|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಯಕ್ಷರಂಗದ ಪ್ರಸಿದ್ಧ ಮಹಿಳಾ ಕಲಾವಿದೆ ಶ್ರೀಮತಿ ಸಾಯಿಸುಮಾ‌ ಎಂ ನಾವಡ ಕಾರಿಂಜ

ಪರಿಚಯ: ಯಕ್ಷರಂಗದ ಪ್ರಸಿದ್ಧ ಮಹಿಳಾ ಕಲಾವಿದೆ ಶ್ರೀಮತಿ ಸಾಯಿಸುಮಾ‌ ಎಂ ನಾವಡ ಕಾರಿಂಜ



ತೆಂಕುತಿಟ್ಟು ಯಕ್ಷಗಾನ ರಂಗ ಅನೇಕ ಮಹಿಳಾ ಕಲಾವಿದರನ್ನು ಯಕ್ಷರಂಗಕ್ಕೆ ನೀಡಿದೆ. ಇಂತಹ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದೆ ಶ್ರೀಮತಿ ಸಾಯಿಸುಮಾ‌ ಎಂ ನಾವಡ ಕಾರಿಂಜ.


ದಿನಾಂಕ 25.10.1993ರಂದು ಶ್ರೀಮತಿ ಅದಿತಿ ಎಂ. ಭಟ್ ಮತ್ತು ಬೆಳ್ಳಾರೆ ಮಂಜುನಾಥ ಭಟ್ ಇವರ ಪ್ರೀತಿಯ ಮಗಳಾಗಿ ಜನನ. ಎಂ.ಎ (ಕನ್ನಡ) ಇವರ ವಿದ್ಯಾಭ್ಯಾಸ. ಪ್ರಾಥಮಿಕ ವಿದ್ಯಾಭ್ಯಾಸವನ್ನು "ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಬಜ್ಪೆ, "ಪ್ರೌಢಶಾಲಾ ಶಿಕ್ಷಣವನ್ನು ಹೋಲಿ ಫ್ಯಾಮಿಲಿ ಬಾಲಕಿಯರ ಪ್ರೌಢಶಾಲೆ ಬಜ್ಪೆ, ಪದವಿಪೂರ್ವ ಶಿಕ್ಷಣವನ್ನು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜು, ಕಟೀಲು, ಬಿ.ಎ ಪದವಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆ, ಎಂ.ಎ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಕೊಣಾಜೆ ಇಲ್ಲಿಂದ ಪಡೆದಿರುತ್ತಾರೆ.


ಯಕ್ಷಗಾನ ಇವರಿಗೆ ರಕ್ತಗತವಾಗಿ ಬಂದ ಕಲೆ. ತಂದೆ ಬೆಳ್ಳಾರೆ ಮಂಜುನಾಥ ಭಟ್ ಪ್ರಸಿದ್ಧ ವೇಷಧಾರಿ. ಯಕ್ಷಗಾನದಲ್ಲಿ ಇವರ ತಂದೆಯವರಾದ ಬೆಳ್ಳಾರೆ ಮಂಜುನಾಥ ಭಟ್ ಇವರ ಆರಂಭಿಕ ಗುರುಗಳು. ಆ ಬಳಿಕ ಕಟೀಲಿನಲ್ಲಿ ಪಿಯುಸಿಯಲ್ಲಿ ದೇವಿಪ್ರಸಾದ್ ಕಟೀಲು, ಶ್ರೀವತ್ಸ ಭಟ್, ಪದವಿ ಶಿಕ್ಷಣ ಅಭ್ಯಾಸ ಮಾಡುತ್ತಿರಬೇಕಾದರೆ ಕೋಳ್ಯೂರು ರಾಮಚಂದ್ರ ರಾವ್, ಅರುಣ್ ಕುಮಾರ್ ಧರ್ಮಸ್ಥಳ ಇವರಿಂದ ಯಕ್ಷಗಾನ ಕಲಿಯುತ್ತಾರೆ. ತದನಂತರ ಎಲ್ಲಾ ಮಾರ್ಗದರ್ಶನ‌ ಮಾಡಿದವರು ಪೂರ್ಣಿಮಾ ಯತೀಶ್ ರೈ.

