||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿಕ್ಷಕರ ಮಹತ್ವ: ಬದುಕಿಗೆ ಗುರಿ, ದಾರಿ ತೋರುವ ಗುರುವಿಗೆ ವಂದನೆ

ಶಿಕ್ಷಕರ ಮಹತ್ವ: ಬದುಕಿಗೆ ಗುರಿ, ದಾರಿ ತೋರುವ ಗುರುವಿಗೆ ವಂದನೆ

"ದಂಡಿಸುವ ಗುರುಜನರ ಕಂಡು ಕೋಪಿಸಬೇಡ ತಿಳಿ ನಿನ್ನ ಒಳಿತಿಗಿದು-ಕೇಳು ಜಾಣ!"
ತಾಯಿ ಮಡಿಲಿನಲ್ಲಿ ಹಸುಗೂಸು ಕಣ್ಣು ತೆರೆದರೂ ಒಳಗಣ್ಣು ತೆರೆಯುವುದು ಗುರುವಿನ ಸಮಕ್ಷಮದಲ್ಲಿ. ವಿದ್ಯಾರ್ಥಿ ಜೀವನದಲ್ಲಿ ತಪ್ಪೊಪ್ಪುಗಳನ್ನು ತಿದ್ದಿ ಹೇಳಿ ಉತ್ತಮ ವ್ಯಕ್ತಿತ್ವವ ರೂಪಿಸಿ ಒಬ್ಬ ಆದರ್ಶ ವ್ಯಕ್ತಿಯನ್ನಾಗಿ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುವ ಗುರುಗಳು ನಮ್ಮ ಜೀವನದ ಪುಟಗಳಲ್ಲಿ ಅಜರಾಮರಾಗಿರುವವರು. ಒಂದು ಗಿಡಕ್ಕೆ ಪರಿಪೂರ್ಣವಾದ ಪೋಷಕಾಂಶಗಳನ್ನು ನೀಡಿದರೆ ಮಾತ್ರ ಆ ಗಿಡ ಸಮೃದ್ಧವಾಗಿ ಬೆಳೆಯಲು ಸಾಧ್ಯ. ನಿಸ್ವಾರ್ಥ ಮನಸ್ಸಿನಿಂದ ಎಲ್ಲರನ್ನೂ ತಮ್ಮ ಮಕ್ಕಳಂತೆ ಪಾಲನೆ ಮಾಡಿ ನೀತಿ ತತ್ವಗಳನ್ನು ಧಾರೆಯೆರೆಯುವ ಶಿಕ್ಷಕರು ನಮ್ಮ ಜೀವನದ ಅಮೂಲ್ಯ ರತ್ನಗಳು.


'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ'ಎಂದು ದಾರ್ಶನಿಕರೊಬ್ಬರು ಗುರುವಿನ ಮಹತ್ವವನ್ನು ಬಣ್ಣಿಸಿದ್ದಾರೆ. ಒಂದು ಮಗುವು ಶೈಶವಾವಸ್ಥೆ ಕಳೆದು ಬಾಲ್ಯಕ್ಕೆ ಅಡಿಯಿಟ್ಟಾಗ ಸಾಮಾಜಿಕ ಜೀವನದ ಪರಿಚಯವಾಗುತ್ತಾ ಹೋಗುತ್ತದೆ. ಆ ಹಂತದಲ್ಲಿ ಜೀವನದ ಅರ್ಥ, ಗುರಿ, ಜೀವನ ಮೌಲ್ಯಗಳನ್ನು ತಿಳಿಸಲು ಗುರುವಿನ ಮಾರ್ಗದರ್ಶನವೇ ಅಡಿಪಾಯ.


ಭಾರತದಲ್ಲಿ ಹಿಂದೆಯಿದ್ದ ಗುರುಕುಲ ಪದ್ದತಿ ಇಂದು ಮರೆಮಾಚಿರುವ ಗುರು ಸ್ಥಾನಮಾನವನ್ನು ಮತ್ತೆ ನೆನಪಿಸುತ್ತದೆ.ಅಂದು 'ಆಚಾರ್ಯ ದೇವೋ ಭವ' ಎಂಬ ಗೌರವವು ವಿದ್ಯಾರ್ಥಿಗಳ ಮನದಲ್ಲಿ ಮೂಡಿರುತ್ತಿತ್ತು.


