||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯುಗಪುರುಷ ಅದ್ವೈತ ಸಂತ ಶ್ರೀ ಎಡನೀರು ಮಠದ ಶ್ರೀ ಶ್ರೀ ಕೇಶವಾನಂದ ಭಾರತೀಶ್ರೀಚರಣರು

ಯುಗಪುರುಷ ಅದ್ವೈತ ಸಂತ ಶ್ರೀ ಎಡನೀರು ಮಠದ ಶ್ರೀ ಶ್ರೀ ಕೇಶವಾನಂದ ಭಾರತೀಶ್ರೀಚರಣರು

 ವಿರಕ್ತ ಮಠವೊಂದು ಕಲೆ- ಸಾಹಿತ್ಯ -ಶಿಕ್ಷಣಗಳ- ತವರುಮನೆಯಂತೆ ರೂಪುಗೊಂಡ ದೃಷ್ಟಾಂತವಿದ್ದರೆ ಅದು ಶ್ರೀ ಶಂಕರಾಚಾರ್ಯ ಸಂಸ್ಥಾನದ ತ್ರೋಟಕಾಚಾರ್ಯ ಪರಂಪರೆಯ ಶ್ರೀ ಎಡನೀರು ಮಠ ಎಂಬುದರಲ್ಲಿ ಸಂಶಯವಿಲ್ಲ. 


ಎಡನೀರು ಮಠ ಶಬ್ದವು ಯಕ್ಷಗಾನಕ್ಕೆ ಪರ್ಯಾಯ ಶಬ್ದ ಎಂದರೆ ಉತ್ಪ್ರೇಕ್ಷೆಯಾಗದು. ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಗಳು ಸ್ವತಃ ಭಾಗವತರಾಗಿ ಶರಣು ಸಿದ್ಧಿವಿನಾಯಕ ಎಂದು ಜಾಗಟೆ ಪಿಡಿಯದೆ ಇದ್ದರೆ ಮಠದ ಕಾರ್ಯಗಳಿಲ್ಲ. ಆರಾಧ್ಯಮೂರುತಿ ಗೋಪಾಲಕೃಷ್ಣನಿಗೆ ಶ್ರೀಗಳ ಭಾಗವತಿಕೆಯ ಸೇವೆ ನಿತ್ಯ ನಡೆಯಲೇಬೇಕು! 


1941ರಲ್ಲಿ ಜನಿಸಿದ ಶ್ರೀ ಶ್ರೀ ಕೇಶವಾನಂದ ಭಾರತಿಶ್ರೀಗಳು ಅರುವತ್ತು ಚಾತುರ್ಮಾಸ್ಯ ವ್ರತಗಳನ್ನು ಪೂರೈಸಿದ ಅಪೂರ್ವ ವ್ಯಕ್ತಿತ್ತ್ವದಿಂದ ಬೆಳಗಿದವರು! ದಕ್ಷಿಣಾಮೂರ್ತಿ ಶ್ರೀ ಗೋಪಾಲಕೃಷ್ಣನ ಪರಮಭಕ್ತರು. 1960ರ ನವಂಬರ 14 ರಂದು ಎಡನೀರು ಮಠದ ಮಠಾಧೀಶರಾಗಿ ಪೀಠವನ್ನಲಂಕರಿಸಿ, ಪೀಠದ ಘನತೆಯನ್ನು ಹೆಚ್ಚಿಸಿದರು. ಎಡನೀರು ಮಠವು ಯಕ್ಷಗಾನ ಕಲೆ, ಧಾರ್ಮಿಕ, ಆಧ್ಯಾತ್ಮಿಕ ಸೇವಾಕಾರ್ಯ, ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಕಳಕಳಿಯ ಸೇವೆಗಳಿಗೆ ಸದಾ ತೆರೆದುಕೊಂಡಿರುವಂತೆ ಮಠವನ್ನು ಎತ್ತರಿಸಿದರು, ಬಿತ್ತರಿಸಿದರು.  


