕೆ ಆಸುಪಾಸಿತ್ತು. ಹಾಗೆಂದು ಮಾವನವರಿಗೆ ಪರೀಕ್ಷೆ ಮಾಡಿದರೆ ಅವರಿಗೆ ಸರಿಯಾಗಿ ಅಂದರೆ ಎಂಭತ್ತು ತೋರಿಸಿತು. ಹಾಗಾದರೆ ತಂದೆ ಮಗಳು ನಮಗಿಬ್ಬರಿಗೂ ಸಮಸ್ಯೆ ಇದೆ ಎಂದು ಗೊತ್ತಾಯಿತು. ಆದರೂ ನನಗ್ಯಾಕೊ ಗೊಂದಲವಿತ್ತು. ಅದಕ್ಕೆ ಪೂರಕವಾಗಿ ನನ್ನ ಮಗಳು ಕೈಕಾಲು ಸೋತುಹೋದಂತಾಗುವುದು, ನಿದ್ದೆ ಬರುವಂತಾಗುವುದು, ಯಾವುದೇ ಕೆಲಸಕ್ಕೂ ಆಸಕ್ತಿ ಇಲ್ಲದಿರುವ ಲಕ್ಷಣಗಳು ಇರುವುದನ್ನು ಕಂಡಾಗ ಬಹುಷಃ ಏನೋ ಎಡವಟ್ಟಾಗಿದೆ ಎಂಬುದಂತು ಸತ್ಯ.  


ಆದರೂ ನನಗೆ ನಮ್ಮ ಗ್ಲೂಕೋ ಮೀಟರ್ ನ ಬ್ಯಾಟರಿ ಹಳತಾದ್ದರಿಂದ ಬೇರೆ ಹಾಕಿ ನೋಡೋಣವೆಂದು ಹೊಸತು ಬ್ಯಾಟರಿ ಹಾಕಿ ನೋಡಿದೆವು. ಆದರೆ ಆವಾಗಲೂ ಗ್ಲೂಕೋ ಮೀಟರ್ ಕೆಲಸ ಮಾಡುವಷ್ಟು ಸರಿಯಾಗಿತ್ತು. ಆದರೆ ನಮ್ಮ ಸಕ್ಕರೆ ಅಂಶ ಮಾತ್ರ ಎಪ್ಫತ್ತಕ್ಕಿಂತ ಮೇಲೆ ಹೋಗಲೇ ಇಲ್ಲ. ಅಲ್ಲಿಗೆ ನಮಗೆ ಕಾಯಿಲೆ ಇದೆ ಎನ್ನುವ ಭಾವ ಆವರಿಸತೊಡಗಿತು. ಇವತ್ತಿನವರೆಗೂ ಇಲ್ಲದ ಈ ಸಮಸ್ಯೆ ತಂದೆ ಮಗಳಿಗಿಬ್ಬರಿಗೂ ಏಕಕಾಲದಲ್ಲಿ ಬಂದದ್ಧಾದರು ಯಾಕೆ? ಅರ್ಥವಾಗಲಿಲ್ಲ ನಮಗೆ. ಹಾಗೆಂದು ಈಗಿನ ಕಾಲದಲ್ಲಿ ವಯೋಮಾನದ ಲೆಕ್ಕಾಚಾರವಿಲ್ಲದೆ ಯಾರಿಗೂ ಯಾವ ಕಾಯಿಲೆಯೂ ಬರಬಾರದೆಂದೇನಿಲ್ಲ. ಏನೋ ಕಾಕತಾಲೀಯವಾಗಿ ನಮಗಿಬ್ಬರಿಗೂ ಬಂದಿದೆ ಎಂದರೆ ಒಪ್ಪದೆ ಬೇರೆ ವಿಧಿಯಿಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಯ್ತು. ಯಾವಾಗ ಈ ಅಂಕೆ ನಮ್ಮ ಧೈರ್ಯವನ್ನು ಕಡಿಮೆಗೊಳಿಸಿತೋ ಆವಾಗ ನಮಗೆ ರಕ್ತದಲ್ಲಿ ಸಕ್ಕರೆ ಕಡಿಮೆಯಾದಾಗ ಯಾವೆಲ್ಲ ಲಕ್ಷಣಗಳು ಇರುತ್ತವೆಯೋ ಅದೆಲ್ಲವೂ ನಮಗೆ ಇದೆಯೆಂಬ ಸಣ್ಣ ಅರಿವಾಗತೊಡಗಿತು.   