ಮಹಾನ್ ವ್ಯಕ್ತಿಗಳು, ದಾರ್ಶನಿಕರ ಕಥೆಗಳನ್ನು ಓದಿದಾಗ ಆ ಕಾಲದಲ್ಲಿದ್ದ ಗುರು ಮಹತ್ವ ಹಾಗೂ ಅವರ ಮಾರ್ಗದರ್ಶನದಿಂದ ತಯಾರಾದ ಯಶಸ್ಸಿನ ಕಥೆಗಳು ಅನೇಕ. ಶ್ರೀ ರಾಮಚಂದ್ರನು ಮರ್ಯಾದಾ ಪುರುಷೋತ್ತಮನೆಂದು ಕರೆಸಿಕೊಳ್ಳಲು ಆತನಿಗೆ ಜೀವನದಲ್ಲಿ ಮಾರ್ಗದರ್ಶನ ನೀಡಿದ ಗುರುಗಳೇ ಕಾರಣ. ಶಿವಾಜಿ ಮಹಾರಾಜರು ಆತ್ಮಸ್ಥೈರ್ಯವನ್ನು ಕಳೆದುಕೊಂಡು ಕುಳಿತಿದ್ದಾಗ ಸಮರ್ಥ ರಾಮದಾಸರಂತಹ ಗುರುಗಳು ತುಂಬಿದ ಆತ್ಮವಿಶ್ವಾಸದಿಂದ ಮತ್ತೆ ಸಾಮ್ರಾಜ್ಯವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರರಿಗೆ ಸಿಕ್ಕಂತಹ ಗುರುಗಳು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡದೆ ಇದ್ದಿದ್ದರೆ ಓದು ಮುಂದುವರೆಸಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಮಹಾಭಾರತದ ಅರ್ಜುನನು ಉತ್ತಮ ಬಿಲ್ಲು ವಿದ್ಯಾ ಪ್ರವೀಣನಾಗಲು ದ್ರೋಣಾಚಾರ್ಯರಂತಹ ಗುರುಗಳೇ ಕಾರಣ. ಇಂತಹ ಮಹಾನ್ ಚೇತನರು ಗುರು ಬೋಧನೆಯಿಂದಲೇ ಇಂದಿನ ಸಮಾಜಕ್ಕೆ ಸ್ಪೂರ್ತಿ ಚಿಲುಮೆಯಾಗಿರುವರು. ಯಾವುದೇ ನಾಯಕರ ಸಾಧನೆಯ ಹಾದಿ ಕೇಳಿದರೆ ಅವರ ಜೀವನದ ಗುರಿ ಗುರು ಹಾಕಿಕೊಟ್ಟ ಮಾರ್ಗದ ಮೇಲೆಯೇ ನಡೆಯುತ್ತದೆ ಎನ್ನುವ ವಿಚಾರ ತಿಳಿಯುತ್ತದೆ.


ಆದರೆ ಇಂದಿನ ಸಮಾಜ ಗುರು ಬೋಧನೆಯನ್ನು ಪಾಲಿಸದೆ ಸಾಮಾಜಿಕ ತಳಹದಿಯೇ ಅಲುಗಾಡುತ್ತಿದೆ. ಮೋಸ, ವಂಚನೆ, ಭ್ರಷ್ಟಾಚಾರದ ಘಟನೆಗಳು ದಿನ ಕಳೆದಂತೆ ಹೆಚ್ಚಾಗುತ್ತಿದೆ. ಶಿಕ್ಷಕರ ಬೋಧನೆಯನ್ನು ಅನುಸರಿಸದಿರುವುದೇ ಇದಕ್ಕೆ ಮುಖ್ಯ ಕಾರಣ. ವಿದ್ಯಾರ್ಥಿಗಳ ಪ್ರಗತಿಯನ್ನೇ ಮುಖ್ಯ ಗುರಿ ಮಾಡಿಕೊಂಡು ಅದಕ್ಕಾಗಿ ಕಾಯಾ ವಾಚಾ ಮನಸ್ಸಾಧನೆ ಮಾಡುವ ಶಿಕ್ಷಕ ನಿಜಕ್ಕೂ ಧನ್ಯಾತ್ಮ, ನಿಜಕ್ಕೂ ಪುಣ್ಯಾತ್ಮ, ನಿಜಕ್ಕೂ ಪರಮಾತ್ಮ.


-ಅಖಿಲಾ ಶೆಟ್ಟಿ.

ಸಂತ ಫಿಲೋಮಿನಾ ಕಾಲೇಜು

ಫಿಲೋನಗರ್, ಪುತ್ತೂರು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post