ಮಠವನ್ನು ಸಮಾಜದಿಂದ ದೂರವಿಟ್ಟವರಲ್ಲ. ಸದಾ ಭಕ್ತರು, ಅದರಲ್ಲೂ ಯಕ್ಷಗಾನ ಕಲಾವಿದರು ನಿತ್ಯ ಮಠದಲ್ಲಿರಬೇಕೆಂದು ಬಯಸಿ ಮಠವನ್ನು ಮನೆಯನ್ನಾಗಿ ರೂಪಿಸಿದರೆಂದರೆ ತಪ್ಪಲ್ಲ. ಸಾಹಿತ್ಯ, ಸಂಗೀತ, ಭರತನಾಟ್ಯ, ಯಕ್ಷಗಾನ, ಶಿಕ್ಷಣಾದಿ ರಂಗಗಳಲ್ಲಿ ಮಾತ್ರವಲ್ಲದೆ ಪ್ರವಾಸೋದ್ಯಮಗಳಲ್ಲಿ ಕಾಸರಗೋಡಿನ ಸಮಗ್ರ ಉತ್ಥಾನಕ್ಕೆ ಶ್ರೀಮಠವು ತನ್ನದೇ ವಿಶಿಷ್ಟ ಕೊಡುಗೆ ನೀಡುವಲ್ಲಿ ಶ್ರೀಗಳು ಕಾರಣರಾದರು.

ಕನ್ನಡ ಸಂಸ್ಕೃತಿಯ ಬೆಳವಣಿಗೆಯ ಪೋಷಣೆಗೆ ಕಾಸರಗೋಡು  ಮಹತ್ತರ ಪಾತ್ರ ಪಡೆಯಲು ಎಡನೀರು ಮಠವು ಕಾರಣವಾಯಿತು‌.


ಸ್ವತಃ ಭಾಗವತರಾದ ಶ್ರೀ ಕೇಶವಾನಂದಭಾರತೀ ಸ್ವಾಮೀಜಿಯವರು ಆರಾಧ್ಯದೇವ ಗೋಪಾಲಕೃಷ್ಣನೊಡನೆ ಮಧವೂರ ಸಿದ್ಧಿವಿನಾಯಕನ ಪರಮಭಕ್ತರೂ ಹೌದು!  ಮಠವು ನಿರಂತರ ಯಕ್ಷಗಾನ, ಯಕ್ಷಗಾನ ತಾಳಮದ್ದಳೆಗಳಿಂದ ಝೇಂಕರಿಸುತ್ತಿದ್ದರೆ ‍  ಗೋಪಾಲಕೃಷ್ಣನು ಸಂತೃಪ್ತನಾಗುತ್ತಾನೆ ಎಂಬ ಭಾವ ಶ್ರೀಗಳದ್ದು.


ಯಕ್ಷಗಾನ ಸಪ್ತಾಹ, ತಾಳಮದ್ದಳೆ, ಹರಿಕತೆಗಳನ್ನು ನಡೆಸುತ್ತಲೇ ಇದ್ದರು. 79 ಸಂವತ್ಸರಗಳನ್ನು ಪೂರೈಸಿದ ಶ್ರೀ ಶ್ರೀ ಕೇಶವಾನಂದ ಭಾರತೀಶರು ಕಳೆದ ವರ್ಷ ಅರುವತ್ತನೇ ಚಾತುರ್ಮಾಸ್ಯನ್ನು ಪೂರೈಸಿದರು.


ಯಕ್ಷಗಾನ ಕಲಾವಿದರು ತಾಳಮದ್ದಳೆ ಕೂಟಗಳ ಅರ್ಥಧಾರಿಗಳ ಬಗೆಗೆ ಶ್ರೀಗಳಿಗೆ ಎಲ್ಲಿಲ್ಲದ ಅಕ್ಕರೆಯ ಪ್ರೀತಿ! ಕಲಾವಿದರು ತಾಳಮದ್ದಳೆ ಕೂಟಕ್ಕಾಗಿ ಬಂದು ಶ್ರೀಚರಣಗಳಿಗೆ ವಂದಿಸಿಕೊಂಡು ತೆರಳುವಾಗ ಶ್ರೀಗಳು ಕಲಾವಿದರಲ್ಲಿ ಶ್ರೀಮಠವನ್ನು ತನ್ನ ಮನೆಯೆಂದು ತಿಳಿದು ಮಠಕ್ಕೆ ಆಗಾಗ ಬರುತ್ತಿರಬೇಕೆಂದು ಪ್ರೀತಿಯಿಂದ ಹೇಳುತ್ತಲೇ ಇರುತ್ತಿದ್ದರು. 