ನಾನು ಮಗಳಿಗೆ ಧೈರ್ಯ ಹೇಳಿದೆ. ಬಂದದ್ದನ್ನು ಎದರಿಸೋಣ. ಆದರೆ ಕೊನೆಯ ಒಂದು ಪ್ರಯತ್ನವೆಂಬಂತೆ ನಾವು ಲ್ಯಾಬಿಗೆ ಹೋಗಿ ರಕ್ತ ಪರೀಕ್ಷೆ ಮಾಡಿಸೋಣ ಆವಾಗ ನಮಗೆ ಸರಿಯಾದ ಉತ್ತರ ಸಿಗುತ್ತದೆ. ಅಲ್ಲಿ ಬಂದ ಫಲಿತಾಂಶಕ್ಕೆ ಬದ್ಧರಾಗಿರುವುದೇ ನಮಗಿರುವ ಏಕೈಕ ದಾರಿ ಎಂದುಕೊಂಡು ನಾನು ಮತ್ತು ಮಗಳು ಹೆದರಿ ಹೆದರಿ ಲ್ಯಾಬಿಗೆ ಹೋಗಿ ರಕ್ತ ಪರೀಕ್ಷೆಗೆ ಕೊಟ್ಟು ಬಂದೆವು. ಹದಿನೈದು ನಿಮಿಷಗಳ ನಂತರ ಫಲಿತಾಂಶ ಸಿಗಬೇಕು. ನಾವು ಕಾಯುತ್ತ ಕುಳಿತೆವು. ಆದರೂ ನಾನು ಮಗಳಿಗೆ ಹೇಳಿದೆ. ನನಗಾದರೂ ಪರವಾಗಿಲ್ಲ ಮಗಳೆ ನಿನಗಾದರೋ ಮುಂದೆ ಬಹಳ ಬದುಕಿದೆ. ಇಷ್ಟು ಸಣ್ಣ ಪ್ರಾಯದಲ್ಲಿ ನಿನಗಿಂಥ ಸಮಸ್ಯೆ ಬರಬಾರದು.  ನೋಡೋಣ ದೈವೇಚ್ಛೆ ಹೇಗಿದೆಯೋ ಹಾಗಾಗುತ್ತದೆ. ಅಮ್ಮನಿಗೆ ಇಷ್ಟು ದೊಡ್ಡ ಕಾಯಿಲೆ ಬಂದು ಅನುಭವಿಸಿದಳು. ಅದರ ಎದುರು ಇದು ಏನೂ ಅಲ್ಲ. ಎಂದಾಗ ನನಗೂ ಮಗಳಿಗೂ ಧೈರ್ಯ ಬಂತು. ಇಷ್ಟೆಲ್ಲ ಆಗುವಾಗ ನಮ್ಮ ರಕ್ತಪರೀಕ್ಷೆಯ ಫಲಿತಾಂಶ ಬಂತು. ನಾವಿಬ್ಬರೂ ಅಂದುಕೊಂಡಂತೆ ಯಾವ ಕಾಯಿಲೆಯೂ ಇರಲಿಲ್ಲ ಆರೋಗ್ಯವಂತರಾದವರಿಗೆ ರಕ್ತದಲ್ಲಿ ಎಷ್ಟು ಸಕ್ಕರೆ ಇರಬೇಕೋ ಅಷ್ಟೇ ಇತ್ತು. ನರ್ಸ್ ಹೇಳಿದರು ನಿಮಗೆ ಸಕ್ಕರೆ ತೊಂದರೆ ಇಲ್ಲ. ತೊಂದರೆ ಇರುವುದು ನಿಮ್ಮ ಗ್ಲೂಕೋ ಮೀಟರ್ ನಲ್ಲಿ. ಅಬ್ಬಾ ನಮ್ಮ ತಲೆಯ ಮೇಲೆ ಅದೆಷ್ಟು ಭಾರವಿತ್ತೋ ಎಂಬ ಭಾವ ಆ ಒಂದು ಫಲಿತಾಂಶದಿಂದ ಧರಾಶಾಯಿಯಾಯಿತು. ಕೆಲವೊಮ್ಮೆ ಏನೇನು ವಿಚಿತ್ರಗಳಾಗುತ್ತವೆ ನೋಡಿ ಹಾಳಾದ ಗ್ಲೂಕೋ ಮೀಟರ್ ನ ಅಂಕೆಯಿಂದ ನಮ್ಮಲ್ಲಿಗೆ ಬಂದ ನೆಂಟರಿಗೆ ಬಹಳ ಖುಷಿಯಾದರೆ, ಅದೇ ಗ್ಲೂಕೋ ಮೀಟರ್ ನಿಂದ ನಮಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಬರಿದೇ ಅಂಕೆಗಳೂ ಕೆಲವೊಮ್ಮೆ ನಮ್ಮ ಜೀವನದ ಲೆಕ್ಕವನ್ನೇ ತಪ್ಪಿಸಿಬಿಡುತ್ತವೆ.  ಮಾತ್ರವಲ್ಲ ನಮ್ಮನ್ನು ಮಾನಸಿಕವಾಗಿಯೂ ಕುಗ್ಗಿಸಿ ಬಿಡುತ್ತವೆ ಎನ್ನುವುದಕ್ಕೆ ಇದೇ ಸಾಕ್ಷಿ. ನಮ್ಮ ಜೀವನ ನಮ್ಮ ಅಂಕೆಯಲ್ಲಿರುವಷ್ಟು ಕಾಲ ಯಾವ ಅಂಕೆಯೂ ನಮ್ಮನ್ನು ಏನೂ ಮಾಡದು. ನಾವು ನಮ್ಮಂಕೆಯಲ್ಲಿರುವೆವು ಎಂಬ ಬಿಂಕ ಬಂದಾಗ ಮಾತ್ರ ಅಂಕೆಯ ಕೈ ಮೇಲಾಗುತ್ತದೆ ನಮ್ಮ ಅಂಕೆ ತಪ್ಪಿಹೋಗುತ್ತದೆ. ಇದುವೇ ಅಲ್ಲವೇ ಅಂಕಗಣಿತ?...

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post