ತಂದೆಯವರ ವೇಷಗಳನ್ನು ನೋಡುತ್ತಾ ಬೆಳೆದ ಸಾಯಿಸುಮಾ ಅವರು ಕಟೀಲು ಮೇಳದ ಯಕ್ಷಗಾನಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದದ್ದು, ವೇಷಧಾರಿಯಾಗಬೇಕೆಂಬ ಬಯಕೆಗೆ ಕಾರಣವಾಯಿತು. ಇದರ ಜೊತೆಗೆ ಕಲಾವಿದರ ಕುಟುಂಬ. ಅಪ್ಪ ಬೆಳ್ಳಾರೆ ಮಂಜುನಾಥ ಭಟ್, ದೊಡ್ಡಪ್ಪ ಯಕ್ಷಗಾನ ಪ್ರಸಂಗಕರ್ತರು, ಸಂಘಟಕರು, ಕಲಾವಿದರು, ಅರ್ಥಧಾರಿಗಳೂ ಆಗಿರುವ ಕೆ. ಸೂರ್ಯನಾರಾಯಣ ಭಟ್, ಸೋದರ ಮಾವಂದಿರು ಕೆ. ಗೋವಿಂದ ಭಟ್ ನಿಡ್ಲೆ, ನಾರಾಯಣ ಭಟ್ ನಿಡ್ಲೆ ಇವರನ್ನು ಎಲ್ಲಾ ನೋಡಿ  ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಆಯಿತು ಇವರಿಗೆ.


ಶ್ರೀ ದೇವಿ‌ ಮಹಾತ್ಮ್ಯೆ, ಬಿಲ್ಲಹಬ್ಬ, ದಕ್ಷಾಧ್ವರ, ಅತಿಕಾಯ ಮೋಕ್ಷ, ಸುಧನ್ವಾರ್ಜುನ, ಸುದರ್ಶನೋಪಾಖ್ಯಾನ, ಮಾನಿಷಾದ, ಕುಮಾರ ವಿಜಯ, ಜಾಂಬವತೀ ಕಲ್ಯಾಣ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.

ಕಂಸ, ದಕ್ಷಾಧ್ವರದ ದಾಕ್ಷಾಯಿಣಿ- ಈಶ್ವರ, ಭಸ್ಮಾಸುರ, ಕುಮಾರವಿಜಯದ ಅಜಮುಖಿ, ಶ್ರೀದೇವಿ ಮಹಾತ್ಮ್ಯೆಯ ಮಧು- ಕೈಟಭ, ರಕ್ತಬೀಜ, ಶುಂಭ, ನರಕಾಸುರ ಇವರ ನೆಚ್ಚಿನ ವೇಷಗಳು.


ಶ್ರೀಶ ಯಕ್ಷಗಾನ ಕಲಾ ತರಬೇತಿ ಕೇಂದ್ರ, ಮುರನಗರ, ಬಜ್ಪೆ ಇಲ್ಲಿ ಮೊದಲು ಗೆಜ್ಜೆಕಟ್ಟಿದ್ದು, ಒಂಭತ್ತನೇ ತರಗತಿಯಲ್ಲಿ ದಕ್ಷನ‌ ಪಾತ್ರಕ್ಕೆ. ಇವತ್ತಿಗೂ ಆ ತಂಡದ‌ ಸದಸ್ಯೆ. ಶ್ರೀಮತಿ ಪೂರ್ಣಿಮಾ ಯತೀಶ್ ರೈ ನಿರ್ದೇಶನದ ತಂಡ  ಶ್ರೀ ಮಹಾಗಣಪತಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಸಂಘ ಕಟ್ಲ, ಕಾಟಿಪಳ್ಳ, ಯಕ್ಷಬಿಂದು ಉಜಿರೆ, ಯಕ್ಷಾರಾಧನಾ ಕಲಾ ಕೇಂದ್ರ ಉರ್ವ, ಮಂಗಳೂರು, ಅಮೃತಾ ಯಕ್ಷಮಿತ್ರ ಹವ್ಯಾಸಿ ಬಳಗ, ಮರೋಳಿ, ಅನೇಕ ಕಡೆಗಳಲ್ಲಿ ಅತಿಥಿ ಕಲಾವಿದೆಯಾಗಿ ಯಕ್ಷಗಾನ ತಿರುಗಾಟ ಮಾಡಿದ ಅನುಭವ ಇವರಿಗೆ ಇದೆ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಹೇಗೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:- 

ಪ್ರಸಂಗದ ಪದ್ಯಗಳನ್ನು ನೋಡಿಕೊಳ್ಳುತ್ತೇನೆ...‌ಹೆಚ್ಚಿನ ಮಾಹಿತಿಗಳನ್ನು ತಂದೆಯವರಿಂದ ಅಥವಾ ನುರಿತವರಿಂದ ಕೇಳಿ ತಿಳಿದುಕೊಳ್ಳುತ್ತೇನೆ.