ಶ್ರೀಗಳು ಅರುವತ್ತು ಚಾತುರ್ಮಾಸ್ಯಗಳನ್ನು ಪೂರೈಸಿದ ಸಂತಸದ ನೆನಪಾಗಿ ತೆಂಕುಬಡಗುತಿಟ್ಟುಗಳ ಯಕ್ಷಗಾನ ಕಲಾವಿದರು ಯಕ್ಷಗಾನ ತಾಳಮದ್ದಳೆಯ ವಿಶಿಷ್ಟವಾದ ಕಾರ್ಯಕ್ರಮವನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದರು. ಆದರೆ! ಭಗವಂತನ ಇಷ್ಟ ಬೇರೆಯೇ ಆಗಿತ್ತು. 2020ದ ಸೆಪ್ಟೆಂಬರ್ 4, ಕಾಸರಗೋಡಿಗಷ್ಟೇ ಅಲ್ಲದೆ, ಯಕ್ಷಗಾನ ಲೋಕಕೆ ಕತ್ತಲೆ ಕವಿಸಿ ಶ್ರೀ ಶ್ರೀ ಕೇಶವಾನಂದ ಶ್ರೀ ಚರಣರು ಗೋಪಾಲಕೃಷ್ಣನಲ್ಲಿ ವಿಲೀನರಾದರು!  


ಎಡನೀರುಮಠದ ಶಂಕರಾಚಾರ್ಯ ಸಂಸ್ಥಾನದ ಗುರುಪೀಠವನ್ನು ಉತ್ತರಾಧಿಕಾರಿಯಾಗಿ ಅಲಂಕರಿಸಿದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಗಳು ಶ್ರೀ ಶ್ರೀ ಕೇಶವಾನಂದಭಾರತೀ ಶ್ರೀಗಳ ಆಶೋತ್ತರಗಳನ್ನು  ಪೂರೈಸುವ ದಾರಿಯಲ್ಲಿ ಇತೋsಪಿ ಅತಿಶಯವಾದ ಶ್ರದ್ಧೆ ಸರಳತೆಯಿಂದ ಧರ್ಮಧ್ವಜ ಹಾಗೂ ಯೋಗಿದಂಡವನ್ನು ಪಿಡಿದು ಮುನ್ನಡೆಯುತ್ತಿದ್ದಾರೆ!


ಐತಿಹಾಸಿಕ ನ್ಯಾಯಾಂಗ ಹೋರಾಟದ ದಿಗ್ವಿಜಯ:

1970ರ ಫೆಬ್ರವರಿಯಲ್ಲಿ ಕೇರಳ ಸರಕಾರವು ಭೂಸುಧಾರಣಾ ಕಾಯ್ದೆಯಡಿಯಲ್ಲಿ ಶ್ರೀ ಎಡನೀರು ಮಠಕ್ಕೆ ಸೇರಿದ ಆಸ್ತಿಗಳ ಸ್ವಾಧೀನಕ್ಕೆ ನೋಟೀಸು ಜಾರಿ ಮಾಡಿತು. ಭಾರತೀಯ ಪೌರನು ಆಸ್ತಿಹೊಂದಿರುವ ಹಕ್ಕಿನ ಪ್ರಶ್ನೆಯಾದುದರಿಂದ ಶ್ರೀಮಠದ ಪೀಠಾಧ್ಯಕ್ಷರಾದ ಸ್ವಾಮೀಜಿಯವರು ಭಾರತದ ಸರ್ವೋಚ್ಚ ನ್ಯಾಯಾಲಯದ ಮೊರೆಹೊಕ್ಕರು.


ನಾನಿಭಾಯಿ ಫಾಲ್ಕಿವಾಲಾ ಸಲಹೆಯಂತೆ ಭಾರತೀಯ ಸಂವಿಧಾನ ಆರ್ಟಿಕಲ್ 26ರ ಅನುಸಾರ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಭಾರತೀಯ ಪೌರರು ಆಸ್ತಿಹೊಂದಿರುವುದು ಮೂಲಭೂತ ಹಕ್ಕು! ಈ ಮೂಲಭೂತ ಹಕ್ಕಿಗೆ ಸೆಡ್ಡುಹೊಡೆಯುವಂತಹ ಭೂಸುಧಾರಣೆ ಕಾಯ್ದೆಯನ್ನು ಪ್ರಶ್ನಿಸಿ ಕೇಸ್ ವಿಚಾರಣೆಗೆ ಬಂತು! 


