|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಜಕೀಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸವಕಲು ನಾಣ್ಯವಾಗಬಾರದು

ರಾಜಕೀಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸವಕಲು ನಾಣ್ಯವಾಗಬಾರದು


ಇತ್ತೀಚಿಗೆ ಪ್ರತಿಷ್ಠಿತ ರಾಷ್ಟ್ರೀಯ ಪಕ್ಷದ ಹಿರಿಯ ವ್ಯಕ್ತಿ ಒಬ್ಬರು ತಾನು ನೆಚ್ಚಿ ಮೆಚ್ಚಿಕೊಂಡ ಬಂದ ಪಕ್ಷದೊಳಗೆ ತನಗಾದ ನೇೂವಿನ ಬಗ್ಗೆ ತುಂಬಾ ಮನನೊಂದು ತಮ್ಮ  ಒಡಲಾಳದ ಭಾವನೆಗಳನ್ನು ತೋಡಿಕೊಂಡರು. ಅವರ ಮಾತುಗಳನ್ನು ಆಲಿಸಿದ ಮೇಲೆ ಒಂದು ಪಕ್ಷದ ಕಾರ್ಯಕರ್ತರ ನಿಜವಾದ ಸ್ಥಿತಿ ಗತಿ ಏನು ಅನ್ನುವುದು ಅರಿವಾಯಿತು.


ರಾಜಕೀಯ ಪಕ್ಷದ ಕಾರ್ಯಕರ್ತರಲ್ಲಿ ಹಲವು ವರ್ಗಗಳಿರುತ್ತವೆ. ಕೆಲವರು ಯಾವುದೇ ಲಾಭಕ್ಕಾಗಿ ಪಕ್ಷದಲ್ಲಿ ದುಡಿಯದೆ ತಾವು ಒಪ್ಪಿಕೊಂಡ ಸಿದ್ಧಾಂತಗಳಿಗಾಗಿ ಸಮರ್ಪಣಾ ಭಾವದಿಂದ ಪಕ್ಷದ ಒಳಗೆ ಸಕ್ರಿಯವಾಗಿ ಇರುತ್ತಾರೆ. ಇನ್ನೂ ಒಂದು ವರ್ಗ ತಮ್ಮ ವ್ಯವಹಾರದ ಅನುಕೂಲಕ್ಕಾಗಿ ಪಕ್ಷದಲ್ಲಿ ತೊಡಗಿಸಿಕೊಂಡಿರುತ್ತಾರೆ. ಮತ್ತೊಂದು ವರ್ಗ ರಾಜಕೀಯವನ್ನೇ ಉದ್ಯೋಗವಾಗಿಸಿಕೊಂಡು ದುಡಿಯುವ ವರ್ಗ. ಅವರಿಗೆ ಚುನಾವಣೆ ಬಂದರೆ ಉದ್ಯೋಗ ಇಲ್ಲವಾದರೆ ನಿರುದ್ಯೋಗ. ಇಂತವರ ಸಂಖ್ಯೆ ಸುಮಾರು ನಾಲ್ಕು ಲಕ್ಷ ಮಂದಿ ಇದ್ದಾರೆ ಅನ್ನುವುದನ್ನು ಬಹು ಹಿಂದೆ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿದ್ದು ನೆನಪಿದೆ. ಮತ್ತೂ ಒಂದು ವರ್ಗವಿದೆ- ಮುಂದೊಂದು ದಿನ ತಾನು ರಾಜಕೀಯದಲ್ಲಿ ಬೆಳೆಯ ಬಹುದು ಎಂಬ ನಿರೀಕ್ಷೆಯಲ್ಲಿ. ಹಾಗಾಗಿ ಪಕ್ಷದ ಕಾರ್ಯಕರ್ತರ ಉದ್ದೇಶ ಮತ್ತು ಪಾತ್ರ ಏನು ಅನ್ನುವುದರ ಮೇಲೆ ಆತ ಒಂದು ಪಕ್ಷಕ್ಕೆ ಶಕ್ತಿ ನೀಡಬಲ್ಲ. ಹೊರತು ಎಲ್ಲಾ ಕಾರ್ಯಕರ್ತರಲ್ಲ ಅನ್ನುವುದು ಅಷ್ಟೇ ಸತ್ಯ.


