'ಬದುಕೇ ಒಂದು ಸವಾಲು'- ಕೃತಿ ಲೋಕಾರ್ಪಣೆ

Upayuktha
0


ಬೆಂಗಳೂರು: ಬದುಕು, ಅನುಭವಕ್ಕಿದೆ ಹೊರತು ಅಭಿನಯಿಸಲು ಅಲ್ಲ ಎಂದು ಸಾಹಿತಿ -ಚಿಂತಕ ಡಾ. ಗುರುರಾಜ ಕರ್ಜಗಿ ಅವರು ಅಭಿಪ್ರಾಯಪಟ್ಟರು.


‘ಬುಕ್ ಬ್ರಹ್ಮ’ ಸಹಯೋಗದೊಂದಿಗೆ ಬೆಂಗಳೂರಿನ ಉದಯ ಪ್ರಕಾಶನವು ನಗರದ ಜಯನಗರದ ‘ಎನಿಗ್ಮಾ ಕ್ಯಾಬಿನ್ಸ್’ ನಲ್ಲಿಯ ‘ಬುಕ್ ಬ್ರಹ್ಮ’ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕು. ವಿಹಾರಿಕಾ ಅಂಜನಾ ಹೊಸಕೇರಿ ಅವರ ‘ಬದುಕೇ ಒಂದು ಸವಾಲು’ ಚಿಂತನಾ ಬರಹಗಳ ಸಂಗ್ರಹ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.


ಎಲ್ಲರಿಗೆ ವಯಸ್ಸಾಗುತ್ತದೆ. ಅವರು ವಯೋವೃದ್ಧರು. ನಾವು ಜ್ಞಾನವೃದ್ಧರಾಗಬೇಕು. ಅದು ಪ್ರಯತ್ನದಿಂದಲೂ ಸಾಧ್ಯವಾಗುತ್ತದೆ. ಇದಕ್ಕೆ, ಶಂಕರಾಚಾರ್ಯರು ಉತ್ತಮ ಮಾದರಿ. ಜ್ಞಾನವೃದ್ಧ ಮನಸ್ಥಿತಿಯು ಅನುಭವದಿಂದ ಕಲಿತಿದ್ದರ ಫಲ. ಆದ್ದರಿಂದ, ಬದುಕು ಅನುಭವಿಸಬೇಕು. ಆ ಮೂಲಕ ಅನುಭಾವ ಪಡೆಯಬೇಕು. ಕೇವಲ ಅಭಿನಯಿಸಿದರೆ ಬದುಕು ಸಾರ್ಥಕವಾಗದು ಎಂದು ಅಭಿಪ್ರಾಯಪಟ್ಟರು.


ಬರಹ ಒಂದು ಶಿಲ್ಪ: ಮಾತು ಕೇವಲ ಕನಸಿನ ಮಂಟಪ. ಬರವಣಿಗೆಯು ಶಿಲ್ಪವಿದ್ದಂತೆ. ಅದು ಕರಾರುವಕ್ಕಾಗಿರಬೇಕು. ಮತ್ತೇ ಮತ್ತೆ ಶಿಲ್ಪ ಮಾಡಲಾಗದು. ಒಂದು ಸಲ ಶಿಲ್ಪ ಕೆತ್ತಿದರೆ ಅದು ಅಂತಿಮವೇ. ಆದ್ದರಿಂದ, ಪ್ರತಿ ಕ್ಷಣವೂ ಎಚ್ಚರಿರಬೇಕು. ವಯಸ್ಸಿಗೂ ಸಾಧನೆಗೂ ಸಂಬಂಧವಿಲ್ಲ. ಪ್ರಯತ್ನಶೀಲರಾಗಿದ್ದರೆ ಸಾಧನೆ ಸಾಧ್ಯ ಎಂದರು.




ಚಿಂತನೆಯು ಸ್ವಂತಿಕೆಯಾಗಬೇಕು: ಬೇರೆ ಬೇರೆ ಮೂಲದಿಂದ ಜ್ಞಾನ ಸಂಪಾದಿಸಿದ ಚಿಂತನೆಗಳು ನಮ್ಮವಾಗವು. ಆದರೆ, ಸಂಗ್ರಹಿಸಿದ ಚಿಂತನೆಗಳ ಒಳನೋಟವನ್ನು ಅನಾವರಣಗೊಳಿಸುವಂತಾದರೆ ಅದು ಸ್ವಂತಿಕೆಯಾಗುತ್ತದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೃಪತುಂಗ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅಭಿಪ್ರಾಯಪಟ್ಟರು.


ಹೆಚ್ಚಿನ ಓದು, ಹಿರಿಯರೊಂದಿಗೆ ಮಾತುಕತೆ ನಡೆಸಬೇಕು. ಎಲ್ಲ ರಸಗಳೊಂದಿಗೆ ತಾದಾತ್ಮ ಹೊಂದುವ ಗುಣವಿರಬೇಕು. ಆಗಲೇ ಎಲ್ಲ ನಿಟ್ಟಿನಿಂದ ಜ್ಞಾನ ಸಂಪಾದನೆ ಸಾಧ್ಯವಾಗುತ್ತದೆ ಎಂದು ಹೇಳಿದರು.


ಲೇಖಕ ಡಾ. ಸತ್ಯಮಂಗಲ ಮಹಾದೇವ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ‘ಸಣ್ಣ ವಯಸ್ಸಿನಲ್ಲಿ ಬರಹದಂತಹ ಕ್ಲಿಷ್ಟಕರವಾದ ಸವಾಲು ಸ್ವೀಕರಿಸಿರುವ ಕು. ವಿಹಾರಿಕಾ ಅಂಜನಾ ಹೊಸಕೇರಿ ಅವರು, ‘ಬದುಕೇ ಒಂದು ಸವಾಲು’ ಕೃತಿಯ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ ಎಂದು ಪ್ರಶಂಸಿಸಿದರು. ಕವಯತ್ರಿ ವಿಹಾರಿಕಾ ಅಂಜನಾ ಹೊಸಕೇರಿ ಅವರು ಅತಿಥಿಗಣ್ಯರ ಅಭಿಪ್ರಾಯಗಳಿಗೆ ಸ್ಪಂದಿಸಿ, ತಾವು ಓದಿನತ್ತ ಹೆಚ್ಚು ಆಸಕ್ತಿ ವಹಿಸಿ ಕೃತಿ ರಚನೆಗೆ ತಂದೆಯ ಸ್ಪೂರ್ತಿಯೇ ಕಾರಣ ಎಂದು ಹೇಳಿದರು.


ಉದಯ ಪ್ರಕಾಶನದ ಶೈಲಜಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಬುಕ್ ಬ್ರಹ್ಮ ಫೇಸ್ ಬುಕ್ ಲೈವ್ ಹಾಗೂ ಯೂಟ್ಯೂಬ್ ಚಾನಲ್ ಮೂಲಕ ನೇರ ಪ್ರಸಾರವಾದ ಈ ಸಮಾರಂಭದ ಆರಂಭದಲ್ಲಿ ಸಂಗೀತ ವಿದುಷಿ ಬಿ.ಎನ್. ಭಾಗೀರಥಿ ಪ್ರಾರ್ಥಿಸಿದರು. ‘ಬುಕ್ ಬ್ರಹ್ಮ’ ಸಂಸ್ಥೆಯ ಕು. ಮಂಜುಳಾ ಶೆಟ್ಟಿಗಾರ ಸ್ವಾಗತಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top