ಮೂಲಭೂತಹಕ್ಕುಗಳ ಬಗೆಗೆ ವ್ಯಾಪಕ ಚರ್ಚೆಗೆ ಹಾಗೂ ನಾಗರಿಕರಲ್ಲಿ ಜಾಗೃತಿಯ ಸಂಚಲನವುಂಟು ಮಾಡಲು ಕಾರಣವಾಯಿತು. ಸುಮಾರು 68 ದಿನಗಳ ಕಾಲ ವಾದ ಪ್ರತಿವಾದ ನಡೆಯಿತು. 1972ರ ಅಕ್ಟೋಬರ 31ರಂದು ಆರಂಭವಾದ ವಿಚಾರಣೆ 1973ರ ಮಾರ್ಚ್ 23ರಂದು ಸಮಾಪ್ತವಾಯಿತು. 


ಶ್ರೀ ಶ್ರೀ ಕೇಶವಾನಂದ ಭಾರತಿಯವರ ಪರವಾಗಿ ತೀರ್ಪು ಬಂತು! ಈ ಐತಿಹಾಸಿಕ ದಾಖಲೆಯ ದಾವೆಯ ಪ್ರಕರಣವು ಭಾರತೀಯ ನ್ಯಾಯಾಂಗದಲ್ಲಿ ಮಹತ್ತರ ಪಾತ್ರವಹಿಸಲು ಕಾರಣವಾಯಿತು. ಸಂವಿಧಾನದ ಆಶಯವನ್ನು ಹಿಡಿದೆತ್ತುವ ಈ ವಾದ ಪ್ರತಿವಾದದ ಸರಣಿಯು ಇಂದಿನ ಕಾನೂನು ವಿದ್ಯಾರ್ಥಿಗಳಿಗೆ ಅನಿವಾರ್ಯ ಅಧ್ಯಯನ ಪಠ್ಯವಸ್ತುವಾಗಿದೆ!  


ಭಾರತದ ಸರ್ವೋನ್ನತ ನ್ಯಾಯಾಲಯವು ಗೋಲಕನಾಥ ವರ್ಸ್ಸಸ್ ಪಂಜಾಬ್ ಸರಕಾರ ದಾವೆಯ ತೀರ್ಪಿನ ನೆಲೆಗಟ್ಟಿನಲ್ಲಿ ಹಾಗೂ 24, 25, 29ನೇ ಸಂವಿಧಾನ ತಿದ್ದುಪಡಿಗಳನ್ನು ಗಮನದಲ್ಲಿಟ್ಟುಕೊಂಡು ಪರಿಶೀಲಿಸಿದರು.


13 ಜನ ನ್ಯಾಯಾಧೀಶರಿದ್ದ ಸಾಂವಿಧಾನಿಕ ಪೀಠವು ಈ ದಾವೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಹನ್ನೊಂದು ವಿವಿಧ ತೀರ್ಪುಗಳು ಸ್ವೀಕಾರವಾದವು. ಗೋಲಕನಾಥರ ಮತ್ತು ಶ್ರೀ ಶ್ರೀ ಕೇಶವಾನಂದ ಶ್ರೀಗಳ  ಕೇಸಲ್ಲಿ ನಾನಿ ಫಾಲ್ಕೀವಾಲ ಅವರು ಫಾಲಿ ನಾರಿಮನ್ ಅವರ ನೇತೃತ್ವದಲ್ಲಿ  ವಾದಿಸಿದರು.


ಈ ಕೇಸು ಕಟಕಟೆಗೇರುತ್ತಿದ್ದಾಗ ಎಡನೀರು ಮಠದ ಹೆಸರು ಉತ್ತರ ಭಾರತದವರಿಗೆ ಪರಿಚಯವಿರಲಿಲ್ಲ ಎಂದರೆ ತಪ್ಪಾಗಲಾರದು. ಭಾರತದ ಸಂವಿಧಾನದ ಆಶಯವನ್ನು ಹಿಡಿದೆತ್ತಿದ ಸ್ವಾಮೀಜಿಗಳ ಪರವಾದ ತೀರ್ಪು ಹೊರಬೀಳುತ್ತಿದ್ದಂತೆ ರಾಷ್ಟ್ರದ ಎಲ್ಲೆಡೆ ಎಡನೀರು ಮಠ ಮತ್ತು ಶ್ರೀ ಶ್ರೀ ಕೇಶವಾನಂದ ಭಾರತಿಯವರ ಹೆಸರು ಹರಡಿತು.