ಇಂತಹ ಅದೆಷ್ಟೊ ನಿಷ್ಠಾವಂತ ಕಾರ್ಯಕರ್ತರನ್ನು ನೇೂಡಿದಾಗ ನನಗೆ ಒಂದಲ್ಲ ಒಂದು ದಿನ ಮುಂದೆ ಇಂತಹ ನಿಷ್ಠಾವಂತ ಕಾರ್ಯಕರ್ತ ನಮ್ಮ ಭವಿಷ್ಯದ ಎಂ.ಎಲ್.ಎ.ಯೇೂ. ಸಂಸದರೊ ಆಗಬಹುದು ಎಂಬ ನಿರೀಕ್ಷೆ ಬಹು ಹಿಂದೆ ಇತ್ತು. ಆದರೆ 90ರ ದಶಕದ ಅನಂತರದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ ಇದು ಸಾಧ್ಯವಿಲ್ಲ ಅನ್ನುವ ನಿಜ ಸಂಗತಿಯ ಅರಿವಾಗುತ್ತಿದೆ. ಕಾರ್ಯಕರ್ತ ಬರೇ ಚುನಾವಣೆಯಲ್ಲಿ ಬಳಸುವ ನಾಣ್ಯ ಬಿಟ್ಟರೆ, ಅವನಿಗೆ ಪಕ್ಷದಲಾಗಲಿ ಅಧಿಕಾರದಲ್ಲಾಗಲಿ ಯಾವುದೇ ಸ್ಥಾನ ಮಾನ ನೀಡದೆ ಹಾಗೇ ಇತಿಶ್ರೀ ಹಾಡಿ ಸವಕಲು ನಾಣ್ಯ ಮಾಡಿದ್ದೇ ಜಾಸ್ತಿ ಅನ್ನುವುದನ್ನು ನಾವು ದಿನ ನಿತ್ಯವೂ ನೇೂಡುತ್ತಿದ್ದೇವೆ.


ಪ್ರತಿಯೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ತಿಳಿದುಕೊಳ್ಳಬೇಕಾದ ಒಂದು ರಾಜಕೀಯದ ಒಳ ಗುಟ್ಟೆಂದರೆ ಯಾರಾದರೂ ನಿಮ್ಮನ್ನು ತೃಪ್ತಿ ಪಡಿಸಲು ತಾಲ್ಲೂಕು /ಜಿಲ್ಲಾ ಪಂಚಾಯತ್‌ಗೆ 20 ತಿಂಗಳು ಅಧ್ಯಕ್ಷ, ಉಪಾಧ್ಯಕ್ಷರಾಗಿ ಮಾಡಿದರೂ ಅಂದರೆ ಅದರ ಅರ್ಥ ಮುಂದೆ ನಿಮ್ಮನ್ನು ಶಾಸಕರಾಗಿಯೊ ಸಂಸದರಾಗಿ ಬಿಂಬಿಸುತ್ತಾರೆ ಅನ್ನುವ ಕನಸು ಕಾಣ ಬೇಡಿ. ನಿಮ್ಮ ರಾಜಕೀಯ ಕೆರಿಯರ್ ಅಲ್ಲಿಗೆ ನಿಂತಿತ್ತು ಅನ್ನುವುದರ ಸಂಕೇತ. ಮೊದಲು ಹಾಗಿರಲಿಲ್ಲ ಒಬ್ಬ ವ್ಯಕ್ತಿ ಗ್ರಾಮ/ ತಾಲ್ಲೂಕು/ ಜಿಲ್ಲಾ/ ಪ್ರತಿನಿಧಿಸಿಕೊಂಡು ಬಂದಿದ್ದಾನೆ ಅಂದರೆ ಆತ ಮುಂದಿನ ಶಾಸಕ ಸಂಸದನ ಹುದ್ದೆಗೆ ಸ್ಪರ್ಧಾಳು ಅನ್ಮುವ ಲೆಕ್ಕಾಚಾರ. ಈಗ ಆ ಕಾಲ ಮುಗಿದುಹೇೂಗಿದೆ. ಇಂದಿನ ಕಾಲ ಹೇಗಿದೆ ಅಂದರೆ  ಯಾರು ತಾನು ಶಾಸಕನೊ ಸಂಸದನೊ ಆಗಿ ಸ್ಪರ್ಧಿಸ ಬೇಕೆನ್ನುವವರು ಇಂತಹ ಸ್ಥಳಿಯ ಮಟ್ಟದ ಹುದ್ದೆಗಳಿಗೆ ತಮ್ಮ ಉಮೇದ್ವಾರಿಕೆ ತೇೂರಿಸುವುದೇ ಇಲ್ಲ. ಅವರು ಏನಿದ್ದರೂ ನೇರವಾಗಿ ಶಾಸಕರೊ ಸಂಸದರೊ ಆಗ ಬೇಕು ಅನ್ನುವ ಜಾಯಮಾನದವರು. ಶೈಕ್ಷಣಿಕ ಪರಿಭಾಷೆಯಲ್ಲಿ ಹೇಳಬೇಕಾದರೆ ಉಪನ್ಯಾಸಕನಾಗದೇ ನೇರವಾಗಿ ಪ್ರಾಚಾರ್ಯರಾಗಬೇಕು ಅನ್ನುವ ಜಾತಿಯವರು. ಅವರ ಜಾತಿ ಧನ ಬಲ ಜನ ಬಲ ಎಲ್ಲೊ ಒಂದಿಷ್ಟು ಒಳ್ಳೆಯದೊ ಕೆಟ್ಟದೊ ರೀತಿಯಲ್ಲಿ ಗಳಿಸಿರುವ ನೇಮ್ ಯ್ಯಾಂಡ್ ಫೇಮ್. ಇವರಿಗೆ ಈ ಮೇಲಿನ ರಾಜ್ಯ ರಾಷ್ಟ್ರ ಮಟ್ಟದ ಪ್ರತಿನಿಧಿಗಳಾಗುವ ಅವಕಾಶ ಮಾಡಿಕೊಡುತ್ತದೆ ಅನ್ನುವುದು ಇಂದಿನ ಎಲ್ಲಾ ರಾಜಕೀಯ ಪಕ್ಷಗಳ ಪರಿಸ್ಥಿತಿ. ಹಾಗಾಗಿ ಇಂದು ಉನ್ನತಸರಕಾರಿ ಹುದ್ದೆ ಆಲಂಕರಿಸಿ ನಿವೃತ್ತರಾದವರು ನೇರವಾಗಿ ಶಾಸಕರುಮ ಸಂಸದರು ಮಂತ್ರಿಗಳು ಆಗುವ ಪರಿಸ್ಥಿತಿ ನಾವು ದಿನ ನಿತ್ಯವೂ ನೇೂಡುವಂತಾಗಿದೆ. ಹಾಗಾದರೆ ಅಂತವರು ಗ್ರಾಮ ತಾಲ್ಲೂಕು ಜಿಲ್ಲಾ ಪಂಚಾಯತ್ ಸದಸ್ಯರೊ ಅಧ್ಯಕ್ಷರೋ ಆಗಲಿ ನೇೂಡೇೂಣ?