ಕಾಲೇಜು ಯಕ್ಷಗಾನ‌ ಸ್ಪರ್ಧೆಗಳಲ್ಲಿ "ಆಳ್ವಾಸ್ ಯಕ್ಷಸಿರಿ", "ಎಸ್ ಡಿ ಎಮ್ ಯಕ್ಷೋತ್ಸವ" ಸ್ಪರ್ಧೆಗಳಲ್ಲಿ ಇವರ ವೇಷಗಳಿಗೆ ವಿಶೇಷ ಬಹುಮಾನ.

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ, ನಾಟ್ಯಲಹರಿ ಮಹಿಳಾ ಯಕ್ಷಗಾನ ಮಂಡಳಿ ಕಾವಳಕಟ್ಟೆ, ಯಕ್ಷಾರಾಧನಾ ಕಲಾಕೇಂದ್ರ, ಉರ್ವ ಮಂಗಳೂರು ಇತ್ಯಾದಿ ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಲೇಖನ, ಕವನಗಳನ್ನು ಬರೆಯುವುದು, ಭಾಷಣ, ನಿರೂಪಣೆ ಇವರ ಹವ್ಯಾಸಗಳು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:- 

ಯಕ್ಷಗಾನ ಬಹಳಷ್ಟು‌ ಅಭಿಮಾನಿಗಳನ್ನು ಹೊಂದಿ, ಬೆಳೆಯುತ್ತಲೇ ಇದೆ. ಯುವಜನರನ್ನು ಆಕರ್ಷಿಸಿದೆ. ಕಾಲಕ್ಕನುಗುಣವಾಗಿ ಬದಲಾಗುತ್ತಿದೆ... ಬದಲಾವಣೆ ತಪ್ಪಲ್ಲ. ಯಕ್ಷಗಾನ‌ದ ನೈಜತೆಯೊಂದಿಗಿನ ಬದಲಾವಣೆಗಳು ಯಾವತ್ತಿಗೂ ಸ್ವಾಗತಾರ್ಹವಾಗುತ್ತವೆ. ಯಕ್ಷಗಾನ ಇನ್ನಷ್ಟು ಬೆಳೆಯಬೇಕು, ಬೆಳೆಯುತ್ತದೆ...‌


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:- 

ಸಹೃದಯಿ ಪ್ರೇಕ್ಷಕರೇ ಯಕ್ಷಗಾನವನ್ನು ಬೆಳೆಸುವುದು. ಅದ್ಭುತ ಪ್ರೇಕ್ಷಕವರ್ಗವು ಇವತ್ತು ಯಕ್ಷಗಾನವನ್ನು ಉನ್ನತಿಗೇರಿಸುತ್ತದೆ. ಅಭಿಮಾನ ಒಂದೇ... ದೃಷ್ಟಿಕೋನ ಬೇರೆ ಬೇರೆ... ಯಕ್ಷಗಾನವನ್ನು ಪ್ರೋತ್ಸಾಹಿಸಿ, ಬೆಳೆಸುವ ಉದ್ದೇಶ ಮಾತ್ರ ಸಮಾನವಾಗಲಿ ಎಂಬ ಆಶಯ...


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಕೇಳಿದಾಗ:- 

ಯಕ್ಷಗಾನದ ಬಗೆಗೆ ಅಧ್ಯಯನ ಮಾಡಬೇಕು...‌ "ಯಕ್ಷಾವಾಸ್ಯಮ್ ಕಾರಿಂಜ" ಎಂಬ ನಮ್ಮ ಯಕ್ಷಗಾನ ತಂಡವಿದೆ... ತೆಂಕುತಿಟ್ಟಿನ ಹಿಮ್ಮೇಳ, ಮುಮ್ಮೇಳ ತರಗತಿಗಳನ್ನು ಈಗಷ್ಟೇ ಆರಂಭಿಸುತ್ತಿದ್ದೇವೆ. ಆ ತಂಡವನ್ನು ಬೆಳೆಸಬೇಕು, ಗಟ್ಟಿಗೊಳಿಸಬೇಕೆಂಬ ಉದ್ದೇಶವಿದೆ.


13.11.2011ರಲ್ಲಿ ಮಿಥುನ್ ರಾಜ್ ನಾವಡ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರ ‌ ಪ್ರತಿಯೊಂದು ಶೈಕ್ಷಣಿಕ, ಕಲಾಚಟುವಟಿಕೆಗಳಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತ ಇವರ ಎಲ್ಲಾ ಯಶಸ್ಸಿನ ಕಾರಣ ಕರ್ತೃ ಎಂದು ಹೆಮ್ಮೆಯಿಂದ ಇವರು ಹೇಳುತ್ತಾರೆ. ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post