ಕಾಸರಗೋಡಿನ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ನಿಯೋಗದಿಂದ ಡೀಸಿ ರಾಜೇಂದ್ರ ಕೆ.ವಿ ಅವರಿಗೆ ಮನವಿ ಸಲ್ಲಿಕೆ
ಮಂಗಳೂರು: ನೆರೆಯ ಕಾಸರಗೋಡು ಜಿಲ್ಲೆಯವರು ದೈನಂದಿನ ಜೀವನಕ್ಕಾಗಿ ಮಂಗಳೂರನ್ನೇ ಅವಲಂಬಿಸಿದ್ದು, ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಹೇರಿದ ಗಡಿ ನಿರ್ಬಂಧಗಳಿಂದಾಗಿ ಸಾವಿರಾರು ಜನರ ಬದುಕು ಅತಂತ್ರವಾಗಿದೆ. ಈ ಸಂಬಂಧ ಕಾಸರಗೋಡು ನಿವಾಸಿಗಳ ನಿಯೋಗವೊಂದು ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರನ್ನು ಭೇಟಿ ಮಾಡಿ ನಿರ್ಬಂಧಗಳನ್ನು ಸಡಿಲಿಸುವಂತೆ ಮವಿ ಸಲ್ಲಿಸಿತು.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನಿವಾಸಿಗಳು ಕೇರಳವನ್ನು ಆಶ್ರಯಿಸದೆ ಉದ್ಯೋಗ, ವಿದ್ಯೆ, ಆರೋಗ್ಯ ಸೇರಿದಂತೆ ಎಲ್ಲಾ ವಿಷಯಗಳಿಗೂ ಮಂಗಳೂರನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಇದು ಇಲ್ಲಿಯ ಕನ್ನಡಿಗರಿಗೆ ಅನಿವಾರ್ಯ ಕೂಡಾ. ಇತ್ತೀಚಿನ ಕಾನೂನು ನಿಯಮದ ಪ್ರಕಾರ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿರುವುದು ಕಾಸರಗೋಡು, ಮಂಜೇಶ್ವರ ಪ್ರದೇಶದವರಿಗೆ ಬಹಳಷ್ಟು ತೊಂದರೆ ಆಗಿರುತ್ತದೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಲಿಯುತ್ತಿರುವ ಇಲ್ಲಿಯ ಹೆಚ್ಚಿನ ಶಾಲಾ ವಿದ್ಯಾರ್ಥಿಗಳು ಮತ್ತೆ ಮತ್ತೆ ಕೋವಿಡ್ ತಪಾಸಣೆ ಮಾಡಿಸಿಕೊಳ್ಳೋದು ಮಕ್ಕಳ ಮನಸ್ಸಿಗೆ ಮಾನಸಿಕ ಅಘಾತ ತರುವಂತಹುದು ಮತ್ತು ಮೂಗಿನ ಸಮಸ್ಯೆಯೂ ಕಾಡಿರುವುದು ಹಲವು ಕಡೆ ಕಂಡು ಬಂದಿರುತ್ತದೆ.
ಆದ್ದರಿಂದ ದ.ಕ. ಜಿಲ್ಲಾಧಿಕಾರಿಯವರು ಸೂಕ್ತವಾಗಿ ಪರಿಶೀಲಿಸಿ ಕೇರಳದ ಹದಿನಾಲ್ಕು ಜಿಲ್ಲೆಗಳ ಪೈಕಿ ಕಾಸರಗೋಡು ಜಿಲ್ಲೆಯವರಿಗೆ ಮಾತ್ರ ದ.ಕ. ಜಿಲ್ಲೆಯ ಅಗತ್ಯ ಇರುವುದರಿಂದ ಮತ್ತು ಕಾಸರಗೋಡು, ಮಂಜೇಶ್ವರ ಪ್ರದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿರುವುದರಿಂದ ಅಥವಾ ಅತೀ ಕಡಿಮೆ ಸಂಖ್ಯೆಯಲ್ಲಿರುವುದರಿಂದ ಈ ಭಾಗದ ಜನರಿಗೆ ಯಾವುದೇ ತಪಾಸಣೆ ಇಲ್ಲದೆ ಕರ್ನಾಟಕಕ್ಕೆ ಸಂಪರ್ಕ ಒದಗಿಸಿಕೊಡಬೇಕೆಂದು ಮನವಿ ನೀಡಲಾಯಿತು.
ನಿಯೋಗದಲ್ಲಿ ಕಾಸರಗೋಡು ಗ್ರಾಮಾಂತರ ಜಿಲ್ಲಾ ವಿಹಿಂಪ ಅಧ್ಯಕ್ಷರಾದ ಜಯದೇವ ಖಂಡಿಗೆ, ಜಿಲ್ಲಾ ಕಾರ್ಯದರ್ಶಿ ಶಂಕರ ಭಟ್, ಜಿಲ್ಲಾ ಸಹಕಾರ್ಯದರ್ಶಿ ಸಂಕಪ್ಪ ಭಂಡಾರಿ, ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ಡಾ. ಜಯಪ್ರಕಾಶ್, ಜಿಲ್ಲಾ ಸೇವಾ ಪ್ರಮುಖ್ ಸುರೇಶ್ ಶೆಟ್ಟಿ, ಜಿಲ್ಲಾ ಬಜರಂಗದಳ ಸಂಚಾಲಕ ಶೈಲೇಶ್, ಜಿಲ್ಲಾ ದುರ್ಗಾವಾಹಿನಿ ಪ್ರಮುಖ್ ಶ್ರೀಮತಿ ಸೌಮ್ಯಾ ಪ್ರಕಾಶ್ ಇದ್ದರು.