ದಾವೆಯ ಮಹತ್ತ್ವ:

- ಭಾರತದ ಸಂವಿಧಾನದ ತಿದ್ದುಪಡಿಗಳು ಶಾಸಕಾಂಗ ಸಭೆಗಳಲ್ಲಿ ಚರ್ಚೆಯಾಗಿದ್ದರೂ, ಸಂವಿಧಾನದ ಮೂಲ ಆಶಯಕ್ಕೆ ಪೂರಕವಾಗಿರ ಬೇಕೇ ವಿನಾ ಹೊರತಾಗಿರಬಾರದು.

- ಪರಿಚ್ಛೇದ 9ರಲ್ಲಿ ಶಾಸಕಾಂಗದಲ್ಲಿ ನಿರ್ಣಯಿಸಲಾದ ಸಾಂವಿಧಾನಿಕ ತಿದ್ದುಪಡಿಗಳಿಗೆ ಹೊಸಮಾರ್ಗಸೂಚಿ ಜಾರಿಯಾಯಿತು.

- ಸಂಸತ್ತು ಪೂರ್ಣಮತದೊಂದಿಗೆಯಾವುದೇ ತಿದ್ದುಪಡಿಯನ್ನು ಸೂಚಿಸಿದ್ದರೂ ಮುನ್ನಡೆಯ ತಿದ್ದುಪಡಿಯಲ್ಲಿ ಸಾಂವಿಧಾನಿಕ ದೋಷಗಳಿದ್ದಲ್ಲಿ ಅದನ್ನು ತಿರಸ್ಕರಿಸಬಹುದು! 


ಶ್ರೀ ಕ್ಷೇತ್ರ ಎಡನೀರು ಮಠದ ಕೇಶವಾನಂದ ಭಾರತೀ ಶ್ರೀಗಳ ಅನನ್ಯ ಪ್ರೀತಿ ಯಕ್ಷಗಾನ, ಹರಿಕತೆ, ಭಾಗವತಿಕೆ! ಯಕ್ಷಗಾನ ಅರ್ಥಗಾರಿಕೆ! 


ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಯಕ್ಷಾನುಗ್ರಹ ವಾಟ್ಸ್ ಆಪ್ ಗಣದಲ್ಲಿ ಮರೆಯಲಾಗದ ಯುಗಪುರುಷರ ಸಂಸ್ಮರಣೆಯಾಗುತ್ತಿರುವ ಶುಭಾವಸರದಲ್ಲಿ ಯುಗಪುರುಷ ಶ್ರೀ ಶ್ರೀ ಕೇಶವಾನಂದ ಶ್ರೀಗಳ ಅವರ ಸ್ಮೃತಿಗೌರವವು ಪುಣ್ಯಾರಾಧನೆಯ ದಿನಕ್ಕೆ ಒದಗಿಬಂದುದು ವಿಶೇಷವಾದರೂ ಅದೊಂದು ದಿವ್ಯ ಸಂದೇಶ ಸೂಚಕವಾಗಿದೆ!


ಶತಶತಮಾನಗಳಿಗೂ ಬೆಳಗುವ ಮರೆಯಲಾಗದ ಮಹಾನುಭಾವರ ದಿವ್ಯಸ್ಮೃತಿಯನ್ನು  ದಾಖಲಿಸುವ ಸುದೈವ! ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಚರಣಗಳ ಪವಿತ್ರ ಭಾವಕಿರಣಗಳು ನಮ್ಮನ್ನು ಸದಾ ಹರಸುತ್ತಿರಲಿ. ಯಕ್ಷಗಾನವು ವಿಶ್ವಗಾನವಾಗಿರಲಿ! 

ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನವು ವಿಜಯಧ್ವಜವನ್ನು ಸದಾ ಪಿಡಿದಿರಲಿ


-ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ

9972448183(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post