ಅಂತೂ ಎಲ್ಲಾ ಪಕ್ಷದ ಕಾರ್ಯಕರ್ತರು ತಿಳಿದುಕೊಳ್ಳಬೇಕಾದ ವಸ್ತುಸ್ಥಿತಿ ಅಂದರೆ ಮೇಲೆ ಕೂತ ನಾಯಕರು ಚುನಾವಣಾ ಕಾಲದಲ್ಲಿ  ಹೇಳುವ ಮಾತೆಂದರೆ ನಮ್ಮ ಪಕ್ಷದ ಗೆಲುವು ಕಾರ್ಯಕರ್ತರ ಗೆಲುವು. ಇದನ್ನು ಅವರಿಗೆ ಆರ್ಪಿಸುತ್ತೇನೆ ಅನ್ನುವ ಜಾಣ್ಮೆ ಮಾತಿನೊಂದಿಗೆ ನಿಮ್ಮನ್ನು ತೃಪ್ತಿ ಪಡಿಸುತ್ತಾರೆ ಹೊರತು ಜೀವ ಹೇೂದರೂ ಅವರ ಸ್ಥಾನವನ್ನು ನಿಮಗೆ ಆರ್ಪಿಸುವುದೇ ಇಲ್ಲ. ಹಾಗಾಗಿ ನಿಮ್ಮ ಅಮೂಲ್ಯದ ಸಮಯ ಬದುಕಿನ ಘಳಿಗೆಯನ್ನು ಪಕ್ಷಕ್ಕಾಗಿ ಸಮರ್ಪಿಸುವಾಗ ಸ್ವಲ್ಪ ನಿಮ್ಮ ಬದುಕನ್ನೂ ನೇೂಡಿಕೊಳ್ಳಿ. ನೀವು ರಾಜಕೀಯದಲ್ಲಿ ಬಳಸಿ ಬಿಸಾಡುವ ಸವಕಲು ನಾಣ್ಯವಾಗಬಾರದು ಅನ್ನುವುದೇ ನಮ್ಮ ಉದ್ದೇಶ ಆಷ್ಟೇ.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post